ಪಾನ್-ಆಧಾರ್ ಜೋಡಣೆ
ಸುಪ್ರೀಂ ಕೋರ್ಟ್ ತೀರ್ಪಿನಿಂದ ಏಳುವ ನಾಲ್ಕು ಮುಖ್ಯ ಪ್ರಶ್ನೆಗಳು
ಕೋರ್ಟ್ ಮಧ್ಯಮ ಮಾರ್ಗಹಿಡಿದಿದೆ ಎಂಬುದು ಆಧಾರ್-ಪಾನ್ ಜೋಡಣೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಇರುವ ಸಾಮಾನ್ಯ ಅಭಿಪ್ರಾಯ. ಈ ಜೋಡಣೆಯನ್ನು ಕಡ್ಡಾಯವಾಗಿಸುವ ಸರಕಾರದ ಕಾನೂನನ್ನು ಎತ್ತಿ ಹಿಡಿದಿರುವ ಕೋರ್ಟ್, ಆಧಾರ್ ಕಾರ್ಡ್ ಇಲ್ಲದವರಿಗೆ ವಿಧಿಸುವ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಸೂಚಿಸಿದೆ. ಅರ್ಜಿದಾರರಿಗೆ ನೀಡಿದ ಒಂದು ರಿಯಾಯಿತಿ ಅಸ್ಪಷ್ಟವಾಗಿರುವಂತೆ ಕಾಣುತ್ತದಲ್ಲದೆ, ಕೋರ್ಟಿನ ಆಜ್ಞೆ ಸರಕಾರದ ಕಾನೂನಿನ ಉಳಿದ ಭಾಗಗಳನ್ನು ಸಾರಸಗಟಾಗಿ ಒಪ್ಪಿಕೊಂಡಿದೆ.
ಬ್ಯಾಂಕ್ ವ್ಯವಹಾರ ಮತ್ತು ತೆರಿಗೆ ಉದ್ದೇಶಗಳಿಗೆ ಬಳಸುವ ಪಾನ್ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸಲೇ ಬೇಕೆಂದು ಹೇಳಲು ಸರಕಾರಕ್ಕೆ ಸಾಂವಿಧಾನಿಕ ಅಧಿಕಾರವಿದೆಯೇ? ಎಂಬುದನ್ನು ಸುಪ್ರೀಂ ಕೋರ್ಟ್‌ನ ತೀರ್ಪು ಪರಿಶೀಲಿಸಿತ್ತು. ಪಾನ್-ಆಧಾರ್ ನಿಯಮಗಳು, ಆಧಾರ್ ಕಡ್ಡಾಯವಾಗಕೂಡದೆಂಬ ಕೋರ್ಟಿನ ಹಿಂದಿನ ನಿಯಮಗಳನ್ನೇ ಉಲ್ಲಂಘಿಸುತ್ತವೆಂದ ಅರ್ಜಿದಾರರು ಹಲವು ನೆಲೆಗಳಲ್ಲಿ ಸರಕಾರದ ಕಾನೂನನ್ನು ಪ್ರಶ್ನಿಸಿದ್ದರು.
ಸರಕಾರಕ್ಕೆ ಪಾನ್-ಆಧಾರ್ ಜೋಡಣೆಯನ್ನು ಆಧಾಯ ತೆರಿಗೆ ಸಲ್ಲಿಕೆಗೆ ಕಡ್ಡಾಯಗೊಳಿಸುವ ಹಕ್ಕು ಇದೆ ಎಂದು ಹೇಳಿರುವ ಕೋರ್ಟಿನ ಅಂತಿಮ ತೀರ್ಪು ಸರಕಾರದ ಕಾನೂನನ್ನು ಉಲ್ಲಂಘಿಸುವವರ ಪಾನ್ ಕಾರ್ಡನ್ನು ರದ್ದುಗೊಳಿಸುವ ಸರಕಾರದ ಕ್ರಮ ತೀರ ಕಠಿಣ ಶಿಕ್ಷೆಯನ್ನು ‘ಕಡಿಮೆಮಾಡು’ವಂತೆ ಹೇಳಿತು.
