ಪರಂಗೋರಿಯ ಸುತ್ತಮುತ್ತ ಸಾವಿನ ಜಿಜ್ಞಾಸೆ
ಒಂದು ಸ್ವಗತ ಲಹರಿ
ಶ್ರೀರಂಗಪಟ್ಟಣದಲ್ಲಿರುವ ಯೂರೋಪಿಯನ್ನರ ಗೋರಿಗಳು
ವಾಯುವಿಹಾರ, ತಿರುಗಾಟಗಳು ಸದ್ಯಕ್ಕೆ ನಾನು ಹೇಳ ಬೇಕೆಂದಿರುವ ವಿಷಯವಲ್ಲ. ಆದರೂ ಅದನ್ನು ಬಿಟ್ಟು ಮುಂದುವರಿಯುವ ಹಾಗೂ ಇಲ್ಲ. ನಾ ಕಂಡ ನೋಟಗಳು, ನಾ ಕೇಳಿದ ಮಾತುಗಳು, ಎಲ್ಲ ಅನುಭವಗಳು ನನಗೆ ದಕ್ಕಿದ್ದು ಈ ತಿರುಗಾಟಗಳ ಹಾದಿಯಲ್ಲೇ.
ದಿನಾ ಬೆಳಗ್ಗೆ, ಸಂಜೆ ಹವಾ ಸೇವನೆಗಾಗಿಯೇ ಆರೋಗ್ಯಕ್ಕಾಗಿಯೇ ಓಡಾಡುವವರನ್ನು ನೋಡಿದ್ದೀರಿ. ನಾನು ಸಂಜೆ ಸಂಚಾರದವಳು. ಒಮ್ಮಾಮ್ಮೆ ಉರಿಬಿಸಿಲಿನಲ್ಲಿ ಅಲೆದಾಡುವವಳೂ ಆಗುತ್ತೇನೆ. ಆರೋ ಗ್ಯದ ನೆಪದ ಸಂಜೆಯ ತಿರುಗಾಟಕ್ಕೆ ಹಲವಾರು ದಾರಿಗಳನ್ನು ಹುಡುಕಿ ಕೊಂಡಿದ್ದರೂ, ಊರೆಲ್ಲಾ ಸುತ್ತುವ ಕುದುರೆ ಸಂಜೆಯಾಗುತ್ತಿದ್ದಂತೆ ತನ್ನ ಜಟಕಾವನ್ನೇ ತನ್ನ ಮಾಮೂಲಿ ಓಣಿಯ ಕಡೆಗೆ ಎಳೆಯುವಂತೆ, ಅಪ್ರಯತ್ನ ಪೂರ್ವಕವಾಗಿ ನನ್ನ ಕಾಲುಗಳು ಹಿಡಿಯುವುದು ಗಂಗೋತ್ರಿಯ ದಾರಿಯನ್ನೇ.
ಗಂಗೋತ್ರಿಯ ವಿಶಾಲ ಮೈದಾನದ ಗಿಡಮರಗಳ ಮಧ್ಯೆ ತಂಗಾಳಿಗೆ ಮೈಯೊಡ್ಡಿ ನಡೆದಾಡುವುದು ಒಂದು ತೆರನಾದ ಆಕರ್ಷಣೆ. ವಿರಳವಾಗಿ ಹೂ ಮರಗಳನ್ನು ನೆಟ್ಟ ಮೈದಾನದಲ್ಲಿ ಓಡಾಡಿ ಯಾವ ಮರ ಹೂ ಬಿಟ್ಟಿದೆ. ಯಾವುದು ಚಿಗುರಿದೆ ಇದನ್ನೆಲ್ಲಾ ಸಮೀಕ್ಷೆ ಮಾಡುವುದು. ಶ್ರಾವಣದಲ್ಲಿ ಅಲ್ಲಲ್ಲಿ ಕಂಡುಬರುವ ಹೆಸರರಿಯದ ವನ್ಯ ಹೂಗಳನ್ನು ಗಮನಿಸುವುದು ನನ್ನ ನೆಚ್ಚಿನ ಹವ್ಯಾಸ.
ಹೀಗೊಂದು ದಿನ ಈ ಗೀಳಿನ ದೆಸೆಯಿಂದಾಗಿ ಗಂಗೋತ್ರಿಯ ದಾರಿ ಹಿಡಿದೆ. ಪಶ್ಚಿಮದಿಂದ ಪೂರ್ವಕ್ಕೆ ಕೊಂಚ ಇಳಿಜಾರಾಗಿರುವ ಮೈದಾನ ದ ಅಂಚಿಗೆ ಬಂದರೆ... ಅಯ್ಯೋ! ಮುಳ್ಳು ಬೇಲಿ ಎದುರಾಯಿತು.
ನಾನು ಬಹುವಾಗಿ ಇಷ್ಟಪಡುತ್ತಿದ್ದ ಅತ್ತಿಮರ, ವರ್ಷಕ್ಕೊಮ್ಮೆ ಮರದ ತುಂಬಾ ಹಳದಿ ಹೂ ತಳೆಯುತ್ತಿದ್ದ ಅರಿಶಿನ ಬೂರಗದ ಮರ ವಿದ್ದ ದಾರಿಗೆ ಮುಳ್ಳು ಬಡಿದಿತ್ತು. ಗಂಗೋತ್ರಿಯ ವಿದ್ಯಾರ್ಥಿ ಗಳು, ಪಥಿಕರ ಸಂಚಾರದ ಮಾರ್ಗದ ಸುತ್ತಲೂ ಬೇಲಿ ಹಾಕಿ ಒಳಗೆ ಗಿಡಗಳನ್ನು ನೆಟ್ಟಿದ್ದಾರೆ.
ಇದುವರೆಗೆ ಅನಿರ್ಬಂಧಿತವಾಗಿದ್ದ ವಾತಾವರಣಕ್ಕೆ ಯಾವುದೋಖಾಸಗಿತನದ ಕಳೆ ಬಂದಿತ್ತು. ಇನ್ನೇನು ಮಾಡುವುದು ಹುಲ್ಲುಹಸಿರಿನ ಮಧ್ಯೆ ಸುತ್ತಿ ಬಳಸಿ, ಒಂದೊಂದು ಸಲ ನೆಟ್ಟಗೆ ಹರಿವ ಕಾಲುದಾರಿ ಕೊಂಡೊಯ್ದಲ್ಲಿಗೆ ಹೋಗುವುದೆಂದು ನಿರ್ಧರಿಸಿ, ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲಾ ನೋಡುತ್ತ ನಿಂತೆ. ಆರಿಜೋನಾ ಮರುಭೂಮಿಯ ಸಗು ವಾರೋ ಕಳ್ಳಿಯ ನೆನಪಾಯಿತು. ಅಬ್ಬಬ್ಬಾ ದೊಡ್ಡ ಸೂಜಿಗಳಂತಿರುವ ಮುಳ್ಳುಗಳಿಂದ ತುಂಬಿದ ಈ ರಾಕ್ಷಸಕಳ್ಳಿಯ ಒಂದೊಂದು ಬಾಹು ವೂ 6-7 ಅಡಿ ಉದ್ದವಿರಬೇಕು. ಕಳ್ಳಿಗೇನಾದರೂ ಚಲನೆ ಬಂದು ಅದು ತನ್ನ ಕಬಂಧ ಬಾಹುಗಳಿಂದ ನನ್ನನ್ನು ಅಪ್ಪಿದರೆ...!
ಮೈಜುಮ್ಮೆನ್ನಿಸಿ ಅಲ್ಲಿಂದ ಮುಂದುವರಿದಾಗ ಅಲ್ಲೊಂದು ಕಡೆ ಹಚ್ಚಹಸಿರು ಹುಲ್ಲಿನ ರತ್ನಗಂಬಳಿಯಿಂದ ಏಳೆಂಟು ಮೈಲಿಕಲ್ಲು ಗಳಂತಹ ಕಲ್ಲುಗಳು ಎದ್ದು ನಿಂತಿದ್ದವು. ಹೀಗೆ ಸಾಲಾಗಿ ಕಲ್ಲುಗಳನ್ನು ಏತಕ್ಕಾಗಿ ನೆಟ್ಟಿರಬಹುದು ಎಂದು ಚಕಿತಳಾಗಿ ಹತ್ತಿರ ಹೋಗಿ ಗಮನಿ ಸಿದೆ. ಆ ಕಲ್ಲುಗಳ ಮೇಲೆ ಕೋಕಿ, ಮಿಕಿ, ಮಿಮಿ, ಫಿಫಿ ಎಂದು ಇಂಗ್ಲಿಷಿ ನಲ್ಲಿ ಬರೆದಿತ್ತು. ಯಾರೀ ಕೋಕಿ ಎಂದು ಅಚ್ಚರಿಗೊಳ್ಳುತ್ತ ಕೊನೆಕಲ್ಲಿನ ಕಡೆ ನೋಟ ಹರಿಸಿದೆ. ಅಲ್ಲಿ ಬರೆದಿತ್ತು ಡಾಗ್ ಅಲೆಗ್ಸಾಂಡರ್ 1943 ಎಂದು. ಆಗ ಹೊಳೆಯಿತು. ಇವೆಲ್ಲಾ ಸ್ವಾತಂತ್ರಪೂರ್ವದಲ್ಲಿ ಯಾರೋ ತಾವು ಸಾಕಿದ್ದ ನಾಯಿಗಳಿಗೆ ಪ್ರೀತಿಯಿಂದ ಮಾಡಿದ್ದ ಸಮಾಧಿಗಳು. ನಾಯಿಗಳು, ಅವುಗಳ ಮಾಲಕರು ಇಂದು ಅಜ್ಞಾತರು.ಅದ್ಹೇಗೋ ಸಮಾಧಿ ಕಲ್ಲುಗಳು ಇನ್ನೂ ಉಳಿದುಕೊಂಡಿವೆಯಲ್ಲಾ, ಇದೇನಿದು ಸಂಜೆ ಸಂಚಾರಕ್ಕೆಂದು ಹೊರಡಲಿ ಅಥವಾ ಉರಿಬಿಸಿಲಿನ ಮಧ್ಯಾಹ್ನದ ಓಡಾಟವಾಗಲಿ ಸಮಾಧಿಯ ಕಲ್ಲುಗಳು ಸಿಕ್ಕೇಸಿಗುವುವಲ್ಲಾ ಎಂದು ಅಚ್ಚರಿಗೊಂಡೆ.
ಹೊಳೆಸಾಲಿನ ಗದ್ದೆ ಬಯಲಿನಲ್ಲಿ ಕಾರ್ಯನಿಮಿತ್ತವಾಗಿ ಓಡಾ ಡಬೇಕಾದ ನನಗೆ ಚೆಂದದ ಗಿಡಮರಗಳು ಕಣ್ಣಿಗೆ ಬಿದ್ದರೆ ನನ್ನ ಓಡಾಟ ಅಲ್ಲಿಗೂ ವಿಸ್ತರಿಸುವುದು. ಹೀಗಾಗಿ ಕೆಲವು ವೇಳೆ ಹೊಳೆ ಪಕ್ಕದ ಸ್ಮಶಾನಕ್ಕೂ ನುಗ್ಗುವುದೂ ಉಂಟು. ಹೊಳೆ ಅಂಚಿನಲ್ಲಿ ಹೂಮಳೆ ಕರೆಯುತ್ತಿರುವ ಹೊಂಗೆ ಮರಗಳ ತಳದಲ್ಲಿ ಅಡ್ಡಾಡುತ್ತ ಬಂದರೆ ಅಲ್ಲಿ ಹೆಮ್ಮರಗಳ ನಡುವೆ ಹಳೆರಾಗಿ, ಹುಳಿ ಮಜ್ಜಿಗೆ ತರಲು ಹೋಗಿ ಹಿಂದಿರುಗದವರು ಮಲಗಿದ್ದಾರೆ. ಸಮಾಧಿಗಳು ಬರಿ ಇಟ್ಟಿಗೆ, ಕಲ್ಲು, ಗಾರೆಗಳ ರಚನೆಗಳು ಮಾತ್ರ. ಅವೆಂದೂ ದೆವ್ವ ಭೂತಗಳಾಗಿ ಬೆದರಿಸಲಿಲ್ಲ. ವಾಹನಗಳ ಗಲಾಟೆ ಗಡಿಬಿಡಿಗಳ ಮಧ್ಯೆ ತಲೆಚಿಟ್ಟು ಹಿಡಿಸಿಕೊಂಡು ಬರುವ ನನಗೆ ಸಮಾಧಿಗಳ ಮಧ್ಯದ ಮೌನ, ಮರಗಳ ತಂಪು ಒಂದು ತರದ ನೆಮ್ಮದಿಯ ತಾಣ.
