ಆನೆಗಳ ನಿಯಂತ್ರಣಕ್ಕೆ ಸೋಲಾರ್ ತಂತಿ ಅಳವಡಿಕೆ: ಎಂ.ಆರ್.ಸೀತಾರಾಂ
ಬೆಂಗಳೂರು, ಜೂ.29: ಆನೆಗಳು ಕಾಡಿನಿಂದ ಜನವಸತಿ ಕಡೆ ಬರುವುದನ್ನು ತಡೆಗಟ್ಟಲು ಅಗತ್ಯ ಮಾರ್ಗಗಳಲ್ಲಿ ಸೋಲಾರ್ ತಂತಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಆನೆಗಳು ಸಾವನ್ನಪ್ಪಿದ್ದು ದುರಾದೃಷ್ಟಕರ. ಕಳೆದ ಕೆಲವು ವರ್ಷಗಳಿಂದ ಆನೆ ಮತ್ತು ಮನುಷ್ಯನ ನಡುವಿನ ಸಂಘರ್ಷ ಹೆಚ್ಚಾಗಿದೆ. ಅದನ್ನು ತಡೆಗಟ್ಟಲು ಅರಣ್ಯ ಇಲಾಖೆ, ಸರಕಾರ ಸಾಕಷ್ಟು ಕ್ರಮ ಕೈಗೊಂಡಿದೆ ಎಂದರು.
ಆನೆ ದಾಳಿಯಿಂದಾಗಿ ನಾಲ್ಕೈದು ಮಂದಿ ಸಾವಿಗೀಡಾಗಿದ್ದಾರೆ. ಹೆಚ್ಚು ಪ್ರಮಾಣದ ವಿದ್ಯುತ್ ಹರಿಯುವ ಎಲೆಕ್ಟ್ರಿಕ್ ತಂತಿ ಬದಲಾಗಿ, ಸೋಲಾರ್ ವಿದ್ಯುತ್ ತಂತಿಯನ್ನು ಆನೆಗಳು ಪ್ರವೇಶಿಸುವ ಮಾರ್ಗಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಸೀತಾರಾಂ ಹೇಳಿದರು.
ಸೋಲಾರ್ ತಂತಿಯನ್ನು ಯಾವ ರೀತಿಯಲ್ಲಿ ಅಳವಡಿಸಬೇಕು. ಅದಕ್ಕೆ ಎಷ್ಟು ಪ್ರಮಾಣದಲ್ಲಿ ಖರ್ಚಾಗುತ್ತದೆ. ಸೇರಿದಂತೆ ಅದರ ಸಾಧಕ ಬಾಧಕಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇನ್ನೊಂದು ತಿಂಗಳಲ್ಲಿ ವರದಿ ಕೈ ಸೇರಲಿದೆ. ಆನಂತರ, ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನ್ನ ಖಾತೆಯನ್ನು ಬದಲಾಯಿಸುವಂತೆ ಮುಖ್ಯಮಂತ್ರಿಗೆ ನಾನು ಯಾವುದೇ ಮನವಿ ಸಲ್ಲಿಸಿಲ್ಲ. ಈಗ ನೀಡಿರುವ ಖಾತೆಯಲ್ಲೆ ತೃಪ್ತಿಯಿದೆ. ಅಗತ್ಯಕ್ಕಿಂತ ಹೆಚ್ಚಾಗಿ ನನ್ನ ಇಲಾಖೆಯಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದು ಸೀತಾರಾಂ ತಿಳಿಸಿದರು.
ನನ್ನ ಒಡೆತನದಲ್ಲಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ನನಗೆ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡದಂತೆ ಮೊದಲೇ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಹೀಗಾಗಿ ಖಾತೆ ಬದಲಾವಣೆ ಬಗ್ಗೆ ನಾನು ಕೇಳಿಲ್ಲ. ಯಾವುದೇ ಖಾತೆ ನೀಡಿದರೂ ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.
ಪೇಜಾವರ ಸ್ವಾಮೀಜಿ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಫ್ತಾರ್‌ಕೂಟ ಆಯೋಜನೆ ಮಾಡಿದ್ದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೃಷ್ಣಮಠದಲ್ಲಿ ಮುಸ್ಲಿಮ್ ಬಾಂಧವರು ನಮಾಝ್ ಮಾಡಿಲ್ಲ. ಹಿಂದೂ ಹಾಗೂ ಮುಸ್ಲಿಮರ ನಡುವೆ ಸಾಮರಸ್ಯ ಏರ್ಪಡಿಸಲು ಊಟದ ಹಾಲ್ ಹಾಲ್‌ನಲ್ಲಿ ಸ್ವಾಮೀಜಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದಾರೆ. ಅದನ್ನು ತಪ್ಪಾಗಿ ನೋಡುವುದು ಸರಿಯಲ್ಲ ಎಂದರು.