ಹೆಣವೊಂದರ ದಫನ!
ಧಾರವಾಹಿ - 43
ಮನೆಯಲ್ಲಿ ದಂಪತಿ ಆತಂಕದಿಂದ ಪಪ್ಪುವಿನ ದಾರಿ ಕಾಯುತ್ತಿದ್ದರು. ದೂರದಲ್ಲಿ ಒದ್ದೆಯಾಗುತ್ತಾ ಪಪ್ಪು ಬರುತ್ತಿರುವುದು ನೋಡಿದರು. ಹೇಗಾದರೂ ಸರಿ, ಬಂದನಲ್ಲ ಎಂದು ಇಬ್ಬರಿಗೂ ಸಮಾಧಾನವಾಯಿತು.
‘‘ಎಲ್ಲಿಗೆ ಹೋದದ್ದೋ?’’ ಅನಂತಭಟ್ಟರು ಕೇಳಿದರು.
‘‘ನೇತ್ರಾವತಿ ನೀರು ಕೆಂಪಾಗಿದೆ ಅಪ್ಪಾ....ನೀರಿನ ಬದಲು ರಕ್ತ ಹರೀತಾ ಇದೆ.....’’
‘‘ನೆರೆಯ ಕೆಸರು ನೀರು ಕಣೋ...ಒಂದೆರಡು ದಿನದಲ್ಲಿ ಎಲ್ಲ ತಿಳಿಯಾಗುತ್ತದೆ’’
‘‘ಇನ್ನೆರಡು ದಿನದಲ್ಲಿ ಕಂಚಿಕಲ್ಲು ಮುಳುಗುತ್ತದೆ....ಊರು ಕೂಡ ಮುಳುಗುತ್ತೆ ಅಪ್ಪಾ...ಇಡೀ ಊರು ಮುಳುಗುತ್ತೆ....’’
‘‘ಕಂಚಿಕಲ್ಲು ಮುಳುಗಿದರೆ ಊರು ಯಾಕೋ ಮುಳುಗುತ್ತೆ?’’ ಅನಂತಭಟ್ಟರು ಅರ್ಥವಾಗದೆ ಕೇಳಿದರು.
‘‘ಹೂಂ ಅಪ್ಪಾ...ಕಂಚಿಕಲ್ಲು ಮುಳುಗಿದರೆ ಇಡೀ ಊರು ಮುಳುಗುತ್ತೆ...ನೀವು ಹೆದರಬೇಡಿ. ನಾನು ಕಬೀರನ ರಿಕ್ಷಾಕ್ಕೆ ಹೇಳಿದ್ದೇನೆ...ನಾವೆಲ್ಲರೂ ಅದನ್ನು ಹತ್ತಿಕೊಂಡರೆ ಆಯಿತು...’’
‘‘ಊರು ಮುಳುಗುವಾಗ ಆ ಬ್ಯಾರಿಯ ರಿಕ್ಷಾ ಮುಳುಗುವುದಿಲ್ಲವೇನೋ?’’ ಭಟ್ಟರು ತಮಾಷೆಯ ಧ್ವನಿಯಲ್ಲಿ ಕೇಳಿದರು.
‘‘ಅದು ‘ದೇಶಪ್ರೇಮಿ’ ರಿಕ್ಷಾ ಅಪ್ಪಾ. ದೇಶಪ್ರೇಮಿ ರಿಕ್ಷಾ ಮುಳುಗುವುದಿಲ್ಲ...ನಾವೆಲ್ಲರೂ ಅದರಲ್ಲಿ ಹತ್ತಿಕೊಳ್ಳೋಣ...ಕಬೀರ ನಮ್ಮನ್ನೆಲ್ಲ ಮುಳುಗದಂತೆ ನೋಡಿಕೊಳ್ಳುತ್ತಾನೆ...’’ ಪಪ್ಪು ಗಂಭೀರವಾಗಿ ಹೇಳಿದ.
ಮಗನ ಅಸಹಜ ಉತ್ತರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಭಟ್ಟರಿಗೆ ಅರ್ಥವಾಗಲಿಲ್ಲ.
