ತಾಜ್‌ಗೆ ಟ್ರೇಡ್‌ಮಾರ್ಕ್ ಮಾನ್ಯತೆ,ಸ್ವಚ್ಛತಾ ಸ್ಪರ್ಧೆಗೆ ಮುಂಬೈ ತಯಾರಿ!
ಬೀಚ್ ಪ್ರವಾಸೋದ್ಯಮಕ್ಕೆ ಹೊಸ ನೀತಿ
ಗೋವಾ ಅಂದಕೂಡಲೇ ಸಮುದ್ರ ಪರ್ಯಟನೆಗೆ ಎಲ್ಲೆಲ್ಲಿಂದಲೋ ಪ್ರವಾಸಿಗರು ಬರುತ್ತಾರೆ ಅನ್ನೋದು ನೆನಪಾಗುವುದು.. ಅದೇ ರೂಪದಲ್ಲಿ ಈಗ ಮಹಾರಾಷ್ಟ್ರದಲ್ಲೂ ಸಮುದ್ರ ಪರ್ಯಟನೆಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರಕಾರವು ಹೊಸ ಬೀಚ್ ನೀತಿಯನ್ನು ಜಾರಿಗೆ ತರಲು ನಿರ್ಣಯಿಸಿದೆ. ರಾಜ್ಯದಲ್ಲಿ ಪಾಳು ಬಿದ್ದಿರುವ ಬೀಚ್‌ಗಳಿಗೆ ಇನ್ನು ಹೊಸ ರಂಗು ಬರಲಿದೆ. ಬೀಚ್‌ಗಳಲ್ಲಿ ವಿದೇಶಿ ಪ್ರವಾಸಿಗರಿಗಾಗಿ ತಂಗಲು ಜೋಪಡಿ, ಚಪ್ಪರಗಳನ್ನು ನಿರ್ಮಿಸಲಾಗುವುದು ಎಂದು ಪರ್ಯಟನ ರಾಜ್ಯಮಂತ್ರಿ ಮದನ್ ಯೆರಾವರ್ ತಿಳಿಸಿದ್ದಾರೆ.
ಗೋವಾದಲ್ಲಿ ಬೀಚ್ ಸಕ್, ಹ್ಯಾಟ್ಸ್, ಅಂಬ್ರೆಲ್ಲಾ.... ಇತ್ಯಾದಿ ಸೌಲಭ್ಯಗಳನ್ನು ಪ್ರವಾಸಿಗರು ಕಾಣಬಹುದು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಹೋಗುತ್ತಾರೆ. ಇದರಿಂದ ಸ್ಥಳೀಯರಿಗೂ ಉದ್ಯೋಗದ ಅವಕಾಶಗಳು ಸಿಗುತ್ತವೆ. ಹೀಗಾಗಿ ಮಹಾರಾಷ್ಟ್ರದ ಪಶ್ಚಿಮ ತೀರದ ಬೀಚ್‌ಗಳಲ್ಲೂ ಇಂತಹ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಹೊಸ ನೀತಿ ಜಾರಿಗೆ ತರಲು ರೂಪುರೇಷೆಗೆ ಮುಂದಾಗಿದೆ.
