ಟ್ರಂಪ್, ಮೋದಿ ಭೇಟಿ: ಒಂದು ಪರಾಮರ್ಶೆ
ಭಾಗ-3
ವಾಸ್ತವವಾಗಿ ಭಯೋತ್ಪಾದನೆ ವಿರುದ್ಧದ ಇಂತಹ ಹೇಳಿಕೆಗಳೆಲ್ಲ ಬರೀ ಸಾಂಕೇತಿಕ. ಇದರಿಂದ ಪಾಕಿಸ್ತಾನದ ಮೇಲೆ ಯಾವ ಪರಿಣಾಮವೂ ಆಗದು. ಇಂತಹ ಎಚ್ಚರಿಕೆಗಳನ್ನು ಈ ಹಿಂದೆಯೂ ನೀಡಲಾಗಿದೆ. ಇದರ ಹೊರತಾಗಿಯೂ ಪಾಕಿಸ್ತಾನಕ್ಕೆ ಯುದ್ಧ ಸಾಮಗ್ರಿಗಳ ಸರಬರಾಜು ಮುಂದುವರಿಯುತ್ತಲೇ ಇದೆ. ಎಲ್ಲಿಯ ತನಕ ಅಮೆರಿಕದಿಂದ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವು ಮುಂದುವರಿಯುತ್ತದೋ ಅಲ್ಲಿಯ ತನಕ ಯಾವುದೇ ಗಮನಾರ್ಹ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಇದೆಲ್ಲದರ ಮಧ್ಯೆ ಒಂದು ಮುಖ್ಯ ವಿಷಯವನ್ನು ನಾವು ಮರೆಯಬಾರದು: ಅಮೆರಿಕ ಅಲ್ಖಾಯಿದದಂತಹ ಉಗ್ರಗಾಮಿ ಸಂಘಟನೆಗಳನ್ನು ಹುಟ್ಟುಹಾಕಿರುವುದೇ ತನ್ನ ಜಾಗತಿಕ ರಾಜಕಾರಣದ ಭಾಗವಾಗಿ. ವಿಶ್ವದಾದ್ಯಂತ ಉಗ್ರರ ಚಟುವಟಿಕೆಗಳು ಹೆಚ್ಚಿದಷ್ಟೂ ಅಮೆರಿಕದ ಮಿಲಿಟರಿ ಶಸ್ತ್ರಾಸ್ತ್ರ ಉದ್ಯಮಕ್ಕೆ ಲಾಭ.
ಭಕ್ತರ ಪ್ರೀತ್ಯರ್ಥ ವರ್ಜೀನಿಯದಲ್ಲಿ ತನ್ನ ಎನ್ನಾರೈ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ ‘‘ಭಾರತ ಸಂಯಮ ಕಾಪಾಡಿಕೊಳ್ಳುತ್ತದೆ. ಆದರೆ ಅಗತ್ಯಬಿದ್ದಾಗ ತನ್ನ ಶಕ್ತಿಯನ್ನು ತೋರಿಸಬಲ್ಲುದು’’ ಎಂದು ತನ್ನ ಯಥಾಪ್ರಕಾರದ ಹಾವಭಾವಗಳೊಂದಿಗೆ ಘೋಷಿಸಿದ್ದಾರೆೆ. ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಿದ ಸರ್ಜಿಕಲ್ ದಾಳಿಗಳು ಭಾರತದ ಶಕ್ತಿಯನ್ನು ಸಾಬೀತುಪಡಿಸಿವೆ ಎಂದು ಒತ್ತಿ ಹೇಳುತ್ತಾ ‘56 ಇಂಚು’ ಎದೆಗಾರಿಕೆಯ ಪ್ರದರ್ಶನ ಮಾಡಿದ್ದಾರೆೆ. ಆದರೆ ಸರ್ಜಿಕಲ್ ದಾಳಿಯ ಅರ್ಥವನ್ನೆ ತಿರುಚಲಾಗಿದೆ. ನಿಜವಾಗಿ ಸರ್ಜಿಕಲ್ ದಾಳಿ ಅಂದರೆ ನಿರ್ದಿಷ್ಟ ಶತ್ರು ಪ್ರದೇಶದ ಮೇಲೆ ವಾಯುಸೇನೆಯ ವಿಮಾನಗಳ ಮೂಲಕ ಕಮಾಂಡೊಗಳನ್ನು ಇಳಿಸಿ ಅಥವಾ ಬಾಂಬ್ಗಳನ್ನು ಸ್ಫೋಟಿಸುವ ಮೂಲಕ ನಡೆಸುವ ಕಾರ್ಯಾಚರಣೆ. ಆದರೆ ಭಾರತೀಯ ಸೇನೆ ಅಂತಹದೇನನ್ನೂ ಮಾಡಿಲ್ಲ ಎಂದು ಬಿಬಿಸಿ ನಡೆಸಿರುವ ತನಿಖೆಯಿಂದ ತಿಳಿದುಬಂದಿದೆ.