ಹೊಳೆಯೂರಿನ ಹೆದ್ದಾರಿಯ ಪಕ್ಕದಲ್ಲಿರುವ ಪರಂಗೋರಿ ಎಂದು ಕರೆಸಿಕೊಳ್ಳುವ ಈ ಸ್ಮಶಾನದ ಅಂಚಿನಲ್ಲಿ ಕಾವೇರಿ ಹರಿಯುತ್ತಿದ್ದಾಳೆ. ಶ್ರೀರಂಗಪಟ್ಟಣದ ಪತನದ ನಂತರ ಇಲ್ಲಿ ನೆಲೆಯೂರಿದ ಬ್ರಿಟಿಷ್ ಸೈನ್ಯಾಧಿಕಾರಿಗಳು ಮತ್ತವರ ಸಂಸಾರಗಳು ಪರಂಗೋರಿಯ ಆವರಣದಲ್ಲಿ ಸಮಾಧಿಸ್ಥರಾಗಿದ್ದಾರೆ.
ಅಲೆದಾಡುವ ಪ್ರವೃತ್ತಿಯ ದೆಸೆಯಿಂದ ಇಲ್ಲಿಗೆ ಆಗಾಗ್ಗೆ ಭೇಟಿ ಕೊಡುವ ನಾನು ಎಂದಿನಂತೆ ಒಂದು ದಿನ ಇತ್ತ ಹಾಯ್ದೆಗ, ಮಧ್ಯಾಹ್ನದ ನೀರವತೆಯಲ್ಲಿ ಗೋರಿಗಳ ಸುತ್ತಲಿನ ಸೀಬೆಗಿಡಗಳು ಎಲೆಗಳನ್ನು ಅಲ್ಲಾಡಿಸದೆ ಸುಮ್ಮನೆ ಚಿತ್ತವತ್ತಾಗಿ ನಿಂತಿವೆ. ಬಿಸಿಲಿನ ಝಳಕ್ಕೆ ಹಕ್ಕಿಗಳ ದನಿಯೂ ಎಲೆಗಳ ಮಧ್ಯೆ ಅಡಗಿ ಹೋಗಿರುವಾಗ ನದಿ ಮಾತ್ರ ನನ್ನ ಕೆಲಸ ನಿಲ್ಲಿಸಲಾರೆ ಎಂಬಂತೆ ಝಳಝಳ ಹರಿಯುತ್ತಿದೆ. ಆಗೀಗ ನದಿಯಲ್ಲಿ ಬಟ್ಟೆ ಒಗೆಯುವವರ ಎತ್ತಿ ಬಡಿಯುವ ಸದ್ದು ಮಧ್ಯಾಹ್ನದ ಮೌನಕ್ಕೆ ಪೆಟ್ಟುಕೊಡುತ್ತಿದೆ. ಅಲ್ಲಾಡದೆ ಮಲಗಿರುವವರ ಗೋರಿಗಳ ಮಧ್ಯೆ ಸುಳಿದಾಡುತ್ತೇನೆ.
ನೂರಾರು ವರ್ಷಗಳ ಮಳೆ ಬಿಸಿಲುಗಳ ಹೊಡೆತಕ್ಕೆ ಸಿಕ್ಕಿದ್ದರೂ ಗೋರಿ ಗಳ ಮೇಲಿನ ಬರಹಗಳು ಅಚ್ಚಳಿಯದೆ ಸ್ಪಷ್ಟವಾಗಿಯೇ ಕಾಣುತ್ತಿದೆ. ಈ ಬರಹಗಳನ್ನು ಓದಿದಾಗ ಮನ ಮರುಗುತ್ತದೆ.
ಹಾಗೆಯೇ ಯೋಚಿಸತೊಡಗುತ್ತೇನೆ.
ಇಲ್ಲಿ ಸಮಾಧಿಯಾಗಿರುವವರೆಲ್ಲಾ ಏಕೆ ಹೀಗೆ ದೇಶಾಂತರ ಬಂದು ಪರದೇಶಿಗಳಾಗಿ ಮಲಗಿದ್ದಾರೆ? ಅವರಿಗಾಗಿ ಅಳುವವರಿಲ್ಲ; ನಮ್ಮ ಹಿರಿಯರ ಸಮಾಧಿ ಎಂದು ಗುರುತಿಸುವವರಿಲ್ಲ; ಪುಷ್ಪಗುಚ್ಛವಂತೂ ಇಲ್ಲವೇ ಇಲ್ಲ. ವಿಚಿತ್ರವೆಂದರೆ ಮಕ್ಕಳೇ ಇಲ್ಲಿ ಹೆಚ್ಚಿಗೆ ಮಲಗಿದ್ದಾರೆ. ಅಣ್ಣ ತಮ್ಮಂದಿರ ಜಂಟಿ ಗೋರಿ; ಪುಟ್ಟ ಹುಡುಗನಿಗೊಂದು ಚರಮಗೀತೆ-
‘‘ಸ್ವರ್ಗದಲ್ಲಿ ಅರಳುವ ಚೆಲುವಿನ ಹೂವೊಂದು ಚಣಕಾಲ ಮರ್ತ್ಯದಲ್ಲಿ ಮುಖ ತೋರಿತ್ತು!’’
