ಆಯುಕ್ತರ ಕಚೇರಿಗೆ ಮಹಿಳೆಯರ ಮುತ್ತಿಗೆ
‘ಗಾಂಜಾ’ ಮಾರಾಟ ತಡೆಗೆ ಆಗ್ರಹಿಸಿ
ಬೆಳಗಾವಿ, ಜು. 7: ‘ನಾವು-ನಮ್ಮ ಹೆಣ್ಣು ಮಕ್ಕಳು ಬೀದಿಗಳಲ್ಲಿ ತಲೆ ಎತ್ತಿಕೊಂಡು ತಿರುಗಾಡುವಂತಿಲ್ಲ. ಇಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ‘ಗಾಂಜಾ’ ಅಮಲಿಗೆ ಬಲಿಯಾಗಿದ್ದಾರೆ. ಹೀಗಾಗಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎಂದು ನೂರಾರು ಮಹಿಳೆಯರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ ಖಂಜರ್ ಗಲ್ಲಿ, ಬಾಂಡರ್ಸ್ ಗಲ್ಲಿ, ಚಿರಾಗ್ ಗಲ್ಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಮಹಿಳೆಯರು, ಬೆಳಗಾವಿಯಲ್ಲಿ ಗಾಂಜಾ ಮಾರಾಟವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹದಿಹರೆಯದ ಯುವಕರು ಗಾಂಜಾ ಅಮಲಿನ ದಾಸರಾಗಿದ್ದಾರೆ. ನಗರದಲ್ಲಿ ಎಲ್ಲೆಂದರಲ್ಲಿ ಗಾಂಜಾವನ್ನು ಬೇಕಾಬಿಟ್ಟಿ ಮಾರಾಟ ಮಾಡುತ್ತಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಲವು ದೂರು ನೀಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಗಾಂಜಾ ಅಮಲಿನಲ್ಲಿರುವ ಯುವಕರು ಮಕ್ಕಳು, ಮಹಿಳೆಯರನ್ನು ಚುಡಾಯಿಸುತ್ತಿದ್ದಾರೆ. ಹೀಗಾಗಿ ಮಾದಕ ವಸ್ತುಗಳ ಮಾರಾಟಕ್ಕೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಿದರು.
ಭರವಸೆ: ಮಹಿಳೆಯರ ಮನವಿ ಸ್ವೀಕರಿಸಿದ ಡಿಸಿಪಿ ಸೀಮಾ ಲಾಟ್ಕರ್, ಅಮರನಾಥ ರೆಡ್ಡಿ, ಬೆಳಗಾವಿ ನಗರದಲ್ಲಿನ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.