ಪರಧರ್ಮ ದ್ವೇಷದ ಪರಮಾವಧಿ: ಪೇಜಾವರ ಶ್ರೀ ಖೇದ
ಶ್ರೀಕೃಷ್ಣ ಮಠದಲ್ಲಿ ಇಫ್ತಾರ್, ನಮಾಝ್ಗೆ ವಿರೋಧ
ಉಡುಪಿ, ಜು.2: ಶ್ರೀಕೃಷ್ಣ ಮಠದಲ್ಲಿ ನಮಾಝ್ ನಿರ್ವಹಿಸಿದ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಪರಧರ್ಮ ದ್ವೇಷದ ಪರಮಾವಧಿ. ಇನ್ನೊಂದು ಧರ್ಮದ ಮೇಲೆ ಈ ರೀತಿಯಲ್ಲಿ ದ್ವೇಷ ಇರಬಾರದು. ಇದು ಬಹಳ ಶೋಚನೀಯ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಠದಲ್ಲಿ ಇಫ್ತಾರ್ ಕೂಟ ಹಾಗೂ ನಮಾಝ್ ನಿರ್ವಹಿಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಶ್ರೀರಾಮಸೇನೆ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರವಿವಾರ ಮಠದಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
ಮಠದಲ್ಲಿ ನಮಾಝ್ ನಿರ್ವಹಿಸಿದ್ದರಿಂದ ಹಿಂದೂ ಧರ್ಮಕ್ಕೆ ಯಾವುದೇ ಅಪಚಾರ ಆಗಿಲ್ಲ. ಬದಲು ಧರ್ಮದ ಗೌರವ ಬೆಳೆದಿದೆ. ಇದು ಸಂತೋಷ ಪಡುವ ವಿಷಯವೇ ಹೊರತು ಬೇಸರ ಪಡುವುದಲ್ಲ. ಹಿಂದೂ ಧರ್ಮದ ಒಳಗೆ ದ್ವೈತ ಅದ್ವೈತ ಸಂಪ್ರದಾಯದ ಮಧ್ಯೆಯೂ ಸಹಿಷ್ಣುತೆ ಇರಬೇಕು. ಮಧ್ವ ಮಠದಲ್ಲಿ ಇನ್ನೊಂದು ಸಂಪ್ರದಾಯದವರು ಊಟಕ್ಕೆ ಕೂತು ಸಂಧ್ಯಾ ವಂದನೆ ನಮ್ಮ ಪ್ರಕಾರ ಮಾಡುತ್ತೇವೆ ಎಂದು ಹೇಳಿದರೆ ನಾವು ತಡೆಯಲು ಆಗುತ್ತದೆಯೇ. ಇಲ್ಲಿ ಮಧ್ವ ಸಂಪ್ರದಾಯದ ಪ್ರಕಾರವೇ ಸಂಧ್ಯಾ ವಂದನೆ ಮಾಡಬೇಕು, ಬೇರೆ ಸಂಪ್ರದಾಯದಂತೆ ಮಾಡಬಾರದು ಎಂದು ನಾವು ಹೇಳುತ್ತೇವೆಯೇ?. ಅವರು ಅವರವರ ಸಂಪ್ರದಾಯದಂತೆ ಮಾಡಿದರೆ, ಅದನ್ನು ತಡೆಯುವ ಕ್ರಮ ಇದೆಯೇ ಎಂವರು ಪ್ರಶ್ನಿಸಿದರು.
