ಸ್ವಿಝರ್ ಲ್ಯಾಂಡ್ ಮೂಲದ ಕಂಪೆನಿ ತಯಾರಿಸಿದ ಈ ಹೆಡ್ ಫೋನ್ ಬೆಲೆ ಎಷ್ಟು ಲಕ್ಷ ಗೊತ್ತೇ?
ಬರ್ನ್,ಜು.5: ಸ್ವಿಝರ್ ಲ್ಯಾಂಡ್ ಮೂಲದ ಟೆಕಾ ಟೆಕ್ನಾಲಜೀಸ್ ಎಂಬ ಕಂಪೆನಿ ತಯಾರಿಸಿರುವ ಹೈ ಎಂಡ್ ಹೆಡ್ ಫೋನ್ ಬೆಲೆಯೆಷ್ಟು ಎಂದು ತಿಳಿದರೆ ಯಾರಿಗೂ ಆಶ್ಚರ್ಯವಾಗದೇ ಇರದು. ಈ ಲೇಟೆಸ್ಟ್ `ಲುಝ್ಲಿ ರೋಲರ್ ಎಂಕೆ01' ಹೆಡ್ ಫೋನ್ ಬೆಲೆ ಬರೋಬ್ಬರಿ 3000 ಅಮೆರಿಕನ್ ಡಾಲರ್(1.94 ಲಕ್ಷ ರೂ.) ಆಗಿದ್ದು ಇದರ ವಿನ್ಯಾಸ ಹೇಗಿದೆಯೆಂದರೆ ಅದನ್ನು ನಿಮ್ಮ ಕಿಸೆಯೊಳಗಿಡಲು ಅನುಕೂಲವಾಗುವಂತೆ ರೋಲ್ ಮಾಡಬಹುದಾಗಿದೆ.
ಈ ರೋಲರ್ ಎಂಕೆ01 ಹೆಡ್ ಫೋನು ಸ್ವಿಝರ್ ಲ್ಯಾಂಡಿನಲ್ಲಿ ಕಂಪೆನಿಯ ಸ್ಥಾಪಕ ಆಂಡ್ರೂ ಜೇಮ್ಸ್ ಲೀ ಅವರಿಂದಲೇ ವೈಯಕ್ತಿಕವಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು ಪ್ರಖ್ಯಾತ ಸ್ವಿಸ್ ವಾಚುಗಳಿಂದ ಇದು ಪ್ರೇರಿತವಾಗಿದೆ.
ವಿಶಿಷ್ಟ ಸ್ಟೀಲ್ ಹಾಗೂ 6061 ಏರ್ ಕ್ರಾಫ್ಟ್ ಗ್ರೇಡ್ ಅಲುಮೀನಿಯಂ ಹೆಡ್ ಬ್ಯಾಂಡಿನಿಂದ ನಿರ್ಮಿತವಾಗಿರುವ ಈ ಹೆಡ್ ಫೋನಿಗೆ 22 ಸ್ಟೀಲ್ ಸ್ಪ್ರಿಂಗ್ ಇದ್ದು ಇದು ಬಳಕೆದಾರರ ತಲೆಯ ಸುತ್ತ ಇಡಲು ಬಹಳಷ್ಟು ಅನುಕೂಲಕರವಾಗಲಿದೆ ಎನ್ನಲಾಗಿದೆ.
ಈ ವಿಲಾಸಿ ಹೆಡ್ ಫೋನಿನಲ್ಲಿ 30 ಎಂಎಂ ಡೈನಾಮಿಕ್ ಡ್ರೈವರ್ ಇದ್ದು ಇದರಿಂದ ಸಂಗೀತವನ್ನು ಸಮತೋಲಿತ ದನಿಯಲ್ಲಿ ಬಳಕೆದಾರರು ಕೇಳಬಹುದಾಗಿದೆ. ಈ ಹೊಸ ಹೆಡ್ ಫೋನಿನಲ್ಲಿರುವ ಸೌಂಡ್ ಸಿಗ್ನೇಚರ್ ಹಾಡುಗಾರಿಕೆ, ಜಾಝ್ ಹಾಗೂ ಶಾಸ್ತ್ರೀಯ ಸಂಗೀತ ಕೇಳಲು ಬಹಳಷ್ಟು ಆಹ್ಲಾದಕರವೆಂದು ಕಂಪೆನಿ ಹೇಳಿಕೊಂಡಿದೆ.
ಈ ಹೆಡ್ ಫೋನುಗಳು ಮರದಿಂದ ತಯಾರಿಸಲಾದ ಬಾಕ್ಸ್ ನಲ್ಲಿ ಪ್ಯಾಕ್ ಮಾಡಲ್ಪಟ್ಟಿವೆ ಹಾಗೂ ನೇರವಾಗಿ ಉತ್ಪಾದಕರಿಂದಲೇ ಅದನ್ನು ಖರೀದಿಸಬಹುದಾಗಿದೆ.
ಲುಝ್ಲಿ ರೋಲರ್ ಎಂಕೆ01 ಹೆಡ್ ಫೋನುಗಳನ್ನು ಪಾರ್ಕ್ ಪ್ಲಾಝಾ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಹೋಟೆಲಿನಲ್ಲಿ ಜುಲೈ 15 ಹಾಗೂ 16ರಂದು ನಡೆಯಲಿರುವ ಕಂಜಂ ಆಡಿಯೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗುವುದು.