ಕೋಟಿ ಕೋಟಿ ಕಪ್ಪು ಜನರ ಮೊದಲ ಮಾತು
ನಮ್ಮ ಸಮಕಾಲೀನ ಸಮಾಜದ ಪರಮಾದ್ಭುತ ಎಂಬ ರಮ್ಯ ಪದ ಬಳಸಿ ಹೇಳ ಬಹು ದಾದ ಒಂದು ಕಥಾನಕವೆಂದರೆ ಅದು ಅಂಬೇಡ್ಕರ್‌ರವರ ಜೀವನ. ಕನಿಷ್ಠ ಎರಡೂವರೆ ಸಾವಿರ ವರ್ಷಗಳಷ್ಟು ಸುದೀರ್ಘ ಇತಿಹಾಸವುಳ್ಳ ಜಾತಿ ವ್ಯವಸ್ಥೆಯ ವಿನ್ಯಾಸ ಕಳೆದ 70 ವರ್ಷಗಳಲ್ಲಿ ತೀರಾ ಭಿನ್ನವಾಗಿ ಬದಲಾವಣೆಗೊಂಡು, ಹೊಸ ಸಾಮಾಜಿಕ ವಿನ್ಯಾಸದ ಕಡೆಗೆ ಮುಂದುವರಿಯುತ್ತಿರುವುದಕ್ಕೆ ಮುಖ್ಯ ಕಾರಣಕರ್ತರು ಡಾ. ಬಿ.ಆರ್.ಅಂಬೇಡ್ಕರ್.
ಅಂಬೇಡ್ಕರ್ ಅವರು ದಲಿತರಾಗಿಲ್ಲದಿದ್ದರೆ, ದಲಿತರಾಗಿದ್ದೂ ಅಷ್ಟು ಉನ್ನತ ವಿದ್ಯಾಭ್ಯಾಸ ವನ್ನು ಹೊಂದುವ ಅವಕಾಶವನ್ನು ಪಡೆದಿಲ್ಲದೇ ಇದ್ದಿದ್ದರೆ, ಹಾಗೆ ಅದನ್ನು ಪಡೆದೂ ಅವರು ಸಾಮಾಜಿಕ ಬದಲಾವಣೆಯ ಹೋರಾಟ ಪ್ರಕ್ರಿಯೆಗೆ ಇಳಿಯದೆ, ತಮ್ಮ ವಿದ್ಯಾಭ್ಯಾಸದ ಅರ್ಹತೆಗನುಸಾರವಾಗಿ ಯಾವುದಾದರೂ ವಿದೇಶೀ ವಿಶ್ವವಿದ್ಯಾನಿಲಯ ಗಳಲ್ಲಿ ಅವರು ಅಧ್ಯಾಪನ, ಬರವಣಿಗೆ, ಉಪನ್ಯಾಸ ಎಂಬ ಬಗೆಯ ವಿಷಯತಜ್ಞರಾಗಿ ಉಳಿದುಕೊಂಡು ಬಿಟ್ಟಿದ್ದರೆ ಏನಾಗಿರುತ್ತಿತ್ತು?
ಹಾಗೊಂದು ವೇಳೆ ಅವರು ಸಾಮಾಜಿಕ ಹೋರಾಟದ ನಾಯಕರಾಗಿದ್ದೂ ಸಂವಿಧಾನ ರಚನಾ ಸಮಿತಿಯ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿಲ್ಲದಿದ್ದರೆ, ಸ್ವಾತಂತ್ರ್ಯಾ ನಂತರದ ಭಾರತೀಯ ಸಮಾಜದ ನಡೆ ಈ 70 ವರ್ಷಗಳಲ್ಲಿ ಈಗಿರುವ ದಿಕ್ಕಿನಲ್ಲಿ ಇರುತ್ತಿತ್ತೇಎಂದು ಆಲೋಚಿಸಿದರೆ ಅಚ್ಚರಿಯೂ, ಆತಂಕವೂ ಉಂಟಾಗುತ್ತದೆ.
ಕವಿ ಸಿದ್ಧಲಿಂಗಯ್ಯನವರು ತಮ್ಮದೊಂದು ಹೆಸರಾಂತ ಕವಿತೆಯಲ್ಲಿ ‘ಕೋಟಿ ಕೋಟಿ ಕಪ್ಪು ಜನರ ಮೊತ್ತಮೊದಲ ಮಾತೇ, ಆಕಾಶದ ಅಗಲಕ್ಕೂ ನಿಂತ ಆಲವೇ ಎಂದು ವರ್ಣಿಸಿ ದ್ದಾರೆ. ಈ ಕವಿತೆಯ ಮೊದಲ ಸಾಲು ಹೇಳುವ ರೂಪಕ ಯಾವ ಮಾತ್ರಕ್ಕೂ ಉತ್ಪ್ರೇಕ್ಷೆಯದಲ್ಲ ವೆಂದು ನಾನು ಖಚಿತವಾಗಿ ಹೇಳಬಲ್ಲೆ.ಅದಕ್ಕೊಂದು ಒಳಾರ್ಥವಿದೆ. ಅದಕ್ಕೊಂದು ಲಕ್ಷ್ಯಾರ್ಥವಿದೆ. ಅದರಲ್ಲೊಂದು ಅತೀ ಮಹತ್ವದ ಧ್ವನಿ ಅಡಗಿದೆ.
ಈ ಕೋಟಿ ಕೋಟಿ ಕಪ್ಪು ಜನ 5,000 ವರ್ಷಗಳಿಂದಲೂ ಈ ಭರತ ವರ್ಷದ ಜಂಬೂ ದ್ವೀಪದ ನಿವಾಸಿಗಳಾಗಿಯೇ ಇದ್ದಾರೆ. ಪರಸ್ಪರ ಸಂಘರ್ಷಿಸಿ, ಸಹಕರಿಸಿ, ಸಂಕರ ಗೊಂಡು ನಾಡು, ನಗರಗಳನ್ನು, ನಾಗರಿಕತೆಗಳಲ್ಲಿ ಕಟ್ಟಿದವರಾಗಿದ್ದರು.ತಮ್ಮ ಶಿಲಾಯುಗದ ವಿಕಾಸದ ಹಂತವನ್ನು ದಾಟಿದ ನಂತರದಿಂದಲೂ ನಿರರ್ಗಳವಾಗಿ ಮಾತಾಡುತ್ತಾ, ಹಾಡುತ್ತಾ, ಕಾವ್ಯ ರಚಿಸುತ್ತಾ, ಗಾದೆ, ಒಡಪು, ಒಗಟು, ನಾಣ್ಣುಡಿ, ಚೆನ್ನುಡಿಗಳನ್ನು ನಿರ್ಮಿ ಸುತ್ತಾ, ಶೋಧಕ ಪ್ರವೃತ್ತಿಯಿಂದ ಪ್ರಕೃತಿಯ ಹೊಸ ಹೊಸ ರಹಸ್ಯಗಳನ್ನು ಅರಿಯುತ್ತಾ, ಅದಕ್ಕನುಸಾರವಾಗಿ ವಿಜ್ಞಾನ ತಂತ್ರಜ್ಞಾನಗಳನ್ನು ರೂಪಿಸಿಕೊಳ್ಳುತ್ತಾ ಬಂದವರಾಗಿದ್ದರು.
ಇತಿಹಾಸದ ಈ ನಡೆಯಲ್ಲಿ ಯಾವುದೋ ಕತ್ತಲ ಬಲೆ ಅವರನ್ನು ಸೆರೆ ಹಿಡಿಯಿತು. ಬಿಡಿಸಿ ಕೊಳ್ಳಲಾಗದಂತೆ ಬಂಧಿಸಿತು. ತಮ್ಮ ಪರಂಪರೆಗೆ, ತಮ್ಮ ಸಂಸ್ಕೃತಿಗೆ, ತಮ್ಮ ಜ್ಞಾನಕ್ಕೆ, ತಮ್ಮ ತಾಂತ್ರಿಕ ಔನ್ನತ್ಯಕ್ಕೆ, ತಮ್ಮ ಮಾನ ಹಾಗೂ ಪ್ರಾಣಕ್ಕೆ ತಾವೇ ಪರಕೀಯರಾಗುವಂತಹ ವೇದನೀಯ ಪರ್ವವೊಂದು ಶುರುವಾಯಿತು. ಈ ಅಂಧಕಾರ ಯುಗದಲ್ಲಿ ಎಂದೂ ಕೋಲ್ಮಿಂಚುಗಳು ಹೊಳೆಯಲಿಲ್ಲ ಎಂದಲ್ಲ. ಆದರೆ ಅವುಗಳು ಆವರಿಸಿದ ಸಮುದ್ರದ ನಡುವಿನ ಉಪ್ಪಿನ ಗಡ್ಡೆಗಳಂತೆ ಕರಗಿ ಹೋಗಬೇಕಾಯಿತು.