‘‘ಊಟಕ್ಕಿಟ್ಟಿದ್ದೇನೆ...’’ ಎಂಬ ತಾಯಿಯ ಕರೆ ಕೇಳಿಸಿದರೂ ಕೇಳಿಸಿಕೊಳ್ಳದವನಂತೆ ಪಪ್ಪು ತನ್ನ ಕೋಣೆ ಸೇರಿಕೊಂಡ. ಅಂದು ಮಧ್ಯರಾತ್ರಿ...ಅನಂತಭಟ್ಟರಿಗೆ ಯಾರೋ ಜೋರಾಗಿ ಕೂಗಿದಂತಾಗಿ, ಧಕ್ಕನೆ ಎದ್ದು ಕುಳಿತರು.
ಬಹುಶಃ ‘ಭಾರತ ಮಾತಾ ಕಿ ಜೈ’ ಎಂಬ ಕೂಗು ಅದು. ಕ್ಷೀಣವಾದ ಪರಿಚಿತ ಧ್ವನಿ. ಪಪ್ಪು ಸಣ್ಣ ಬಾಲಕನಾಗಿದ್ದಾಗ, ಸ್ವಾತಂತ್ರ ದಿನದಂದು ಶಾಲಾ ಮೆರವಣಿಗೆಯಲ್ಲಿ ಕೂಗಿದಂತಿತ್ತು. ನನ್ನ ಕನಸಿರಬಹುದೇ? ಎದ್ದು ಪಪ್ಪುವಿನ ಕೋಣೆಯ ಬಾಗಿಲಿಗೆ ಕಿವಿಯಾನಿಸಿದರು. ಒಳಗಿಂದ ಯಾರೋ ಏನೋ ಗೊಣಗಿದಂತಾಯಿತು. ಪಪ್ಪು ಯಾರ ಜೊತೆಗೋ ಮಾತನಾಡುತ್ತಿದ್ದಂತಿತ್ತು.
‘‘ಪಪ್ಪು...’’ ಎಂದು ಕರೆದರು. ಪ್ರತ್ಯುತ್ತರವಿಲ್ಲ.
ಪಾಪ ನಿದ್ದೆಯಲ್ಲಿ ಕನಸು ಬಿದ್ದಿರಬೇಕು. ಎಲ್ಲವೂ ನನ್ನ ಭ್ರಾಂತು. ಅನಂತಭಟ್ಟರು ಮತ್ತೆ ಚಾಪೆ ಸೇರಿದರು. ನಿದ್ದೆ ಮಾತ್ರ ಹತ್ತಿರ ಸುಳಿಯಲಿಲ್ಲ.
ಬೆಳಗ್ಗೆ ಎದ್ದು ನೋಡಿದರೆ ಮಗ ಎಲ್ಲರಿಗಿಂತ ಬೇಗ ಅಂಗಳದಲ್ಲಿ ಓಡಾಡುತ್ತಿದ್ದ. ತೆಂಗಿನ ಬುಡವನ್ನು ಬಿಡಿಸಿ, ಬುಡದಲ್ಲಿದ್ದ ತೆಂಗಿನ ಗರಿಗಳನ್ನು ಕತ್ತರಿಸಿ ಒಪ್ಪ ಮಾಡುತ್ತಿದ್ದ. ತಂದೆ ತಾಯಿ ಇಬ್ಬರಿಗೂ ಅದನ್ನು ನೋಡಿ ಸಮಾಧಾನ. ಮತ್ತೆ ಮಗ ಚುರುಕಾಗುತ್ತಿದ್ದಾನೆ ಅನ್ನಿಸಿತು. ಲಕ್ಷ್ಮಮ್ಮ ತಿಂಡಿ ಎಲ್ಲ ಸಿದ್ಧಪಡಿಸಿ ಮಗನನ್ನು ಕರೆಯಲೆಂದು ಮತ್ತೆ ಅಂಗಳಕ್ಕೆ ಬಂದಾಗ ಅವನು ಅಲ್ಲಿ ಕಾಣಲಿಲ್ಲ.
‘‘ಮಗನನ್ನು ನೋಡಿದಿರಾ?’’ ಗಂಡನಲ್ಲಿ ಕೇಳಿದರು. ‘‘ಅಲ್ಲೇ ಇದ್ದನಲ್ಲೇ...’’ ಎಂದರು.
‘‘ಇಲ್ಲೆಲ್ಲೂ ಕಾಣುತ್ತಿಲ್ಲ...’’
ಭಟ್ಟರು ಶಾಲು ಹೆಗಲೇರಿಸಿ ಅಂಗಳಕ್ಕೆ ಬಂದರು. ನೋಡಿದರೆ ಪಪ್ಪುವಿನ ಸುಳಿವಿಲ್ಲ. ಎಲ್ಲಿಗೆ ಹೋದ? ಮತ್ತೆ ಪೇಟೆ ಕಡೆಗೇನಾದರೂ ಹೊರಟನೋ? ಆದರೆ ಬಟ್ಟೆಯನ್ನೂ ಬದಲಿಸದೇ ಹೊಗಲಾರ ಎಂದೆನಿಸಿ ಅವನನ್ನು ಹುಡುಕಿಕೊಂಡು ಹೊರಟರು. ಹೋಗುವಾಗ ಛತ್ರಿಯನ್ನು ಹಿಡಿದುಕೊಂಡರು. ಗದ್ದೆಯ ಪುಣಿ ದಾಟಿ ಸಿಗುವ ಕಿರು ಸೇತುವೆಯ ಪಕ್ಕ ಯಾರೋ ಕಂಡಂತಾಯಿತು. ಹತ್ತಿರ ಹೋದರೆ ಪಪ್ಪು! ಕಿರು ಸೇತುವೆಯ ಕೆಸರಿನ ನೀರಿನಲ್ಲಿ ಇಳಿದು ಏನನ್ನೋ ಹುಡುಕುತ್ತಿದ್ದ
‘‘ಏನೋ ಪಪ್ಪು? ಇಲ್ಲೇನು ಮಾಡುತ್ತಿದ್ದೀಯಾ?’’
ತಲೆಯೆತ್ತಿದ ಪಪ್ಪು ‘‘ಪೆನ್ನು ಅಪ್ಪ...ಬಂಗಾರದ ಬಣ್ಣದ ಪೆನ್ನೊಂದನ್ನು ಇಲ್ಲಿ ಕಳೆದುಕೊಂಡಿದ್ದೇನೆ...ಅದನ್ನು ಹುಡುಕುತ್ತಿದ್ದೇನೆ...’’
‘‘ಎಂತಹ ಪೆನ್ನೋ...ಅದು ಹೋದರೆ ಹೋಗಲಿ...ಬಾ...’’
‘‘ಇಲ್ಲ ಅಪ್ಪಾ....ನನ್ನ ಕೈಯಿಂದ ಜಾರಿ ಇಲ್ಲೇ ಬಿದ್ದಿತ್ತು ಆ ಪೆನ್ನು. ಜಾನಕಿ ಜೋಪಾನ ಮಾಡಿಕೋ ಎಂದು ಕೊಟ್ಟ ಪೆನ್ನು ಅದು...ನಾನು ಈ ಕೆಸರಲ್ಲಿ ಕಳೆದು ಬಿಟ್ಟೆ...’’
‘‘ಹೋಗಲಿ ಕಣೋ...ಬೇಕಾದರೆ ಹೊಸತು ತೆಗೆದುಕೊಳ್ಳೋಣ...ಮನೆಗೆ ಬಾ ಈಗ...’’ ‘‘ಜಾನಕಿ ಬಂದು ಪೆನ್ನು ಎಲ್ಲಿ ಎಂದು ಕೇಳಿದರೆ ಏನು ಹೇಳಲಿ ಅಪ್ಪ?’’ ಅವನು ಆತಂಕದಿಂದ ಪ್ರಶ್ನೆ ಹಾಕಿದ.
ಭಟ್ಟರು ಅಕ್ಷರಶಃ ಅವನನ್ನು ಎಳೆದುಕೊಂಡೇ ಮನೆಯ ಕಡೆಗೆ ನಡೆದರು. ಅವನು ಮಾತ್ರ ‘‘ಬಂಗಾರದ ಬಣ್ಣದ ಪೆನ್ನು ಅಪ್ಪ್ಪಾ...’’ ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದ.
ಅಂಗಳ ತಲುಪಿದಾಗ ಸುತ್ತಮುತ್ತ ನೋಡುತ್ತಾ ಕೇಳಿದ ‘‘ಅಪ್ಪಾ.. ನಮ್ಮ ಬೇಲಿಯೆಲ್ಲಾ ಗಟ್ಟಿಯಾಗಿದೆಯಾ?’’
‘‘ಬೇಲಿ ಗಟ್ಟಿಯಾಗಿಲ್ಲದಿದ್ದರೇನೀಗ? ಇರುವುದೇ ಅಂಗೈಯಗಲ ಜಾಗ’’
‘‘ಹಾಗಲ್ಲಪ್ಪ...ಶತ್ರುಗಳೆಲ್ಲ ಹೊಂಚು ಹಾಕಿ ಕಾಯುತ್ತಿದ್ದಾರೆ. ಯಾವ ಕ್ಷಣದಲ್ಲೂ ದಾಳಿ ಮಾಡಬಹುದು...ನಮ್ಮ ಗಡಿಯನ್ನೆಲ್ಲ ಭದ್ರ ಮಾಡಿಕೊಳ್ಳಬೇಕು...ಇನ್ನು ನಾನು ಬಂದಿದ್ದೇನಲ್ಲ...ಭಯ ಬೇಡ...’’ ಎಂದ.
‘‘ಆಯ್ತು...ನೀನು ಬೇಕಾದರೆ ಒಳ ಹೋಗಿ ಸ್ವಲ್ಪ ಮಲಗು. ನಿನಗೆ ವಿಶ್ರಾಂತಿ ಬೇಕು...’’ ಭಟ್ಟರು ಮಗನಿಗೆ ಸಲಹೆ ನೀಡಿದರು.
ಆದರೆ ಅವನು ಒಳ ಹೋಗಲಿಲ್ಲ. ಮಧ್ಯಾಹ್ನದವರೆಗೂ ಸುಮ್ಮನೆ ಅಂಗಳದಲ್ಲಿ ಆ ಕಡೆ ಈಕಡೆ ಉಲ್ಲಸಿತನಂತೆ ಓಡಾಡುತ್ತಿದ್ದ. ತಾಯಿ ಉಣ್ಣಲು ಕರೆದಾಗ ಹೋಗಿ ಹೊಟ್ಟೆ ತುಂಬಾ ಮತ್ತೆ ಮತ್ತೆ ಕೇಳಿ ಹಾಕಿಸಿ ಅನ್ನ ಸಾಂಬಾರು ಉಂಡ. ಮಗ ಅದೇ ಮೊದಲ ಬಾರಿ ಅಷ್ಟು ಉಂಡದ್ದು. ತಾಯಿಗೆ ಸಮಾಧಾನವಾಯಿತು. ಇದಾದ ಬಳಿಕ ಹಿತ್ತಲಿಗೆ ಹೋದವನು ಅದೇನೋ ಅಗೆಯುವ ಕೆಲಸ ಮಾಡತೊಡಗಿದ್ದ. ಜಗಲಿಯಲ್ಲಿ ಕುರ್ಚಿಗೆ ಒರಗಿದ್ದ ಅನಂತಭಟ್ಟರು ಪಪ್ಪುವನ್ನು ಹುಡುಕುತ್ತಾ ಹಿತ್ತಲಿಗೆ ಹೋದರು.
‘‘ಪಪ್ಪು ಹೊಂಡ ತೆಗೆದು ಅದೇನು ಮಾಡುತ್ತಿದ್ದೀಯ....?’’ ಭಟ್ಟರು ಅಚ್ಚರಿಯಿಂದ ಕೇಳಿದರು.
ಅನಂತ ಭಟ್ಟರು ತಲುಪುವಾಗ ಅವನು ಆ ಪುಟ್ಟ ಹೊಂಡವನ್ನು ಮುಚ್ಚಿ ಕೈ ಕೊಡವಿಕೊಳ್ಳುತ್ತಿದ್ದ. ಅವನ ಕೈ, ಮೈಯೆಲ್ಲ ಕೆಸರಾಗಿತ್ತು. ‘‘ಏನೋ ಅದು...’’ ಭಟ್ಟರು ಮತ್ತೆ ಕೇಳಿದರು.
‘‘ಹೆಣ ಅಪ್ಪ....ಯೋಧ ವೆಂಕಟನ ಹೆಣ...ಹಿತ್ತಲಲ್ಲಿ ಕೊಳೆಯುತ್ತಿತ್ತು. ವಾಸನೆಯಿಂದ ತಡೆಯುವುದಕ್ಕಾಗುತ್ತಿರಲಿಲ್ಲ. ದಫನ ಮಾಡಿಬಿಟ್ಟೆ....’’ ಎನ್ನುತ್ತಾ ಮನೆಯ ಒಳಗೆ ಹೋದ.
ಅನಂತ ಭಟ್ಟರು ಬೆಚ್ಚಿ ಮುಚ್ಚಿದ ಮಣ್ಣನ್ನು ಸರಿಸಿದರು.
ಏನೋ ಒಂದಿಷ್ಟು ಕಾಗದದ ಚೂರುಗಳಷ್ಟೇ ಅಲ್ಲಿದ್ದವು.
ತುಸು ದೂರದಲ್ಲಿ ಪುಸ್ತಕವೊಂದು ಅನಾಥವಾಗಿ ಬಿದ್ದಿತ್ತು. ಭಟ್ಟರು ಬಾಗಿ ಎತ್ತಿಕೊಂಡರು. ಅದು ಅನಕೃ ಅವರ ‘ರಣವಿಕ್ರಮ’ ಕಾದಂಬರಿ ಯಾಗಿತ್ತು. ‘‘ಪಪ್ಪು...ಈ ಕಾದಂಬರಿಯನ್ನೇಕೋ ಅಲ್ಲಿ ಎಸೆದು ಬಂದಿದ್ದೀಯ?’’ ಒಳಹೋದವರೇ ಪಪ್ಪುವನ್ನು ಕೇಳಿದರು. ಪಪ್ಪು ಕೇಳಿಸಿಕೊಳ್ಳದವನಂತೆ ಎದ್ದು ಕೋಣೆ ಸೇರಿ, ಬಾಗಿಲು ಹಾಕಿಕೊಂಡ. ಮಗ ಏನೋ ಮುಚ್ಚಿಡುತ್ತಿದ್ದಾನೆ ಎನ್ನುವುದು ನಿಧಾನಕ್ಕೆ ಅನಂತಭಟ್ಟರ ಗಮನಕ್ಕೆ ಬಂದಿತ್ತು. ಅವನು ಸಹಜವಾಗಿಲ್ಲ. ಆದರೆ ಅವನಲ್ಲಿ ಅದನ್ನು ಹೇಗೆ ಪ್ರಸ್ತಾಪಿಸುವುದು ಎನ್ನುವುದು ಗೊತ್ತಾಗಲಿಲ್ಲ. ಅವರ ಎದೆಯೊಳಗೆ ಅದೇನೋ ಸಂಕಟ, ಆತಂಕ. ಸಂಜೆಯ ಹೊತ್ತಿಗೆ ‘‘ಲೇ ಇವಳೇ...ನಾನು ಉಪ್ಪಿನಂಗಡಿಯವರೆಗೆ ಒಮ್ಮೆ ಹೋಗಿ ಬರುತ್ತೇನೆ’’ ಎಂದರು.
‘‘ಚಹಾ ಕುಡಿದು ಹೋಗಬಾರದೆ...ಪಪ್ಪುವಿನ ಪ್ರೀತಿಯ ಕೇಸರಿ ಬಾತ್ ಮಾಡಿದ್ದೇನೆ...’’
‘‘ನೀನು ಪಪ್ಪುವನ್ನು ಎಬ್ಬಿಸಿ ಚಹಾ ಕುಡಿಯಲು ಹೇಳು. ನಾನು ಅಷ್ಟರಲ್ಲಿ ಉಪ್ಪಿನಂಗಡಿಗೆ ಹೋಗಿ ಬರುವೆ....’’ ಎಂದರು.