ಹಾಗಾಗಿ ನಗರ ವಿಕಾಸ ವಿಭಾಗ, ಗ್ರಾಮ ವಿಕಾಸ ವಿಭಾಗ, ಮಹಾರಾಷ್ಟ್ರ ಸಾಗರತೀರ ನಿಯಂತ್ರಣ ಬೋರ್ಡ್, ಸ್ವಾಸ್ಥ್ಯ ವಿಭಾಗ, ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಲ.....ಮತ್ತಿತರ ವಿಭಾಗಗಳ ಒಂದು ಸಂಯುಕ್ತ ಸಮಿತಿ ರಚಿಸಿ, ಸೆಪ್ಟಂಬರ್ 1ರಿಂದ ಮೇ 31 ರ ತನಕ ಮೇಲೆ ತಿಳಿಸಿದ ಕೆಲವು ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಇದರ ಜೊತೆಗೆ ಭಾರತಕ್ಕೆ ಸುತ್ತಾಡಲು ಬರುವ ವಿದೇಶಿ ಪ್ರವಾಸಿಗರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಪರ್ಯಟಣ ಮಂತ್ರಾಲಯವು 24 ಗಂಟೆ ಬಹುಭಾಷಿಕ ಹೆಲ್ಪ್‌ಲೈನ್ 1800111363 (ಶಾರ್ಟ್ ಕೋಡ್-1363) ಆರಂಭಿಸಿದೆ. ಈ ಹೆಲ್ಪ್‌ಲೈನ್‌ನಲ್ಲಿ ಹಿಂದಿ, ಇಂಗ್ಲಿಷ್ ಜೊತೆಗೆ ಅರೆಬಿಕ್, ಫ್ರೆಂಚ್, ಜರ್ಮನಿ, ಇಟಾಲಿಯನ್, ಜಪಾನಿ, ಕೊರಿಯನ್, ಚೈನೀಸ್, ಪೋರ್ಚುಗೀಸ್, ರಶ್ಯನ್ ಮತ್ತು ಸ್ಪಾನಿಷ್ ಈ ಹತ್ತು ಅಂತಾರಾಷ್ಟ್ರೀಯ ಭಾಷೆಗಳ ಮಾಹಿತಿ ನೀಡಲಾಗುವುದು.
ಮುಂಬೈ ‘ತಾಜ್‌ಮಹಲ್’ಗೆ ದಕ್ಕಿತು ಟ್ರೇಡ್ ಮಾರ್ಕ್
ಮುಂಬೈಯ ಗೇಟ್‌ವೇ ಆಫ್ ಇಂಡಿಯಾ ಪಕ್ಕದ ತಾಜ್ ಮಹಲ್ ಪ್ಯಾಲೆಸ್ ಹೊಟೇಲ್ ಕಟ್ಟಡಕ್ಕೆ ಈಗ 114 ವರ್ಷ. ಇದೀಗ ತಾಜ್ ಮಹಲ್‌ಗೆ ಟ್ರೇಡ್ ಮಾರ್ಕ್ ಮಾನ್ಯತೆ ದೊರೆತಿದೆ. ಪ್ರತೀವರ್ಷ ಸುಮಾರು 2,390 ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಈ ತಾಜ್ ಮಹಲ್ ನೀಡುತ್ತದೆ. 1903ರಲ್ಲಿ ನಿರ್ಮಿಸಲಾದ ಈ ತಾಜ್‌ಮಹಲ್‌ನ್ನು, ತನ್ನ ಎದುರಿಗೆ ಇರುವ ಗೇಟ್‌ವೇಗಿಂತಲೂ ಹಿಂದೆ ಕಟ್ಟಲಾಗಿತ್ತು. ಇದರ ಮಾಲಕತ್ವ ಇಂಡಿಯನ್ ಹೋಟೆಲ್ಸ್ ಕಂಪೆನಿ ಲಿ. (ಐ.ಎಚ್.ಸಿ.ಎಲ್) ಸ್ವಾಮ್ಯತ್ವದಲ್ಲಿದೆ. 2008ರಲ್ಲಿ ಮುಂಬೈಯಲ್ಲಿ ನಡೆದ ಪಾಕ್ ಉಗ್ರರ ದಾಳಿಯಾದಾಗ ಇದೇ ತಾಜ್ ಮಹಲ್ ಭಾರೀ ಸುದ್ದಿ ಮಾಡಿತ್ತು. ಹಾಗೂ ತಾಜ್ ಹೊಟೇಲ್‌ನ ಮೇಲಿನ ಗುಂಬಜದಲ್ಲಿ ಉಗ್ರರ ದಾಳಿಯಿಂದ ಬೆಂಕಿಯ ಹೊಗೆ ಎದ್ದಿತ್ತು. ನೂರಾರು ಟಿ.ವಿ. ಚಾನಲ್‌ಗಳು ಅದನ್ನು ವಿಶ್ವಕ್ಕೆ ತೋರಿಸಿದ್ದವು. ಹೊಟೇಲ್‌ನಲ್ಲಿ ಕಾಣಿಸಿದ ಈ ಹೊಗೆಯ ಚಿತ್ರ ಆತಂಕವಾದಿಗಳ ಮುಂಬೈ ದಾಳಿಗೆ ಸಿಂಬಲ್ ಆಗಿಬಿಟ್ಟಿತ್ತು. ತಾಜ್ ಹೊಟೇಲನ್ನು ನೌಕಾಸೇನೆಗೆ ಮಾರ್ಗ ತೋರಿಸಲು ಬಳಸಿದರೆ, ವಿಶ್ವಯುದ್ಧದ ಸಮಯ ಹಾಸ್ಪಿಟಲ್ ರೂಪದಲ್ಲೂ ಇದನ್ನು ಬಳಸಲಾಗಿತ್ತು.
ಮುಂಬೈ ಮಾಯಾನಗರಿಯ ಪ್ರತಿಷ್ಠಿತ ತಾಜ್ ಹೊಟೇಲ್‌ಗೆ ಈಗ ಹೊಸ ಗುರುತು ಸಿಕ್ಕಿದೆ. ತಾಜ್‌ಮಹಲ್‌ಗೆ ಟ್ರೇಡ್ ಮಾರ್ಕ್ ಸಿಕ್ಕಿದೆ. ಟ್ರೇಡ್ ಮಾರ್ಕ್‌ನ ರಿಜಿಸ್ಟ್ರೇಷನ್ ಸಿಕ್ಕಿದ ದೇಶದ ಮೊದಲ ಕಟ್ಟಡ ಇದೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಮುಂದೆ ಯಾರೇ ಆಗಲಿ ಅನುಮತಿ ಇಲ್ಲದೆ ತಾಜ್ ಮಹಲ್ ಪ್ಯಾಲೇಸ್‌ನ ಫೋಟೋವನ್ನು ವಾಣಿಜ್ಯ ಉದ್ದೇಶ ಕ್ಕಾಗಿ ಬಳಸುವಂತಿಲ್ಲ. ಈ ಕ್ಲಬ್‌ನಲ್ಲಿ ನ್ಯೂಯಾರ್ಕ್‌ನ ಎಂಪಾಯರ್ ಸ್ಟೇಟ್ ಬಿಲ್ಡಿಂಗ್, ಪ್ಯಾರಿಸ್‌ನ ಐಫೆಲ್ ಟವರ್, ಸಿಡ್ನಿಯ ಒಪೆರಾ ಹೌಸ್ ಶಾಮೀಲಾಗಿವೆ. ಸಾಮಾನ್ಯವಾಗಿ ಜನರು, ಬ್ರಾಂಡ್ ನೇಮ್, ಕಲರ್, ನಂಬರ್ಸ್, ಸೌಂಡ್ಸ್... ಇತ್ಯಾದಿಗಳ ಟ್ರೇಡ್ ಮಾರ್ಕ್ ಪಡೆಯುತ್ತಾರೆ. ಆದರೆ 1999ರಲ್ಲಿ ಟ್ರೇಡ್ ಮಾರ್ಕ್ ಅಧಿನಿಯಮ ಜಾರಿಗೆ ಬಂದ ನಂತರ ಕಟ್ಟಡದ ವಿನ್ಯಾಸದ ನೋಂದಣಿಯ ಪ್ರಯತ್ನ ಆಗಿಲ್ಲ.
ತಾಜ್‌ಮಹಲ್ ಪ್ಯಾಲೇಸ್‌ನ್ನು ಸಂಚಾಲನೆ ಮಾಡುವ ಕಂಪೆನಿ ಐಎಚ್‌ಸಿಎಲ್‌ನ ಜನರಲ್ ಕೌನ್ಸಲ್ ರಾಜೇಂದ್ರ ಮಿಶ್ರಾ ಹೇಳುವಂತೆ ಈ ಕಟ್ಟಡದ ವಿಶಿಷ್ಠತೆಯ ರಕ್ಷಣೆಗಾಗಿ ಹೀಗೆ ಮಾಡಲಾಗಿದೆಯಂತೆ. ಈ ಕಟ್ಟಡದ ನೋಂದಣಿ ಮಾಡುವಲ್ಲಿ ಏಳು ತಿಂಗಳು ಸಮಯ ತಗಲಿದೆಯಂತೆ. ಇನ್ನು ಮುಂದೆ ಈ ಕಂಪೆನಿಯ ಅನುಮತಿ ಇಲ್ಲದೆ ಯಾರೂ ಕೂಡಾ ತಾಜ್‌ಮಹಲ್ ಪ್ಯಾಲೇಸ್‌ನ ಛಾಯಾಚಿತ್ರವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸ್ವಚ್ಛತಾ ಸ್ಪರ್ಧೆಗೆ ಮನಪಾ ತಯಾರಿ
ರಾಷ್ಟ್ರೀಯ ಸ್ತರದಲ್ಲಿ ನಡೆಯಲಿರುವ ಸ್ವಚ್ಛತಾ ಸ್ಪರ್ಧೆಯಲ್ಲಿ ಮುಂಬೈಯನ್ನು ಮೇಲಿನ ಕ್ರಮಾಂಕಕ್ಕೆ ತರುವುದಕ್ಕೆ ಮಹಾನಗರ ಪಾಲಿಕೆ ಈಗಿಂದೀಗಲೇ ತಯಾರಾಗಿದೆ. ಇದಕ್ಕಾಗಿ ಮುಂಬೈ ಮನಪಾ 24 ವಾರ್ಡ್‌ಗಳ ನಡುವೆ ಸ್ವಚ್ಛತಾ ಸ್ಪರ್ಧೆಯನ್ನು ಆಯೋಜಿಸುವ ಯೋಜನೆ ಕೈಗೊಂಡಿದೆ.
ರಾಷ್ಟ್ರೀಯ ಸ್ತರದಲ್ಲಿ ಪ್ರತೀವರ್ಷ ಸ್ವಚ್ಛತಾ ಸ್ಪರ್ಧೆ ನಡೆಯುತ್ತದೆ. ಎಲ್ಲ ರಾಜ್ಯಗಳ ನಗರಗಳ ಸ್ವಚ್ಛತೆಯನ್ನು ಗಮನಿಸಲಾಗುತ್ತದೆ. ಹಾಗೂ ಆ ಆಧಾರದಲ್ಲಿ ಕ್ರಮಾಂಕ ನೀಡಲಾಗುತ್ತದೆ.
ವಿವಿಧ ಪಕ್ಷಗಳ ನಗರ ಸೇವಕರ, ನೇತಾರರ ಬೈಠಕ್‌ನಲ್ಲಿ ಈ ಸಲಹೆಯನ್ನು ಮನಪಾ ಆಡಳಿತ ಮುಂದಿಟ್ಟಿದೆ. ಆನಂತರ ನಗರ ಸೇವಕರು ಈ ಬಗ್ಗೆ ಎಲ್ಲಾ ತಯಾರಿಗಳನ್ನು ಜಾರಿಗೆ ತರಲು ಮನಪಾ ಕಮಿಷನರ್ ಅಜಯ್ ಮೆಹ್ತಾ ಅವರಿಗೆ ಒಪ್ಪಿಗೆ ನೀಡಿದರು. ಇದೀಗ ಅಧಿಕಾರಿಗಳು ಎಲ್ಲಾ ಆಡಳಿತ ವಾರ್ಡ್‌ಗಳ ನಡುವೆ ಸ್ಪರ್ಧೆ ಜರಗಿಸಲು ಮುಂದಾಗಿದ್ದಾರೆ. ವಾರ್ಡ್‌ಗಳ ನಡುವೆ ಸ್ವಚ್ಛತೆಯ ಸ್ಪರ್ಧೆ ನಡೆಸಿದರೆ ಮುಂಬೈ ಉನ್ನತ ಕ್ರಮಾಂಕಕ್ಕೆ ಏರಲು ಸಾಧ್ಯವಿದೆ ಎನ್ನುತ್ತಾರೆ ನಗರ ಸೇವಕರು. ಆಗ ರಾಷ್ಟ್ರೀಯ ಸ್ತರದ ಸ್ವಚ್ಛತಾ ಸ್ಪರ್ಧೆಯಲ್ಲಿ ವಿಜಯಿಯಾಗುವ ಅವಕಾಶ ದೊರೆಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಗಣಿತಕ್ಕೆ ಪರ್ಯಾಯ ವಿಷಯ!?
ಕಲೆ ಮತ್ತು ಬೇರೆ ಕೆಲವು ವಿಷಯಗಳ ಪಠ್ಯಕ್ರಮಗಳಲ್ಲಿ ಸ್ನಾತಕ ಸ್ತರದಲ್ಲಿ ಗಣಿತದಂತಹ ವಿಷಯಗಳು ಅಗತ್ಯವಿರುವುದಿಲ್ಲ. ಹತ್ತನೆ ತರಗತಿಯ ನಂತರ ಗಣಿತ ಮತ್ತು ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಆಗದ ಕಾರಣ ಅನೇಕ ವಿದ್ಯಾರ್ಥಿಗಳು ಓದನ್ನು ಅರ್ಧದಲ್ಲೇ ತ್ಯಜಿಸುತ್ತಾರೆ. ಹೀಗಾಗಿ ಗಣಿತದ ಪಠ್ಯ ತೆಗೆದು ಅದಕ್ಕೆ ಪರ್ಯಾಯ ಪಠ್ಯ ವ್ಯವಸ್ಥೆಗೊಳಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ಓದು ಪೂರ್ಣಗೊಳಿಸಲು ಸಹಾಯ ವಾಗುತ್ತದೆ. ಈ ಬಗ್ಗೆ ಬಾಂಬೆ ಹೈಕೋರ್ಟ್ ವಿಭಿನ್ನ ಶಿಕ್ಷಣ ಬೋರ್ಡ್‌ಗಳಿಗೆ ಪ್ರಶ್ನಿಸಿದೆ. ಮುಂಬೈಯ ಪ್ರಮುಖ ಮನೋಚಿಕಿತ್ಸಕ ಡಾ. ಹರೀಶ್ ಶೆಟ್ಟಿ ಅವರು ಹೈಕೋರ್ಟ್‌ನಲ್ಲಿ ಒಂದು ಜನಹಿತ ಅರ್ಜಿ ದಾಖಲಿಸಿದ್ದರು. ಇದರಲ್ಲಿ ‘‘ಕಲೆ ಮತ್ತು ಇತರ ಕೆಲವು ಪಠ್ಯಕ್ರಮಗಳಲ್ಲಿ ಗಣಿತದ ಅಗತ್ಯ ವೇನು? ಅನೇಕ ವಿದ್ಯಾರ್ಥಿಗಳು ಹತ್ತನೆ ತರಗತಿಯ ನಂತರ ಓದು ಅರ್ಧಕ್ಕೆ ನಿಲ್ಲಿಸಲು ಅನಗತ್ಯ ಗಣಿತವೇ ಕಾರಣವಾಗುತ್ತಿದೆ’’ ಎಂದವರು ಹೇಳಿದ್ದರು.
ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಪರ್ಯಾಯ ವಿಷಯ ನೀಡಿದರೆ ಅವರು ಮುಂದೆ ಪದವಿ ಪೂರ್ಣಗೊಳಿಸಲು ಸಹಾಯವಾಗಲಿದೆ. ಗಣಿತವನ್ನು ಸ್ವಇಚ್ಛಿತ ವಿಷಯದ ರೂಪದಲ್ಲಿ ಸ್ವೀಕರಿಸಬಹುದು ಎಂದಿರುವ ಹೈಕೋರ್ಟ್ ಜುಲೈ 26ರಂದು ಈ ಬಗ್ಗೆ ರಾಜ್ಯ ಸರಕಾರಕ್ಕೆ ಉತ್ತರ ನೀಡುವಂತೆ ತಿಳಿಸಿದೆ.
1975ರ ತನಕ ಹತ್ತನೆ ತರಗತಿಯ 8 ವಿಷಯಗಳಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾದರೂ ಆ ವಿದ್ಯಾರ್ಥಿಯನ್ನು ತೇರ್ಗಡೆ ಮಾಡಲಾಗುತ್ತಿತ್ತು. ಈಗ ಹಾಗಿಲ್ಲ ಯಾಕೆ? ಪದವಿ ತರಗತಿಯಲ್ಲಿ ಕಲಾ ವಿಭಾಗ ತೆಗೆದುಕೊಂಡವರಿಗೆ ಗಣಿತದಿಂದ ಯಾವ ಉಪಯೋಗ ಇದೆ ಎಂದು ಪ್ರಶ್ನಿಸಿರುವ ನ್ಯಾಯಾಧೀಶ ವಿದ್ಯಾಸಾಗರ ಕಾನಡೆ ಅವರು ಶಿಕ್ಷಣ ಕ್ಷೇತ್ರದ ಗಣ್ಯರು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದಿದ್ದಾರೆ.
ಕೋರ್ಟ್ ಇಲ್ಲಿ ಆಮಿರ್ ಖಾನ್‌ರ ‘ತಾರೆ ಝಮೀನ್ ಪರ್’ ಸಿನೆಮಾ ವನ್ನು ಉಲ್ಲೇಖಿಸುತ್ತಾ, ‘‘ಅನೇಕ ಜನ ಈ ಸಿನೆಮಾ ನೋಡಿರಬಹುದು. ಓದಿನಲ್ಲಿ ಕ್ಷೀಣವಿರುವ ಮಕ್ಕಳನ್ನು ಬಾಲ್ಯದಲ್ಲೇ ಪತ್ತೆ ಹಚ್ಚಿ ಅವರ ಬಗ್ಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ’’ ಎಂದಿದೆ. ವಿದ್ಯಾರ್ಥಿಗಳ ಮನದಲ್ಲಿ ಕೀಳರಿಮೆ ಬರದಂತೆ ನೋಡಿಕೊಳ್ಳಬೇಕಿದೆ ಎಂದಿದೆ ಕೋರ್ಟ್.
ಕಾಂಗ್ರೆಸ್-ಶಿವಸೇನೆಯ ಸಾಮಿಪ್ಯ: ಬಿಜೆಪಿಗೆ ಚಿಂತೆ
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೊದಲ ಬಾರಿ ಶಿವಸೇನೆಯ ಮಾತೋಶ್ರೀಗೆ ಬಂದು ಹೋದರು. ರಾಷ್ಟ್ರಪತಿಯ ಆಯ್ಕೆಯ ಕುರಿತಂತೆ ಚರ್ಚಿಸಲು ಈ ಭೇಟಿ ನಡೆಯಿತು. ಇಂದು ಶಿವಸೇನೆಯು ಕೆಲವು ಸಂದರ್ಭಗಳಲ್ಲಿ ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡುಕೊಳ್ಳುತ್ತಿರುವುದು ಬಿಜೆಪಿಗೆ ಒಂದಿಷ್ಟು ಚಿಂತೆಯ ಸಂಗತಿಯಾಗಿದೆ. ಬಿಜೆಪಿಯನ್ನು ಆಡಳಿತದಿಂದ ದೂರ ಇರಿಸುವುದಕ್ಕಾಗಿ ಮಾಲೆಗಾಂವ್ ಮತ್ತು ಭಿವಂಡಿ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯು ಕಾಂಗ್ರೆಸ್‌ಗೆ ಬೆಂಬಲಿಸಿದೆ. ಮಧ್ಯಪ್ರದೇಶದ ಮಂದ್‌ಸೋರ್‌ನಲ್ಲಿ ಗುಂಡಿಗೆ ಬಲಿಯಾದ ರೈತರ ಪರವಾಗಿ ಶಿವಸೇನೆ ಬರೆದಿದೆ. ಅಲ್ಲದೆ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಗುಜರಾತ್‌ನ ಹಾರ್ದಿಕ್ ಪಟೇಲ್ ಮೊದಲಾದವರನ್ನು ಶಿವಸೇನೆ ಆಗಾಗ ಶ್ಲಾಘಿಸುತ್ತಿದೆ. ಹಾಗೂ ಬಿಜೆಪಿಯನ್ನು ಬಹಿರಂಗವಾಗಿ ಟೀಕಿಸುತ್ತಿದೆ. ಎನ್‌ಡಿಎ ಈಗ ರಾಮ್ ಕೋವಿಂದ್‌ರನ್ನು ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದೆ. ಅದಕ್ಕಿಂತ ಮೊದಲು ಶರದ್ ಪವಾರ್ ಹೆಸರು ಪತ್ರಿಕೆಗಳಲ್ಲಿ ಚರ್ಚೆಯಾಗುತ್ತಿತ್ತು. ಆಗ ಶಿವಸೇನೆ ವಿಪಕ್ಷದ ಜೊತೆಗೂಡುವುದೋ ಎಂಬ ಭಯ ಬಿಜೆಪಿಗೆ ಒಳಗೊಳಗೇ ಕಾಡಿತ್ತು. ಯಾಕೆಂದರೆ ಪ್ರತಿಭಾ ಪಾಟೀಲ್‌ರು ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾಗ ಎನ್‌ಡಿಎ ಒಳಗಿದ್ದೂ ಶಿವಸೇನೆ ಅವರನ್ನು ಮರಾಠಿ ವ್ಯಕ್ತಿ ಎಂಬ ಕಾರಣದಿಂದ ಬೆಂಬಲಿಸಿತ್ತು. ಹಾಗಾಗಿ ಶರದ್ ಪವಾರ್ ಕೂಡಾ ಮರಾಠಿ ವ್ಯಕ್ತಿ ಎನ್ನುವುದೂ ಎನ್‌ಡಿಎಯ ಈ ಭಯಕ್ಕೊಂದು ಕಾರಣವಾಗಿತ್ತು. ಉದ್ಧವ್ ಠಾಕ್ರೆ ಅವರು ಬಾಳಾ ಸಾಹೇಬ್ ಠಾಕ್ರೆಯವರ ವೈಚಾರಿಕ ಪರಂಪರೆಯ ಹೆಸರಲ್ಲಿ ಈ ಇತಿಹಾಸವನ್ನು ಮತ್ತೆ ಕಾಣಿಸಿದರೆ..... ಎಂದು ಅಮಿತ್ ಶಾಗೆ ಭಯವಿತ್ತು. ಅಂತೂ ಈಗ ಶಿವಸೇನೆ ಕೋವಿಂದ್ ಅವರನ್ನು ಬೆಂಬಲಿಸಿದೆ.
ಹಾಗಿದ್ದೂ ಶಿವಸೇನೆಗೂ ಇಲ್ಲಿ ಒಳಗಿಂದೊಳಗೇ ಭಯ ಕಾಡಿದೆ. ಒಂದು ವೇಳೆ ರಾಷ್ಟ್ರಪತಿ ಚುನಾವಣೆಯ ನಂತರ ಬಿಜೆಪಿಯು ಆಕ್ರಮಣಕಾರಿ ನಿಲುವು ತಾಳಿದರೆ ತನಗೆ ಇನ್ಯಾವ ಸಂಕಟ ಎದುರಾಗಬಹುದೋ ಎನ್ನುವುದು ಶಿವಸೇನೆಗೂ ಚಿಂತೆಯಾಗಿತ್ತು. ಹೀಗಾಗಿ ರಾಷ್ಟ್ರಪತಿ ಚುನಾವಣೆಯ ಮೊದಲು ಬಿಜೆಪಿ ಜೊತೆ ಸದ್ಯ ಶಿವಸೇನೆಯೂ ಕೂಡಾ ಒಪ್ಪಂದ ಮಾತುಕತೆ ಗಟ್ಟಿಗೊಳಿಸಲು ಇಚ್ಛಿಸಿತ್ತು. ಅಂತೂ ಶಿವಸೇನೆಗೂ ಬಿಜೆಪಿಯಿಂದ ದೂರ ಸರಿಯಲು ಸದ್ಯ ಸಾಧ್ಯವಾಗುತ್ತಿಲ್ಲ.