ನಮ್ಮ ಧರ್ಮದೊಳಗೆ ದ್ವೈತ ಅದ್ವೈತ ವಿಶಿಷ್ಟ ಅದ್ವೈತಗಳ ಮಧ್ಯೆ ಹೇಗೆ ಸಹಿಷ್ಣುತೆ ಇದೆಯೇ ಅದೇ ರೀತಿ ಇತರ ಧರ್ಮದವರ ಜೊತೆಯೂ ಅದೇ ಭಾವನೆ ಇರಬೇಕು. ನಮ್ಮದು ಮಧ್ವ ಸಿದ್ಧಾಂತ. ಅದನ್ನು ಅನುಸರಿಸದೆ ಇದ್ದವರ ಜೊತೆ ನಾವು ದ್ವೇಷ ಮಾಡುವುದಿಲ್ಲ. ಬೇರೆಯವರ ಆಚರಣೆಯನ್ನು ನಾವು ಸಹಿಸುತ್ತೇವೆ. ಅದಕ್ಕೆ ವಿರೋಧ, ಪ್ರತಿಭಟನೆ ಮಾಡುವುದಿಲ್ಲ. ಅದರ ಪ್ರಕಾರ ಮುಸ್ಲಿಮರನ್ನು ಮಠದಲ್ಲಿ ಭೋಜನ ಕೂಟಕ್ಕೆ ಕರೆದಿದ್ದೇವೆ. ಊಟ ಮಾಡುವ ಮೊದಲು ನಾವು ಯಾವ ರೀತಿ ಸಂಧ್ಯಾ ವಂದನೆ ಮಾಡುತ್ತೇವೆಯೇ ಅದೇ ರೀತಿ ಮುಸ್ಲಿಮರು ಉಪವಾಸದ ತೊರೆದ ಬಳಿಕ ಪ್ರಾರ್ಥನೆ ಮಾಡುತ್ತಾರೆ. ಹಾಗೆ ಅವರು ನಮಾಝ್ ಮಾಡುತ್ತೇವೆ ಎಂದು ಹೇಳಿದ್ದರು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಎರಡೂ ಧರ್ಮಕ್ಕೂ ಧಕ್ಕೆ ಆಗಿಲ್ಲ
ಮುಸ್ಲಿಮರ ಧರ್ಮದ ಪ್ರಕಾರ ದೇವಸ್ಥಾನದಲ್ಲಿ ನಮಾಝ್ ಮಾಡಬಾರದು ಎಂಬ ಕ್ರಮ ಇದೆ. ಆದರೆ ಅವರು ನಮಾಝ್ ಮಾಡಿರುವುದು ದೇವಸ್ಥಾನ ದಲ್ಲಿ ಅಲ್ಲ. ಆ ಸ್ಥಳ ಸಾರ್ವಜನಿಕ ಕಟ್ಟಡ ಆಗಿರುವುದರಿಂದ ಅವರಿಗೂ ತೊಂದರೆ ಇಲ್ಲ. ಹಾಗಾಗಿ ಇದರಿಂದ ಇಸ್ಲಾಮ್ ಹಾಗೂ ಹಿಂದೂ ಧರ್ಮಕ್ಕೂ ಯಾವುದೇ ಅಪಚಾರ ಆಗಿಲ್ಲ. ಯಾವುದೇ ರೀತಿಯ ಕಾರಣ ಇಲ್ಲದೆ ಸುಮ್ಮನೆ ಗದ್ದಲ ಮಾಡಲು ಸಂದರ್ಭ ತೆಗೆದುಕೊಂಡಿದ್ದಾರೆ. ಅದರ ಬಗ್ಗೆ ನಾನು ಗಮನವೇ ಕೊಡುತ್ತಿಲ್ಲ. ಇದರಿಂದ ನಾವು ಯಾವುದೇ ರೀತಿಯಲ್ಲಿ ವಿಚಲಿತರಾ ಗಿಲ್ಲ. ನಿರಾಳವಾಗಿದ್ದೇವೆ ಎಂದು ಪೇಜಾವರ ಶ್ರೀ ತಿಳಿಸಿದರು.
ಇನ್ನು ಮುಂದೆ ಮಾಡಿದರೆ ರಕ್ತ ಹರಿಸಿ ತಡೆಯುತ್ತೇವೆ ಎಂಬ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಅದಕ್ಕೆಲ್ಲ ನಾನು ಗಮನ ಕೊಡುವುದಿಲ್ಲ. ಅದಕ್ಕೆ ಉತ್ತರವೂ ಕೊಡುವುದಿಲ್ಲ. ಮತ್ತಷ್ಟು ಹಿಂಸಾ ಪ್ರಚೋದನೆಗೆ ನಾನು ಅವಕಾಶ ನೀಡುವುದಿಲ್ಲ. ಅದಕ್ಕೆ ಅವರಿಗೆ ಉತ್ತರ ಕೊಡಲು ಹೋಗುವುದಿಲ್ಲ. ಏನು ಉತ್ತರ ಕೊಟ್ಟರು ಮತ್ತಷ್ಟು ಘರ್ಷನೆ ಅವಕಾಶ. ನಮ್ಮ ನಿಲುವಿನ ಪ್ರಕಾರ ಧರ್ಮಕ್ಕೆ ಯಾವುದೇ ಅಪಚಾರ ಆಗಿಲ್ಲ. ಬದಲು ಧರ್ಮದ ಗೌರವ ಹೆಚ್ಚಿದೆ. ಇದರಲ್ಲಿ ಅಸಮಾಧಾನ ಪಡಲು ಅವಕಾಶವೇ ಇಲ್ಲ. ಕೃಷ್ಣ ಮಠದ ಪಾವಿತ್ರಕ್ಕೆ ಸ್ವಲ್ಪವೂ ಧಕ್ಕೆಯಾಗಿಲ್ಲ ಎಂದರು.
ಮುಸ್ಲಿಮರು ನಮಾಝ್ ಮಾಡುವಾಗ ಅಲ್ಲಾಹು ಅಕ್ಬರ್(ಅಲ್ಲಾಹುವೇ ಶ್ರೇಷ್ಠ) ಹೇಳುತ್ತಾರೆ. ಹೀಗಿರುವಾಗ ಮಠದಲ್ಲಿ ನಮಾಝ್ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ಶೈವರು ಶಿವನಗಿಂತ ಸರ್ವತ್ತೋಮ ಬೇರೆ ಯಾರೂ ಇಲ್ಲ ಹೇಳುತ್ತಾರೆ. ಹಾಗಂತ ಶೈವರಿಗೆ ಬಹಿಷ್ಕಾರ ಹಾಕಲು ಆಗುತ್ತದೆಯೇ. ಏನು ಇದಕ್ಕೆ ಅರ್ಥ ಇದೆಯೇ. ಅವರವರು ಅವರ ಭಾವನೆ ಪ್ರಕಾರ ಮಾಡುತ್ತಾರೆ. ಅದಕ್ಕೆ ನಾವು ಸಹಿಷ್ಣು ಆಗಿರಬೇಕು. ಅದಕ್ಕೆಲ್ಲ ಪ್ರತಿಭಟನೆ ಮಾಡುವುದಲ್ಲ ಎಂದು ಸ್ವಾಮೀಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಧರ್ಮ ರಕ್ಷಣೆಗೆ ಬದ್ಧ
‘ಕೆಲವರು ಸ್ವಾಮೀಜಿ ತಮ್ಮ ಧೋರಣೆಯನ್ನು ಬದಲಾಯಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ ಹಿಂದೂ ಧರ್ಮದ ನನ್ನ ದೃಷ್ಟಿ ಹಾಗೂ ಧೋರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಹಿಂದೂ ಧರ್ಮದ ರಕ್ಷಣೆಗೆ ಬದ್ಧ. ಅದನ್ನು ಈಗಲೂ ಮಾಡುತ್ತ ಇದ್ದೇನೆ. ಹಿಂದೂ ಧರ್ಮದ ಪರವಾಗಿ ಹೋರಾಟ, ಸರ್ವಧರ್ಮೀಯರ ಜೊತೆ ಸೌಹಾರ್ದ ಇದು ನನ್ನ ಸಿದ್ಧಾಂತ. ಹಿಂದಿನಂತೆ ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಹೋರಾಟ ನಡೆಸುತ್ತೇವೆ. ಅದೇ ರೀತಿ ಎಲ್ಲ ಮತೀಯರ ಜೊತೆ ಸೌಹಾರ್ದ ಬೆಳೆಸುತ್ತೇನೆ’ ಎಂದು ಪೇಜಾವರ ಶ್ರೀ ತಿಳಿಸಿದರು.
‘ರಾಮಜನ್ಮ ಭೂಮಿ ಹೋರಾಟದಲ್ಲಿದ್ದ ಸ್ವಾಮೀಜಿ ಉಪಹಾರ ಕೂಟವನ್ನು ಹೇಗೆ ಮಾಡಿದ್ದಾರೆ. ಸ್ವಾಮೀಜಿಯದ್ದು ದ್ವಿಮುಖ ಧೋರಣೆ ಎಂದು ಕೆಲವು ಮುಸ್ಲಿಮರೇ ಆಕ್ಷೇಪಿಸಿದ್ದಾರೆ. ಅವರಿಗೂ ಅರ್ಥ ಆಗಿಲ್ಲ’ ಎಂದು ಸ್ವಾಮೀಜಿ ಹೇಳಿದರು.
ಮುಂದಿನ ವರ್ಷ ಇಂತಹ ಕೂಟ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಸ್ವಾಮೀಜಿ, ಮುಂದಿನ ವರ್ಷ ನನ್ನ ಪರ್ಯಾಯ ಇರುವುದಿಲ್ಲ. ಬೇರೆ ಕಡೆ ಪರಿಸ್ಥಿತಿ, ಸನ್ನಿವೇಶ, ಸಂದರ್ಭ ನೋಡಿ ಮಾಡುತ್ತೇನೆ. ಈಗ ಯಾವುದನ್ನು ಹೇಳುವುದಿಲ್ಲ. ಒಳ್ಳೆಯದು ಮಾಡಲು ಹೋಗಿ ಕೆಟ್ಟದು ಆಗ ಬಾರದು. ಹಿಂಸಾಚಾರ, ರಕ್ತಪಾತ ಆಗಬಾರದು. ಹಾಗಾಗಿ ಸಂದರ್ಭ ನೋಡುತ್ತೇವೆ ಎಂದರು.
'ವಿರೋಧ ಮಾಡುವವರಿಗೆ ಧರ್ಮ ಆಚರಣೆಯೇ ಗೊತ್ತಿಲ್ಲ'
ನಮಾಝ್ ಮಾಡಿದ ಸ್ಥಳವನ್ನು ಗೋ ಮೂತ್ರದಿಂದ ಶುದ್ಧೀಕರಿಸಬೇಕೆಂಬ ಪ್ರತಿಭಟನಕಾರರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, ಅಪವಿತ್ರ ಏನಾಗಿದೆ. ಶ್ರೀಕೃಷ್ಣ ಮಠದ ಹೊರಗಿನ ಕಟ್ಟಡದಲ್ಲಿ ಅವರ ಸಂಪ್ರದಾಯದಂತೆ ದೇವರ ಪ್ರಾರ್ಥನೆ ಮಾಡಿದರೆ ಕೃಷ್ಣ ಮಠಕ್ಕೆ ಏನು ಆಯಿತು. ಏನು ಅಪ ಚಾರವಾಯಿತು. ಯಾವ ಧರ್ಮಶಾಸ್ತ್ರ, ಆಗಮನದಲ್ಲಿ ವಿರೋಧ ಉಂಟು. ವಿರೋಧ ಮಾಡುವವರಿಗೆ ಶಾಸ್ತ್ರ ಗೊತ್ತಿಲ್ಲ. ಸಂಪ್ರದಾಯ ಗೊತ್ತಿಲ್ಲ. ಧರ್ಮ ಆಚರಣೆಯೇ ಗೊತ್ತಿಲ್ಲ. ಅವರಿಗೆ ವಿರೋಧ ಮಾಡುವ ಹಕ್ಕೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಮರು ನಮಾಝ್ ನಿರ್ವಹಿಸಿದ ಸ್ಥಳ ಕೃಷ್ಣ ಮಠವೂ ಅಲ್ಲ, ಅದರ ಹೊರಗಿನ ಆವರಣದ ಭೋಜನ ಶಾಲೆಯ ಕಟ್ಟಡವೂ ಅಲ್ಲ. ಅದು ಹೊರಗಿನ ಆವರಣದ ಸಾರ್ವಜನಿಕ ಭೋಜನ ಶಾಲೆಯ ಉಪ್ಪರಿಗೆ ಆಗಿದೆ. ಇದಕ್ಕೆ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ಇದರಿಂದ ಧರ್ಮಕ್ಕೆ ಯಾವ ರೀತಿ ಹಾನಿಯಾಗಿದೆ ಎಂಬುದರ ಕುರಿತು ನಮ್ಮ ಜೊತೆ ಚರ್ಚೆಗೆ ಬರಲಿ ಎಂದು ಪೇಜಾವರ ಸ್ವಾಮೀಜಿ ಸವಾಲು ಹಾಕಿದರು.