ನಿಮ್ಮ ಟೂಥ್ಬ್ರಷ್ ನಿಮ್ಮ ಆರೋಗ್ಯಕ್ಕೆ ಅಪಾಯವನ್ನೂ ತರಬಹುದು...ಹೇಗೆ ಗೊತ್ತೇ?
ಬೆಳಿಗ್ಗೆ ಎದ್ದ ಕೂಡಲೇ ನಾವು ಮಾಡುವ ಮೊದಲ ಕೆಲಸಗಳಲ್ಲೊಂದು ಯಾವುದು? ಬಹುಶಃ ಒಂದೆರಡು ಬಾರಿ ಮೈಮುರಿದ ಬಳಿಕ ಹಲ್ಲುಜ್ಜಿಕೊಳ್ಳುವುದು. ಸ್ನಾನ ಇತ್ಯಾದಿ ಗಳೆಲ್ಲ ನಂತರ ಬರುತ್ತವೆ. ಹೌದು, ಶೇ.90ರಷ್ಟು ಜನರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿ ಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಅತ್ಯಂತ ಆರೋಗ್ಯಕಾರಿ ಮತ್ತು ಅಗತ್ಯ ಅಭ್ಯಾಸವಾಗಿದೆ.
ನಾವು ಎಳೆಯರಿದ್ದಾಗಿನಿಂದಲೇ ದಿನಕ್ಕೆ ಕನಿಷ್ಠ ಎರಡು ಬಾರಿ...ಬೆಳಿಗ್ಗೆ ಮತ್ತು ರಾತ್ರಿ ನಿದ್ರೆಗೆ ಮುನ್ನ ಹಲ್ಲುಜ್ಜಿಕೊಳ್ಳಬೇಕು ಎಂಬ ನಮ್ಮ ಹಿರಿಯರು ಮತ್ತು ಶಾಲಾ ಶಿಕ್ಷಕರ ಹಿತವಚನವನ್ನು ಕೇಳುತ್ತಲೇ ಬೆಳೆದಿರುತ್ತೇವೆ.
ಬಹಳಷ್ಟು ಜನರು ಹೆಚ್ಚಿನ ಸಿಹಿಭಕ್ಷಗಳಿರುವ ಭೂರೀ ಭೋಜನದ ಬಳಿಕವೂ ಹಲ್ಲುಜ್ಜುವ ಅಭ್ಯಾಸವನ್ನು ಹೊಂದಿರುತ್ತಾರೆ.
ನಿಯಮಿತವಾಗಿ ಹಲ್ಲುಗಳನ್ನು ಉಜ್ಜುವುದರಿಂದ ಮತ್ತು ನವಿರಾದ ನೂಲನ್ನು ಬಳಸಿ ಹಲ್ಲುಗಳ ಸಂದುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ದಂತಕುಳಿಗಳಾಗದಂತೆ ನೊಡಿಕೊಳ್ಳಬಹುದು. ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಹಲ್ಲುಜ್ಜದಿದ್ದರೆ ಹಲ್ಲುಗಳ ನಡುವೆ ಅಹಾರ ಕಣಗಳು ಸಿಕ್ಕಿಕೊಂಡು ಹಲ್ಲುಗಳು ಕೊಳೆಯಾಗುವ ಜೊತೆಗೆ ಪಾಚಿಗಟ್ಟುತ್ತವೆ. ಹಲ್ಲುಗಳ ಅಸ್ವಚ್ಛತೆಯು ದಂತಕುಳಿ, ವಸಡಿನ ಸೋಂಕು, ಸಡಿಲ ಹಲ್ಲು ಮತ್ತು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ನೇರವಾಗಿ ಹೃದಯವನ್ನು ಸೇರುವುದರಿಂದ ಬಾಯಿಯ ಅನೈರ್ಮಲ್ಯವು ಹಲವರನ್ನು ಹೃದ್ರೋಗಗಳಿಗೂ ಗುರಿ ಮಾಡಬಹುದು.
ಹಿಂದಿನ ಕಾಲದಲ್ಲಿ ಹಲ್ಲುಜ್ಜಲಿ ಇದ್ದಲು ಅಥವಾ ಬೇವಿನ ಕಡ್ಡಿ ಬಳಕೆಯಾಗುತ್ತಿತ್ತು. ಈಗಲೂ ಅಲ್ಲಲ್ಲಿ ಈ ಪದ್ಧತಿಯನ್ನು ಕಾಣಬಹುದು. ಈ ಪದ್ಧತಿ ಆಚರಿಸುವವರು ಹಲ್ಲುಜ್ಜಿಕೊಂಡ ನಂತರ ಇದ್ದಲು ಅಥವಾ ಬೇವಿನ ಕಡ್ಡಿಯನ್ನು ಎಸೆಯುತ್ತಿದ್ದರು ಮತ್ತು ಮರುದಿನ ಬೆಳಿಗ್ಗೆ ಹೊಸ ಇದ್ದಲು ಅಥವಾ ಬೇವಿನ ಕಡ್ಡಿ ಬಳಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನವರು ಟೂಥಬ್ರಷ್ಗಳನ್ನು ಬಳಸುತ್ತಾರೆ. ಈ ಟೂಥ್ಬ್ರಷ್ಗಳು ಮತ್ತು ಅದನ್ನು ಬಳಸುವ ರೀತಿ ನಮ್ಮ ಆರೋಗ್ಯಕ್ಕೆ ಹೇಗೆ ಹಾನಿಯನ್ನುಂಟು ಮಾಡುತ್ತವೆ ಗೊತ್ತೇ?
ನಿಮ್ಮ ಟೂಥ್ಬ್ರಷ್ನ್ನು ನೀವೇ ಬಳಸಬೇಕು, ಒಂದೇ ಒಂದು ಬಾರಿಯೂ ಇನ್ನೊಬ್ಬರ ಬಳಕೆಗೆ ನೀಡಬಾರದು. ಬೇರೆಯವರ ಟೂಥ್ಬ್ರಷ್ನ್ನೂ ನೀವು ಬಳಸಬಾರದು. ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳು ಅತ್ಯಂತ ಚುರುಕಾಗಿ ಟೂಥ್ಬ್ರಷ್ಗೆ ವರ್ಗಾವಣೆಗೊಂಡಿರುತ್ತವೆ. ಹೀಗಾಗಿ ಒಬ್ಬರ ಬ್ರಷ್ನ್ನು ಇನ್ನೊಬ್ಬರು ಬಳಸಿದಾಗ ವಿವಿಧ ಸೋಂಕುಗಳು ತಗುಲುವ ಅಪಾಯವಿರುತ್ತದೆ.
ಹಲ್ಲುಜ್ಜುವಾಗ ಟಾಯ್ಲೆಟ್ನ್ನು ಫ್ಲಷ್ ಮಾಡಲೇಬಾರದು. ವಿಶೇಷವಾಗಿ ಬೆಳಗಿನ ಹೊತ್ತಿನಲ್ಲಿ ಅವಸರದಲ್ಲಿರುವಾಗ ಹೆಚ್ಚಿವರು ಇದನ್ನು ಮಾಡುತ್ತಾರೆ. ಟಾಯ್ಲೆಟ್ನ್ನು ಫ್ಲಷ್ ಮಾಡುವಾಗ ಅದರಲ್ಲಿಯ ನೀರು ಮೂರು ಮೀಟರ್ ದೂರದವರೆಗೂ ಚಿಮ್ಮ ಬಹುದು ಮತ್ತು ಈ ವೇಳೆ ನಿಮ್ಮ ಟೂಥ್ಬ್ರಷ್ ಸಮೀಪದಲ್ಲಿದ್ದರೆ ಟಾಯ್ಲೆಟ್ನ ಮಲಿನ ನೀರು ಅದರ ಮೂಲಕ ನಿಮ್ಮ ದೇಹವನ್ನು ಸೇರಬಹುದು.
ನಿಮ್ಮ ಟೂಥ್ಬ್ರಷ್ನ ತಲೆಯ ಭಾಗವನ್ನು ಪ್ಲಾಸ್ಟಿಕ್ ಕ್ಯಾಪ್ ಅಥವಾ ಟಿಶ್ಯೂ ಪೇಪರ್ಗಳಿಂದ ಮುಚ್ಚಬೇಡಿ. ಹಾಗೆ ಮಾಡುವುದರಿಂದ ಅದು ಬ್ರಷ್ನ ಬಿರುಗೂದಲುಗಳ ಮೇಲೆ ತೇವವನ್ನು ಸೃಷ್ಟಿಸುತ್ತದೆ ಮತ್ತು ಅದು ಅಪಾಯಕಾರಿ ಬ್ಯಾಕ್ಟೀರಿಯಾಗಳು ಹೆಚ್ಚಲು ಕಾರಣವಾಗುತ್ತದೆ.
ಟೂಥ್ಬ್ರಷ್ನ್ನು ಯಾವುದೇ ಮೇಲ್ಮೈನ ಮೇಲೆ ಅಡ್ಡವಾಗಿ ಇಡಬೇಡಿ. ಈ ಸ್ಥಿತಿಯಲ್ಲಿ ಇಡುವುದರಿಂದ ಅದು ತುಂಬ ಸಮಯದವರೆಗೆ ತೇವವಾಗಿಯೇ ಇರುತ್ತದೆ. ಇದು ಬ್ಯಾಕ್ಟೀರಿಯಾಗಳು ಬೆಳೆಯಲು ಅವಕಾಶ ನೀಡುತ್ತದೆ. ಇದನ್ನು ನಿವಾರಿಸಲು ಬ್ರಷ್ನ್ನು ಒಣ ಕಪ್ ಅಥವಾ ಹೋಲ್ಡರ್ನಲ್ಲಿ ಲಂಬವಾಗಿ ಇರಿಸಬೇಕು.
ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಕಡ್ಡಾಯವಾಗಿ ಟೂಥಬ್ರಷ್ನ್ನು ಬದಲಾ ಯಿಸುತ್ತಿರಬೇಕು. ಹಳೆಯ ಟೂಥ್ಬ್ರಷ್ಗಳು ಬಹಳಷ್ಟು ರೋಗಕಾರಕ ಬ್ಯಾಕ್ಟೀರಿಯಾ ಗಳನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಅಳಿಸಲು ಸಾಧ್ಯವಿಲ್ಲ.