ಕಮೆಂಟರಿ
ಲಾಸ್ ವೆಗಾಸ್-ಹಾಂಗ್‌ಕಾಂಗ್‌ನ ಜೂಜಿನ ಲೋಕ
ಜೂಜು ಒಂದರ್ಥದಲ್ಲಿ ಕ್ರೀಡೆಯೆ. ಆದರೆ ಅಪಾಯಕಾರಿ ಕ್ರೀಡೆ ಅದು.
ಜೂಜಾಡಿ ರಾಜ್ಯಗಳನ್ನು ಕಳೆದುಕೊಂಡವರು, ಹೆಂಡತಿ-ಮಕ್ಕಳನ್ನು ಅಡವಿಟ್ಟವರು, ಆಸ್ತಿಗಳನ್ನೇ ಕರಗಿಸಿದವರ ಕತೆ-ಪುರಾಣಗಳೆಲ್ಲಾ ನಮಗೆ ಗೊತ್ತು. ಆದರೆ ಜೂಜುಕೋರರು ಇದನ್ನೆಲ್ಲಾ ಲೆಕ್ಕಿಸುವುದಿಲ್ಲ.
ಜೂಜಿನಲ್ಲಿ ಗೆದ್ದವರು ಅಖಾಡ ಬಿಟ್ಟು ಹೊರಡುವುದಿಲ್ಲ. ಇನ್ನು ಸೋತು ಬರಿಗೈಯಾಗಿ ಹೊರಹಾಕಲ್ಪಟ್ಟವರು ತಾನೆ ಏನು? ಮರುಗಳಿಗೆಯಲ್ಲೇ ಹಾಜರಿರುತ್ತಾರೆ.
ಜೂಜಾಟವನ್ನು ಪಾಪದ ಕೆಲಸ, ತಪ್ಪುಎನ್ನುವವರನ್ನು ಕೆಲಕಾಲ ಮರೆತು ಆಧುನಿಕ ಸಮಾಜ ನಿರ್ಮಿಸಿಕೊಂಡಿರುವ ಜಗತ್ತಿನ ಮಹಾನ್ ಜೂಜು ಕೇಂದ್ರಗಳತ್ತ ಒಮ್ಮೆ ನೋಡಿ ಬರೋಣ ಬನ್ನಿ.
ಒಂದು ಲಾಸ್ ವೆಗಾಸ್ ಆದರೆ ಇನ್ನೊಂದು ಹಾಂಗ್‌ಕಾಂಗ್ !
ಮಜಾ ಅಂದರೆ ಲಾಸ್ ವೆೆಗಾಸ್ ಬಂಡವಾಳಶಾಹಿ ಅಮೆರಿಕದಲ್ಲಿದ್ದರೆ ಹಾಂಗ್‌ಕಾಂಗ್ ಕಮ್ಯುನಿಸ್ಟ್ ಚೀನಾದ ಸುಪರ್ದಿಯಲ್ಲಿರುವುದು. ಇವೆರಡು ತದ್ವಿರುದ್ಧ ಸಿದ್ಧಾಂತಗಳು ಜೂಜಾಟದ ವಿಚಾರದಲ್ಲಿ ಸಮಾನ ಭಾವನೆ ಹೊಂದಿರುವುದು ಮತ್ತು ಜೂಜು ಅಂಕಣದಲ್ಲಿ ಭೇಟಿಯಾಗಿ ಕೈಕುಲುಕುತ್ತಿರುವುದು ಮೋಜೆನಿಸುತ್ತದೆ. ಬಹುಶಃ ಈ ಸಿದ್ದಾಂತಗಳು ಹುಟ್ಟುವ ಮುಂಚೆಯೇ ಜೂಜು ಹುಟ್ಟಿದ್ದು ಇದಕ್ಕೆ ಕಾರಣವಿರಬಹುದು.
ಲಾಸ್ ವೆಗಾಸ್ ಹಾಗೂ ಹಾಂಗ್‌ಕಾಂಗ್ ಇವೆರಡೂ ನಗರಗಳನ್ನು 19 ಹಾಗೂ 20ನೆ ಶತಮಾನದಲ್ಲಿ ಕಟ್ಟಿ ಬೆಳೆಸಲಾಯಿತು.
