ಮಂಜೇಶ್ವರದಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ: ಎಂ. ವೀರಪ್ಪ ಮೊಯ್ಲಿ
ಕಾಸರಗೋಡು, ಜೂ. 28: ಮಂಜೇಶ್ವರದಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ ಆಯೋಜಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಹೇಳಿದರು.
ಅವರು ಬುಧವಾರ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಮಂದಿರದಲ್ಲಿ ಕಾಸರಗೋಡು ಜಿಲ್ಲಾ ವಾರ್ತಾ ಇಲಾಖೆ , ಜಿಲ್ಲಾ ವಾಚನ ಪಕ್ಷಾಚಾರಣೆ ವತಿಯಿಂದ ಆಯೋಜಿಸಿದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಹಿತ್ಯೋತ್ಸವದಲ್ಲಿ ದೇಶದ ವಿವಿಧ ಭಾಷೆಗಳ ಸಾಹಿತ್ಯ ಪ್ರತಿಭೆಗಳು ಪಾಲ್ಗೊಳ್ಳುವರು. 23 ಭಾಷಾ ಪ್ರಾವಿಣ್ಯ ಹೊಂದಿದ್ದ ರಾಷ್ಟ್ರ ಕವಿಯವರ ಜನ್ಮ ಸ್ಥಳದಲ್ಲಿ ಬಹು ಭಾಷಾ ಕವಿ ಸಮ್ಮೇಳನ ನಡೆಸುವುದು ಗೋವಿಂದ ಪೈ ಯವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.
ಪ್ರೊ. ಎ. ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಕವಿಗಳಾದ ಡಾ.ಯು. ಮಹೇಶ್ವರಿ, ಬಾಲಕೃಷ್ಣ ಹೊಸಂಗಡಿ, ರಾಧಾಕೃಷ್ಣ ಬೆಳ್ಳೂರು , ವಿಜಯಲಕ್ಷ್ಮಿ ಶ್ಯಾನ್ ಬೋಗ್, ವೆಂಕಟ ಭಟ್ ಎಡನೀರು, ಮಲಯಾಳದಲ್ಲಿ ಎಂ.ಪಿ. ಜಿಲ್ ಜಿಲ್, ರಾಘವನ್ ಬೆಳ್ಳಿಪ್ಪಾಡಿ, ಪ್ರೇಮಚಂದ್ರ, ತುಳುವಿನಲ್ಲಿ ಮಲಾರ್ ಜಯರಾಮ್ ರೈ, ರಾಧಾಕೃಷ್ಣ ಉಳಿಯತ್ತಡ್ಕ , ಕೊಂಕಣಿಯಲ್ಲಿ ಸ್ಟ್ಯಾನಿ ಲೋಬೊ ಕೊಲ್ಲಂಗಾನ ಕವನ ವಾಚಿಸಿದರು. ಉಪ ತಹಶೀಲ್ದಾರ್ ಎ. ದೇವದಾಸ್ , ಗೋವಿಂದ ಪೈ ಸ್ಮಾರಕ ಟ್ರಸ್ಟ್ ಸದಸ್ಯರಾದ ಕೆ . ಆರ್ ಜಯಾನಂದ, ಡಾ.ವಿವೇಕ್ ರೈ, ಸುಭಾಶ್ಚಂದ್ರ, ಬಿ.ವಿ. ಕಕ್ಕಿಲ್ಲಾಯ, ಜಿಲ್ಲಾ ವಾರ್ತಾಧಿಕಾರಿ ಇ.ವಿ. ಸುಗಾತನ್, ಸಹಾಯಕ ವಾರ್ತಾಧಿಕಾರಿ ಎಂ. ಮಧುಸೂದನ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.