ಕಾರ್ಪೊರೇಟ್ ಆಸ್ಪತ್ರೆಗಳನ್ನುಬಲಿಷ್ಠಗೊಳಿಸುವ ಸಂಚು
ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ – 2017
ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ
ಸದ್ಯ ರಾಜ್ಯದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)- 2017’ ಮಸೂದೆ ಚರ್ಚೆಯಲ್ಲಿದೆ. ರಾಜ್ಯದ ಆರೋಗ್ಯ ಸಚಿವರು ಈ ತಿದ್ದುಪಡಿ ಮಸೂದೆ ಜನಪರ ಎನ್ನುತ್ತಾ ಮಂಡನೆ ಮಾಡಿದ್ದರೆ, ಕರ್ನಾಟಕ ವೈದ್ಯಕೀಯ ಮಂಡಳಿ (ಐಎಂಎ) ಸದಸ್ಯರು ಇದು ದೇಶದ ಎಲ್ಲಾ ಕಾನೂನುಗಳನ್ನು ಮೂಲೆ ಗುಂಪು ಮಾಡುವ, ಖಾಸಗಿ ವೈದ್ಯರ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಿ ಅವರು ಕೆಲಸವನ್ನೇ ಮಾಡದಂತಹ ಮಾನ ದಂಡಗಳನ್ನು ಒಳಗೊಂಡ ಕರಾಳ ಮಸೂದೆ ಎಂದು ವಿರೋಧಿಸಿ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಮಸೂದೆಗೆ ತಿದ್ದುಪಡಿಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿ ವಿಕ್ರಮ್ಜೀತ್ ಸೇನ್ ಸಮಿತಿಯ ನೇತೃತ್ವದ ಸಮಿತಿಯಲ್ಲಿ ಸ್ವತಂತ್ರ ವೈದ್ಯರ ನೆಲೆಯಲ್ಲಿ ಸದಸ್ಯರಾಗಿದ್ದ ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯರನ್ನು ‘ವಾರ್ತಾಭಾರತಿ’ ಮಾತನಾಡಿಸಿದೆ.
ಕಾರ್ಪೊರೇಟ್ ಆಸ್ಪತ್ರೆಗಳು ನೂರಾರು ಎಕರೆಯಲ್ಲಿ, ಅದೂ ಸರಕಾರದ ಕೊಡುಗೆ ಯೊಂದಿಗೆ ಕಾರ್ಯ ನಿರ್ವಹಿಸುತ್ತವೆ. ಪ್ರಸಕ್ತ ತಿದ್ದುಪಡಿ ಮಸೂದೆ ಜಾರಿಗೊಂಡರೆ, ಇದುವರೆಗೆ ದಂಧೆ, ದರೋಡೆ ಮಾಡುತ್ತಿರುವ ಕಾರ್ಪೊರೇಟ್ ಆಸ್ಪತ್ರೆಗಳು ಇನ್ನೂ ಕೊಬ್ಬಲಿವೆ. ಅವರ ದರದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಮಾತ್ರವಲ್ಲ ಇನ್ಫ್ಲುಯೆನ್ಸ್ ಮಾಡಿ ದರ ನಿಗದಿ ಮಾಡುವ ಸಾಮರ್ಥ್ಯ ಕಾರ್ಪೊರೇಟ್ ಆಸ್ಪತ್ರೆಗಳಿರುತ್ತದೆ.
ಅವರು ಹೇಳುವಂತೆ, ಪ್ರಸ್ತುತ ಸರಕಾರ ಹೇಳಿಕೊಂಡಿರುವಂತೆ ಈ ತಿದ್ದುಪಡಿ ಮಸೂದೆ ನ್ಯಾಯಮೂರ್ತಿ ವಿಕ್ರಮ್ಜೀತ್ ಸೇನ್ ಸಮಿತಿಯ ವರದಿ ಆಧಾರದಲ್ಲಿ ರೂಪಿತವಾಗಿಲ್ಲ. ಸಮಿತಿಯ ವರದಿಗೆ ತದ್ವಿರುದ್ಧವಾಗಿ ರಾಜ್ಯದ ಆರೋಗ್ಯ ಸಚಿವರು ಈ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಲ್ಲದೆ, ಈ ಮಸೂದೆ ಜಾರಿಗೊಂಡಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾವುದೇ ವೈದ್ಯರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವೇ ಇಲ್ಲ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರತಿಪಾದಿಸಿದ್ದಾರೆ. ಅವರ ಜತೆಗಿನ ಸಂದರ್ಶನದ ವೇಳೆ ಮಸೂದೆ ಬಗೆಗಿನ ಸಮಗ್ರ ವಿವರದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಗೆ ಆಕ್ಷೇಪವೇಕೆ?
ಡಾ. ಎಸ್. ಕಕ್ಕಿಲ್ಲಾಯ:ರಾಜ್ಯದ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಮಂಡಿಸಿರುವ ತಿದ್ದುಪಡಿ ಮಸೂದೆಯಲ್ಲಿ ನ್ಯಾಯಮೂರ್ತಿ ವಿಕ್ರಮ್ಜೀತ್ ಸೇನ್ ಸಮಿತಿ ನೀಡಿರುವ ವರದಿ ಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಕಾಯ್ದೆಯಿಂದ ಸರಕಾರಿ ಆಸ್ಪತ್ರೆಯನ್ನು ಬಿಡಲಾಗಿದೆ. ಈ ಮಸೂದೆಗೆ ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಎಂದು ನಾವು ಹೆಸರಿಸಿದ್ದರೆ, ಅದನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಎಂದೇ ಮಂಡಿಸ ಲಾಗಿತ್ತು. ಸರಕಾರಿ ಆಸ್ಪತ್ರೆಗಳನ್ನು ಈ ಕಾಯ್ದೆಯಿಂದ ಹೊರಗಿಟ್ಟರೆ, ಈಗಾಗಲೇ ವೈದ್ಯರ ಕೊರತೆ, ಬೆಡ್ಗಳ ಕೊರತೆ, ಸಲಕರಣೆ ಗಳ ಕೊರತೆ ಇಲ್ಲದೆ ಶೋಚನೀಯ ಸ್ಥಿತಿಯಲ್ಲಿರುವ ಆಸ್ಪತ್ರೆಗಳು ಸಂಪೂರ್ಣವಾಗಿ ಮುಚ್ಚುವ ಪರಿಸ್ಥಿತಿಗೆ ತಲುಪಲಿವೆ.