ಹಲವರ ಪ್ರಕಾರ
ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನೇ ಉಲ್ಲಂಘಿಸುವ ಆಧಾರ್ ಕುರಿತ ಕೋರ್ಟಿನ ತೀರ್ಪು ಅದು ಇತ್ಯರ್ಥಗೊಳಿಸಿದಷ್ಟೇ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
1. ಎಷ್ಟು ಖೋಟಾ ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ?
ಪಾನ್-ಆಧಾರ್ ಜೋಡನೆಯು ಕಾಳಧನದ ಹರಿವಿಗೆ ನೆರವಾಗುವ ಕಾರ್ಡ್‌ಗಳನ್ನು ರದ್ದುಗೊಳಿಸಲು ಸಹಾಯವಾಗುತ್ತದೆಂಬುದು ಸರಕಾರ ಮುಂದಿಟ್ಟಿರುವ ಮುಖ್ಯ ವಾದಗಳಲ್ಲಿ ಒಂದು. ಆದರೆ ಈ ಜೋಡಣೆಗೆ ಏನಾದರೂ ಬೆಲೆ ಇರಬೇಕಾದರೆ ಆಧಾರ್ ಕಾರ್ಡ್ ಗಳು ಪಾನ್ ಕಾರ್ಡ್‌ಗಳಿಗಿಂತ ಹೆಚ್ಚು ನಂಬಲರ್ಹ, ಹೆಚ್ಚು ಸಾಚಾ (ಪುಲ್ ಪ್ರೂಫ್) ಎಂಬುದಕ್ಕೆ ಪುರಾವೆ ಇರಬೇಕಾಗುತ್ತದೆ. ಆದರೆ ಸರಕಾರ ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಅಲ್ಲದೆ, ದೇಶದಲ್ಲಿ ಎಷ್ಟು ಖೋಟಾ ಆಧಾರ್ ಕಾರ್ಡ್‌ಗಳಿವೆ ಎಂದು ತಿಳಿಸುವಂತೆ ಮಾಹಿತಿ ಹಕ್ಕು ಅನ್ವಯ ಮಾಡಿಕೊಂಡ ಮನವಿಯೊಂದಕ್ಕೆ ಉತ್ತರ ನೀಡಲು, ಆಧಾರ್‌ನ ಮೇಲ್ವಿಚಾರಕ ಅಂಗವಾದ ಯುಐಡಿಎಐ ರಾಷ್ಟ್ರದ ಭದ್ರತೆಯ ಕಾರಣ ನೀಡಿ ನಿರಾಕರಿಸಿದೆ.
ಆಧಾರ್ ನೋಂದಣಿಯ ಕೆಲಸ ನಿರ್ವಹಿಸುತ್ತಿದ್ದ 34,000 ಖಾಸಗಿ ಆಪರೇಟರ್‌ಗಳನ್ನು 2010ರಿಂದ ಯುಐಡಿಎಐ ಅಮಾನತುಗೊಳಿಸಿದೆ. ಯುಐಡಿಎಐಗೆ ಒಬ್ಬನೇ ವ್ಯಕ್ತಿಗೆ ಎರಡು ಆಧಾರ್‌ಗಳನ್ನು ನೋಂದಣಿ ಮಾಡಿಸಿದ, ಖೋಟಾ ಮಾಹಿತಿ ದಾಖಲಿಸಿದ ಮತ್ತು ಹಸುಗಳು ನಾಯಿಗಳು ಹಾಗೂ ದೇವರುಗಳ ಹೆಸರಿನಲ್ಲಿ ಕೂಡ ಆಧಾರ್ ಕಾರ್ಡ್‌ಗಳಿಗಾಗಿ ನೋಂದಣಿ ಮಾಡಿರುವ, ಆಧಾರ್ ಅಂಕೆ ಸಂಖ್ಯೆಗಳನ್ನು ‘ಮಲಿನಗೊಳಿಸಿರುವ’ ಬಗ್ಗೆ ನೂರಾರು ದೂರುಗಳು ಬಂದಿವೆ. 2013ರಲ್ಲಿ ಯುಐಡಿಎಐ 3.84ಲಕ್ಷ ಖೋಟಾ ಆಧಾರ್‌ಗಳನ್ನು ರದ್ದು ಪಡಿಸಬೇಕಾಯಿತು. ಎಷ್ಟು ಖೋಟಾ ಹಾಗೂ ನಕಲಿ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಅದು ಬಹಿರಂಗ ಪಡಿಸದೆ ಇದ್ದಲ್ಲಿ, ಆಧಾರ್ ಕಾರ್ಡ್ ಪಾನ್ ಕಾರ್ಡ್‌ಗಿಂತ ಹೆಚ್ಚು ಫೂಲ್‌ಪ್ರೂಫ್ ಎಂದು ನಾವು ಹೇಗೆ ಖಚಿತ ಪಡಿಸಿಕೊಳ್ಳುವುದು? ಒಟ್ಟು ವಿತರಿಸಲಾದ ಆಧಾರ್ ಕಾರ್ಡ್‌ಗಳಲ್ಲಿ ಕೇವಲ ಶೇ. 0.4 ಮಾತ್ರ ಖೋಟಾ ಅಥವಾ ನಕಲಿ ಎಂದು ಹೇಗೆ ನಂಬುವುದು?
2. ಅಪರಾಧಕ್ಕೆ ಸರಿಯಾದ ಶಿಕ್ಷೆಯೇ?
ಪಾನ್‌ಕಾರ್ಡ್‌ನ್ನು ಆಧಾರ್‌ಗೆ ಲಿಂಕ್ ಮಾಡದಿದ್ದಲ್ಲಿ ಅದನ್ನು ಅವೌಲ್ಯಗೊಳಿಸಲಾಗುವುದು ಎಂಬ ಶಿಕ್ಷೆ ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆಯೇ? ಎಂಬುದು ಕೋರ್ಟ್‌ನ ಮುಂದೆ ಬಂದ ಮುಖ್ಯ ಪ್ರಶ್ನೆಗಳಲ್ಲೊಂದು. ನಿಜವಾಗಿ ಹೇಳಬೇಕೆಂದರೆ,‘‘ಹೌದು ಆಗುತ್ತದೆ’’ ಎಂದು ಕೋರ್ಟ್ ಒಪ್ಪಿಕೊಳ್ಳುತ್ತದೆ. ಆದರೆ ಈ ಶಿಕ್ಷೆ ಅಪರಾಧಕ್ಕೆೆ ಅನುಗುಣವಾಗಿ ಇದೆಯೇ ಅಥವಾ ಅಪರಾಧಕ್ಕೆ ಅತಿಯಾಯಿತೇ? ಎಂಬುದನ್ನು ಅಳೆಯದೆ ಒಂದು ತೀರ್ಮಾನಕ್ಕೆ ಬರದೆ ಕೋರ್ಟ್ ಮುಂದುವರಿಯುತ್ತದೆ.