ಶಾಕ್ಯ ಮುನಿ ಗೌತಮ ಬುದ್ಧ ಬಂದ. ಜೈನ ಮಹಾವೀರ ಬಂದ. ಅಲ್ಲಿಂದಲೂ ಪ್ರತೀ ಯುಗ ದಲ್ಲೂ, ಪ್ರತಿಯೊಂದು ಹಂತದಲ್ಲೂ ತೆರೆಯಂತೆ, ಹೆದ್ದೆರೆಗಳಂತೆ ಬಂಡಾಯದವಾದಗಳು, ತತ್ವ ದರ್ಶನಗಳು, ದಾರ್ಶನಿಕರು, ಅವತಾರ ಪುರುಷರು ಬರುತ್ತಾ ಹೋಗಿದ್ದು ನಿಜ. ಬುದ್ಧ ಮತ್ತು ಮಹಾವೀರನನ್ನು ಬಿಟ್ಟರೆ ಮಿಕ್ಕ ಬಹುಪಾಲು ಬದಲಾವಣೆಯ ಸಂಕೇತಗಳು ಸ್ಥಳ, ಕಾಲ ವ್ಯಾಪ್ತಿಗೆ ಒಳಪಟ್ಟು ಸೀಮಿತಗೊಂಡಿದ್ದವು.ಒಟ್ಟಾರೆಯಾಗಿ ಸಂಪೂರ್ಣ ಬದಲಾವಣೆ ಅನ್ನುವುದು ಆಗಸದ ಚುಕ್ಕೆಯಾಗಿಯೇ ಉಳಿದುಬಂತು.
ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಧ್ಯಯುಗೀನ ಇತಿಹಾಸ ಸ್ವಲ್ಪ ಭಿನ್ನ ಚಹರೆ ಗಳನ್ನು ತಳೆದಿತ್ತು. ನಾಥ-ಸಿದ್ಧ ಪಂಥಗಳು, ಶಾಕ್ಯ-ತಾಂತ್ರಿಕ ಪಂಥಗಳು, ಶೈವ-ವೈಷ್ಣವ ಭಕ್ತಿ ಪಂಥ ಗಳು, ಅನುಭಾವಿ-ಆರೂಢ ಪರಂಪರೆಗಳು, ಸಿಖ್ ಹಾಗೂ ಸೂಫಿ ಪಂಥಗಳು ಈ ಜಾತಿ ವಿಭೇದದ ಕೋಟೆ ಗೋಡೆಗೆ ಕನ್ನವಿಕ್ಕಿದವು. ಅಲ್ಲಲ್ಲಿ ಸಹನೀಯ ವಾತಾವರಣವನ್ನೂ ತಂದವು. ಜಾತಿ ಮೇಲು ಕೀಳುಗಳಾಚೆಗೆ ಹೆಣ್ಣು ಗಂಡುಗಳ ತಾರತಮ್ಯದಿಂದಾಚೆಗೆ, ಬಡವ - ಪಡೆದವ ಎನ್ನುವ ಕಂದರಗಳಾಚೆಗೆ ಮಾನವೀಯತೆಯ ಬೆಳಕಿನ ಕಿರಣಗಳನ್ನು ಪಸರಿಸಿದವು. ಆದರೆ ಕೋಟೆ ಅಜೇಯವಾಗಿ ಉಳಿದಿತ್ತು. ಜಾತಿ ಅಧಿಕಾರದ ಸಿಂಹಾಸನ, ಸನಾತನ ಆಚರಣೆಗಳ ಹೆಸರಿನ ಅಮಾನವೀಯ ಅಸಮಾನತೆಯ ತಳಪಾಯ ಅಭೇದ್ಯವಾಗಿ ನಿಂತಿತ್ತು.
ಶರಣರು ಬಂದರು. ವಾರಕರಿಗಳು ಬಂದರು. ದಾಸರು ಬಂದರು. ಸತ್ಪಂಥಿಗಳು ಬಂದರು. ಸಂತರು ಬಂದರು. ದತ್ತ, ಆರೂಢ, ನಾಥ, ಸಿದ್ಧ ಇಂತಹ ಎಷ್ಟೋ ಹೆದ್ದೆರೆಗಳು ಬಂದವು. ಇಸ್ಲಾಂ ಬಂದ ಮೇಲೂ, ಕ್ರಿಶ್ಚಿಯನ್ನರು ಬಂದ ಮೇಲೂ, ಇಂಗ್ಲಿಷ್ ಶಿಕ್ಷಣ ಭಾರತದಲ್ಲಿ ಹರಡ ತೊಡಗಿದ ಮೇಲೂ ಹೆಚ್ಚು ಬದಲಾವಣೆಗಳಾಗಲಿಲ್ಲ. ಕೋಟಿ ಕೋಟಿ ಕಪ್ಪು ಜನರ ಬಾಯಲ್ಲಿ ಮಾತೇ ಇರಲಿಲ್ಲ. ಮನುಷ್ಯರಾದ ಮೇಲೆ ದೈನಿಕದ ಮಾತುಗಳನ್ನು ಆಡದೇ ಅವರಿದ್ದರೆಂದುನಾನು ಹೇಳುತ್ತಿಲ್ಲ. ಆದರೆ ತಮ್ಮದಾದ ಮಾತು ತಮಗೋಸ್ಕರ ಇರುವ ