ಏನಿದು ಪೆಟ್ ಇನ್ಶೂರೆನ್ಸ್?
ಹೆಚ್ಚಿನವರು ಪೆಟ್ ಅನಿಮಲ್ ಅಥವಾ ಸಾಕುಪ್ರಾಣಿಗಳನ್ನು ಬಹುವಾಗಿ ಪ್ರೀತಿಸು ತ್ತಾರೆ. ಸಾಕುಪ್ರಾಣಿಯಿಲ್ಲದ ಮನೆಗಳೇ ಅಪರೂಪ ಎನ್ನಬಹುದು. ಎಷ್ಟೋ ಜನರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಭಾವಿಸಿರುತ್ತಾರೆ. ಹೀಗಾಗಿ ಈ ಪ್ರಾಣಿಗಳ ರಕ್ಷಣೆಗಾಗಿ ಮತ್ತು ಅವುಗಳಿಗೆ ವೈದ್ಯಕೀಯ ಉಪಚಾರವನ್ನೊದಗಿಸಲು ಪೆಟ್ ಇನ್ಶೂರೆನ್ಸ್ ಅಥವಾ ಸಾಕುಪ್ರಾಣಿಗಳ ವಿಮಾ ಪಾಲಿಸಿಯನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ.
ಪೆಟ್ ಇನ್ಶೂರೆನ್ಸ್ ಇತರೆಲ್ಲ ವಿಮೆಗಳಂತೆ ರಕ್ಷಣೆಯನ್ನು ಒದಗಿಸುತ್ತದೆ. ನಿಮ್ಮ ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಅನಿರೀಕ್ಷಿತ ವೆಚ್ಚಗಳ ವಿರುದ್ಧ ಅದು ನಿಮಗೆ ರಕ್ಷಣೆಯನ್ನು ನೀಡುತ್ತದೆ. ನಾಯಿ, ಬೆಕ್ಕು, ಹಕ್ಕಿಗಳಂತಹ ಸಾಕುಪ್ರಾಣಿಗಳಿಗಾಗಿ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿರುವ ವಿಮಾ ಪಾಲಿಸಿಗಳು ಲಭ್ಯವಿವೆ.
ಸಾಕುಪ್ರಾಣಿಗಳ ಜೊತೆ ಗುರುತಿಸಿಕೊಂಡಿರುವ ಹಲವು ಆರೋಗ್ಯ ಸಮಸ್ಯೆಗಳಿವೆ. ಇವು ಬೇರೆ ಬೇರೆ ಸಾಕುಪ್ರಾಣಿಗಳಿಗೆ ವಿಭಿನ್ನವಾಗಿರುತ್ತವೆ. ನಿಮ್ಮ ಮುದ್ದಿನ ನಾಯಿಗೆ ಜ್ವರ ಬರಬಹುದು, ಜನ್ಮಜಾತ ಕಾಯಿಲೆಯಿರಬಹುದು, ಅದು ಕಳವಾಗಬಹುದು ಅಥವಾ ಅದು ಅಪಘಾತಕ್ಕೂ ಸಿಲುಕಬಹುದು.
ಪೆಟ್ ಇನ್ಶೂರೆನ್ಸ್ ಪಾಲಿಸಿಗಳಲ್ಲೂ ಇತರ ವಿಮೆಗಳಂತೆ ವೈವಿಧ್ಯಗಳಿವೆ. ನಿಮ್ಮ ಮುದ್ದಿನ ಪ್ರಾಣಿಗೆ ಸೂಕ್ತವಾದ ವಿಮೆ ರಕ್ಷಣೆಯನ್ನು ಪಡೆಯುವುದು ಮುಖ್ಯವಾಗಿದೆ. ಪಶುವೈದ್ಯಕೀಯ ಶುಲ್ಕಗಳ ಜೊತೆಗೆ ಈ ಕೆಳಗಿನವೂ ನಿಮ್ಮ ಪೆಟ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಳಗೊಂಡಿರುತ್ತವೆ.