ಮಕ್ಕಳು ಮನವನ್ನು ಕಲಕುತ್ತಾರೆ.
ಈ ಪರಿಸರವನ್ನು ನೋಡಿದಾಗ ನನಗೆ ಅನ್ನಿಸುತ್ತದೆ. ಈ ವಾತಾ ವರಣ ಕ್ಕೊಂದು ಸುಪ್ತಪ್ರಜ್ಞೆ ಇರುವುದಾದರೆ ಅದೆಷ್ಟು ಕರುಳು ಮಿಡಿಯುವ ಘಟನೆಗಳಿಗೆ ಆ ಪ್ರಜ್ಞೆ ಮೂಕಸಾಕ್ಷಿಯಾಗಿ ರಬೇಕು; ಸಂಕಟದಲ್ಲಿ ಮುಳುಗಿದ ತಾಯಿ ತನ್ನ ಕಂದನನ್ನು ತಂದು ಇಲ್ಲಿ ಮಲಗಿಸುವುದನ್ನು ಈ ಪರಿಸರದ ಅಂತಃಚಕ್ಷು ಕಂಡಿರಬೇಕು. ಹಸುಳೆಗಳ ಜತೆ ಇಲ್ಲಿ ಮಲಗಿ ರುವ ಹಿರಿಯರ ಬಗ್ಗೆ ನನ್ನ ತಕ ರಾರಿಲ್ಲ. ಅವರು ಸೂರ್ಯೋ ದಯ ಸೂರ್ಯಾಸ್ತಗಳ ನಡುವೆ ಇಂದು ನನ್ನ ಮುಖವನ್ನು ತೀಡುತ್ತಿರುವ ತಂಗಾಳಿಯನ್ನು ಅವರೂ ಅನುಭವಿಸಿದ್ದಾರೆ. ನಕ್ಕಿದ್ದಾರೆ. ದುಃಖ, ದುಮ್ಮಾನಗಳ ನಿಟ್ಟುಸಿರು ಬಿಟ್ಟಿದ್ದಾರೆ. ಅವರು ಹರಿಸಿದ ಬೆವರು ಇಲ್ಲಿನ ಗಾಳಿಯೊಡನೆ ಬೆರೆತುಹೋಗಿದೆ.
ಆದರೆ ತಪ್ಪು ಹೆಜ್ಜೆ ಇಟ್ಟು ಬಿದ್ದು ಏಳದ, ಇಂದು ನಾನು ಕುಳಿ ತಿರುವಂತೆ ಹೊಳೆ ಅಂಚಿನ ಬಂಡೆಯ ಮೇಲೆ ಕುಳಿತು ಬಂಡೆ ಗಳ ಸಂದಿಯ ತೆಳು ನೀರಿ ನಲ್ಲಾಡುವ ಮೀನುಗಳನ್ನು ಕಣ್ಣುರೆಪ್ಪೆ ಹೊಯ್ಯದೆ ನೋಡಿ ಬೆರಗಾಗದ ಮುಗ್ಧ ಮಕ್ಕಳ ಸಲುವಾಗಿ ನನ್ನೆದೆ ಯಾಳದ ತೀವ್ರ ವಿಷಾದವಿದೆ.
ಬಾಳದೆ ಹೋದ ಎಳೆಯರಿಗಾಗಿ ಮರು ಗುವಾಗ ನೆನಪಿಗೆ ಬರುತ್ತದೆ. ವರ್ಡ್ಸ್ವರ್ತ್ ಕವಿಯ ‘‘ವಿ ಆರ್ ಸೆವೆನ್’’ ಎಂಬ ಕವಿತೆ. ಒಬ್ಬ ಪುಟ್ಟ ಹುಡುಗಿ ತನ್ನ ಅಣ್ಣ ಮತ್ತು ಅಕ್ಕನ ಸಮಾಧಿಯ ಹತ್ತಿರವೇ ವಾಸಿಸುತ್ತಿರುತ್ತಾಳೆ. ಅವಳು ಕವಿಗೆ ಹೇಳುತ್ತಾಳೆ. ‘ನಾವು ಏಳು ಜನ ಒಡಹುಟ್ಟಿದವರು. ಅವರಲ್ಲಿ ಇಬ್ಬರು ಇಲ್ಲಿ ಮಲಗಿದ್ದಾರೆ. ನಾನು ಅವರ ಹತ್ತಿರವೇ ಕುಳಿತು ಅವರಿಗಾಗಿ ಹಾಡುವೆ, ಕಸೂತಿ ಹಾಕುವೆ.’ ಕವಿ ಕೇಳುತ್ತಾನೆ ‘‘ನಾವು ಏಳು ಜನ ಅನ್ನುವೆ. ಅವರಿಬ್ಬರು ಇಲ್ಲವಲ್ಲಾ, ನೀವು ಐವರೇ ಅಲ್ಲವೆ?’’ ಹುಡುಗಿ ಹೇಳುತ್ತಾಳೆ, ‘‘ಇಲ್ಲ ಇಲ್ಲಾ ನಾವು ಏಳು ಜನ, ಅದರಲ್ಲಿ ಇಬ್ಬರು ಇಲ್ಲಿ ಮಲಗಿದ್ದಾರೆ ಅಷ್ಟೆ.’’
ಮೃತರಾಗಿರುವ ಅಣ್ಣ ಅಕ್ಕಂದಿರನ್ನು ಹುಡುಗಿ ಲೆಕ್ಕದಿಂದ ತೆಗೆದು ಹಾಕಿಲ್ಲ. ಅವರು ದೀರ್ಘ ವಿಶ್ರಾಂತಿಗಾಗಿ ಮಲಗಿದ್ದಾರೆ. ಪುಟ್ಟ ತಂಗಿಯ ದೈನಂದಿನ ಕ್ರಿಯೆಗಳಲ್ಲಿ ಸತ್ತ ಒಡಹುಟ್ಟು ಮರುಹುಟ್ಟು ಪಡೆಯುತ್ತದೆ.
ಸಾವಿನ ಬಗ್ಗೆ ಆಲೋಚನೆಗಳು ಅದೇಕೆ ಹೀಗೆ ಮರುಕಳಿಸುತ್ತಿವೆ? ಬಹುಶಃ ಚಿಕ್ಕಂದಿನಲ್ಲಿ ಕಂಡ ಅನೇಕ ಸಾವುಗಳ ನೆರಳು ಹೀಗೆ ಬೆನ್ನು ಹತ್ತಿ ಕಾಡುತ್ತಿರಬಹುದೇ?
ಕಾಲೇಜಿನಲ್ಲಿ ನಮ್ಮ ಮೇಷ್ಟ್ರು ಹೇಳುತ್ತಿದ್ದರು -‘‘ನಾನು ಹೆದರುವುದಾದರೆ ಅದು ಮುದಿತನದ ಬಗ್ಗೆ ಮಾತ್ರ’’.
