ಪಾವೂರಿನಲ್ಲಿ ಜನಸ್ನೇಹಿ ಪೊಲೀಸ್ ಕಾರ್ಯಕ್ರಮ
ಕೊಣಾಜೆ, ಜು.8: ಹಳ್ಳಿಗೊಬ್ಬ ಪೊಲೀಸ್ ಯೋಜನೆ ಮೂಲಕ ಪ್ರತಿಯೊಂದು ಗ್ರಾಮದಲ್ಲೂ ಶಾಂತಿ, ಸುವ್ಯವಸ್ಥೆ, ಸೌಹಾರ್ದ ವಾತವಾರಣ ನಿರ್ಮಿಸುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದ್ದು, ಇದಕ್ಕೆ ನಾಗರಿಕರ ಸಹಕಾರವೂ ಅಗತ್ಯವಾಗಿದೆ ಎಂದು ಕೊಣಾಜೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಕುಮಾರ್ ಅಭಿಪ್ರಾಯಪಟ್ಟರು.
ಜನಸ್ನೇಹಿ ಪೊಲೀಸ್ ಬೀಟ್ಸ್ ಯೋಜನೆಯಡಿ ಪಾವೂರು ಗ್ರಾಮ ಪಂಚಾಯತಿಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮಕ್ಕೂ ಪೊಲೀಸರನ್ನು ನಿಯೋಜಿಸಲಾಗಿದ್ದು, ಸ್ಥಳೀಯರಿಗೂ ಹಳ್ಳಿ ಪೊಲೀಸ್ ಜವಾಬ್ದಾರಿ ನೀಡಲಾಗುತ್ತಿದೆ. ಸ್ಥಳೀಯ ಭಾಗದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಸಂಬಂಧಪಟ್ಟ ನಿಯೋಜಿತ ಪೊಲೀಸರಿಗೆ ಕರೆ ಮಾಡಿದರೆ, ಅವರು 15 ನಿಮಿಷದಲ್ಲೇ ಸ್ಥಳಕ್ಕೆ ಬಂದು ಸಣ್ಣ ಮಟ್ಟದ ಸಮಸ್ಯೆಯಾದರೆ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಚರ್ಚಿಸುತ್ತಾರೆ. ಇದು ಅಸಾಧ್ಯವಾದಲ್ಲಿ ಮೇಲಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಪರಿಹಾರ ಕಲ್ಪಿಸುತ್ತಾರೆ ಎಂದು ತಿಳಿಸಿದರು.
ತಿಂಗಳಿಗೊಮ್ಮೆ ಗ್ರಾಮದಲ್ಲಿ ಸಭೆ ನಡೆಯಲಿದ್ದು, ಮೂರು ತಿಂಗಳಿಗೊಮ್ಮೆ ಠಾಣಾಧಿಕಾರಿ ಹಾಗೂ ಆರು ತಿಂಗಳಿಗೊಮ್ಮೆ ಎಸಿಪಿ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಸ್ಥಳೀಯ ಮಟ್ಟದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವುದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕಿದ್ದು, ಯಾರದ್ದೆ ಹೆಸರು ಬಹಿರಂಗಪಡಿಸುವುದಿಲ್ಲ ಎಂದರು.