ಸರಳ, ನಿರಾಳ, ತಿಳಿ ಬುದ್ಧ ಚರಿತೆ
ಈ ಹೊತ್ತಿನ ಹೊತ್ತಿಗೆ
ಬುದ್ಧನನ್ನು ಬೇರೆ ಬೇರೆ ಪ್ರಾಕಾರಗಳಲ್ಲಿ ಕಂಡರಿಯುವ ಪ್ರಯತ್ನವನ್ನು ಜಗತ್ತಿನ ಬರಹಗಾರರು ಮಾಡಿದ್ದಾರೆ. ಝೆನ್ ಮೂಲಕ, ಕವಿತೆಗಳ ಮೂಲಕ, ಕತೆಯ ಮೂಲಕ, ವೈಚಾರಿಕ ಚಿಂತನೆಯ ಮೂಲಕ ಬುದ್ಧನನ್ನು ಅರ್ಥೈಸುವ ಪ್ರಯತ್ನ ಮುಂದುವರಿದೇ ಇದೆ. ಕಾವ್ಯಗಳ ಮೂಲಕವೂ ಬುದ್ಧನನ್ನು ನಿರೂಪಿಸಲು ಹಲವು ಕವಿಗಳು ಪ್ರಯತ್ನಿಸಿದ್ದಾರೆ. ಕನ್ನಡದಲ್ಲೂ ಇಂತಹ ಪ್ರಯತ್ನ ನಡೆದಿದೆ. ಡಾ. ಎಚ್. ಎಸ್. ಅನುಪಮಾ ಅವರು ಖಂಡ ಕಾವ್ಯದ ಮೂಲಕ ‘ಬುದ್ಧ ಚರಿತೆ’ಯನ್ನು ಬರೆದಿದ್ದು, ಕನ್ನಡದಲ್ಲಿ ಬುದ್ಧನ ಕುರಿತಂತೆ ಇದೊಂದು ವಿಶಿಷ್ಟ ಪ್ರಯೋಗವಾಗಿದೆ. ಬೆನ್ನುಡಿಯಲ್ಲಿ ಹೇಳುವಂತೆ, ಕಳೆದೆರಡು ದಶಕದಿಂದೀಚೆಗೆ ಕರ್ನಾಟಕ ಮತ್ತು ದೇಶದಲ್ಲಿ ಬುದ್ಧ ತಳ ಸಮುದಾಯಗಳಲ್ಲಿ ಸಾಂಸ್ಕೃತಿಕ ಎಚ್ಚರವನ್ನು ಉಂಟು ಮಾಡುತ್ತಿದ್ದಾನೆ ಎಂಬುದು ತಿಳಿದ ವಿಷಯವೇ ಆಗಿದೆ. ದುಡಿಯುವ ವರ್ಗದ ಜನರಿಗೆ ಬುದ್ಧನನ್ನು ಅರ್ಥ ಮಾಡಿಸುವುದು ಹೇಗೆ? ಈ ದೇವರಲ್ಲದ ದೇವರನ್ನು ತಿಳಿಯುವ ಬಗೆ ಹೇಗೆ? ಎಂಬುದೇ ಸಂಸ್ಕೃತಿ ಚಿಂತಕರ ಸಮಸ್ಯೆಯಾಗಿದೆ. ಧರ್ಮವೆಂಬ ಸಾಂಸ್ಥಿಕ ಚೌಕಟ್ಟಿನ ಒಳಗಡೆ ಚೀವರ ಧರಿಸುವ ಭಂತೇಜಿಯ ಭಾಷೆಯನ್ನು ಒಮ್ಮೆಲೆ ಗ್ರಹಿಸುವುದು ಕಷ್ಟ ಸಾಧ್ಯ. ಅದಕ್ಕೆ ಸಾಂಸ್ಕೃತಿಕ ದನಿಯೊಂದರ ಅಗತ್ಯವಿದೆ. ಅದನ್ನು ಕಾವ್ಯ, ನಾಟಕ ಮುಂತಾದವುಗಳು ಪೂರೈಸಬಲ್ಲವು. ಈ ದೃಷ್ಟಿ ನೋಡಿದಾಗ ಬುದ್ಧ ಚರಿತೆ ನಿರಾಳ ಓದಿಸಿಕೊಳ್ಳುವ ಕೃತಿ. ತಿಳಿಯಾಗಿ ಒಳಗಿಳಿಯುವ ಕೃತಿ. ಇಲ್ಲಿ ಬುದ್ಧನ ಜ್ಞಾನೋದಯವನ್ನು ಲೇಖಕಿ ಹೊಸ ಬಗೆಯಲ್ಲಿ ನಿರೂಪಿಸಿದ್ದಾರೆ. ಅದಕ್ಕಾಗಿ ತಥಾಕಥಿತ ಮಾದರಿಯಿಂದ ಹೊರಗೆ ಬಂದು ಬಾಬಾಸಾಹೇಬ್ ಅಂಬೇಡ್ಕರರ ಮಾರ್ಗವನ್ನು ಅನುಸರಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು 25 ಅಧ್ಯಾಯಗಳಿವೆ. ಇದು ಕೇವಲ ಬುದ್ಧನ ಚರಿತೆಯನ್ನಷ್ಟೇ ಅಂದರೆ ಬರೇ ಆತನ ಆತ್ಮ ಕಥನಗಳಿಗಷ್ಟೇ ಸೀಮಿತವಾಗಿಲ್ಲ. ಬುದ್ಧನ ಚಿಂತನೆಗಳನ್ನು ಸರಳವಾಗಿ ಬೇರೆ ಬೇರೆ ಕಥನಗಳ ಮೂಲಕ ಹೊರ ಚಿಮ್ಮಿಸುವ ಪ್ರಯತ್ನವನ್ನು ಕಾವ್ಯ ಮಾಡುತ್ತದೆ. ಕಪಿಲ ವಸ್ತುವಿನ ಬೆಳಕಿನಲ್ಲಿ ಮುಂದುವರಿಯುವ ಕಾವ್ಯ, ಶಾಕ್ಯ ಕುಲ ಸಂಘದ ಮೂಲಕ ಬುದ್ಧ ಸಾಕ್ಷಾತ್ಕಾರದ ದಾರಿಯಲ್ಲಿ ಸಾಗುವ ಹಂತಗಳನ್ನು ವಿವರಿಸುತ್ತದೆ. ಅಂಗುಲಿಮಾಲ, ಆನಂದ, ಅಮ್ರಪಾಲಿಯ ಕಥಾನಕಗಳೂ ಬುದ್ಧನ ಚಿಂತನಾಕ್ರಮವನ್ನು ಹೇಳುವುದಕ್ಕೆ ಕಾವ್ಯದಲ್ಲಿ ಬಳಸಲಾಗಿದೆ. ಬುದ್ಧನ ಸಂಕೀರ್ಣವಾದ ಚಿಂತನೆಯನ್ನು ಸರಳ ಕಾವ್ಯದ ಮೂಲಕ ಹೇಳಿದ ಹೆಗ್ಗಳಿಕೆ ಡಾ. ಅನುಪಮಾ ಅವರದು. ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಕೃತಿಯ ಮುಖಬೆಲೆ 90 ರೂ.