ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು?
ಭಾಗ - 1
‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್ರ "the rise and fall of the hindu women: who was responsible for it?'' ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು
ಭಾರತೀಯ ಸ್ತ್ರೀಯ ಅವನತಿಗೆ ಮುಖ್ಯವಾಗಿ ಬುದ್ಧನ ಧರ್ಮೋಪದೇಶವೇ ಕಾರಣವೆಂದು ಆಪಾದಿಸುವ ಒಂದು ಲೇಖನವು ‘‘ಈವ್ಸ್ ವೀಕ್ಲಿ’’ಯ ಜನವರಿ 21, 1950ರ ಸಂಚಿಕೆಯಲ್ಲಿ ಪ್ರಕಟಗೊಂಡಿತು.
ಲಾಮ ಗೋವಿಂದ ಇವರು ಈ ಆಪಾದನೆಯನ್ನು ಖಂಡಿಸಲೆಂದು ‘ಹಿಂದೂ ಧರ್ಮ ಹಾಗೂ ಬೌದ್ಧ ಧರ್ಮಗಳಲ್ಲಿ ಸ್ತ್ರೀಯರ ಸ್ಥಾನ’ ಎಂಬ ಶೀರ್ಷಿಕೆಯ ಇಂಗ್ಲಿಷ್ನಲ್ಲಿ ಬರೆದ ಲೇಖನವು ‘ಮಹಾಬೋಧಿ’ ನಿಯತ ಕಾಲಿಕೆಯ ಮಾರ್ಚ್ 1950ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇಂಥ ಆಪಾದನೆಗಳನ್ನು ಖಂಡಿಸುವುದು ಪ್ರತಿಯೊಬ್ಬ ಬೌದ್ಧ ಧರ್ಮೀಯನ ಕರ್ತವ್ಯವಾಗಿದ್ದು ಲಾಮಾ ಗೋವಿಂದರು ಅದನ್ನು ನಿರ್ವಹಿಸಿರುವರು. ಆದರೆ ಈ ಪ್ರಶ್ನೆಯನ್ನು ಇಲ್ಲಿಗೇನೆ ಮುಗಿಸಲಾಗದು. ಬುದ್ಧನ ಮೇಲೆ ಆಪಾದನೆಯನ್ನು ಹೊರಿಸುವುದು ಇದೇ ಮೊದಲ ಸನ್ನಿವೇಶವಲ್ಲ. ಬುದ್ಧನ ಘನತೆಯನ್ನು ಸಹಿಸದ ‘ಈವ್ಸ್ ವೀಕ್ಲಿ’ಯ ಲೇಖಕನಿಗಿಂತ ಹೆಚ್ಚಿನ ಹಿತಾಸಕ್ತಿಯನ್ನು ಹೊಂದಿದ ಅಧಿಕಾರವಾಣಿಯ ವ್ಯಕ್ತಿಗಳಿಂದಲೂ ಈ ಬಗೆಯ ಅಪಾದನೆಗಳನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. ಹೀಗಾಗಿ ಈ ಬಗೆಯ ಪ್ರಶ್ನೆಯ ಮೂಲವನ್ನು ತಲುಪಿಯೇ, ಮೇಲಿಂದ ಮೇಲಾಗುವ ಇಂಥ ಅಪಾದನೆಗಳನ್ನು ಕುರಿತು ಅನ್ವೇಷಿಸುವುದು ಅಗತ್ಯದ್ದಾಗಿದೆ. ಈ ಆಪಾದನೆಯು ತುಂಬ ಗಂಭೀರವೂ ತಿರಸ್ಕರಣೀಯವೂ ಆದುದರಿಂದ ಅದನ್ನು ಕುರಿತು ಕೈಕೊಳ್ಳಲಾಗುವ ಇನ್ನಷ್ಟು ಅನ್ವೇಷಣೆಯನ್ನು ‘ಮಹಾಬೋಧಿ’ಯ ಓದುಗರು ಸ್ವಾಗತಿಸುವರೆಂಬ ಭರವಸೆ ನನಗಿದೆ.