ಸಾಕುಪ್ರಾಣಿಯ ನಷ್ಟ ಅಥವಾ ಕಳವು:
ಇದು ಸಾಕುಪ್ರಾಣಿಯ ಖರೀದಿ ಬೆಲೆಯ ರಕ್ಷಣೆಯನ್ನು ನೀಡುತ್ತದೆ. ಇದನ್ನು ಪಡೆಯಲು ನೀವು ರುಜುವಾತನ್ನು ಸಲ್ಲಿಸಬೇಕು, ಇಲ್ಲದಿದ್ದರೆ ವಿಮಾ ಕಂಪೆನಿ ಮಾರುಕಟ್ಟೆಯಲ್ಲಿ ಪ್ರಚಲಿತ ದರವನ್ನು ನಿಮಗೆ ಪಾವತಿಸುತ್ತದೆ.
ಸಾಕುಪ್ರಾಣಿಗಳ ವರ್ತನೆಯಲ್ಲಿ ಸಮಸ್ಯೆ, ಕಾಯಿಲೆಯಿಂದ ಸಾವು ಅಥವಾ ಗಾಯ ಬಾಧ್ಯತೆ: ಈ ವಿಮೆ ನಾಯಿಗಳಿಗೆ ಮಾತ್ರ ಲಭ್ಯವಿದೆ. ನಿಮ್ಮ ನಾಯಿ ಯಾರಿಗಾದರೂ ಕಚ್ಚಿ ಗಾಯಗೊಳಿಸಿದರೆ ಅಥವಾ ಇನ್ನೊಬ್ಬರ ಆಸ್ತಿಗೆ ಹಾನಿಯನ್ನುಂಟು ಮಾಡಿದರೆ ನೀವು ಶಾಸನಾತ್ಮಕವಾಗಿ ಪಾವತಿಸಬೇಕಾದ ಪರಿಹಾರ ಮೊತ್ತದ ವಿರುದ್ಧ ಇದು ರಕ್ಷಣೆ ನೀಡುತ್ತದೆ. ಅಂದರೆ ಆ ಮೊತ್ತವನ್ನು ವಿಮಾ ಕಂಪೆನಿಯೇ ಪಾವತಿಸುತ್ತದೆ.
ಭಾರತದಲ್ಲಿ ಪೆಟ್ ಇನ್ಶೂರೆನ್ಸ್ ಹೊಸ ಪರಿಕಲ್ಪನೆಯಾಗಿದ್ದು, ಇದರ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಹೀಗಾಗಿ ಈ ಪಾಲಿಸಿಯನ್ನು ಪಡೆಯುವ ಗ್ರಾಹಕರ ಸಂಖ್ಯೆ ಕಡಿಮೆಯೇ ಇದೆ. ಈ ಹಿಂದೆಯೂ ಪೆಟ್ ಇನ್ಶೂರೆನ್ಸ್ ಒದಗಿಸುವ ಹಲವು ಕಂಪೆನಿಗಳಿದ್ದವಾದರೂ ಅದು ಜಾನುವಾರುಗಳಿಗೆ ಮಾತ್ರ ಸೀಮಿತವಾಗಿತ್ತು.
ಭಾರತದಲ್ಲಿ ಹೆಚ್ಚಿನ ಪೆಟ್ ಇನ್ಶೂರೆನ್ಸ್ ಪಾಲಿಸಿಗಳು ನಾಯಿಗಳಿಗೆ ಮಾತ್ರ ಸೀಮಿತವಾಗಿವೆ.
