ಡಾರ್ವಿನ್ ಮಾರ್ಟಿನೇಜ್ ಮತ್ತು ಭಖ್ತರ್ ನೂರಿ
ಸಮಕಾಲೀನ
ಅಮೆರಿಕದ ವರ್ಜಿನಿಯಾದಲ್ಲಿ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರ ನಡೆಯುತ್ತಿದ್ದ ಹದಿನೇಳು ವರ್ಷದ ನಬ್ರ ಹಸನನ್ ಎಂಬ ಮುಸ್ಲಿಂ ಬಾಲಕಿಯನ್ನು ಅಪಹರಿಸಿ ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದು ಕೊಂದವನು ಈ ಮಾರ್ಟಿನೇಜ್.
ಅಮೆರಿಕನ್ ಪೊಲೀಸರು ‘ಇದೊಂದು ಆಕಸ್ಮಿಕ ಘಟನೆ, ಜನಾಂಗೀಯ ದ್ವೇಷದ್ದಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ ಸಂಗೀತ ಕಾರ್ಯಕ್ರಮವೊಂದರಲ್ಲಿ ಬಾಂಬ್ ಸ್ಫೋಟಗೊಂಡು 22 ಜನ ಹತರಾದರು. ಆಗ ಅಲ್ಲಿನ ಮುಸ್ಲಿಂ ಯುವಕ ಭಖ್ತರ್ ನೂರಿ
"Am a Muslim
Do you Trust me
if you Trust me
enough for a hug"
ಎಂಬ ಪ್ಲೆಕಾರ್ಡ್ ಒಂದನ್ನು ಹಿಡಿದು ನಗರದ ರಸ್ತೆಯೊಂದರಲ್ಲಿ ನಿಂತಿದ್ದ. ಇಂಗ್ಲೆಂಡಿನ ಅನೇಕ ಜನ ಕ್ಯೂ ನಿಂತು ನೂರಿಯನ್ನು ಅಪ್ಪಿಕೊಂಡು ‘ಏಕಿಲ್ಲ, ನಾನು ನಿನ್ನನ್ನು ನಂಬುತ್ತೇನೆ, ನೀನೇನು ಒಂಟಿಯಲ್ಲ’ ಎಂದಿದ್ದರು.
ಇವೆರಡೂ ಘಟನೆಗಳು ಪಶ್ಚಿಮ ದೇಶಗಳ ರಾಜನೀತಿ, ಮುಸ್ಲಿಂ ದೇಶಗಳ ವಿರುದ್ಧದ ಸೇನಾ ಕಾರ್ಯಾಚರಣೆಗಳು, ಪಶ್ಚಿಮದ ಜನ ಹಾಗೂ ಅಲ್ಲಿ ನೆಲೆಸಿರುವ ಮುಸ್ಲಿಮರಿಗೆ, ಸಂಬಂಧಿಸಿದ ಹಲವು ಸಂಯೋಜಿತ ಚಿತ್ರಗಳಾಗಿವೆ.
ದುರ್ಘಟನೆಗಳು ನಡೆದಾಗಲೆಲ್ಲಾ ‘ನಾವು ಟೆರರಿಸಂ ವಿರುದ್ಧ ಇನ್ನಷ್ಟು ದೃಢ ಸಂಕಲ್ಪದಿಂದ ಹೋರಾಡುತ್ತೇವೆಂದು’ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಗಳು ಹೇಳುತ್ತಿರುತ್ತವೆ. ಆದರೆ ಲಿಬಿಯಾ, ಇರಾಕ್, ಸಿರಿಯಾ, ಅಫ್ಘಾನಿಸ್ತಾನ್, ಜೋರ್ಡಾನ್, ಫೆಲೆಸ್ತೀನ್‌ಗಳಲ್ಲಿ ತಾವು ನಡೆಸುತ್ತಿರುವ ಅನ್ಯಾಯದ ಯುದ್ಧಗಳ ಬಗ್ಗೆ ಸ್ವವಿಮರ್ಶೆ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಹತರಾಗಿರುವ ಹತ್ತಾರು ಲಕ್ಷ ಜನರ ಬಗ್ಗೆ ಪಶ್ಚಿಮ ದೇಶಗಳ ಸರಕಾರಗಳಿಗೆ ಕಿಂಚಿತ್ತೂ ಪಶ್ಚಾತ್ತಾಪಗಳಿಲ್ಲ.