ಬುದ್ಧನ ವಿರುದ್ಧ ಮಾಡಲಾಗುವ ಈ ಆಪಾದನೆಗಳಿಗೆ ಎರಡು ಎಡೆಳಲ್ಲಿ ಮಾತ್ರ ಆಧಾರ ಲಭಿಸುವುದು:
ಇರಬಹುದಾದ ಮೊದಲ ಆಧಾರವೆಂದರೆ, ‘ಮಹಾಪರಿನಿಬ್ಬಾಣ ಸುತ್ತಾ’ದ ಐದನೆಯ ಪ್ರಕರಣದಲ್ಲಿ, ಬುದ್ಧನು ಆನಂದನ ಪ್ರಶ್ನೆಗೆ ನೀಡಿದನೆಂದು ಹೇಳಲಾಗುವ ಉತ್ತರ. ಅದು ಹೀಗಿದೆ:-
9.ಆನಂದನು, ‘‘ಸ್ತ್ರೀಯರೊಡನೆ ಹೇಗೆ ನಡೆದುಕೊಳ್ಳಬೇಕು?’’ ಎಂದು ಕೇಳಿದನು.
‘‘ಆನಂದನೇ, ಅವರತ್ತ ನೋಡುತ್ತಲೂ ಇಲ್ಲದ ಹಾಗೆ.’’
‘‘ಆದರೆ ಅವರನ್ನು ನೋಡಲೇಬೇಕಾದರೆ ನಾವೇನು ಮಾಡಬೇಕು?’’
‘‘ಆನಂದನೇ, ಮಾತಾಡಬಾರದು.’’
‘‘ಆದರೆ ಭಗವಂತನೇ, ಅವರು ನಮ್ಮ ಜೊತೆ ಮಾತಾಡಿದರೆ ನಾವೇನು ಮಾಡಬೇಕು?’’
‘‘ಆನಂದನೇ, ನೀವು ಪೂರ್ತಿ ಎಚ್ಚರದಿಂದಿರಬೇಕು.’’
ಈ ಭಾಗವು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಪ್ರೆಸ್ನಿಂದ ಪ್ರಕಟಿಸಲಾದ ‘ಮಹಾಪರಿನಿಬ್ಬಾಣ ಸುತ್ತಾ’ದ ಮೂಲ ಭಾಗದಲ್ಲಿ ಕಾಣಲು ಸಿಗುವುದೆಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ಅವತರಣಿಕೆಯು ಅದರಲ್ಲಿ ಇದೆಯೋ, ಇಲ್ಲವೋ ಎಂಬುದು ಮುಖ್ಯ ಸಂಗತಿಯಲ್ಲ. ಇಲ್ಲಿರುವ ಮುಖ್ಯ ಅಂಶವೆಂದರೆ ಯಾವುದೊಂದು ಯುಕ್ತಿವಾದವು ಈ ಅವತರಣಿಕೆಯನ್ನು ಆಧರಿಸಿ ನಿಲ್ಲವಂತಿದ್ದರೆ, ಮೂಲದಲ್ಲಿ ಆ ಅವತರಣಿಕೆಯೇ ನಿಜವಾದುದೋ ಅಥವಾ ತರುವಾಯದ ಕಾಲದಲ್ಲಿ ಭಿಕ್ಕುಗಳು ಸೇರಿಸಿದ್ದಲ್ಲವಲ್ಲ ಎನ್ನುವುದನ್ನು ಸ್ಥಾಪಿಸುವುದು ಅಗತ್ಯದ್ದಲ್ಲವೇ?
ತೀರ ಪರಕೀಯವಾದ ಬ್ರಾಹ್ಮಣೀ ವಿಚಾರಗಳನ್ನು ಸೇರಿಸುವ ಮಠಶಾಹಿಯ ವಿಚಾರಗಳನ್ನು ಪ್ರಸ್ಥಾಪಿಸುವ ಉದ್ದೇಶದಿಂದ, ಮೂಲ ಬೌದ್ಧ ವಿಚಾರಸರಣಿಗೆ ಸುಳ್ಳು ಸಂಗತಿಗಳ ಮುಸುಕನ್ನು ಹಾಕಿ ಸುತ್ತಪಿಟಕವನ್ನು ಪೂರ್ತಿಯಾಗಿ ವಿದ್ರೂಪಗೊಳಿಸಲಾಗಿದೆ. ಭಗವಾನ್ ಬುದ್ಧನ ಮೂಲ ಧರ್ಮೋಪದೇಶಗಳನ್ನು ಬಲ್ಲವನು ಇಂಥ ಸುತ್ತಪೀಟಕವನ್ನು ಓದಿ ಹುಚ್ಚನಾಗದೆ ಇರಲಾರ. ಇಷ್ಟೇ ಅಲ್ಲದೆ ಅವನೂ ಮಿಸೆಸ್ ಹ್ರಿಸ್ ಡೆವಿಡ್1 ಅವರಿಗೆ ಆದ ಅಚ್ಚರಿಯಲ್ಲಿ ಪಾಲ್ಗೊಂಡು ಹೀಗೆಂದು ವಿಚಾರಿಸಿಯಾನು:
‘‘ಸುತ್ತಪೀಟಕದ ಈ ಭಾಗದಲ್ಲಿ ಬುದ್ಧನ ವಿಚಾರಗಳು ಎಲ್ಲೆಲ್ಲಿ ಇವೆ? ಇದರ ಎಷ್ಟು ಭಾಗದಲ್ಲಿ ಬುದ್ಧನ ಮೂಲ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಲಾಗಿದೆ? ಅಲ್ಲದೆ ಒಬ್ಬರಾದ ಮೇಲೊಬ್ಬರಂತೆ ಅದೆಷ್ಟೋ ವರ್ಷಗಳಲ್ಲಿ ಆಗಿ ಹೋದ ನಿರೂಪಕರು, ಸ್ಮತಿಬದ್ಧ ಹಾಗೂ ಕಂಠಬದ್ಧ ಮಾಡುವ ಬಹುಸಂಖ್ಯ ಶಿಕ್ಷಕರು, ವೌಖಿಕ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು, ಅರಿತುಕೊಳ್ಳಲು ಕಷ್ಟದ್ದಾದ ಹಾಗೂ ಕಠೋರ ಆಯಾಸದ ಅಗತ್ಯವಿದ್ದ ಹಾಗೂ ಯಾವುದೋ ಕಾಲಕ್ಕೆ ಸಂಪಾದಕರು ಸಂಪಾದಿಸಿ ಇಷ್ಟೊಂದು ವರ್ಷಗಳ ತರುವಾಯ ಈ ಧರ್ಮೋಪದೇಶವನ್ನು, ಇದರ ಉಳಿದ ಅದೆಷ್ಟು ಭಾಗದಲ್ಲಿ ಚಾಚೂ ತಪ್ಪದಂತೆ ಮಂಡಿಸಲು ಸಾಧ್ಯ? ಈ ನಿರೂಪಕರು, ಶಿಕ್ಷಕರು, ಅದೇ ರೀತಿ ಸಂಪಾದಕರೆಲ್ಲರ ಜೀವನ ಮತ್ತು ಅವರ ಆದರ್ಶಗಳು ಸಮಾಜದ ಇತರ ಜನರಿಗಿಂತ ತೀರ ಬೇರೆ ಬಗೆಯಾಗಿದ್ದವು. ಕೆಲವಂತೂ ಬೌದ್ಧ ಜಗತ್ತಿಗೆ ಸಂಬಂಧಪಟ್ಟಿರಲೂ ಇಲ್ಲ. ಯಾರಾದರೂ ವಿಪರ್ಯಾಸದಿಂದ ಕೂಡಿದ ಇಂಥ ಮಾಧ್ಯಮಗಳ ಅಧ್ಯಯನವನ್ನು ಮಾಡಬೇಕು. ಈ ವಚನಗಳ ಸಂದರ್ಭದಲ್ಲಿ ಧಮ್ಮೋಪದೇಶಗಳನ್ನು ಸಂಪಾದಿಸಿದ ವ್ಯಕ್ತಿಯು ಸರ್ವಮಾನ್ಯ ಶಿಕ್ಷಕ ಹಾಗೂ ಮಾರ್ಗದರ್ಶಕರನ್ನು ಒಪ್ಪಿಕೊಳ್ಳಲು ಬಾಧ್ಯರನ್ನಾಗಿ ಮಾಡಿ ಅವನ್ನೇ ಸತ್ಯವೆಂದು ಪ್ರತಿಪಾದಿಸಿರುವ ಸಾಧ್ಯತೆ ಇಲ್ಲವೇ?- ಎಂಬುದನ್ನು ಅವರು ಸ್ವಂತಕ್ಕೆ ಕೇಳಿಕೊಳ್ಳಬೇಕು.
ಹೀಗಾಗಿ ತರುವಾಯದ ಕಾಲದಲ್ಲಿ ಬಿಕ್ಕುಗಳು ಈ ಅವತರಣಿಕೆಯನ್ನು ಪ್ರಕ್ಷಿಪ್ತಗೊಳಿಸಿದರೆಂಬ ಹೇಳಿಕೆಯಲ್ಲಿ ಹೆಚ್ಚಿನ ಅತಿಶಯೋಕ್ತಿ ಇಲ್ಲ. ಮೊದಲ ಸಂಗತಿ ಎಂದರೆ ಸುತ್ತಪೀಟಕವನ್ನು ಬರೆಯುವಲ್ಲಿ ಬುದ್ಧನ ಮೃತ್ಯುವಿನ ತರುವಾಯದ ನಾಲ್ಕು ನೂರು ವರ್ಷಗಳ ಕಾಲ ಕಳೆದಿತ್ತು ಎರಡನೆಯದಾಗಿ, ಸಂಕಲನ ಹಾಗೂ ಸಂಪಾದನೆಯನ್ನು ಮಾಡಿದ ಸಂಪಾದಕರು ಭಿಕ್ಕುಗಳಾಗಿದ್ದರಲ್ಲದೆ ಅವರು ಭಿಕ್ಕುಗಳಿಗಾಗಿಯೇ ಅದರ ಸಂಕಲನ ಹಾಗೂ ಸಂಪಾದನೆಗಳನ್ನು ಮಾಡಿದ್ದರು. ಬ್ರಹ್ಮಚರ್ಯೆಯ ನಿಯಮಗಳನ್ನು ಸುರಕ್ಷಿತವಾಗಿ ಉಳಿಸುವ ಉದ್ದೇಶದಿಂದ ಭಿಕ್ಕುಗಳಿಗೆ ಬುದ್ಧನನ್ನು ಕುರಿತು ಇಂಥ ಹೇಳಿಕೆಯನ್ನು ನೀಡುವುದು ಮಹತ್ವದ್ದಾಗಿ ಕಂಡಿದ್ದರಿಂದ ಆ ಪರಿಸ್ಥಿತಿಯಲ್ಲಿ ಭಿಕ್ಕು ಸಂಪಾದಕರು ಹೀಗೆ ಬರೆಯುವುದು ಅಸಂಭವನೀಯವೆನ್ನಿಸದು.
ತರುವಾಯದ ಕಾಲದಲ್ಲಿ ಈ ಅವತರಣಿಕೆಯನ್ನು ಪ್ರಕ್ಷಿಪ್ತಗೊಳಿಸಲಾಯಿತೆಂಬ ಹೇಳಿಕೆಯ ಪುಷ್ಟಿಗಾಗಿ ಬೇರೆರಡು ಅಂಶಗಳು ನೆರವಾಗುತ್ತವೆ.
(1) ಮೊದಲನೆಯದು. ಪ್ರಸ್ತುತ ಸುತ್ತಕ್ಕೆ ನೀಡಲಾದ ಮುನ್ನುಡಿಯ ತಖ್ತೆಯಿಂದ (ಡೆವಿಡ್ಸ್ನ ಎಸ್.ಬಿ.ಬಿ. ಸರಣಿಯ ದೀರ್ಘ ನಿಕಾಯ ಭಾಗ 2ರ 72ನೆಯ ಪುಟದ ಮೇಲೆ ಕಾಣಲು ಸಿಗುವುದು.) ಖಚಿತವಾಗಿ ಕಂಡುಬರುವುದೇನೆಂದರೆ, ಈ ಸುತ್ತದ ಬಹಳಷ್ಟು ಭಾಗವು ಬೇರೆ ಸುತ್ತದಲ್ಲೂ ಕಂಡುಬರುತ್ತದೆಂಬುದು. ಆದರೆ ಪ್ರಸ್ತುತ ಅವತರಣಿಕೆಯು ಬೇರಾವ ಸುತ್ತದಲ್ಲೂ ಕಂಡುಬರುವುದಿಲ್ಲ ಎಂಬುದನ್ನು ಅರಿತುಕೊಳ್ಳುವುದು ಮಹತ್ವದ್ದು. ಇಷ್ಟಾಗಿಯೂ ಈ ಸುತ್ತದಲ್ಲಿರುವ ಬಹಳಷ್ಟು ಅವತರಣಿಕೆಗಳನ್ನು ಬೇರೆ ಸುತ್ತುಗಳಲ್ಲಿ ಸೇರ್ಪಡಿಸಿರುವುದು ವಾಸ್ತವ.
(2)ಈ ಸುತ್ತದ ಚೀನಿ ಭಾಷೆಯ ಅನುವಾದವು ಅಸ್ತಿತ್ವದಲ್ಲಿದ್ದ ಕಾರಣ ಈ ಸುತ್ತದ ಮುನ್ನುಡಿಯ ಪುಟ 38ರಿಂದ (ಡೆವಿಡ್ಸ್ನ ಎಸ್.ಬಿ.ಬಿ.ಯ ಸಂಪುಟ 11ರಲ್ಲಿ ಪ್ರಕಟಿತ.) ಎರಡನೆಯದು ಗಮನಕ್ಕೆ ಬರುತ್ತದೆ. ಆದರೆ ಮೇಲಿನ ವಿಶಿಷ್ಟವಾದ ಅವತರಣಿಕೆಯನ್ನು ಈ ಚೀನಿ ಭಾಷೆಯ ಗ್ರಂಥದಲ್ಲೂ ಸೇರ್ಪಡಿಸಿದುದು ಕಂಡುಬರುವುದಿಲ್ಲ.
ನಾವು ಇದನ್ನು ಸತ್ಯದ ಒರೆಗೆ ಹಚ್ಚಿ ನೋಡುವ. ಆನಂದನು ಇಂಥ ಪ್ರಶ್ನೆಯನ್ನು ಕೇಳಲು ವಿಶಿಷ್ಟವಾದ ಅಗತ್ಯವೇನಾದರೂ ಇತ್ತೇ? ಎಲ್ಲರಿಗೂ ತಿಳಿದಂತೆ ಬುದ್ಧನ, ಸ್ತ್ರೀಯರೊಡನೆಯ ಸಂಬಂಧವನ್ನು ಗಮನಕ್ಕೆ ತಂದುಕೊಂಡು ಕೇಳಿದ ಪ್ರಶ್ನೆ ಇದಾಗಿತ್ತೇ? ಆನಂದನು ಈ ಪ್ರಶ್ನೆಯನ್ನು ಕೇಳುವ ಸಾಧ್ಯತೆಯು ನಿಜವಾಗಿಯೂ ಇಲ್ಲ. ಆದರೆ ಅವನು ಇಂಥ ಪ್ರಶ್ನೆಯನ್ನು ಕೇಳಿಯೇ ಇದ್ದರೆ ಬುದ್ಧನು ಹೀಗೆ ಉತ್ತರಿಸುತ್ತಿರಲಿಲ್ಲ ಎಂಬುದನ್ನು ಪುರಾವೆಯೊಂದಿಗೆ ಹೇಳಲು ಸಾಧ್ಯ. ಪಿಟಕದಲ್ಲಿ ನಮೂದಿಸಲಾದಂತೆ ಸ್ತ್ರೀಯರ ಜೊತೆಗಿನ, ಆನಂದ ಹಾಗೂ ಬುದ್ಧರ ನಡತೆ ಹಾಗೂ ಆ ಕುರಿತು ನಿರ್ಮಿಸಲಾದ ಪ್ರಶ್ನೆ ಮ್ತತು ಅದಕ್ಕೆ ನೀಡಲಾದ ಉತ್ತರಗಳು ತೀರ ಅಸಂಗತವಾಗಿವೆ.
ಆನಂದನು ಹೀಗೆ ಪ್ರಶ್ನೆ ಕೇಳುವುದು ನಿಜವಾಗಿಯೂ ಅಗತ್ಯದ್ದಾಗಿತ್ತೆ, ಎಂಬ ಅಂಶದ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಲಾದ ಮಹಾಪರಿನಿಬ್ಬಾಣ ಸುತ್ತದ ಅದೇ ಪ್ರಕರಣದ ಕೆಲವೇ ಗಾಥೆಗಳನ್ನು ಕೈಬಿಡಲಾಗಿದೆ, ಎಂಬುದನ್ನು ನಮೂದಿಸುವುದು ಪ್ರಸಂಗೋಚಿತವಾದೀತು.