ತಣ್ಣಗಿನ ನೀರು ಅಥವಾ ಬೆಚ್ಚನೆಯ ನೀರು:ನಿಮ್ಮ ಆರೋಗ್ಯಕ್ಕೆ ಯಾವುದು ಉತ್ತಮ?
ಬೆಳಿಗ್ಗೆ ಎದ್ದ ಕೂಡಲೇ ಒಂದು ಕಪ್ ಚಹಾ ಅಥವಾ ಕಾಫಿ ಅಥವಾ ನೀರು ಕುಡಿಯುವುದು ಹೆಚ್ಚಿನವರ ಸಾಮಾನ್ಯ ಅಭ್ಯಾಸ. ಬೆಳಿಗ್ಗೆ ದ್ರವಸೇವನೆಯ ಗರಿಷ್ಠ ಲಾಭವನ್ನು ಪಡೆದುಕೊಳ್ಳಲು ನೀರು ಕುಡಿಯಬೇಕೆನ್ನುವುದು ನಿಮಗೆ ಗೊತ್ತೇ? ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬೆಚ್ಚನೆಯ ನೀರು ಕುಡಿಯುವುದರಿಂದ ನೀವು ತಿಳಿದಿರುವುದಕ್ಕಿಂತ ಹೆಚ್ಚಿನ ಆರೋಗ್ಯ ಲಾಭಗಳಿವೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.
ಬೆಳಿಗ್ಗೆ ಎದ್ದ ಬಳಿಕ ಮಾಡುವ ಮೊದಲ ಕೆಲಸ ಬೆಚ್ಚನೆಯ ನೀರಿನ ಸೇವನೆಯಾಗಿದ್ದರೆ ಅದು ಗರಿಷ್ಠ ಉತ್ಪಾದಕತೆಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ನಮ್ಮ ದೇಹದ ಶೇ.70ರಷ್ಟು ಭಾಗ ನೀರೇ ಆಗಿದ್ದು, ಅದು ನಮ್ಮ ದೈನಂದಿನ ಜೀವನದ ಮುಖ್ಯಭಾಗವೂ ಆಗಿದೆ. ಮನುಷ್ಯ ಆಹಾರವಿಲ್ಲದೆ ಹಲವಾರು ದಿನಗಳ ಕಾಲ ಬದುಕಿರಬಲ್ಲ, ಆದರೆ ನೀರು ಕುಡಿಯದಿದ್ದರೆ ಒಂದು ವಾರವೂ ಬದುಕಿರುವುದಿಲ್ಲ. ಅಂದ ಹಾಗೆ ಬೆಚ್ಚನೆಯ ನೀರಿನಲ್ಲಿರುವ ಪೋಷಕಾಂಶಗಳಿಗೂ ತಣ್ಣನೆಯ ಅಥವಾ ಸಾಮಾನ್ಯ ನೀರಿನಲ್ಲಿರುವ ಪೋಷಕಾಂಶಗಳಿಗೂ ಅಂತಹ ಯಾವುದೇ ಮಹತ್ವದ ವ್ಯತ್ಯಾಸವಿಲ್ಲ.
ನೀರು ಶೂನ್ಯ ಕ್ಯಾಲೊರಿ ಹೊಂದಿರುವ ಆರೋಗ್ಯಪೂರ್ಣ ಪೇಯವಾಗಿದ್ದು, ಅದು ನಮ್ಮ ದೇಹದ ವಿವಿಧ ಚಟುವಟಿಕೆಗಳಿಗೆ ಅತ್ಯಗತ್ಯವಾಗಿದೆ. ಆದರೆ ನೀರು ಕೆಲವು ಖನಿಜಾಂಶಗಳನ್ನು ವಿವಿಧ ಪ್ರಮಾಣಗಳಲ್ಲಿ ಒಳಗೊಂಡಿರುತ್ತದೆ ಮತ್ತು ಅದು ನೀರಿನ ಮೂಲವನ್ನು ಅವಲಂಬಿಸಿರುತ್ತದೆ.
ಹಲವಾರು ಮನೆಮದ್ದುಗಳು ಬೆಳಿಗ್ಗೆ ಬೆಚ್ಚನೆಯ ನೀರನ್ನು ಕುಡಿಯುವುದಕ್ಕೆ ಹೆಚ್ಚಿನ ಒತ್ತು ನೀಡುತ್ತವೆ. ನೀವು ಬೆಚ್ಚನೆಯ ನೀರನ್ನೇ ಏಕೆ ಕುಡಿಯಬೇಕು ಎನ್ನುವುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ..........
ಬೆಚ್ಚನೆಯ ನೀರಿನ ಲಾಭಗಳು
ಅದು ನೋವು ನಿವಾರಕ:
ಬೆಚ್ಚನೆಯ ನೀರಿನ ಸೇವನೆ ಗಂಟಲಿನಲ್ಲಿಯ ಊತವನ್ನು ತಗ್ಗಿಸುತ್ತದೆ ಮತ್ತು ತಾತ್ಕಾಲಿಕ ಪರಿಹಾರವನ್ನು ಒದಗಿಸುತ್ತದೆ. ಗಂಟಲು ಉರಿಯುತ್ತಿದ್ದರೆ ಮತ್ತು ಒಣಗಿದ್ದರೆ ಅದು ಅಚ್ಚರಿಯಾಗುವಂಥ ಶಮನವನ್ನು ನೀಡುತ್ತದೆ. ಬೆಳಿಗ್ಗೆ ಒಣಗಿದ ಗಂಟಲಿನೊಂದಿಗೆ ಎದ್ದಾಗ ಮತ್ತು ಏನಾದರೂ ನುಂಗುವಾಗ ನೋಯುತ್ತಿದ್ದರೆ ಬೆಚ್ಚನೆಯ ನೀರಿನ ಸೇವನೆ ಅತ್ಯುತ್ತಮ ಪರಿಹಾರವಾಗಿದೆ.