ಸ್ಪ್ಯಾನಿಯಾರ್ಡರು ಅಮೆರಿಕವನ್ನು ಸುತ್ತಿ ಬಳಸಿ ಬೇಲಿ ಸುತ್ತಿಕೊಳ್ಳುತ್ತಿದ್ದಾಗ ನೆವಾಡ ಮರುಭೂಮಿ ಪ್ರಾಂತದ ನಿರ್ಜನ ಹುಲ್ಲುಗಾವಲನ್ನು ಸ್ಪ್ಯಾನಿಶ್ ಭಾಷೆಯಲ್ಲಿ ‘ಲಾಸ್ ವೆಗಾಸ್’ ಎಂದಿದ್ದರು. ಮುಂದೆ ಅದೇ ಆ ನಗರದ ಹೆಸರಾಗಿ ಈಗ ವಿಶ್ವದ ಕುಖ್ಯಾತ ಜೂಜು ಕೇಂದ್ರವಾಗಿ ಬೆಳೆದಿದೆ.
ಏಳು ಲಕ್ಷದಷ್ಟು ಜನಸಂಖ್ಯೆಯಿರುವ ಮುನ್ನೂರು ಚದರ ಕಿ.ಮೀ. ವಿಸ್ತೀರ್ಣದ ಲಾಸ್ ವೆಗಾಸ್‌ನಲ್ಲಿ ಜೂಜು, ಪೋಕರ್, ಕುಡಿತ, ನೃತ್ಯ, ಸೆಕ್ಸ್, ಮನರಂಜನೆಯೇ ಮುಖ್ಯ ಕಸುಬು. ಜಗತ್ತಿನ ಬಹುತೇಕ ಎಲ್ಲಾ ಶ್ರೀಮಂತರು ಲಾಸ್ ವೆಗಾಸ್‌ಗೆ ಹೋಗಿ ಜೂಜಾಡುವುದನ್ನು ಒಂದು ಪ್ರತಿಷ್ಠೆಯ ವಿಚಾರ ಮಾಡಿಕೊಂಡಿದ್ದಾರೆ. ಅಥವಾ ಹಾಗೆಂದು ಒಂದು ಮಿಥ್ ಅನ್ನು ಸೃಷ್ಟಿಸಲಾಗಿದೆ. ಈ ಜೂಜು ನಗರದಲ್ಲಿ ವಾಸಿಸುವ ಜನ ವರ್ಷಕ್ಕೆ ಸರಾಸರಿ ಹತ್ತು ಲಕ್ಷ ರೂಪಾಯಿ ದುಡಿಯುತ್ತಾರೆ. ನಗರ ಹಣ-ಪಣ ಮಾತ್ರವಲ್ಲ ಮನುಷ್ಯ ಸಂಬಂಧಗಳ ಜೂಜನ್ನು ಮಿಂಚಿನ ವೇಗದಲ್ಲಿ ನಿರ್ಣಯಿಸುವ ತಾಣವೂ ಹೌದು.
ದಾಂಪತ್ಯ ಸಂಬಂಧದಿಂದ ಹೊರಬರಲು ಬಯಸುವವರು ನೆವಾಡ ರಾಜ್ಯಕ್ಕೆ ಹೋಗಿ ಕೇವಲ ಆರು ವಾರ ಕಾಲ ವಾಸವಿದ್ದರೆ ಸಾಕು, ಅಂತವರಿಗೆ ಸುಲಭವಾಗಿ ವಿಚ್ಛೇದನ ಸಿಗುತ್ತದೆ ಅಲ್ಲಿ. ಲಾಟರಿ ಟಿಕೆಟ್ ಕೊಳ್ಳುವಂತೆ ಜೀವನ ಸಂಗಾತಿಗಳ ಆಯ್ಕೆಯಲ್ಲೂ ‘ಲಕ್’ ಅನ್ನು ನಿರೀಕ್ಷಿಸಿ ನಿರಾಶರಾದವರಿಗೆ ವೆಗಾಸ್ ನಿರಾಶೆಗೊಳಿಸುವುದಿಲ್ಲ.
ಮನುಷ್ಯರನ್ನು ಹಣದಿಂದ ಬೇರ್ಪಡಿಸುವಷ್ಟೇ ವೇಗದಲ್ಲಿ ದಾಂಪತ್ಯ ಸಂಬಂಧಗಳನ್ನೂ ಲಾಸ್ ವೆಗಾಸ್ ಮುರಿದು ಮೂಲೆಗೆ ತಳ್ಳುತ್ತದೆ.