ಇದು ಇನ್ನೂ ಹೆಚ್ಚು ಆಘಾತಕಾರಿ ವಿಷಯ. ಯಾಕೆಂದು ಖ್ಯಾತ ವಕೀಲ ಗೌತಮ್ ಭಾಟಿಯಾ ವಿವರಿಸುತ್ತಾರೆ:
‘‘ಈ ತೀರ್ಪು ನೀಡಿದ ನ್ಯಾಯಾಧೀಶ, ನ್ಯಾಯ ಮೂರ್ತಿ ಸಿಕ್ರಿಯವರೇ ನೀಟ್ ಪ್ರಕರಣದಲ್ಲಿ ಸಂವಿಧಾನ ಪೀಠದಲ್ಲಿ ಕುಳಿತು ಅನುಗುಣತೆಯ ಪ್ರಶ್ನೆ ಎತ್ತಿದ್ದರು; ಕೆಲವು ತಿಂಗಳ ಬಳಿಕ ಇಬ್ಬರು ನ್ಯಾಯಾಧೀಶರ ಪೀಠದಲ್ಲಿ ಕುಳಿತಾಗ ಈ ಪ್ರಶ್ನೆಯನ್ನು ಅನ್ವಯಿಸಲು ಅವರೂ ನಿರಾಕರಿಸಿದರು.’’
3. ಆಧಾರ್ ಕಾರ್ಡ್ ಪಡೆಯಲೇಬೇಕೆಂದು ಬಲಾತ್ಕರಿಸುವುದು, ಒತ್ತಾಯಿಸುವುದು ಸರಿಯೇ?
ಈ ಹಂತದವರೆಗೆ ಜನರು ಸ್ವ-ಇಚ್ಛೆಯಿಂದಲೇ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂಬ ನಂಬಿಕೆ ನ್ಯಾಯಾಲಯದ ತೀರ್ಪಿನ ಹಿಂದಿದೆ. ಹೀಗೆ ಹೇಳುವ ಸರಕಾರದ ಮಾತನ್ನು ಕೋರ್ಟ್ ಒಪ್ಪಿಕೊಂಡಿದೆ. ಆಧಾರ್ ಕಾರ್ಡ್ ಇಲ್ಲದವರು, ಒಂದೋ ಅದನ್ನು ಪಡೆಯಲು ತಮಗೆ ಸಾಧ್ಯವಾಗಿಲ್ಲ ಅಥವಾ ತಾವು ಅದನ್ನು ಪಡೆಯಲು ಬಯಸುವುದಿಲ್ಲ ಎನ್ನುವವರಿಗೆ ಕೋರ್ಟ್ ವಿನಾಯಿತಿ ನೀಡಿದೆ: ಅಂಥವರ ಪಾನ್ ಕಾರ್ಡ್‌ಗಳನ್ನು ಅವೌಲ್ಯಗೊಳಿಸಲಾಗದು ಎಂದು ಹೇಳಿದೆ.
ಅಂದರೆ, ಉಳಿದವರೆಲ್ಲರೂ ಸ್ವ-ಇಚ್ಛೆಯಿಂದ ಪಾನ್ ಕಾರ್ಡ್ ಪಡೆದಿದ್ದಾರೆ ಮತ್ತು ಅವರಿಗೆ ಅದನ್ನು ಪಾನ್ ಜೊತೆ ಲಿಂಕ್ ಮಾಡಲು ಬಲವಂತ ಪಡಿಸಬಹುದೆಂದು ಅದು ಅಂದುಕೊಂಡಿದೆ. ಆದರೆ ವಾಸ್ತವ ಬೇರೆಯೇ ಇದೆ. ಆಧಾರ್ ಮಾಡಿಸದಿದ್ದಲ್ಲಿ ಅಂಥವರಿಗೆ ಹಲವು ಸಲವತ್ತುಗಳು ಸಿಗಲಾರವೆಂಬ ಸರಕಾರದ ಬೆದರಿಕೆಗಳಿಗೆ ಮಣಿದು ಜನ ಆಧಾರ್ ಮಾಡಿಸಿದ್ದಾರೆ. ಹುಟ್ಟಿದ ಮಕ್ಕಳಿಗೆ ಜನನ ಪ್ರಮಾಣ ಪತ್ರ ಪಡೆಯುವ ಮೊದಲೇ ಮಗುವನ್ನು ಆಧಾರ್‌ಗೆ ನೋಂದಾಯಿಸಬೇಕೆನ್ನುವವರೆಗೂ ಸರಕಾರ ಹೋಗಿದೆ. ತಾವು ಆಧಾರ್‌ಗೆ ನೀಡಿದ ಮಾಹಿತಿ ಗೌಪ್ಯವಾಗಿ ಉಳಿಯುವುದಿಲ್ಲ ಎಂಬ ಕಾರಣಕ್ಕಾಗಿ ಆಧಾರ್ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದವರನ್ನು ಕೂಡ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿಲ್ಲ.