ಈಗ್ಗೆ ಹದಿನೈದು ವರ್ಷಗಳ ಹಿಂದೆ ಇರಾಕ್ ಮೇಲೆ ಅಮೆರಿಕ ಮತ್ತದರ ಚೇಲಾಗಳು ಸೇನಾ ದಾಳಿ ಆರಂಭಿಸಿದಾಗ ಯುರೋಪ್-ಅಮೆರಿಕದೆಲ್ಲೆಡೆ ಲಕ್ಷಾಂತರ ಜನ ಬೀದಿಗಿಳಿದು ಪ್ರತಿಭಟಿಸಿದ್ದರು.
ಅದರಿಂದ ಯುದ್ಧದ ನೀತಿ ಅಥವಾ ದೌರ್ಜನ್ಯಗಳ ಸ್ವರೂಪಗಳೇನೂ ಬದಲಾಗಿರಲಿಲ್ಲ. ಹತ್ಯಾಕಾಂಡಗಳು ಹೆಚ್ಚಾಗುತ್ತಿದ್ದಂತೆ ಅಮೆರಿಕ, ಇಂಗ್ಲೆಂಡ್, ಸ್ಪೈನ್, ಬೆಲ್ಜಿಯಂ, ಫ್ರಾನ್ಸ್, ಜರ್ಮನಿಗಳು ತಮ್ಮ ದೇಶಗಳಲ್ಲೇ ರೊಚ್ಚಿಗೆದ್ದ ಮುಸ್ಲಿಂ ಯುವಕರಿಂದ ಪ್ರತಿದಾಳಿಗಳನ್ನು ನೋಡಬೇಕಾಗಿ ಬಂದಿದೆ. ಅದನ್ನೇ ಈಗ ಭಯೋತ್ಪಾದನೆ ಎಂದು ಬಿಂಬಿಸಲಾಗುತ್ತಿದೆ.
ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಇರಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಿಳಿದಿದೆ.
ಹಾಗೆ ನೋಡಿದರೆ ಅರಬ್ ದೇಶಗಳಲ್ಲಿ ಹತ್ಯಾರಿಗಳ ಪಡೆ ಕಟ್ಟಿ ಭಯೋತ್ಪಾದನೆ ಆರಂಭಿಸಿದ್ದೇ ಅಮೆರಿಕ ಬೆಂಬಲಿತ ಹಗನಾ ಹಾಗೂ ಸ್ಟರ್ನ್ ಗುಂಪುಗಳು. ಈ ಗುಂಪಿನ ಸದಸ್ಯರೇ ಮುಂದೆ ಇಸ್ರೇಲಿನ ಅಧಿಕೃತ ಸೇನಾ ಪಡೆಯಾಗಿ ರೂಪಾಂತರಗೊಂಡರು. ಈ ಭಯೋತ್ಪಾದಕ ಗುಂಪಿನ ನಾಯಕರಾಗಿದ್ದ ಗೋಲ್ಡಾ ಮಿರ್ ಹಾಗೂ ಡೇವಿಡ್ ಬೆನ್ ಗುರಿಯನ್ ಇಸ್ರೇಲಿನ ಪ್ರಧಾನ ಮಂತ್ರಿಗಳೂ ಆದರು.
ಹೀಗೆ ಶುರುವಾದ ಅರಬ್ ಜಗತ್ತಿನ ರಕ್ತಸ್ರಾವ ಈಗಲೂ ನಿಂತಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ ಪಶ್ಚಿಮ ದೇಶಗಳೂ ಆಗೊಮ್ಮೆ ಹೀಗೊಮ್ಮೆ ಪ್ರತಿಪೆಟ್ಟು ತಿನ್ನುತ್ತಿವೆ. ಈ ಸಂಘರ್ಷದಲ್ಲಿ ತನ್ನದೇ ನಾಗರಿಕರು ಬಲಿಯಾದರೂ ಸಹ ಸರಕಾರಗಳು ಲೆಕ್ಕಿಸುತ್ತಿಲ್ಲ. ಲಾಭದ ಸೆಳೆತ ಮನುಷ್ಯತ್ವವನ್ನು ಮೀರಿದ್ದು.