ಜೂಜು, ಹಣ ಹಾಗೂ ಇಂದ್ರಿಯ ಲೋಲುಪತೆಗಳು ಲಾಸ್ ವೆಗಾಸ್‌ನ ಜನರನ್ನು ಹೇಗೆ ಆವರಿಸಿಕೊಂಡಿದೆ ಎನ್ನುವುದನ್ನು ಅರಿಯಲು ಅಲ್ಲಿನ ಸಾಮಾಜಿಕ ರಚನೆಯನ್ನು ನೋಡಬೇಕು.
ಲಾಸ್ ವೆಗಾಸ್‌ನ ವಾಸಿಗಳಲ್ಲಿ ಶೇ. 37ರಷ್ಟು ಜನ ಒಂಟಿಯಾಗಿರುತ್ತಾರೆ. ಗಂಡು-ಹೆಣ್ಣು ಮದುವೆಯಾಗಿ ಅಥವಾ ಜೊತೆಗೂಡಿ ಬದುಕುವವರ ಸಂಖ್ಯೆ ಕೇವಲ ಶೇ. 48 ಮಾತ್ರ. ಇನ್ನು ಮಕ್ಕಳು ಇರುವ ಕುಟುಂಬಗಳ ಸಂಖ್ಯೆ ಶೇ. 30 ಮಾತ್ರ. ಎಂದು ಅಧ್ಯಯನವೊಂದು ಹೇಳಿದೆ.
ಅರವತ್ತೈದು ವರ್ಷಕ್ಕಿಂತಾ ಹೆಚ್ಚಿನ ವಯಸ್ಸಿನ ವಾಸಿಗಳ ಸಂಖ್ಯೆ ಕೇವಲ ಶೇ. 11 ಅಂತೆ. ಅಂದರೆ ಜೂಜು ಮೋಜಿನ ಸುಖದ ಬೆನ್ನು ಹತ್ತಿ ವೆಗಾಸ್‌ಗೆ ಹೋಗುವವರಲ್ಲಿ ಬಹುತೇಕರು ತಮ್ಮ 65ನೆ ವಯಸ್ಸು ತಲುಪುವ ಮೊದಲೇ ತಮ್ಮ ಇಹಲೋಕ ಯಾತ್ರೆ ಮುಗಿಸಿರುತ್ತಾರೆ. ಇಲ್ಲಾ ದಣಿದು ಪಾಪರ್ ಆದವರನ್ನು ವೆಗಾಸ್ ನಗರವು ನಿರ್ಧಯವಾಗಿ ಹೊರ ತಳ್ಳುತ್ತದೆ.
ಉಳಿದ ಕಡಿಮೆ ವಯಸ್ಸಿನವರು ಅಮೋದ-ಪ್ರಮೋದಗಳಲ್ಲಿ ಮುಳುಗೇಳುತ್ತಾ ತಮ್ಮ ಅದೃಷ್ಟ ಪರೀಕ್ಷಿಸುತ್ತಿರುತ್ತಾರೆ. ಬಂಡವಾಳಶಾಹಿ ನಾಗರಿಕತೆಯೊಂದು ಸೃಷ್ಟಿಸಿರುವ ಜೂಜಿನ ಮೋಜಿನ ಉಪ ಸಂಸ್ಕೃತಿಯೊಂದರ ಚಿತ್ರಣ ಇದಾಗಿದೆ. ರಶ್ಯನ್ ಬಾಂಡ್ ಡ್ಯಾನಿಯಲ್ ಕ್ರೇಗ್‌ನ ‘ದಿ ಕ್ಯಾಸಿನೊ ರಾಯಲೆ’ ಜೂಜನ್ನು ಒಂದು ರೀತಿ ತೋರಿದರೆ ನನ್ನ ಮೆಚ್ಚಿನ ಸಿನೆಮಾ ‘ಲಕ್ಕಿ ಯೂ’ ನಲ್ಲಿ ನಟ ರಾಬರ್ಟ್ ದುವಾಲ್ ವಿಶಿಷ್ಟ ಕಮಿಟೆಡ್ ಜೂಜುಕೋರತನವನ್ನು ತೋರಿಸುತ್ತಾನೆ. ಈಗ ಸಮಾಜವಾದಿ ಚೀನಾದ ಹಾಂಗ್‌ಕಾಂಗ್‌ನತ್ತ ನೋಡೋಣ.
ಸಾವಿರದ ನೂರು ಚದರ ಕಿಲೋಮೀಟರ್ ವಿಸ್ತೀರ್ಣದ 75 ಲಕ್ಷ ಜನಸಂಖ್ಯೆಯ ಹಾಂಗ್‌ಕಾಂಗ್ ಮೊದಲು ಬ್ರಿಟಿಷರ ಕಾಲನಿಯಾಗಿತ್ತು. ಇಂಗ್ಲಿಷರು ಇರುವೆಡೆ ಜೂಜು ಇರುತ್ತದೆ. ವಿಶ್ವದ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಹಾಂಗ್‌ಕಾಂಗ್‌ನ ಜನರ ವಾರ್ಷಿಕ ತಲಾದಾಯ 30 ಲಕ್ಷ ರೂಪಾಯಿಗಳು.
ಹಾಂಗ್‌ಕಾಂಗ್‌ನ ಕುದುರೆ ರೇಸ್‌ಗಳು ವಿಶ್ವವಿಖ್ಯಾತ. ಅಲ್ಲಿನ ಪ್ರತಿ ಮೂವರಲ್ಲಿ ಒಬ್ಬ ಜೂಜುಗಾರ. ಇಂಡಿಯಾಗೆ ಕ್ರಿಕೆಟ್, ಚೀನಾದಲ್ಲಿ ಟೇಬಲ್ ಟೆನಿಸ್, ಅಮೆರಿಕದಲ್ಲಿ ಬಾಸ್ಕೆಟ್‌ಬಾಲ್, ಲ್ಯಾಟಿನ್ ಅಮೆರಿಕದಲ್ಲಿ ಪುಟ್‌ಬಾಲ್ ಹೇಗೋ ಹಾಗೆಯೇ ಹಾಂಗ್‌ಕಾಂಗ್ ಜನರಿಗೆ ಕುದುರೆ ರೇಸೆಂದರೆ ಪ್ರಾಣ. ಅಲ್ಲಿನ ರೇಸ್ ಉದ್ಯಮದ ವಾರ್ಷಿಕ ವಹಿವಾಟು ಒಂದು ಲಕ್ಷ ಕೋಟಿ ರೂಪಾಯಿಗಳೆಂದರೆ ನೀವು ನಂಬುತ್ತೀರಾ ?
ಪ್ರತಿಷ್ಠಿತ ಹಾಂಗ್‌ಕಾಂಗ್ ಡರ್ಬಿ ರೇಸ್ ನಡೆದರೆ ಸರಾಸರಿ ಒಂದು ಲಕ್ಷ ಜನ ರೇಸ್ ಆಡಲು-ನೋಡಲು ಹೋಗುತ್ತಾರೆ. ಹಾಂಗ್‌ಕಾಂಗ್‌ನ ‘ಡಿಂಗ್ ಡಾಂಗ್’ ಡಬಲ್ ಡೆಕರ್ ಬಸ್‌ಗಳು, ‘ಗೋಗೋ’ ಬಾರ್‌ಗಳು ಹೇಗೆ ಜನಪ್ರಿಯವೋ ಅಲ್ಲಿನ ರೇಸ್ ಹಾಗೂ ಬೆಟ್ಟಿಂಗ್ ಕೂಡ ಈಗ ಜನಪದ. ರೇಸಾಡುವ ಪ್ರತಿ ಹತ್ತರಲ್ಲಿ ಒಂಬತ್ತು ಜನ ಹಣ ಕಳೆದುಕೊಳ್ಳುತ್ತಾರೆ. ಆದರೇನು ಸೋಲುವವರು ಜೂಜಿನ ಅಖಾಡದಿಂದ ಹಿಂದೆ ಸರಿಯುವುದಿಲ್ಲ.
ಹಾಂಗ್‌ಕಾಂಗ್ ಸರಕಾರದ ಒಟ್ಟು ಆದಾಯದ ಶೇ. 7ರಷ್ಟು ಕುದುರೆ ರೇಸ್‌ನ ತೆರಿಗೆ ಹಣದಿಂದ ಬರುತ್ತದೆಂದರೆ ನೀವದರ ಅಗಾಧತೆಯನ್ನು ಊಹಿಸಿಕೊಳ್ಳಬಹುದು.
