ಐಐಎಸ್ಸಿಗೆ ಕೇಂದ್ರ ಸಚಿವ ಜಾವಡೇಕರ್ ಭೇಟಿ
ಬೆಂಗಳೂರು, ಜು.1: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ನಗರದಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಯಲ್ಲಿರುವ ನ್ಯಾನೋ ವಿಜ್ಞಾನ ಹಾಗೂ ಇಂಜಿನಿಯರಿಂಗ್ ಕೇಂದ್ರಕ್ಕೆ ಭೇಟಿ ನೀಡಿದರು.
ಕೇಂದ್ರಲ್ಲಿರುವ ಜಾಗತಿಕ ಮಟ್ಟದ ಸೌಲಭ್ಯಗಳ ಕುರಿತು ವಿಜ್ಞಾನಿಗಳು ಸಚಿವರಿಗೆ ಮಾಹಿತಿ ಒದಗಿಸಿದರು. ಇದೇ ಸಂದರ್ಭದಲ್ಲಿ ಬೋಧಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಪ್ರಕಾಶ್ ಜಾವಡೇಕರ್ ಸಂವಾದ ನಡೆಸಿದರು.
ಯುವಕರಲ್ಲಿನ ಪ್ರತಿಭೆಗೆ ಪ್ರೋತ್ಸಾಹಿಸಲು ಕೇಂದ್ರ ಸರಕಾರವು ದೇಶಾದ್ಯಂತ ಜಾಗತಿಕ ಮಟ್ಟದ 20 ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಸಂಶೋಧನೆ ಹಾಗೂ ಆವಿಷ್ಕಾರಗಳ ಮೂಲಕ ನಾವು ಸ್ಥಿರತೆಯನ್ನು ಸಾಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆಯಂತಹ ಶಿಕ್ಷಣ ಸಂಸ್ಥೆಗಳು ಯಾವುದೇ ಕಾರಣಕ್ಕೂ ಆರ್ಥಿಕ ಸಂಕಷ್ಟವನ್ನು ಎದುರಿಸದಂತೆ ಸರಕಾರ ಗಮನ ಹರಿಸಲಿದೆ. ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ಸೇರಿಗೆ ಜಾರಿಯಿಂದಾಗಿ ಆರೋಗ್ಯ, ಶಿಕ್ಷಣ, ಸಂಶೋಧನೆ ಹಾಗೂ ಆವಿಷ್ಕಾರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಅನುರಾಗ್ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.