ಕರುಳಿನ ಚಲನವಲನ ಹೆಚ್ಚಿಸುತ್ತದೆ:
ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚನೆಯ ನೀರಿನ ಸೇವನೆಯು ದೊಡ್ಡಕರುಳಿನ ಹಿಂಭಾಗದ ಜೀವಕಣಗಳನ್ನು ಉದ್ದೀಪಿಸುತ್ತದೆ ಮತ್ತು ಕರುಳಿನ ಚಲನವಲನವನ್ನು ಸುಗಮಗೊಳಿಸುತ್ತದೆ. ಅಲ್ಲದೆ ದಿನದಲ್ಲಿ ನಿಮ್ಮ ದೇಹವು ಉತ್ತಮವಾಗಿ ಆಹಾವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಇದು ಬೆಚ್ಚನೆಯ ನೀರಿನ ಸೇವನೆಯ ಅತ್ಯುತ್ತಮ ಲಾಭಗಳಲ್ಲೊಂದಾಗಿದೆ.
ರಕ್ತಸಂಚಾರ ಉತ್ತಮ:
ಬೆಚ್ಚನೆಯ ನೀರಿನ ಸೇವನೆ ರಕ್ತಸಂಚಾರವನ್ನು ಸುಗಮಗೊಳಿ ಸುತ್ತದೆ. ನಮ್ಮ ದೇಹವು ಹೆಚ್ಚಿನ ಉಷ್ಣತೆಗೆ ತೆರೆದುಕೊಂಡಾಗ ರಕ್ತಕಣಗಳ ಹರಿವು ಗಣನೀಯವಾಗಿ ಹೆಚ್ಚುತ್ತದೆ ಎನ್ನುವುದು ಹಲವಾರು ಅಧ್ಯಯನಗಳಿಂದ ವೇದ್ಯವಾಗಿದೆ.
ತೂಕ ಇಳಿಕೆಗೆ ಸಹಾಯಕ:
ದೇಹದ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಬೆಚ್ಚನೆಯ ನೀರಿನ ಸೇವನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ಹಸಿವನ್ನು, ದೇಹತೂಕವನ್ನು ಮತ್ತು ಬಾಡಿ ಮಾಸ್ ಇಂಡೆಕ್ಸ್(ಬಿಎಂಐ)ನ್ನು ತಗ್ಗಿಸುತ್ತದೆ.
ತಣ್ಣನೆಯ ನೀರಿನ ಸೇವನೆ ಏಕೆ ಕೆಟ್ಟದ್ದು?
ಜಲೀಕರಣವನ್ನು ತಗ್ಗಿಸುತ್ತದೆ:
ತಣ್ಣನೆಯ ನೀರಿನ ಸೇವನೆಯಿಂದ ದೇಹದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ ಮತ್ತು ಇದು ಜಲೀಕರಣವನ್ನು ತಗ್ಗಿಸುತ್ತದೆ. ಸಾಕಷ್ಟು ನೀರನ್ನು ಸೇವಿಸದಿದ್ದರೆ ಅದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಪಚನಕ್ರಿಯೆಯಲ್ಲಿ ವ್ಯತ್ಯಯ:
ತಣ್ಣನೆಯ ನೀರಿನ ಸೇವನೆಯಿಂದ ಆಹಾರವನ್ನು ಅರಗಿಸಿ ಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ. ತಂಪುದ್ರವಗಳು ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಘನೀಕರಿಸುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ತಣ್ಣನೆಯ ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ನೀವು ಭಾವಿಸಿದ್ದರೆ ಅದು ತಪ್ಪು.
ದೇಹವನ್ನು ಬಿಸಿಯಾಗಿಸುತ್ತದೆ:
ಇದು ವಿಲಕ್ಷಣವೆನಿಸಬಹುದು...ಆದರೆ ಇದು ಸತ್ಯ. ತಣ್ಣನೆಯ ನೀರನ್ನು ಸೇವಿಸಿದಾಗ ದೇಹವು ತನ್ನನ್ನು ಬಿಸಿಗೊಳಿಸಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ವ್ಯಯಿಸುತ್ತದೆ ಮತ್ತು ಅದನ್ನು ಬಳಸಿಕೊಳ್ಳುತ್ತದೆ.
ಹೆಚ್ಚಿನ ಲೋಳೆಗೆ ಕಾರಣ:
ತಣ್ಣನೆಯ ನೀರು ದೇಹದ ಉಸಿರಾಟ ವ್ಯವಸ್ಥೆಯಲ್ಲಿ ಮ್ಯೂಕಸ್ ಅಥವಾ ಲೋಳೆ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಮೂಗು ಕಟ್ಟುತ್ತದೆ ಮತ್ತು ಗಂಟಲು ಸೋಂಕಿನ ಅಪಾಯ ಹೆಚ್ಚುತ್ತದೆ.