ನಮ್ಮನ್ನು ನಾವು ರಮ್ಯ ಕಥಾನಾಯಕಿಯರನ್ನಾಗಿ ಊಹಿಸಿಕೊಳ್ಳು ತ್ತಿದ್ದ ನಾವು ಹುಡುಗಿಯರು ‘ಇವರಿಗೆ ಹೇಳಲು ಬೇರೆ ವಿಷಯವೇ ಇಲ್ಲವೇನೋ’ ಎಂದು ಗೊಣಗಿಕೊಳ್ಳುತ್ತಿದ್ದೆವು. ಕಾಲ ಸರಿದಂತೆ ಮುಪ್ಪಿ ನ ಜತೆ ರೋಗ, ಸಾವುಗಳ ಅವ್ಯಕ್ತ ಭೀತಿ, ಅಳುಕನ್ನು ಹುಟ್ಟಿಸುತ್ತಿವೆ. ಸಾವು ಅದೆಂತಹ ನಿಶ್ಚಿತ ಸತ್ಯ; ಅದೆಷ್ಟು ನಿರೀಕ್ಷಿತವೋ ಅಷ್ಟೇ ಅನಿರೀಕ್ಷಿತವೂ ಹೌದು. ಮುಪ್ಪು, ಸಾವುಗಳೆಲ್ಲಾ ಎಲ್ಲೋ ಬಹುದೂರ ದಲ್ಲಿವೆ. ಅವು ಸಂಭವಿಸುವುದು ಯಾರೋ ಬೇರೆಯವರ ಮಟ್ಟಿಗೆ ಎಂದು ತಿಳಿದಿದ್ದೆ. ಅರಿವೇ ಆಗದಂತೆ ಕಾಲ ಕಳೆದು ಅವು ಬಳಿ ಸಾರುತ್ತಿವೆ ಯಲ್ಲಾ! ಒಂದು ಚೈತನ್ಯಶೀಲ ದೇಹ, ಮನಸ್ಸುಗಳನ್ನು ನಿಷಕ್ರೆಿಯಗೊ ಳಿಸಿ ತ್ಯಾಜ್ಯವಸ್ತುವನ್ನಾಗಿ ಮಾಡುವ ಕ್ರೂರದಂಡವಲ್ಲವೇ ಮೃತ್ಯು? ಕರೆಯದೆ ಬರುವ ಆಗಂತುಕನಿಗೆ ಕದ ತೆರೆಯಲೇಬೇಕು.
ಕೆಲವು ವರ್ಷಗಳ ಹಿಂದೆ ನನ್ನ ಅತ್ಯಂತ ಪ್ರೀತಿಯ ಜೀವವೊಂದು ಕೊನೆಗೊಂಡಿತು. ಕೊನೆ ಬಾರಿ ನೋಡಲಿಕ್ಕೆಂದು ಹೋದಾಗ ನನ್ನನ್ನು ಅಷ್ಟು ಪ್ರೀತಿಯಿಂದ ಕಾಣುತ್ತಿದ್ದ ವ್ಯಕ್ತಿ ಒಂದಿಷ್ಟು ಬೂದಿ ಮೂಳೆಗಳಾಗಿ ಒಂದು ಮಡಿಕೆಯೊಳಗಿತ್ತು. ಪೆಚ್ಚಾಯಿತು ಮನಸ್ಸು. ನಾನು ಅತ್ಯಂತ ಆತ್ಮೀಯವಾಗಿ ಪ್ರೀತಿಸಿದ ಜೀವ ಈಗ ಬರೀ ಬೂದಿ ಎಂಬುದನ್ನು ಹೇಗೆ ನಂಬಲಿ? ಬೂದಿಯನ್ನು ಮಂತ್ರೋಕ್ತವಾಗಿ ನೀರಿಗೆ ಹಾಕಿದರೆ ಸತ್ತವ್ಯಕ್ತಿಗೆ ಸದ್ಗತಿ ಕಾಣುವುದೇ? ವಿಚಿತ್ರವಾಯ್ತು ನನ್ನ ಭಾವನೆಗಳು. ಬೂದಿ ನೀರಿನಲ್ಲಿ ಕರಗಿ ಮಣ್ಣಾಗುತ್ತದೆ. ಮೂಳೆ ನೀರಿನ ಹೊಡೆತಕ್ಕೆ ಸಿಕ್ಕೆ ಸವೆಯುತ್ತಾ ಬರುತ್ತದೆ. ಹಾಗೆಯೇ ಮೃತರಾದವರು ಬದುಕಿರುವವರ ನೆನಪಿನಿಂದ ಅಳಿಸಿಹೋಗುತ್ತಾರೆ.
ಅಗಲಿದ ಪ್ರಿಯರನ್ನು ನೆನೆಯುವ ಸಾರ್ಥಕ ಮಾರ್ಗ ಯಾವುದು?ಬಾಂಬೆ ಹತ್ತಿರದ ಹಳ್ಳಿಯೊಂದರಲ್ಲಿ ಸ್ಮತಿವನವೊಂದರ ಉದ್ಘಾಟನೆ ಆಯಿತು. ಇಲ್ಲಿ ಅಗಲಿದ ಆತ್ಮೀಯರ ನೆನಪಿಗಾಗಿ ಎಕರೆಗಟ್ಟಲೆ ಗಿಡಗಳ ನ್ನು ನೆಟ್ಟು ವನಮಹೋತ್ಸವವನ್ನು ನಿಜವಾದ ಅರ್ಥದಲ್ಲಿ ಆಚರಿಸಿ ದ್ದಾರೆ. ಸತ್ತವರಿಗಾಗಿ ಪರಂಪರಾನುಗತವಾಗಿ ನಡೆಸುತ್ತಿರುವ ಶ್ರಾದ್ಧ ತಿಥಿಗಳಿಗೆ ಬದಲಾಗಿ ಜೀವಂತ ಸಸ್ಯಗಳನ್ನು ನೆಟ್ಟು ಹೊಸ ಜೀವನವನ್ನು ಚಿಗುರಿಸುವ ಈ ರೀತಿಯ ಕಾರ್ಯ ಅರ್ಥಪೂರ್ಣವಲ್ಲವೇ? ಮತ್ತು ವಿಶ್ವದಲ್ಲಿ ಮಾನವ ಜನಾಂಗಕ್ಕಿರುವ ಒಂದೇ ಮನೆಯಾದ ಭೂಮಿ ಯನ್ನು ಮರ ನೆಟ್ಟು ಸ್ವಚ್ಛವಾಗಿಡುವ ಕಾರ್ಯ ಅತ್ಯಂತ ಯೋಗ್ಯಕಾರ್ಯ ವೂ ಹೌದು. ಹಾಗೆಯೇ ಶ್ರೇಷ್ಠ ಗುಣಗಳಿಂದ ಮೆರೆದು ಮರೆಯಾದ ವರು ಬಿಟ್ಟುಹೋದ ಸಾರ್ಥಕ ಕೃತಿಗಳು ನಮ್ಮಲ್ಲಿವೆಯೇ? ಏಕೆ ? ನೆನಪಾಗುತ್ತಿಲ್ಲವೆ ಸಾವಿರಾರು ಕೊಳವೆ ಬಾವಿಗಳು?
...ನಝೀರ್ ಸಾಬ್ !
ಬುದ್ಧ ಕಿಸಾ ಗೌತಮಿಗೆ ಹೇಳಿದಂತೆ ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಅಸಾಧ್ಯವಾದರೂ ಸಾವು ತನ್ನ ಹಿಂದೆ ಅರ್ಥಪೂರ್ಣ ನೆನಪುಗಳನ್ನು ಬಿಟ್ಟುಹೋಗಬಲ್ಲುದು.
ಯೋಚಿಸುತ್ತಾ ಎದೆ ಭಾರವಾಗಿ ನಿಟ್ಟುಸಿರು ಹೊರಹಾಕುತ್ತೇನೆ. ಮುಳುಗುತ್ತಿರುವ ಹೊತ್ತಿನ ಪರಿವೆ ಇಲ್ಲದೆ ನದಿಯು ಹರಿಯುತ್ತಾ ಇದೆ. ಹೊಳೆ ಮಧ್ಯದ ಬಂಡೆಗಳ ಮೇಲೆ ಧ್ಯಾನಸ್ಥರಂತೆ ನಿಂತಿರುವ ಬಕಗಳಿಗೆ ಸಾವು ಖಂಡಿತ ಜಿಜ್ಞಾಸೆಯ ವಸ್ತುವಾಗಿಲ್ಲ. ಸದ್ಯಕ್ಕೆ ಅವಕ್ಕೆ ಗೊತ್ತಿರುವುದು ಬದುಕಿರುವುದೊಂದೇ. ಚಿಟ್ಟೆಗಳು ಗಿಲಕಿಗಿಡದ ತುಂಬಾ ಮುತ್ತಿಕೊಂಡು ರೆಕ್ಕೆ ಮುಚ್ಚಿವೆ. ಇಳಿ ಸೂರ್ಯ ಭತ್ತದ ಗದ್ದೆ ಮರಗಳಿಗೆ ಹೊಂಬಣ್ಣ ಬಳಿದು ಪಶ್ಚಿಮದ ಮನೆಗೆ ಹೋಗಲು ಅಣಿಯಾಗುತ್ತಿದ್ದಾನೆ. ಇಂತಹ ಮೋಹಕ ವಾತಾವರಣದ ಪೃಥ್ವಿಯನ್ನು ಬಿಟ್ಟು ಕಾಣದ ತಾವಿಗೆ ತೆರಳುವುದು ಎಲ್ಲರಿಗೂ ಎಷ್ಟು ಅನಿವಾರ್ಯವಾದ ಸತ್ಯ.