ಹೊರಡುವ ಮುನ್ನ ತನ್ನ ಬ್ಯಾಗ್ನೊಳಗಿರುವ ಚೀಟಿಗಳನ್ನೆಲ್ಲ ಹೊರ ತೆಗೆದರು. ಅದರಲ್ಲಿ ಈ ಹಿಂದೆ ಪಪ್ಪು ಕೊಟ್ಟಿದ್ದ ಒಂದು ದೂರವಾಣಿ ಸಂಖ್ಯೆ ದೊರಕಿತು. ಅದನ್ನು ಕಿಸೆಗೆ ಹಾಕಿಕೊಂಡವರೇ ಲಗುಬಗನೆ ಹೊರಟರು. ‘‘ಛತ್ರಿ ಮರೆತು ಬಿಟ್ಟಿದ್ದೀರಿ...ಮಳೆ ಯಾವಾಗಬೇಕಾದರೂ ಸುರಿಯಬಹುದು...’’ ಲಕ್ಷ್ಮಮ್ಮ ಕೂಗಿ ಹೇಳಿದರು. ಭಟ್ಟರು ಮರಳಿ, ಛತ್ರಿಯೊಂದಿಗೆ ಹೊರಟರು.
ಬಜತ್ತೂರು ತಲುಪಿದವರಿಗೆ ಬಸ್ಸಿಗೆ ಕಾಯುವುದು ಬೇಡ ಅನ್ನಿಸಿತು. ದೂರದಲ್ಲೊಂದು ರಿಕ್ಷಾ ಕಾಣಿಸಿತು. ಅದರ ಬಳಿ ಹೋದರೆ ‘ದೇಶಪ್ರೇಮಿ’ ರಿಕ್ಷಾ. ಭಟ್ಟರನ್ನು ನೋಡಿ ಕಬೀರ ನಮಸ್ಕಾರ ಹೇಳಿದ. ‘‘ಉಪ್ಪಿನಂಗಡಿಯವರೆಗೆ ಹೋಗಲಿಕ್ಕಿತ್ತು. ಬಾಡಿಗೆಗೆ ಹೋಗುವನಾ...?’’ ಕೇಳಿದರು.
‘‘ಅರ್ಜೆಂಟಿದ್ದರೆ ಹೋಗುವ ಮೇಷ್ಟ್ರೇ....’’ ಎಂದ.
ರಿಕ್ಷಾ ಉಪ್ಪಿನಂಗಡಿ ಕಡೆಗೆ ದೌಡಾಯಿಸಿತು ‘‘ಮೇಷ್ಟ್ರೇ, ಪಪ್ಪು ಊರಿಗೆ ಬಂದಿದ್ದಾನೆ ಎನ್ನುವ ಸುದ್ದಿಯುಂಟು ಹೌದಾ?’’
ಅವರಿಗೆ ಅವನ ಮಾತು ಕೇಳಲಿಲ್ಲ. ಅವರು ಬೇರೆ ಯಾವುದೋ ಆಲೋಚನೆಯಲ್ಲಿದ್ದರು. ಮೇಷ್ಟ್ರು ಯಾವುದೋ ಚಿಂತೆಯಲ್ಲಿದ್ದಾರೆ ಎನ್ನುವುದು ಕಬೀರನಿಗೆ ಗೊತ್ತಾಗಿ ಹೋಯಿತು. ಹೆಚ್ಚು ಮಾತನಾಡಲಿಲ್ಲ.
ಉಪ್ಪಿನಂಗಡಿ ತಲುಪುತ್ತಿದ್ದಂತೆಯೇ ‘‘ಯಾವುದಾದರೊಂದು ಎಸ್ಟಿಡಿ ಬೂತ್ ಪಕ್ಕ ನಿಲ್ಲಿಸು ಕಬೀರ್’’ ಎಂದರು.
ವಿಷಯ ತುಂಬಾ ಗಂಭೀರವಾದುದು ಅನ್ನಿಸಿತು ಕಬೀರನಿಗೆ. ಒಂದು ಎಸ್ಟಿಡಿ ಪಕ್ಕ ನಿಲ್ಲಿಸಿದವನೇ ‘‘ಮೇಷ್ಟ್ರೇ...ನಾನು ನಿಮ್ಮ ಮಗನ ಸಮಾನ. ಏನಾದರೂ ಅಗತ್ಯ ಬಿದ್ದರೆ ಹೇಳಿ....ಸಂಕೋಚ ಪಡಬೇಡಿ...’’ ಎಂದ.
(ರವಿವಾರದ ಸಂಚಿಕೆಗೆ)