1997ರಲ್ಲಿ ಬ್ರಿಟಿಷರಿಂದ ಹಾಂಗ್‌ಕಾಂಗ್ ಅನ್ನು ಮರಳಿ ಪಡೆದ ಸಮಾಜವಾದಿ ಚೀನಾ ಅಲ್ಲಿನ ಜೀವನಕ್ರಮ ಹಾಗೂ ಆಡಳಿತದಲ್ಲಿ ತಲೆ ಹಾಕುತ್ತಿಲ್ಲ. ಅಮೆರಿಕದ ಬಂಡವಾಳಶಾಹಿ ನಾಗರಿಕತೆಯು ಮನುಷ್ಯನ ಜೂಜಿನ ಅಮಲಿನ ಉತ್ತುಂಗವನ್ನು ಲಾಸ್ ವೆಗಾಸ್‌ನಲ್ಲಿ ಸೃಷ್ಟಿಸಿ ಆಡಲು ಬಿಟ್ಟಿದೆ. ಮತ್ತೊಂದೆಡೆ ಮಾವೋ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿ ನಡೆಸಿ ಈಗ ವಿಶ್ವದ ಶಕ್ತಿಶಾಲಿ ದೇಶವಾಗಿದೆ ಚೀನಾ. ಆದರೂ ತನ್ನ ಮಡಿಲಲ್ಲೇ ಇರುವ ದ್ವೀಪ ಪ್ರಾಂತದಲ್ಲಿ ಜನ ದುಡಿಮೆಯಲ್ಲಿ, ಜೂಜಿನಲ್ಲಿ, ಅಮೋದ ಪ್ರಮೋದಗಳಲ್ಲಿ ಮುಳುಗೇಳುತ್ತಾ ಇರುವುದನ್ನು -ನನ್ನ ಸಮಾಜವಾದಿ ಗೆಳೆಯರು ನನ್ನನ್ನು ಜೂಜಾಡುವಾಗ ನೋಡುವಂತೆ -ಸುಮ್ಮನೆ ನೋಡುತ್ತಿದೆ.
ಬಂಡವಾಳಶಾಹಿಯೋ, ಸಮಾಜವಾದವೋ ಏನೇ ಇರಲಿ ಜೂಜಾಟವು ತನಗೊಂದು ಪ್ರತ್ಯೇಕ ಹಾದಿ ನಿರ್ಮಿಸಿಕೊಳ್ಳುತ್ತದೆ.
ಜೂಜಾಡುವವರಿಗೆ ಕೈಲಿ ಒಂದಿಷ್ಟು ಬಂಡವಾಳ ಹಾಗೂ ಪಂಟರ್‌ಗಳ ಸಮಾಜವೊಂದಿದ್ದರೆ ಸಾಕು, ಅವರು ದೀರ್ಘಕಾಲ ಮೈಮರೆತು ಅಲ್ಲಿರಲು ಬಯಸುತ್ತಾರೆ. ಬೆಂಗಳೂರು ಟರ್ಫ್‌ಕ್ಲಬ್‌ನಲ್ಲಿ ನಾನು ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಾಗ ವಿಭಿನ್ನ ಸ್ವಭಾವದ ಪಂಟರ್‌ಗಳನ್ನು ನೋಡುತ್ತಿದ್ದೆ. ತರ್ಕ, ಕಲ್ಪನೆ, ಶೋಧನೆ ಹಾಗೂ ಸಂಶೋಧನೆಗಳೆಲ್ಲಾ ಬೆಸೆದುಕೊಳ್ಳುವ ಇಸ್ಪೀಟು ಹಾಗೂ ರೇಸ್‌ಗಳು ‘ಲಕ್’ನ ಬೆನ್ನು ಹತ್ತುವ ಕನಸುಗಾರ ಮನುಷ್ಯರ ವಿಶಿಷ್ಟ ಲೋಕ.
ಏಕೆಂದರೆ ಅದೀಗ ಕ್ರೀಡೆ ಮಾತ್ರವಲ್ಲ. ಉದ್ಯಮವೂ ಹೌದು. ಕೆಲವರಿಗೆ ವೃತ್ತಿಯೂ ಹೌದು.
Parvateesha.b@gmail.com
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