ಪೆಟ್ ಇನ್ಶೂರೆನ್ಸ್ ಒದಗಿಸುವ ಕಂಪೆನಿಗಳು
ನ್ಯೂ ಇಂಡಿಯಾ ಇನ್ಶೂರೆನ್ಸ್: ಈ ಕಂಪೆನಿಯು ವಿಮೆ ರಕ್ಷಣೆಗೊಳಪಟ್ಟ ನಾಯಿಗಳನ್ನು ಟ್ಯಾಟೂ, ನೋಸ್ ಪ್ರಿಂಟ್, ಫೋಟೊ ಇತ್ಯಾದಿಗಳಿಂದ ಗುರುತಿಸುತ್ತದೆ. ಎಂಟು ವಾರಗಳಿಂದ ಎಂಟು ವರ್ಷ ಪ್ರಾಯದವರೆಗಿನ ಶ್ವಾನಗಳಿಗೆ ವಿಮೆ ರಕ್ಷಣೆ ಲಭ್ಯವಿದೆ. ಕುರಿ ಮತ್ತು ಆಡು ವಿಮೆ, ಜಾನುವಾರು ವಿಮೆ, ಹಂದಿ ವಿಮೆ, ಪೌಲ್ಟ್ರಿ ವಿಮೆ, ಬಾತುಕೋಳಿ ವಿಮೆ, ಮೊಲ ವಿಮೆ, ಆನೆ ವಿಮೆ ಮತ್ತು ಒಳನಾಡು ಮೀನು ವಿಮೆ ಇತ್ಯಾದಿಗಳು ಈ ಕಂಪೆನಿಯು ನೀಡುತ್ತಿರುವ ಮುಖ್ಯ ಪೆಟ್ ಇನ್ಶೂರೆನ್ಸ್ ಯೋಜನೆಗಳಾಗಿವೆ.
ಯುನೈಟೆಡ್ ಇಂಡಿಯಾ ಅಶ್ಯೂರನ್ಸ್: ದೇಶಿ, ಸಂಕರ ಅಥವಾ ವಿದೇಶಿ ತಳಿಯ ಎಲ್ಲ ಪ್ರಾಣಿಗಳಿಗೆ ಈ ಕಂಪೆನಿಯು ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಪ್ರಾಣಿಗಳ ಮಾಲಕರು, ಖಾಸಗಿ ಡೇರಿಗಳು, ಸಹಕಾರಿ ಡೇರಿಗಳು ಆಥವಾ ಎನ್‌ಡಿಡಿಬಿ ಒಡೆತನದ ಡೇರಿಗಳು ಈ ಕಂಪೆನಿಯಿಂದ ವಿಮೆ ಪಾಲಿಸಿಗಳನ್ನು ಪಡೆಯಬಹುದಾಗಿದೆ. ಕಂಪೆನಿಯು ನಿಮ್ಮ ಸಾಕುಪ್ರಾಣಿಗೆ ಶಾಶ್ವತ ಅಂಗವೈಕಲ್ಯ ಮತ್ತು ಅಪಘಾತದಿಂದ ಸಾವಿನ ವಿರುದ್ಧ ವಿಮೆ ರಕ್ಷಣೆಯನ್ನು ಒದಗಿಸುತ್ತದೆ.
ಓರಿಯಂಟಲ್ ಇನ್ಶೂರೆನ್ಸ್: ಈ ಕಂಪೆನಿಯು ಕುದುರೆ, ನಾಯಿ, ಆನೆ ಇತ್ಯಾದಿಗಳಿಗೆ ವಿಮೆ ರಕ್ಷಣೆಯನ್ನು ಒದಗಿಸುತ್ತದೆ. ಎಂಟು ವಾರಗಳಿಂದ ಎಂಟು ವರ್ಷ ಪ್ರಾಯದವರೆಗಿನ ಶ್ವಾನಗಳಿಗೆ ಇಲ್ಲಿ ವಿಮೆ ಮಾಡಿಸಬಹುದು. ವಿಮೆಯ ಪ್ರೀಮಿಯಂ 200 ರಿಂದ 10,000 ರೂ.ವರೆಗೆ ಇದೆ.