ಈ ಲಾಭಕೋರರಿಗೆ ತಿರುಗಿಸಿ ಹೊಡೆಯುತ್ತಿರುವವರು ಮುಸಲ್ಮಾನರು ಮಾತ್ರವಲ್ಲ. ಸ್ವತಃ ಬಿಳಿಯರೂ ಇದ್ದಾರೆ.
ಗಲ್ಫ್ ಯುದ್ಧದಲ್ಲಿ ಭಾಗಿಯಾಗಿದ್ದ ಟಿಮೋತಿ ಮ್ಯಾಕ್‌ವೇಗ್ 1995 ರಲ್ಲಿ ಒಕ್ಲೋಹಾಮ ನಗರದಲ್ಲಿ ಟ್ರಕ್ ಬಾಂಬ್ ಸ್ಫೋಟಿಸಿ 168 ಜನರ ಸಾವಿಗೆ ಕಾರಣನಾದ. ತಾನು ಮರಣದಂಡನೆಗೆ ಗುರಿಯಾದಾಗ ಅವನು ಹೇಳಿದ್ದನ್ನು ನಾವ್ಯಾರೂ ಮರೆಯಲಾಗದು.
ನನ್ನ ಸೈನಿಕ ಬದ್ಧತೆಯನ್ನು ಅಮೆರಿಕ ಸರಕಾರ ದುರುಪಯೋಗ ಪಡಿಸಿಕೊಂಡಿತು. ಅಮಾಯಕರ ಮೇಲೆ ನಾನು ದಾಳಿ ಮಾಡುವಂತೆ ಮಾಡಲಾಯಿತು. ನನ್ನ ಭಾವನೆಗಳನ್ನು ದೋಚಲಾಗಿದೆ. ಬರಿದಾಗಿಸಲಾಗಿದೆ. ನಾನಿದನ್ನು ಭರಿಸಲಾರೆ. ಹಾಗಾಗಿ ಒಬ್ಬ ಅಮೆರಿಕನ್ ಸೈನಿಕನಾಗಿ ನಾನೇ ಅಮೆರಿಕನ್ ವ್ಯವಸ್ಥೆಯ ವಿರುದ್ಧ ಸೇಡಿನ ದಾಳಿ ನಡೆಸಬೇಕಾಯಿತು.
-ಟಿಮೋತಿಯ ಈ ಆತ್ಮನಿವೇದನೆಯ ಮಾತು ಅತಿಶಯೋಕ್ತಿಯದಲ್ಲ. 1982 ರಲ್ಲಿ ಬಂದ ಸಿಲ್ವೆಸ್ಟರ್ ಸ್ಟಾಲೋನ್‌ನ ‘The First Blood' ಸಿನೆಮಾ ನಿರೂಪಿಸಿದ್ದು ಇದನ್ನೇ
'They Drew First Blood,
Not me' (ಅಮೆರಿಕ) ಎನ್ನುತ್ತಾನೆ ವಿಯಟ್ನಾಂ. ಯುದ್ಧದಿಂದ ಹಿಂದಿರುಗಿ ಬಂದು ಅಮೆರಿಕದಲ್ಲೇ ತಬ್ಬಲಿ ಸ್ಥಿತಿ ಅನುಭವಿಸುವ ಕಥಾನಾಯಕ ರ್ಯಾಂಬೊ. ಆದರೆ ಈಗ ರಾಜಕೀಯ ತಿಳುವಳಿಕೆಯ ಚಕ್ರ ಇನ್ನೊಂದು ಸುತ್ತು ತಿರುಗಿದೆ.
ಮುಸ್ಲಿಂ ಬಾಲಕಿಯನ್ನು ಬಡಿದು ಕೊಂದಿರುವ ಮಾರ್ಟಿನೇಜ್ ಒಂದರ್ಥದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಛಾಯೆಯಂತೆ ಭಾಸವಾಗುತ್ತಿದ್ದಾನೆ.