ಪ್ರಸಕ್ತ ತಿದ್ದುಪಡಿ ಮಸೂದೆಯ ಪ್ರಕಾರ ವೈದ್ಯರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿಯಂತ್ರಣಕ್ಕೊಳಪಡಬೇಕು. ಹಾಗಿದ್ದರೆ, ನಮ್ಮಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಗ್ರಾಹಕ ನ್ಯಾಯಾಲಯ, ಕ್ರಿಮಿನಲ್ ನ್ಯಾಯಾಲಯ, ಮಾನವ ಹಕ್ಕು ಆಯೋಗ ಇವುಗಳಿಗೆ ಯಾವುದಕ್ಕೂ ಬೆಲೆ ಇಲ್ಲವೇ? ಇವುಗಳು ಯಾವುವೂ ರೋಗಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು.
ಜಿಲ್ಲಾ ಪಂಚಾಯತ್ ಸಿಇಒ ಸರಕಾರದ ನೇರ ಅಧೀನದಲ್ಲಿ ಇರುವುದರಿಂದ ವೈದ್ಯರೆಲ್ಲಾ ಸರಕಾರದ ಕಪಿಮುಷ್ಟಿಯಲ್ಲಿರಬೇಕು ಎಂಬುದು ಈ ಮಸೂದೆಯ ಉದ್ದೇಶ.
ಈ ಮಸೂದೆಯ ಪ್ರಕಾರ ರೋಗಿಗಳ ಹಕ್ಕಿನಡಿ ಆತನಿಗೆ ಚಿಕಿತ್ಸೆ ಪಡೆಯುವ ಹಕ್ಕನ್ನು ನೀಡಲಾಗಿದೆ. ರೋಗಿಯು ತನ್ನ ಸಮಸ್ಯೆ ಯನ್ನು ಹೇಳುವಾಗ ವೈದ್ಯ ಅಡ್ಡಿ ಪಡಿಸುವಂತಿಲ್ಲ. ಅಂದರೆ ಪ್ರಶ್ನೆ ಕೇಳುವಂತಿಲ್ಲ. ಪ್ರಶ್ನೆ ಕೇಳಿ ಉತ್ತರ ಪಡೆಯುವುದು ವೈದ್ಯನ ದಿನ ನಿತ್ಯದ ವೃತ್ತಿಯ ಒಂದು ಭಾಗ. ಪ್ರಶ್ನೆಯೇ ಕೇಳುವಂತಿಲ್ಲ. ಕೇಳಿದರೆ ಅದಕ್ಕೆ ದಂಡ ಹಾಕಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯನಾದವ ಚಿಕಿತ್ಸೆ ನೀಡುವುದಾದರೂ ಹೇಗೆ?
ಈ ತಿದ್ದುಪಡಿ ಮಸೂದೆ ಬಗ್ಗೆ ವಿವರ ನೀಡುವಿರಾ?
ಡಾ. ಎಸ್. ಕಕ್ಕಿಲ್ಲಾಯ:ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರಲ್ಲೇ ಕಾನೂನು ಆಗಿ 2010ರಲ್ಲಿ ನಿಯಮಗಳು ಜಾರಿಗೊಂಡಿದ್ದವು. ಆ ಕಾನೂನಿಗೆ ನಮ್ಮ ವಿರೋಧ ಇರಲಿಲ್ಲ. ಅದರಡಿ ನಾವೆಲ್ಲಾ ವೈದ್ಯರು ನೋಂದಾಯಿತರಾಗಿದ್ದೇವೆ. ಯಾವ್ಯಾವ ವೈದ್ಯಕೀಯ ಸಂಸ್ಥೆಗಳು ನುರಿತ ವೈದ್ಯರಿಂದ ನಡೆಸಲ್ಪ ಡುತ್ತವೆಯೋ ಅವುಗಳನ್ನು ಗುರುತಿವುದಷ್ಟೇ ಆ ಕಾನೂನಿನ ಉದ್ದೇಶವಾಗಿತ್ತು. ಬದಲಿಗೆ ನಿಯಂತ್ರಣ, ಬೆಲೆ ನಿಯಂತ್ರಣ, ಶಿಕ್ಷೆ ಆ ಕಾನೂನಿನಲ್ಲಿ ಇರಲಿಲ್ಲ. ನಮ್ಮ ವಿದ್ಯಾರ್ಹತೆ, ಪ್ರಮಾಣ ಪತ್ರ ಪರಿಶೀಲಿಸಿ ನಮಗೆ ಪ್ರಮಾಣ ಪತ್ರ ನೀಡುತ್ತಾರೆ. ನೋಂದಣಿ ಯಾಗದ ನಕಲಿ ವೈದ್ಯರು, ಸಂಸ್ಥೆಗಳಿಗೆ ಜೈಲು ಶಿಕ್ಷೆಯಾಗುತ್ತದೆ ಎಂಬುದು ನಮ್ಮ ಅನಿಸಿಕೆಯಾಗಿತ್ತು. ಆದರೆ ವಿಪರ್ಯಾಸವೆಂದರೆ 2007ರ ಕಾನೂನಿನಡಿ ನಕಲಿ ವೈದ್ಯರಿಗೂ ನೋಂದಣಿ ಮಾತ್ರ ಮುಂದುವವರಿದೆ. ವೈದ್ಯರಲ್ಲದವರು ವೈದ್ಯ ವೃತ್ತಿ ಮಾಡುವುದನ್ನು ತಪ್ಪಿಸುವುದಕ್ಕೋಸ್ಕರ ರೂಪಿತವಾದ ಕಾನೂನಿನಡಿ, ನಕಲಿಯನ್ನು ಒಬ್ಬರನ್ನೂ ಹಿಡಿಯಲಾಗಿಲ್ಲ. ಈ ಕಾನೂನು ಜಾರಿಯು ತನ್ನ ಪ್ರಮುಖ ಉದ್ದೇಶವನ್ನು ಈಡೇರಿಸುವಲ್ಲಿಯೇ ವಿಫಲವಾಗಿದೆ.
ಆ ಕಾನೂನಿಗೆ ತಿದ್ದುಪಡಿ ಮಾಡಲು ಪ್ರಸಕ್ತ ರಾಜ್ಯದ ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಮುಂದಾದರು. ನ್ಯಾಯ ಮೂರ್ತಿ ವಿಕ್ರಮ್ಜೀತ್ ಸೇನ್ ಅಧ್ಯಕ್ಷತೆಯಲ್ಲಿ 32 ಮಂದಿಯ ಸಮಿತಿ ರಚನೆಯಾಯಿತು. ನಾನು ಮತ್ತು ಡಾ. ಎಚ್.ಎಸ್. ಅನುಪಮಾ ಸ್ವತಂತ್ರ ವೈದ್ಯರ ನೆಲೆಯಲ್ಲಿ ಸದಸ್ಯರಾಗಿದ್ದೆವು. 2016ರ ಜುಲೈ 28 ಪ್ರಥಮ ಸಭೆ ನಡೆದಿತ್ತು. ಈ ಸಮಿತಿಯಲ್ಲಿ 10 ತಿಂಗಳು ನಾಲ್ಕು ಸಭೆ, ಉಪ ಸಮಿತಿಗಳ ಸಭೆಗಳೂ ಆಗಿವೆ. ಜನರೋಗಿ ಚಳವಳಿ ಎಂಬ ಎನ್ಜಿಒ ಸಂಸ್ಥೆಯ ಜತೆಗೆ ಎಲ್ಲರಿಗೂ ಅವರ ಅಭಿಪ್ರಾಯ ಮಂಡನೆ, ಲಿಖಿತವಾಗಿ ನೀಡಲೂ ಅವಕಾಶ ನೀಡಲಾಗಿತ್ತು. 2017 ಎಪ್ರಿಲ್ 28 ಕೊನೆಯ ಸಭೆ ನಡೆದಿತ್ತು. ಈ ಸಂದರ್ಭ ಮೂರು ಪ್ರಮುಖ ವಿಷಯಗಳು ಚರ್ಚಿಸಲ್ಪಟ್ಟವು. ವೈದ್ಯರನ್ನು ನಿಯಂತ್ರಣ ಮಾಡುವಲ್ಲಿ ಈಗಿನ ಕಾನೂನು ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಸಂಸ್ಥೆಗಳನ್ನು ನಿಯಂತ್ರಿಸಲು ಈಗ ನೋಂದಣಿ ಪ್ರಾಧಿಕಾರ ಮಾತ್ರವೇ ಇರುವುದು. ಅದು ಸಾಕಾಗುವುದಿಲ್ಲ. ನೋಂದಣಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಅಥವಾ ತಪ್ಪಿದಲ್ಲಿ ಕಂಡು ಹಿಡಿಯಲು ಪ್ರತ್ಯೇಕ ನಿಯಮ ತರಬೇಕು ಎಂಬುದು ಜನ ರೋಗಿ ಚಳವಳಿಯ ಆಗ್ರಹವಾಗಿತ್ತು. ಅದರ ಜತೆ, ಖಾಸಗಿ ಆಸ್ಪತ್ರೆಗಳ ಬೆಲೆಯನ್ನು ನಿಯಂತ್ರಿಸುವುದು ಕೂಡಾ ಅವರ ಒತ್ತಾಯವಾಗಿತ್ತು. ವೈದ್ಯರ ಬೇಡಿಕೆಯಂತೆ, ಸರಕಾರಿ ಆಸ್ಪತ್ರೆಗಳನ್ನು ಕೂಡಾ ಈ ಕಾಯ್ದೆಯಡಿ ತರಬೇಕು. ಕೇಂದ್ರ ಸರಕಾರದ 2010ರ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯಡಿ ಸರಕಾರಿ ಆಸ್ಪತ್ರೆಗಳನ್ನೂ ಸೇರಿಸ ಲಾಗಿದೆ. ಕೇರಳದಲ್ಲಿ 2013ರಲ್ಲಿ ಈ ಬಗ್ಗೆ ಕರಡು ಸಿದ್ಧಗೊಂಡು ಸದ್ಯದಲ್ಲೇ ಅದು ಮಂಡನೆ ಆಗಲಿದೆ.
