ಡಿಸ್ಕಸ್ ಥ್ರೋ: ವಿಕಾಸ್ ಗೌಡರ ಸಾಧನೆಯೇ ಈಗ ಸಮಸ್ಯೆ
ಒಡಿಶಾದಲ್ಲಿ ನಡೆಯುತ್ತಿರುವ ಏಶ್ಯನ್ ಚಾಂಪಿಯನ್ಶಿಪ್ನ ಅಥ್ಲೆಟಿಕ್ ಕೂಟದಲ್ಲಿ ಭಾರತೀಯ ಆಟಗಾರರು ಕೆಲವು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಅಂತಿಮವಾಗಿ ಮೆಡಲ್ ಟ್ಯಾಲಿ ಬಂದಾಗ ಭಾರತವು ಕೊಂಚ ಉತ್ತಮವಾದ ಸ್ಥಾನದಲ್ಲೇ ಇರುತ್ತದೆಂದು ಭಾವಿಸೋಣ. ಆದರೆ ಅದೊಮ್ಮೆ ನಮ್ಮ ದೇಶದ ಗಡಿ ದಾಟಿದರೆ, ಏಶ್ಯಾ ಖಂಡ ದಾಟಿ ಆಚೆಗೆ ಕಾಲಿಟ್ಟರೆ ಆಟಕ್ಕುಂಟು ಲೆಕ್ಕಕ್ಕಿಲ್ಲ.
ಬಹುತೇಕ ಕ್ರೀಡೆಗಳಲ್ಲಿ ವಿಶ್ವ ದಾಖಲೆ, ಒಲಿಂಪಿಕ್ಸ್ ದಾಖಲೆಗಳ ಸಮೀಪಕ್ಕೂ ಭಾರತೀಯ ಕ್ರೀಡಾಪಟುಗಳ ದಾಖಲೆಗಳು ಸಾಗುವುದಿಲ್ಲ.
ಈ ಮಾತನ್ನು ಕೇವಲ ಹಿಯಾಳಿಸಲು ಆಡುತ್ತಿರುವುದಲ್ಲ. ನಮ್ಮ ಸಮಸ್ಯೆ ಏನೆಂದು ವಿವರಿಸಲು ಹೇಳುತ್ತಿರುವ ಮಾತಷ್ಟೆ.
ಕನ್ನಡಿಗ ಕ್ರೀಡಾಪಟು ವಿಕಾಸ್ ಗೌಡರ ಉದಾಹರಣೆಯೊಂದಿಗೆ ಇದನ್ನು ನೋಡೋಣ.
ಡಿಸ್ಕಸ್ ಥ್ರೋನಲ್ಲಿ ಭಾರತದ ದಾಖಲೆಯಾದ 66.28 ಮೀಟರ್ ದೂರದಷ್ಟು ಎಸೆದಿರುವ ಸಾಧನೆ ವಿಕಾಸ್ ಗೌಡರ ಹೆಸರಿನಲ್ಲಿದೆ. ಆದರೆ ಇದೇ ವಿಕಾಸ್ ಮೊನ್ನೆ ಏಶ್ಯನ್ ಕೂಟದಲ್ಲಿ 60.81 ಮೀ. ದೂರ ಎಸೆದು ಮೂರನೆ ಸ್ಥಾನ ಪಡೆದರು. ಮೊದಲ ಸ್ಥಾನ ಪಡೆದು ಚಿನ್ನ ಗೆದ್ದ ಇರಾನ್ನ ಲಹ್ಸಾನ್ ಹದಾದಿ ಡಿಸ್ಕಸ್ ಎಸೆದ ದೂರ 64.54 ಮೀಟರು ಮಾತ್ರ. ಅಂದರೆ ಭಾರತದ ವಿಕಾಸ್ರ ರಾಷ್ಟ್ರೀಯ ದಾಖಲೆಗಿಂತ ಕಡಿಮೆ !