ಮ್ಯಾಂಚೆಸ್ಟರ್‌ನ ರಸ್ತೆಯೊಂದರಲ್ಲಿ ನಿಂತು ‘ನಾನು ಮುಸ್ಲಿಂ, ನನ್ನ ನಂಬಿ, ಬನ್ನಿ ಅಪ್ಪಿಕೊಳ್ಳಿ’ ಎಂದ ನೂರಿ ನಾವು ನೀವೆಲ್ಲಾ ಬಯಸುವ, ಯುದ್ಧ ಹಿಂಸೆ ಬೇಡದ ಯುರೋಪ್, ಅಮೆರಿಕದ ಸಾಮಾನ್ಯ ಜನರ ಪ್ರತಿನಿಧಿಯಂತಿದ್ದಾನೆ.
ಈ ಎಲ್ಲಾ ಆಗು-ಹೋಗುಗಳ ಬಗ್ಗೆ ಬಡ ಭಾರತೀಯ (ತಿಳುವಳಿಕೆ- ಕಾರ್ಯತತ್ಪರತೆಯಲ್ಲಿ) ಏನು ಯೋಚಿಸುತ್ತಿರಬಹುದು?
ಅಮೆರಿಕ ಮಾಡುತ್ತಿರುವುದು ಕೆಟ್ಟ ಕೆಲಸ. ನಮ್ಮ ವಿರೋಧವನ್ನು ಸೂಚಿಸಲು ಕನಿಷ್ಠ ಪಕ್ಷ ನಾವು ಅಮೆರಿಕ ದೇಶದ ಕೋಲಾಗಳನ್ನಾದರೂ ಕುಡಿಯುವುದನ್ನು ನಿಲ್ಲಿಸಬೇಕು!
ನ್ಯಾಯಾಧೀಶ ಕರ್ಣನ್
ಭಾರತದ ದಲಿತ ಸಮುದಾಯದೊಳಗೆ ಕಂಡು ಬರುತ್ತಿರುವ ಚಲನೆಗಳು ಗಮನ ಸೆಳೆಯುವಂತಿವೆ. ವ್ಯವಸ್ಥೆಯ ಜೊತೆ ಹೊಂದಿಕೊಂಡು ಸಾಗಿ ಬಂದ ದಲಿತ (?) ರಾಜಕಾರಣಿ ರಾಮನಾಥ್ ಕೋವಿಂದ್ ಭಾರತದ ರಾಷ್ಟ್ರಪತಿಯಾಗುವತ್ತ ಸಾಗುತ್ತಿದ್ದರೆ ಬಂಡಾಯವೆದ್ದ ದಲಿತ ನ್ಯಾಯಮೂರ್ತಿ ಕರ್ಣನ್ ಜೈಲಿನತ್ತ ಸಾಗಿದ್ದಾರೆ.
ಮತ್ತೊಂದೆಡೆ ಸಂಸದೀಯ ಚುನಾವಣೆಗಳ ಮೂಲಕ ರಾಜಕೀಯ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಮಾಯಾವತಿ ಸದ್ಯಕ್ಕೆ ನಿತ್ರಾಣಗೊಂಡಿದ್ದಾರೆ. ಇದೆಲ್ಲದರಿಂದ ಹತಾಶರಾಗಿ ರೊಚ್ಚಿಗೆದ್ದ ಯುವ ದಲಿತರು ಅದೇ ಉತ್ತರ ಪ್ರದೇಶದಲ್ಲಿ ಚಂದ್ರಶೇಖರ್ ಅಝಾದ್ ನಾಯಕತ್ವದಲ್ಲಿ ‘ಭೀಮ್ ಆರ್ಮಿ’ ರಚಿಸಿಕೊಂಡು ಬೀದಿಗಿಳಿಯುತ್ತಿದ್ದಾರೆ.
ಅಝಾದ್ ಈಗ ಪೊಲೀಸರ ಬಂಧಿ.
ಗುಜರಾತ್‌ನಲ್ಲಿ ಜಿಗ್ನೇಶ್ ಮೇವಾನಿಯವರ ಬಿರುಸಿನ ಮಾತುಗಳು ಜನರನ್ನು ಸೆಳೆಯುತ್ತಿವೆ.