ಆದರೆ ರಾಜ್ಯ ಸರಕಾರದ ತಿದ್ದುಪಡಿ ಮಸೂದೆಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ಹೊರಗಿಟ್ಟಲ್ಲಿ ಅವುಗಳನ್ನು ಸುಧಾರಿಸುವ, ನಿರ್ವಹಿಸುವ ಬದ್ಧತೆ ಇಲ್ಲ ಎಂದಾಗುತ್ತದೆ. ನೀವು ಬದ್ಧ್ದತೆಯನ್ನು ಜಾಹೀರು ಪಡಿಸಿ, ಅದನ್ನು ಸೇರಿಸಿ. ವಿಕ್ರಮ್ಜೀತ್ ಅದನ್ನು ತೀವ್ರ ವಾಗಿ ಪ್ರತಿಪಾದಿಸಿದ್ದರು. ನಾನು ಸೇರಿದಂತೆ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯ ಬೇಡಿಕೆಯೂ ಇದಾಗಿತ್ತು. ಕಮಿಟಿ ತನ್ನ ವರದಿಯಲ್ಲಿ ಅದನ್ನು ಶಿಫಾರಸು ಮಾಡಿತ್ತು. ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಸಮಾನ ಮಾನ ದಂಡಗ ಳಿಗೆ ಒಳಪಡಿಸುವುದನ್ನು ಜನರೋಗಿ ಚಳವಳಿ ವಿರೋಧಿಸಿತ್ತು. ಸರಕಾರ ಅದನ್ನು ಮಾಡಲು ಸಾಧ್ಯವಿಲ್ಲ. ಕಾನೂನಿನಲ್ಲಿ ಸೇರಿಸಿ ದರೆ ಸರಕಾರಿ ಆಸ್ಪತ್ರೆಗಳನ್ನು ಮುಚ್ಚಬೇಕು ಎಂಬುದು ಅದರ ವಾದವಾಗಿತ್ತು. ಮುಚ್ಚುವುದು ಯಾಕೆ ಅದನ್ನು ಸುಧಾರಣೆ ಮಾಡಲಿ. ಖಾಸಗಿಯವರ ಕ್ಲಿನಿಕ್, ಆಸ್ಪತ್ರೆಯಲ್ಲಿ ಇರಬೇಕಾದ ಮಾನದಂಡ ಸರಕಾರಿ ಆಸ್ಪತ್ರೆಯಲ್ಲೂ ಸಿಗಲಿ. ಅವರನ್ನು ಯಾಕೆ ಸಣ್ಣ ಗೂಡಿನಲ್ಲಿ ಕೂಡಿ ಹಾಕುವುದು. ಅಲ್ಲಿಗೆ ಬರುವವರು ರೋಗಿಗಳಲ್ಲವೇ. ಅಲ್ಲಿರುವವರು ವೈದ್ಯರಲ್ಲವೇ. ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ರೆಗ್ಯುಲೇಟರಿ ಅಥಾರಿಟಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಮೂರ್ತಿಗಳೂ ಒಪ್ಪಿಕೊಂಡಿದ್ದರು.
ಹಾಗಿದ್ದಲ್ಲಿ ವೈದ್ಯರಿಗೆ ನಿಯಂತ್ರಣದ ಅಗತ್ಯವಿಲ್ಲ ಎನ್ನುತ್ತಿದ್ದೀರಾ?
ಡಾ. ಎಸ್. ಕಕ್ಕಿಲ್ಲಾಯ:ವೈದ್ಯರು ತಪ್ಪಿದಾಗ ತನಿಖೆ ಮಾಡಲು ಈಗಾಗಲೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಡಿ ವೈದ್ಯರಿಗೇ ಆದ ನೀತಿ ಸಂಹಿತೆಗಳಿವೆ. ತನ್ನ ಪ್ರಾಕ್ಟೀಸ್ನ ಸಂದರ್ಭವೈದ್ಯ ಯಾವುದೇ ರೋಗಿಯ ಜತೆ ಜಾತಿ, ಮತ, ಭೇದ ಭಾವ ದಿಂದ ವರ್ತಿಸುವಂತಿಲ್ಲ. ಅದಕ್ಕೆ ನಾವೆಲ್ಲಾ ಒಳಪಡುತ್ತೇವೆ. ಅದನ್ನು ಮತ್ತೆ ಪ್ರತ್ಯೇಕವಾಗಿ ಕಾನೂನಿನಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ಸಮಿತಿ ಸಭೆಯಲ್ಲೂ ನಮ್ಮ ವಾದವಾಗಿತ್ತು. ವೈದ್ಯರಿಂದಾಗುವ ನಿರ್ಲಕ್ಷದ ಬಗ್ಗೆ ದೂರು ನೀಡಲು ಅವಕಾಶ ವಿದೆ. ಎಂದರೆ, ಮೆಡಿಕಲ್ ಕೌನ್ಸಿಲ್ ಕೆಲಸ ಮಾಡುವುದಿಲ್ಲ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಎಷ್ಟು ದೂರು ನೀಡಲಾಗಿದೆ ಎಂದರೆ ಉತ್ತರವಿಲ್ಲ. ದಾಖಲೆಯೂ ಇಲ್ಲ.