4. ಸಂವಿಧಾನ ಪೀಠ ಎಲ್ಲಿದೆ?
ಇವುಗಳಲ್ಲಿ ಕೆಲವು ಪ್ರಶ್ನೆಗಳು ಅಂತಿಮವಾಗಿ, ರಾಷ್ಟ್ರ ಮತ್ತು ವ್ಯಕ್ತಿಯ ನಡುವಿನ ಸಂಬಂಧವನ್ನು ಮೂಲಭೂತವಾಗಿ ಬದಲಿಸಲು ಭಾರತ ಸರಕಾರಕ್ಕೆ ಅಧಿಕಾರ ಇದೆಯೇ? ಎಂಬ ಮೂಲಭೂತ ವಿಷಯಕ್ಕೆ ಬಂದು ನಿಲ್ಲುತ್ತದೆ. ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಿ ದಾಸ್ತಾನು ಇಟ್ಟುಕೊಂಡು ಅದನ್ನು ಸರಕಾರ ಮತ್ತು ಖಾಸಗಿ ರಂಗಗಳಿಗೆ, ಖಾಸಗಿ ವ್ಯಕ್ತಿಗಳಿಗೆ ನೀಡಲು ಸರಕಾರಕ್ಕೆ ಅನುಮತಿ ನೀಡುವುದು ಸಂವಿಧಾನದ 21ನೆ ಪರಿಚ್ಛೇದದ ಉಲ್ಲಂಘನೆಯಾಗುತ್ತದೆಂದು ಆಧಾರ್‌ನ ಟೀಕಾಕಾರರು ವಾದಿಸಿದ್ದಾರೆ. ಇವರ ಪ್ರಕಾರ ಇದರಲ್ಲಿ ಖಾಸಗಿತನದ ಒಂದು ಮೂಲಭೂತ ಹಕ್ಕು ಕೂಡ ಸೇರಿದೆ. ಸುಪ್ರೀಂ ಕೋರ್ಟ್ ಬಹಳ ಮುಖ್ಯವಾದ ಈ ವಾದ ಮಾಡುವ ಹಲವು ಅರ್ಜಿಗಳನ್ನು ಸಂವಿಧಾನ ಪೀಠವೊಂದಕ್ಕೆ ಹಸ್ತಾಂತರಿಸಲು ನಿರ್ಧರಿಸಿತು.
ಆದರೆ, ಈ ನಿರ್ಧಾರದ ಬಳಿಕ, 670 ದಿನಗಳು ಕಳೆದಾಗಲೂ, ಕೋರ್ಟ್ ಇನ್ನೂ ಕೂಡ ಆ ಸಂವಿಧಾನ ಪೀಠವನ್ನು ರಚಿಸಿಲ್ಲ. ಪೀಠ ರಚನೆಯಾಗುವವರೆಗೆ, ಸರಕಾರ ಆಧಾರ್ ವ್ಯಾಪ್ತಿಯನ್ನು ಎಷ್ಟೇ ವಿಸ್ತರಿಸಿದರೂ, ಆಧಾರ್ ಅಸ್ತಿತ್ವವೇ ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಬಹುದಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಏಳುವ
ನಾಲ್ಕು ಮುಖ್ಯ ಪ್ರಶ್ನೆಗಳು
ಕೃಪೆ:scroll.in