ಆದರೂ ವಿಕಾಸ್ ತನ್ನ ಹಿಂದಿನ ದಾಖಲೆಯ ಸನಿಹಕ್ಕೂ ಬರಲಿಲ್ಲ ಯಾಕೆಂಬುದೇ ಯಕ್ಷ ಪ್ರಶ್ನೆ.
ನಮ್ಮಲ್ಲಿ ಯಾರಾದರೂ ಕ್ರೀಡಾಪಟು ಇಂಟರ್ ನ್ಯಾಷನಲ್ ಈವೆಂಟ್ಗಳಲ್ಲಿ ಒಂದು ಪದಕ ಪಡೆದ ತಕ್ಷಣ ಕಾಮೆಂಟರಿ ಹೇಳುವವರು, ಪತ್ರಿಕಾ ವರದಿಗಾರರು ಒಲಿಂಪಿಕ್ಸ್ ಪದಕದ ಸಾಧ್ಯತೆಯ ಬಗ್ಗೆ ಮಾತು ಚಾಲೂ ಮಾಡಿಬಿಡುತ್ತಾರೆ. ಅನೇಕ ಬಾರಿ ಅವರ ಮಾತುಗಳಿಗೂ ವಾಸ್ತವಕ್ಕೂ ಸಂಬಂಧವೇ ಇರುವುದಿಲ್ಲ.
ವಿಕಾಸ್ರನ್ನು ಒಲಿಂಪಿಕ್ಸ್ನಲ್ಲಿ ಭಾರತದ ಆಶಾಕಿರಣವೆಂದು ಅನೇಕ ಬಾರಿ ಬಿಂಬಿಸಲಾಗಿದೆ. ಆದರೆ ವಾಸ್ತವ ಏನೆಂದು ವಿಕಾಸ್ರ ಇತ್ತೀಚಿನ ಸಾಧನೆಯ ಅಂಕಿ ಅಂಶಗಳ ಮೂಲಕ ಒಮ್ಮೆ ನೋಡೋಣ.
ಈಗೊಮ್ಮೆ ಡಿಸ್ಕಸ್ ಎಸೆತದಲ್ಲಿನ ವಿಶ್ವದಾಖಲೆಗಳತ್ತ ನೋಡೋಣ.
ಒಲಿಂಪಿಕ್ಸ್
ಪುರುಷರು -68.37 ಮೀಟರ್
ಮಹಿಳೆ-69.89 ಮೀಟರ್
ವಿಶ್ವ ಚಾಂಪಿಯನ್ಶಿಪ್
ಪುರುಷರು-74.08 ಮೀಟರ್
ಮಹಿಳೆ-76.80 ಮೀಟರ್
ಈಗ ನಮ್ಮ ಸಮಸ್ಯೆ ಏನೆಂದು ನೋಡೋಣ.
ಈಗಿನ ಏಶ್ಯನ್ ಚಾಂಪಿಯನ್ಶಿಪ್ನ ಡಿಸ್ಕಸ್ ಈವೆಂಟ್ನಲ್ಲಿ ಭಾಗಿಯಾಗುವ ಭಾರತದ ಕ್ರೀಡಾಪಟು ಯಾರೆಂಬುದನ್ನು ಕೊನೆಯ ಗಳಿಗೆಯವರೆಗೂ ನಮ್ಮ ಸರಕಾರ ನಿರ್ಧರಿಸದೆ ಗೊಂದಲದಲ್ಲಿತ್ತು. ಕೊನೆಗೆ ವಿಕಾಸ್ ಗೌಡರನ್ನೇ ಅಖಾಡಕ್ಕಿಳಿಸಲಾಯಿತು. ಏಕೆಂದರೆ 130 ಕೋಟಿ ಭಾರತೀಯರಲ್ಲಿ 65 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯಬಲ್ಲ ಇನ್ನೊಬ್ಬರನ್ನು ಭಾರತ ಸೃಷ್ಟಿಸಲು ಇದುವರೆಗೂ ಅಗಿಲ್ಲ. ಈಗಿರುವ ವಿಕಾಸ್ಗೆ ಚಿನ್ನದ ಪದಕ ತರಲು ಆಗುತ್ತಿಲ್ಲ.
ವಿಕಾಸ್ರ ಸಾಧನೆಯು ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದಿರಲಿ ಅರ್ಹತಾ ಮಟ್ಟವಾದ 65 ಮೀ. ಸಹ ಎಂದೂ ತಲುಪಿಲ್ಲ. ವಿಪರ್ಯಾಸ ಏನೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಇನ್ನಿತರ ಡಿಸ್ಕಸ್ ಥ್ರೋ ಕ್ರೀಡಾಳುಗಳು ವಿಕಾಸ್ ಮಟ್ಟದಲ್ಲಿಲ್ಲ.
ವಿಕಾಸ್ರಿಗೆ 2017ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿದೆ. ಭಾರತದ ಗೌರವವನ್ನು ಅವರು ಕಾಪಾಡಿದ್ದಾರೆ. ಅವರಿಗೆ ವಿದಾಯ ಹೇಳಿ ಬೇರೆ ಕ್ರೀಡಾಪಟುಗಳನ್ನು ರೂಪಿಸುವತ್ತ ಗಮನ ನೀಡಬೇಕೆಂದು ಯಾರಿಗೂ ಯಾಕೆ ಅನಿಸುತ್ತಿಲ್ಲ? ಈಗ 35 ವರ್ಷವಾಗಿರುವ ಈ ವಿಕಾಸ್ ಕೂಡ ತನ್ನ ಕೆರಿಯರ್ ಮುಗಿಯಿತೆಂಬುದನ್ನು ಅರ್ಥ ಮಾಡಿಕೊಂಡು ಬೇರೆಯವರಿಗೆ ಯಾಕೆ ಅವಕಾಶ ನೀಡಬಾರದು? ಏಕೆಂದರೆ ಅವರ ಸಾಧನೆಯು ಉತ್ತಮಗೊಳ್ಳುವ ಸಾಧ್ಯತೆ ಕ್ಷೀಣಿಸುತ್ತಿದೆ. ಅಂಕಿ ಅಂಶಗಳೂ ಅದನ್ನೇ ಹೇಳುತ್ತಿವೆ.
ಈಜು, ಜಿಮ್ನಾಶಿಯಂ, ಅಥ್ಲೆಟಿಕ್ಸ್ ಗಳಲ್ಲಿ ಚಿನ್ನ ಗೆದ್ದವರೂ ಸಹ 25ನೆ ವಯಸ್ಸು ದಾಟಿದ ನಂತರ ಬದಿಗೆ ಸರಿಸಲ್ಪಡುತ್ತಾರೆ. ಅವರ ಸ್ಥಾನಗಳನ್ನು ಹೊಸಬರು ಆಕ್ರಮಿಸಿಕೊಳ್ಳುತ್ತಾರೆ. ಇದು ಒಬ್ಬರು ಇನ್ನೊಬ್ಬ ಸಾಧಕರಿಗೆ ಮಾಡುವ ಅವಮಾನವಲ್ಲ. ಅದು ಸ್ಪರ್ಧೆ, ಯಾರು ಉನ್ನತ ಸಾಧನೆ ಮಾಡಬಲ್ಲರೊ ಅವರಿಗೆ ಸ್ಪರ್ಧಿಸುವ ಅವಕಾಶ ಸಿಗಬೇಕೆಂಬುದು ಕ್ರೀಡಾ ಸ್ಫೂರ್ತಿ, ಅದೇ ಪದಕ ಜಯಿಸಲು ಅಳವಡಿಸಿಕೊಳ್ಳಬೇಕಾದ ನಿಯಮ.
ಭಾರತದ ಕ್ರೀಡಾ ಆಡಳಿತಗಾರರಿಗೆ ಈ ಧೋರಣೆ ಬರದ ಹೊರತು ನಾವು ವಿಶ್ವ ಕ್ರೀಡಾ ನಕ್ಷೆಯಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಲಾಗುವುದಿಲ್ಲ.