ಇವಿಷ್ಟನ್ನು ಹೊರತುಪಡಿಸಿದರೆ ದಲಿತರ ಸಾಮಾಜಿಕ ಜಾಗೃತಿಯು ರಾಜಕೀಯ ಶಕ್ತಿಯಾಗುವತ್ತ ಸಾಗಲು ತ್ರಾಸಪಡುತ್ತಿವೆ. ದಲಿತ ಸಮುದಾಯವು ಯಾವುದೇ ಪಕ್ಷವಾದರೂ ಮೇಯಬಹುದಾದ ರಾಜಕೀಯ ಹುಲ್ಲುಗಾವಲಿನಂತಿದೆ. ದಮನ ಹಾಗೂ ತಾರತಮ್ಯಗಳ ವಿರುದ್ಧ ದನಿ ಎತ್ತುವ ಹಾಗೂ ಅದನ್ನೊಂದು ಸಾಮಾಜಿಕ ವಿಚಾರವಾಗಿಸಿ ಎಲ್ಲರನ್ನು ಕನ್ವಿನ್ಸ್ ಮಾಡುವ ಪ್ರಕ್ರಿಯೆ ಹೇಗಿರಬೇಕೆಂಬ ಪ್ರಶ್ನೆಯನ್ನು ಕರ್ಣನ್‌ರವರ ಪ್ರಕರಣ ನೋಡಿದ ಮೇಲೆ ನಾವು ಹಾಕಿಕೊಳ್ಳಬೇಕಿದೆ.
ಭಾರತೀಯ ಸಮಾಜದ ಎಲ್ಲಾ ರಂಗಗಳಲ್ಲೂ ಇರುವ ಜಾತಿ ತಾರತಮ್ಯಗಳು ನ್ಯಾಯಾಂಗದೊಳಗೂ ಇದ್ದರೆ ಅದೇನು ಆಶ್ಚರ್ಯಪಡುವಂತಹದಲ್ಲ. ಆದರೆ ಹೈಕೋರ್ಟ್ ಒಂದರ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕರ್ಣನ್‌ರಿಗೆ ಈ ವಿಚಾರಗಳನ್ನು ಚರ್ಚೆಗೆ ತರಲು ಇನ್ನಿತರ ಅನೇಕ ದಾರಿ ಹಾಗೂ ಅವಕಾಶಗಳಿದ್ದವು. ಅದಕ್ಕೆ ಸಾಕಾಗುವಷ್ಟು ಅಧಿಕಾರವೂ ಅವರಿಗಿತ್ತು.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರ, ಪುರುಷ ಮೇಲಾಧಿಪತ್ಯ, ಸಾಮಾಜಿಕ ಸಮಾನ ಪ್ರಾತಿನಿಧ್ಯವಿಲ್ಲದಿರುವುದು, ಪ್ರಜಾಪ್ರಭುತ್ವ ಹಾಗೂ ಸೆಕ್ಯುಲರ್ ವೌಲ್ಯಗಳ ಪರ ದೃಢ ನಿಲುವು ತಾಳುವ ಸನ್ನಿವೇಶಗಳನ್ನು ನ್ಯಾಯ ಮೂರ್ತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಖಂಡಿತಾ ಮುಖಾಮುಖಿಯಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ಚೌಕಟ್ಟಿನೊಳಗೆಯೇ ತಮ್ಮ ಆಶಯ ಹಾಗೂ ಬದ್ಧತೆಗಳನ್ನು ಸಾಬೀತು ಮಾಡುವ, ತಮ್ಮ ವ್ಯಕ್ತಿ ವೈಶಿಷ್ಟ್ಯಗಳನ್ನು ನಿರೂಪಿಸುವ ಅವಕಾಶ ಕರ್ಣನ್‌ರಿಗಿತ್ತು. ಅವರಿಗೊಂದು ಚೂರು ಚಾಕಚಕ್ಯತೆ ಇರಬೇಕಿತ್ತು.
ಆದರೆ ಅವರು ಹಸಿಬಂಡಾಯ ಎನಿಸುವಂತೆ ಹಾದಿ ಹಿಡಿದರು. ತಮ್ಮ ನಿಲುವುಗಳ ಪರಿಣಾಮ ಗಳನ್ನು ಅಂದಾಜಿಸದೆ ಸುಪ್ರೀಂಕೋರ್ಟ್ ಅಂದರೆ ನ್ಯಾಯಾಂಗದೊಂದಿಗೇ ಸಂಘರ್ಷಕ್ಕಿಳಿದರು. ಕೊನೆಗೆ ಸುಪ್ರೀಂಕೋರ್ಟ್‌ನ ಶಿಕ್ಷೆಯ ತೀರ್ಪಿಗೆ ಹೆದರಿ ಕೆಲಕಾಲ ಕಣ್ಮರೆಯಾದರು. ಕನಿಷ್ಠ ಆ ಹಂತದಲ್ಲಾದರೂ ಕರ್ಣನ್‌ರವರು ಧೀರೋದಾತ್ತವಾಗಿ ವರ್ತಿಸಬೇಕಿತ್ತು.
ಕರ್ಣನ್‌ರವರ ಶಿಕ್ಷೆ ಹಾಗೂ ಬಂಧನದ ವಿಷಯವು ಸಾರ್ವಜನಿಕರ ಸಹಾನುಭೂತಿಯನ್ನು ಗಳಿಸಲಿಲ್ಲ ಎಂಬುದೇ ಅವರ ನಡೆ ಅಪ್ರಬುದ್ಧವಾಗಿತ್ತು ಎಂಬುದಕ್ಕೆ ಸಾಕ್ಷಿಯಗಿದೆ.
1950ರಿಂದ ಇದುವರೆಗೂ ಸುಪ್ರೀಂಕೋರ್ಟ್ ನಲ್ಲಿ ಕೇವಲ 6 ಮಹಿಳಾ ನ್ಯಾಯಮೂರ್ತಿಗಳಷ್ಟೇ ಬಂದಿದ್ದಾರೆ. 24 ರಾಜ್ಯ ಹೈಕೋರ್ಟ್‌ಗಳಲ್ಲಿ ಒಟ್ಟು 611 ನ್ಯಾಯಾಧೀಶರ ಪೈಕಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಕೇವಲ 62 ಇದೆ ಎನ್ನಲಾಗಿದೆ. ಅಂದರೆ ಶೇ.10ರಷ್ಟು. ಇತ್ತೀಚೆಗೆ ನಿವೃತ್ತರಾದ ರಾಜಸ್ಥಾನದ ಹೈಕೋರ್ಟ್ ನ್ಯಾಯಾಧೀಶ ಮಹೇಶ್‌ಚಂದ್ರ ವರ್ಮರವರು ನವಿಲುಗಳ ಸಂತಾನಾಭಿವೃದ್ಧಿ ವಿಧಾನದ ಬಗ್ಗೆ ಬಾಲಿಶ ಹೇಳಿಕೆಯೊಂದನ್ನು ನೀಡಿ ಜನರನ್ನು ದಿಗ್ಭ್ರಮೆಗೀಡು ಮಾಡಿದರು. ಸ್ವತಃ ಕರ್ಣನ್ ಒಮ್ಮೆ ‘ಸ್ತ್ರೀ-ಪುರುಷರ ನಡುವೆ ಲೈಂಗಿಕ ಸಂಬಂಧವಿದ್ದರೆ ಸಾಕು ಅದು ಮದುವೆಯಾದಂತೆ’ ಎಂಬ ವಿಚಿತ್ರ ನಿಲುವು ತಾಳಿದ್ದರು. ಮತ್ತೊಬ್ಬ ನ್ಯಾಯಾಧೀಶರು ಬಹಿರಂಗವಾಗಿ ಮಠಾಧೀಶರೊಬ್ಬರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಸುಪ್ರೀಂಕೋರ್ಟ್ ಇವರ ವರ್ತನೆಗಳನ್ನು ಪ್ರಶ್ನಿಸಲಿಲ್ಲ. ವಿಮರ್ಶಿಸಲೂ ಇಲ್ಲ.
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಸಾಧಿಸಲು ಕರ್ಣನ್‌ರವರು ತೋರಿರುವ ಹಾದಿ ಅನುಕರಣ ಯೋಗ್ಯವಲ್ಲ.