ಅದು ವೈಮಾನಿಕ ದಾಳಿಯೂ ಆಗಿರಲಿಲ್ಲ; ವಿಮಾನದಲ್ಲಿ ಸೈನಿಕರನ್ನು ಇಳಿಸಿಯೂ ಇರಲಿಲ್ಲ. ಭಾರತದ ಸೈನಿಕರು ಗಡಿ ನಿಯಂತ್ರಣ ರೇಖೆ ದಾಟಿ ಕೆಲವೊಮ್ಮೆ ಒಂದು ಕಿ.ಮೀ.ನಷ್ಟು ಒಳಕ್ಕೆ ನುಸುಳಿ ಸಮೀಪದ ಪಾಕಿಸ್ತಾನಿ ಪಾಳೆಯಗಳ ಮೇಲೆ ದಾಳಿ ಮಾಡಿದ್ದರು ಅಷ್ಟೆ! ಇಂತಹ ಕಾರ್ಯಾಚರಣೆಗಳು ಈ ಹಿಂದೆ ಅದೆಷ್ಟೊ ಬಾರಿ ನಡೆದಿವೆಯಾದರೂ ಅದನ್ನು ಸಾರ್ವಜನಿಕವಾಗಿ ಪ್ರಚುರ ಪಡಿಸಿರಲಿಲ್ಲ. ಸಮಾಜದಲ್ಲಿ ಯುದ್ಧದ ಭಾವೋನ್ಮಾದವನ್ನು ಸೃಷ್ಟಿಸಿರಲಿಲ್ಲ. ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ಇದೇ! ಮೋದಿ ಸರಕಾರ ಇಂತಹ ಕೀಳು ಪ್ರಚಾರತಂತ್ರಗಳ ಮೂಲಕ ಜನರ ಭಾವನಾತ್ಮಕ ತಪ್ಪಲೆ ಕುದಿಯುತ್ತಲೇ ಇರುವಂತೆ ನೋಡಿಕೊಳ್ಳುತ್ತಿದೆ.
ಮೋದಿಯ ಇಮೇಜನ್ನು ಹೆಚ್ಚಿಸಲು ಸಾಂಪ್ರದಾಯಿಕ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಫೇಸ್ಬುಕ್, ಟ್ವಿಟರ್, ವಾಟ್ಸ್ ಆ್ಯಪ್ ಇತ್ಯಾದಿಗಳಲ್ಲಿ ನಾನಾ ವಿಧದ ತಂತ್ರಗಾರಿಕೆಗಳನ್ನು ಬಳಸಲಾಗುತ್ತಿರುವುದನ್ನು ಎಲ್ಲರೂ ಬಲ್ಲರು. ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿಯೂ ಇಂತಹದೊಂದು ತಂತ್ರಗಾರಿಕೆ ನಡೆದಿದೆ. ಮೋದಿಯ ಅಸಾಧಾರಣ ವ್ಯಕ್ತಿತ್ವವನ್ನು ಗುರುತಿಸಿರುವ ಅಮೆರಿಕ ಅವರಿಗೆ ಎಂತಹ ಭವ್ಯ ಸ್ವಾಗತ ನೀಡಿ ಗೌರವಿಸಿದೆ ಎಂಬ ಹೆಮ್ಮೆಯ ಭಾವನೆಯೊಂದನ್ನು ಹಬ್ಬಿಸುವುದಕ್ಕೋಸ್ಕರ ವೈಟ್ಹೌಸ್ಗೆ ಹೋಗುತ್ತಿರುವ ಪ್ರಧಾನಿ ಮೋದಿ ಹೆಸರಿನ ವೀಡಿಯೊ ಒಂದನ್ನು ಮೋದಿ ಭಜಕರು ಹರಿಬಿಟ್ಟಿದ್ದಾರೆ.
ನೂರಾರು ವಾಹನಗಳಿಂದ ಕೂಡಿದ ಈ ಭವ್ಯ ಮೆರವಣಿಗೆಯ ದೃಶ್ಯವನ್ನು ಲಕ್ಷಾಂತರ ಜನ ವೀಕ್ಷಿಸಿ ಪುಳಕಿತರೂ ಆಗಿರಬಹುದು. ಆದರೆ ಅಸಲಿಗೆ ಇದೊಂದು ನಕಲಿ ವೀಡಿಯೊ. 2010ರಲ್ಲಿ ಅಂದಿನ ಅಧ್ಯಕ್ಷ ಒಬಾಮಾ ಸಾನ್ಫ್ರಾನ್ಸಿಸ್ಕೊ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾರೊ ಒಬ್ಬಾತ ತನ್ನ ಹೊಟೇಲ್ ಕೊಠಡಿಯಿಂದ ಚಿತ್ರಿಸಿದ ವೀಡಿಯೊವನ್ನೇ ಮೋದಿ ಸ್ವಾಗತ ವೀಡಿಯೊ ಎಂದು ಬಿಂಬಿಸಿ ಜನರನ್ನು ಬೇಸ್ತು ಬೀಳಿಸಲಾಗಿದೆ! ಅಮೆರಿಕ ಇರಲಿ ಅಥವಾ ಟಿಂಬಕ್ಟೂ ಇರಲಿ ಎಲ್ಲಾ ಕಡೆಗಳಿಗೂ ಮೋದಿ ತಾನೇ ಖುದ್ದು ಭೇಟಿ ನೀಡುವುದರ ಹಿಂದಿನ ಒಂದು ಮುಖ್ಯ ಉದ್ದೇಶ ತನ್ನ ಇಮೇಜನ್ನು ವೃದ್ಧಿಸುವುದೇ ಆಗಿದೆ. ಭಟ್ಟಂಗಿ ಮಾಧ್ಯಮಗಳ ಸಹಾಯದಿಂದ ಆ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯುತ್ತಲೂ ಇದೆ! ಮೋದಿ, ಟ್ರಂಪ್ ಭೇಟಿಯಿಂದ ಅಸಲಿಗೆ ಭಾರತಕ್ಕೆ ಏನು ಲಾಭವಾಗಿದೆ ಎನ್ನುವುದನ್ನು ಮುಂದಿನ ದಿನಗಳೇ ಹೇಳಲಿವೆ.
(ಆಧಾರ: ವಿವಿಧ ಮೂಲಗಳಿಂದ)