ಜು. 18 ರವರೆಗೆ ಮಿಷನ್ ಇಂಧ್ರದನುಷ್
ಬೆಂಗಳೂರು, ಜು.7: ಮಿಷನ್ ಇಂಧ್ರದನುಷ್ 4ನೆ ಹಂತದ ಮೂರನೇ ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜು.18 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮ ಬೆಂಗಳೂರು ನಗರ ಜಿಲ್ಲೆ, ಬಿಬಿಎಂಪಿ, ಬೆಳಗಾವಿ, ವಿಜಯಪುರ, ಕಲಬುರಗಿ, ಮೈಸೂರು ಮತ್ತು ತುಮಕೂರು ಜಿಲ್ಲೆಗಳ 46 ಬ್ಲಾಕ್ಗಳಲ್ಲಿ ನಡೆಯಲಿದೆ. ಗರ್ಭಿಣಿ ಮತ್ತು 6 ವರ್ಷದೊಳಗಿನವರ ಮಕ್ಕಳನ್ನು ಲಸಿಕೆ ಹಾಕದವರನ್ನು ಗುರುತಿಸಿ ಅವರಿಗೆ ಲಸಿಕೆ ನೀಡುವ ಅಭಿಯಾನ ಇದಾಗಿದ್ದು ಮೂರನೇ ಸುತ್ತಿನಲ್ಲಿ ಈ ಆರು ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 6592 ಗರ್ಭಿಣಿ ಸ್ತ್ರೀಯರು, 31867 ಎರಡು ವರ್ಷದೊಳಗಿನ ಮಕ್ಕಳು ಹಾಗೂ 38246 5-6 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸಭೆ ನಡೆಸಿ ಪೂರ್ವಸಿದ್ದತೆಯನ್ನು ಪರಿಶೀಲಿಸಿ, ನೋಡೆಲ್ ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಿ ಈ ಅಭಿಯಾನದ ಅನುಷ್ಠಾನವನ್ನು ಯಶಸ್ವಿಯಾಗಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಕಳೆದ ವರ್ಷ ರಾಜ್ಯದಲ್ಲಿ ಒಟ್ಟು 93 ಶಂಕಿತ ಡಿಫ್ತಿರಿಯಾ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ 5 ರಿಂದ 6 ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಡೋಸ್ನ್ನು ತಪ್ಪದೆ ಕೊಡಿಸಬೇಕೆಂದು ಅವರು ಪೋಷಕರಲ್ಲಿ ಮನವಿ ಮಾಡಿದ್ದು, ಈ ಕಾರ್ಯಕ್ರಮದಡಿ 5 ರಿಂದ 6 ವರ್ಷದ ಮಕ್ಕಳಿಗೆ ಬೂಸ್ಟರ್ ಡೋಸ್ ನೀಡಲು ಶಿಕ್ಷಣ ಇಲಾಖೆಯಿಂದಲೂ ವಿಶೇಷ ಆದ್ಯತೆ ಮೇರೆಗೆ ನೆರವು ಪಡೆಯಲಾಗುತ್ತದೆ ಎಂದು ತಿಳಿಸಿದರು. ಈ ಅಭಿಯಾನದಡಿ ಲಸಿಕೆ ಹಾಕಿಸುವ ಶೇ.100 ಗುರಿಯನ್ನು ಸಾಧಿಸುವ ಆಶಾ ಕಾರ್ಯಕರ್ತೆಯರಿಗೆ 5,000 ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ನಿರ್ದೇಶಕ ರತನ್ ಕೇಳ್ಕರ್ ಉಪಸ್ಥಿತರಿದ್ದರು.