ಒಬ್ಬ ರೋಗಿ ಗ್ರಾಹಕನಾಗಿ ಯಾವುದೇ ತೊಂದರೆ ಆಗಿದ್ದಲ್ಲಿ ಅದಕ್ಕೆ ಗ್ರಾಹಕ ನ್ಯಾಯಾಲಯ ಇದೆ. ಸಿವಿಲ್ ಸಮಸ್ಯೆಯಾದರೆ ಸಿವಿಲ್ ನ್ಯಾಯಾಲಯ ಇದೆ, ಕ್ರಿಮಿನಲ್ ಆರೋಪವಾದರೆ ಕ್ರಿಮಿನಲ್ ಕೋರ್ಟ್ ಇದೆ. ದೌರ್ಜನ್ಯವಾದರೆ ಮಾನವ ಹಕ್ಕು ಆಯೋಗವಿದೆ, ಲೈಂಗಿಕ ಶೋಷಣೆಯಾದರೆ ಅದಕ್ಕೆ ಸಂಬಂಧಿಸಿದ ಪ್ರತ್ಯೇಕ ಕಾನೂನು ಇದೆ. ಅದಕ್ಕಾಗಿ ಪ್ರತ್ಯೇಕ ನಿಯಂತ್ರಣ ಘಟಕದ ಅಗತ್ಯವಿಲ್ಲ ಎಂದು ನಾವು ಹೇಳಿದೆವು. ಒಂದೇ ಅಪರಾಧಕ್ಕೆ ಬೇರೆ ಬೇರೆ ಕಡೆ ನ್ಯಾಯದ ಪರಿಸ್ಥಿತಿ ಬರುತ್ತದೆ. ಬೇಡ ಎಂಬುದನ್ನು ನ್ಯಾಯಾಧೀಶರೂ ಒಪ್ಪಿದ್ದರು.
ಇನ್ನು ಬೆಲೆ ನಿಗದಿ ಮಾಡುವುದು. ವೈದ್ಯರು, ವಕೀಲರು, ಸಿಎ, ಆರ್ಕಿಟೆಕ್ಟ್, ಕಂಪೆನಿ ಸೆಕ್ರೆಟರೀಸ್ಗಳು ಪ್ರೊಫೆಶನಲ್ ಕೌನ್ಸಿಲ್ಗೆ ಒಳಪಡುತ್ತಾರೆ. ಸೆಕ್ಷನ್ 27 ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆ್ಯಕ್ಟ್ನಲ್ಲಿ ಅದು ಸ್ಪಷ್ಟವಾಗಿದೆ. ಯಾರೂ ಅದನ್ನು ನಿಯಂತ್ರಿ ಸುವಂತಿಲ್ಲ. ಹಾಗಂತ ಯಾವುದೇ ವೈದ್ಯ ಬಾಯಿಗೆ ಬಂದಂತೆ ದರ ಪಡೆಯಲಾಗುವುದಿಲ್ಲ. ಅದು ಮಾರುಕಟ್ಟೆಗೆ ಸೀಮಿತವಾ ಗಿರುತ್ತದೆ. ಆದರೆ, ಪ್ರೊಫೆಶನಲ್ ಚಾರ್ಜಸ್ ವೈದ್ಯರಿಗೆ ಬಿಟ್ಟಿದ್ದು.
ಜನರೋಗಿ ಚಳವಳಿ ರೋಗಿಗಳ ಸನದು ಜಾರಿಗೊಳಿಸಲು ಮುಂದಾಯಿತು. ಇದಕ್ಕೂ ನಮ್ಮ ಆಕ್ಷೇಪವಿತ್ತು. ರೋಗಿಗೆ ಆರೋಗ್ಯದ ಹಕ್ಕನ್ನು ಈ ಕಾನೂನಿನಲ್ಲಿ ಸೇರಿಸಲು ಆಗುವುದಿಲ್ಲ. ಆರೋಗ್ಯ ಎಂಬುದು ಭಾರತದಲ್ಲಿ ಮೂಲಭೂತ ಹಕ್ಕಾಗಿ ಇಲ್ಲ. ಸಂವಿಧಾನದಲ್ಲಿ ಮಾಡುವುದಾಗಿ ಹೇಳಿದ್ದರೂ ಮೂಲಭೂತ ಹಕ್ಕಾಗಿ ಅದು ಬಂದಿಲ್ಲ. ರಾಜ್ಯ ಅಥವಾ ದೇಶದ ಆರೋಗ್ಯ ನೀತಿ ಯಲ್ಲಿ ‘ಆರೋಗ್ಯ ಹಕ್ಕು’ ಎಂಬುದಾಗಿಲ್ಲ. ಮೆಡಿಕಲ್ ಸಂಸ್ಥೆಗಳ ಪರಿಧಿಯಲ್ಲಿ ನೋಂದಣಿ ಮಾಡುವುದು ಮತ್ತು ಅಲ್ಲಿ ಕನಿಷ್ಠ ಸವಲತ್ತುಗಳು ಇದೆಯೇ ಎಂಬುದನ್ನು ಪರಿಶೀಲಿಸುವುದು ಮಾತ್ರ ಒಳಪಡುತ್ತೆ.
ಮೇ 12ರಂದು ಕರಡು ಮಸೂದೆ ತಯಾರಿಸಿ ಸಮಿತಿ ಸದಸ್ಯರಿಗೆ ನೀಡಲಾಗಿತ್ತು. ಅದಕ್ಕೆ ಆಕ್ಷೇಪ ಸಲ್ಲಿಸಿಯಾಗಿತ್ತು. ಆದರೆ ಮಸೂದೆ ಮಂಡನೆಯಾದಾಗ ನಮ್ಮ ಸಮಿತಿ ತಯಾ ರಿಸಿ ನೀಡಿರುವ ವರದಿ ಕರಡು ಮಸೂದೆಗೆ ಸಂಪೂರ್ಣ ತದ್ವಿರುದ್ಧ ವಾದ ಮಸೂದೆಯನ್ನು ಆರೋಗ್ಯ ಸಚಿವರು ಮಂಡಿಸಿದ್ದರು.
ವೈದ್ಯರು ಪ್ರಶ್ನೆ ಕೇಳಿದರೆ ದಂಡ ವಿಧಿಸಲಾಗುತ್ತೆ ಅಂತೀರಲ್ಲ ಏನಿದು?
ಡಾ. ಎಸ್. ಕಕ್ಕಿಲ್ಲಾಯ: ಅದು ಪ್ರಸಕ್ತ ತಿದ್ದುಪಡಿ ಮಸೂದೆಯಲ್ಲಿ ರುವ ರೋಗಿಯ ಸನ್ನದು. ಪ್ರತಿಯೊಬ್ಬ ವೈದ್ಯ ತಮ್ಮ ರೋಗಿಯ ಸಂಪೂರ್ಣ ಸಮಸ್ಯೆ ಮತ್ತು ಕಳಕಳಿಗಳನ್ನು ಹೇಳುವುದನ್ನು ಮುಗಿಸುವುದಕ್ಕೇ ಮೊದಲೇ ವೈದ್ಯರು ಅಡಚಣೆ ಉಂಟು ಮಾಡದೆ ರೋಗಿ ತನ್ನ ತೃಪ್ತಿಗಾಗಿ ಹೇಳಿಕೊಳ್ಳುವ ಹಕ್ಕು. ಏನಿದರ ಅರ್ಥ, ನನಗೂ ಅರ್ಥವಾಗಿಲ್ಲ. ಅಂದರೆ, ಒಂದು ವೇಳೆ ಮಧ್ಯೆ ರೋಗಿಯಲ್ಲಿ ವೈದ್ಯ ಪ್ರಶ್ನೆ ಕೇಳಿದರೆ ಆತನಿಗೆ ದೂರು ನೀಡುವ ಅಧಿಕಾರ. ದೂರಿನ ಮೇಲೆ ವೈದ್ಯರಿಗೆ ದಂಡ ವಿಧಿಸಲಾಗುತ್ತದೆ. ಅಂದರೆ, ರೋಗಿಯ ಸಮಸ್ಯೆಗಳನ್ನು ಪ್ರಶ್ನಿಸದೆ ಆತ ಚಿಕಿತ್ಸೆ ನೀಡು ವುದು ಹೇಗೆ?
ರೋಗಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿಯನ್ನು ನೀಡುವುದು, ಅಂದರೆ?
ಡಾ. ಎಸ್. ಕಕ್ಕಿಲ್ಲಾಯ: ಅದೂ ಏನೆಂದು ಗೊತ್ತಿಲ್ಲ. ಅಂದರೆ ವೈದ್ಯರು ಎಲ್ಲಾ ಭಾಷೆಯನ್ನು ಕಲಿತಿರಬೇಕು. ಇಲ್ಲವಾದರೆ ರೋಗಿ ನನಗೆ ವೈದ್ಯ ಹೇಳಿದ್ದು ಅರ್ಥವಾಗಿಲ್ಲ ಎಂದು ದೂರು ನೀಡಬಹುದು. ಒಟ್ಟಾರೆ ಇವೆಲ್ಲಾ ಅಸಂಬದ್ಧವಾದುದು. ಇದು ರೋಗಿ ಮತ್ತು ವೈದ್ಯರನ್ನು ಒಬ್ಬರಿಗೊಬ್ಬರು ಎತ್ತಿಕಟ್ಟಿ ಜಿ.ಪಂ. ಸಿಇಒಗೆ ದೂರು ನೀಡಿ, ಅವರು ನ್ಯಾಯ ತೀರ್ಮಾನ ಮಾಡುವುದಾದರೆ ಮೆಡಿಕಲ್ ಕೌನ್ಸಿಲ್ ಇರುವುದಾದರೂ ಯಾತಕ್ಕೆ? ಪ್ರಥಮವಾಗಿ ಸಿಇಒ ಪರಿಧಿಯೊಳಗೆ ಯಾವ ವೈದ್ಯರೂ ಬರುವುದಿಲ್ಲ. ವೈದ್ಯರ ವೃತ್ತಿಪರ ಚಟುವಟಿಕೆಗಳು ಸಂಪೂರ್ಣ ಮೆಡಿಕಲ್ ಕೌನ್ಸಿಲ್ನ ವ್ಯಾಪ್ತಿಗೊಳಪಡುತ್ತವೆ. ವೈದ್ಯನ ಚಟುವಟಿಕೆಗಳು ಶಿಕ್ಷಾರ್ಹ ವಾದರೆ ಯಾವ ವೈದ್ಯನೂ ಕೆಲಸ ಮಾಡುವಂತಿಲ್ಲ. ಎಲ್ಲಾ ವೈದ್ಯರೂ ಆಡಿಯೋ ವೀಡಿಯೊ ಇಟ್ಟು ತಿರುಗಾಡಬೇಕಾದ ಪರಿಸ್ಥಿತಿ ಬರಬಹುದು. ನಾವು ಇದನ್ನು ವಿರೋಧಿಸುತ್ತೇವೆ.
ಬೇಕಾ ಬಿಟ್ಟಿಯಾಗಿ ದರ ನಿಗದಿಪಡಿಸುವ ಆಸ್ಪತ್ರೆಗಳಿಗೆ ದರ ನಿಯಂತ್ರಣ ಬೇಡವೆನ್ನುವಿರಾ? ಡಾ. ಎಸ್. ಕಕ್ಕಿಲ್ಲಾಯ:
ದರ ನಿಗದಿ ಇದರಿಂದ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸಮಸ್ಯೆ ಆಗುವುದಿಲ್ಲ. ಇದೀಗ ಎಲ್ಲಾ ಸಣ್ಣ ಆಸ್ಪತ್ರೆ ಗಳಲ್ಲಿಯೂ ಅಲ್ಟ್ರಾ ಸೌಂಡ್, ಕಂಪ್ಯೂಟರ್, ಲ್ಯಾಪ್ರೋಸ್ಕೋಪಿ, ಎಂಡೋಸ್ಕ್ರೋಪಿ ಸಲಕರಣೆಗಳಿರುತ್ತವೆ. ಆದರೆ ಇದರ ದರ ಕಾರ್ಪೊರೇಟ್ ಆಸ್ಪತ್ರೆಗಳಿಗಿಂತ ಭಿನ್ನವಾಗಿರುವುದಿಲ್ಲ. ಬೆಸ್ಟ್ ಆಫ್ ಟೆಕ್ನಾಲಜಿ. ಪರಿಕರಗಳ ಬೆಲೆ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಅದಕ್ಕೆ ಮಾಡುವ ವೆಚ್ಚ ಸಮವಾಗಿರುತ್ತದೆ. ಕಟ್ಟಡ ವೆಚ್ಚದಲ್ಲಿ ಕಾರ್ಪೊರೇಟ್ ಹಾಗೂ ಸಣ್ಣ ಹಾಗೂ ಮಧ್ಯಮ ಆಸ್ಪತ್ರೆಗಳ ಮಧ್ಯೆ ವ್ಯತ್ಯಾಸವಿರುತ್ತದೆ. ಆದರೆ ಕಾರ್ಪೊರೇಟ್ ಹಾಗೂ ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳ ನಡುವಿನ ಆದಾಯಕ್ಕೂ ವ್ಯತ್ಯಾಸವಿರುತ್ತದೆ.
ವೈದ್ಯಕೀಯ ತಂತ್ರಜ್ಞಾನ ಇಂದು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಯಾಗುತ್ತಿದೆ. ವರ್ಷಕ್ಕೊಂದು ಹೊಸ ಮಿಶನ್ ಬರುತ್ತದೆ. 3 ವರ್ಷದ ಹಿಂದಿನ ಸಿಟಿ ಸ್ಕಾನರ್ ಇಂದು ಕೆಲಸ ಮಾಡಲು ಸಾಧ್ಯ ವಾಗು ವುದಿಲ್ಲ. ಡಯಾಗ್ನೋಸಿಸ್ ಮಾಡಲುಸಾಧ್ಯವಾಗುವುದಿಲ್ಲ.
ಅಂಡರ್ ಸ್ಟಾಂಡಿಗ್ ಆಫ್ ಸ್ಟ್ರೋಕ್ ಆ್ಯಂಡ್ ಟ್ರೀಟ್ಮೆಂಟ್ ಕೂಡಾ ಇಂದು ಬದಲಾಗಿದೆ. ಬ್ರೇನ್ ಸರ್ಜರಿ... ಎಲ್ಲವೂ ಬದಲಾಗಿದೆ. ಹಿಂದೆ ದೇಹದ ಭಾಗಗಳನ್ನು ಕೊಯ್ದು ಮಾಡುವಸರ್ಜರಿಗಳನ್ನು ಇಂದು ಸಣ್ಣ ರಂಧ್ರ ಮಾಡಿ ಮಾಡಲಾಗುತ್ತಿದೆ. ಅಂತಹ ತಂತ್ರಜ್ಞಾನದ ಉಪಕರಣಗಳನ್ನು ಇಂದು ಸಣ್ಣ ಆಸ್ಪತ್ರೆಗಳಲ್ಲೂ ಅಳವಡಿಸಲಾಗುತ್ತಿದೆ. ಸಣ್ಣ ಸಣ್ಣ ವೈದ್ಯರೂ ತಮ್ಮ ಆಸಕ್ತಿಯನ್ನು ಹೊಸ ಆವಿಷ್ಕಾರಕ್ಕೆ ತಕ್ಕುದಾಗಿ ತಮ್ಮ ತಂತ್ರಜ್ಞಾನವನ್ನು ಹೆಚ್ಚಿಸಿಕೊಂಡು ಕಲಿತುಕೊಂಡು, ಸ್ವಂತ ಖರ್ಚಿನಲ್ಲಿ ಅದಕ್ಕೆ ತಕ್ಕುದಾದ ಉಪಕರಣಗಳನ್ನು ಖರೀದಿಸಿ ರೋಗಿಗಳಿಗೆ ಒದಗಿಸು ತ್ತಾರೆ. ಇಂತಹ ವ್ಯವಸ್ಥೆಯಲ್ಲಿ ದೊಡ್ಡ ಆಸ್ಪತ್ರೆಗೆ ಹೆಚ್ಚಿನ ದರವನ್ನು ವಿಧಿಸಿ, ಸಣ್ಣ ಆಸ್ಪತ್ರೆಗೆ ಕಡಿಮೆ ದರವನ್ನು ವಿಧಿಸಿದರೆ ಸಣ್ಣ ಆಸ್ಪತ್ರೆ ಗಳು ಕೆಲಸ ಮಾಡಲು ಸಾಧ್ಯವಿಲ್ಲ. ಸಣ್ಣ ಆಸ್ಪತ್ರೆಯವರು ಉಪಕರಣಗಳಿಗೆ ಸಾಲ ಮಾಡಿದ್ದನ್ನು ತೀರಿಸಬೇಡವೇ. ನಿರ್ವ ಹಣೆ ಮಾಡಬೇಡವೇ?
ಅಂದರೆ ಕಾರ್ಪೊರೇಟ್ ಆಸ್ಪತ್ರೆಗಳು ತಮಗಿಷ್ಟ ಬಂದ ದರ ವಿಧಿಸಬಹುದು ಎನ್ನುತ್ತೀರಾ?
ಡಾ. ಎಸ್. ಕಕ್ಕಿಲ್ಲಾಯ: ಕಾರ್ಪೊರೇಟ್ ಆಸ್ಪತ್ರೆಗಳ ಬಗ್ಗೆ ನನಗೆ ಯಾವುದೇ ಸಹಾನುಭೂತಿಯೂ ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದೇ ಅಂತಹ ಆಸ್ಪತ್ರೆಗಳ ದರೋಡೆಕೋರ ನೀತಿಯಿಂದ. ಆದರೆ ವಾಸ್ತವದಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳನ್ನು ಸಾಕುತ್ತಿರುವುದು ಇದೇ ಸರಕಾರ.
ಬೆಂಗಳೂರಿನ ಹೃದಯ ಭಾಗದಲ್ಲಿ ವೈದ್ಯರೊಬ್ಬರು ಹೃದಯಾಲ ಯವನ್ನು ತೆರೆಯುವುದಾದರೆ, ಸರಕಾರ ಎಕರೆಗಟ್ಟಲೆ ಜಾಗವನ್ನು ಬೋರಿಂಗ್ ಆಸ್ಪತ್ರೆ ಪಕ್ಕದಲ್ಲಿ ಬಿಟ್ಟುಕೊಡಲು ತಯಾರಾಗುತ್ತದೆ. ಹಳ್ಳಿಗಳಿಗೆ ವೈದ್ಯರು ಬರುವುದಿಲ್ಲ ಎಂಬುದು ಸರಕಾರದ ಆರೋಪ.ಹಾಗಿರುವಾಗ, ಕೋಟಿಗಟ್ಟಲೆ ದುಡ್ಡು ಇರುವವರಿಗೆ ಸರಕಾರ ಜಾಗ ನೀಡಬೇಕಾಗಿಲ್ಲ. ಅವರಿಗೆ ಬ್ಯಾಂಕ್ನವರು ಸಾಲ ಕೂಡಾ ಕೊಡುತ್ತಾರೆ. ಹಳ್ಳಿಯ ಆಸ್ಪತ್ರೆಯಲ್ಲಿ ಸರ್ಜನ್ ಒಬ್ಬ ಆಸ್ಪತ್ರೆ ಮಾಡುತ್ತೇನೆ ಎಂದಾದರೆ, ಹತ್ತಿಪ್ಪತ್ತು ಸೆಂಟ್ಸ್ ಜಾಗ ಕೇಳಿದರೆ ಅದನ್ನು ಕೊಡಬೇಕು. ಅವನಿಗೆ ಶೇ. 4 ದರದಲ್ಲಿ ಸಾಲ ನೀಡ ಬೇಕು. ಅದನ್ನು ಸರಕಾರ ಮಾಡುತ್ತಿಲ್ಲ. ಸರಕಾರದ ವೈದ್ಯಕೀಯ ನೀತಿಯೇ ಉಲ್ಟಾ.
ಆಸ್ಪತ್ರೆಗಳು ದುಡ್ಡಿಗಾಗಿ ರೋಗಿಗಳನ್ನು ಪೀಡಿಸುತ್ತವೆ ಎಂಬ ಆರೋಪವಿದೆಯಲ್ಲಾ?
ಡಾ. ಎಸ್. ಕಕ್ಕಿಲ್ಲಾಯ:ಆಸ್ಪತ್ರೆಯಲ್ಲಿ ಹೆಣ ಇಟ್ಟುಕೊಂಡು ದುಡ್ಡು ಮಾಡುತ್ತಾರೆ. ಹೆಣಕ್ಕೆ ವೆಂಟಿಲೇಶನ್ ಮಾಡುತ್ತಾರೆ ಎಂದು ದೂರಲಾಗುತ್ತದೆ. ಈ ಬಗ್ಗೆ ಸಮಿತಿ ಸಭೆಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಆ ಬಗ್ಗೆ ದೂರು ನೀಡಲಾಗಿದೆಯಾ ಎಂದು ನಾನು ಪ್ರಶ್ನಿಸಿದ್ದೆ. ಉತ್ತರ ಸಿಗಲಿಲ್ಲ. ಹೆಣಕ್ಕೆ ವೆಂಟಿಲೇಶನ್ ಮಾಡುವುದು ಹೇಗೆ ಹೇಳಿ ನಾವೂ ಕಲಿಯುತ್ತೇವೆ ಎಂದರೆ ಅದಕ್ಕೂ ನಿರುತ್ತರ. ಸತ್ತ ಅರ್ಧ ಗಂಟೆಯಲ್ಲಿ ದೇಹ ದೃಢಗೊಳ್ಳುತ್ತದೆ. ಅದಕ್ಕೆ ವೆಂಟಿಲೇಶನ್ ಕೊಡುವುದು ಹೇಗೆ? ಅದು ಒಳ ಹೋಗುತ್ತದೆಯೇ? ಆದರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಮರಣ ಹೊಂದಿ ದ ಮೇಲೆ ಹಣವೇ ಪಡೆಯಬಾರದೆಂದರೆ ಅರ್ಥವೇನು?ವೆಂಟಿಲೇಟ್, ಡಯಾಲಿಸ್ ಮಾಡಿದ ಖರ್ಚನ್ನು ಆಸ್ಪತ್ರೆ ಭರಿ ಸಲು ಸಾಧ್ಯವೇ? ಪ್ರತಿಯೊಂದಕ್ಕೂ ವೈದ್ಯರ ಮೇಲೆ ಗೂಬೆ ಕೂರಿಸ ಲಾಗದು. ರೋಗಿಯ ಕಡೆಯಿಂದಲೂ ತಪ್ಪಾಗಿರಬಹುದಲ್ಲವೇ.
ಸಣ್ಣ, ಮಧ್ಯಮ ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳ ವ್ಯತ್ಯಾಸ ಸ್ಪಷ್ಟಪಡಿಸುವಿರಾ?
ಡಾ. ಎಸ್. ಕಕ್ಕಿಲ್ಲಾಯ: ಗ್ರಾಮಾಂತರ ಪ್ರದೇಶಗಳಲ್ಲಿ ಆರೇಳು ಸ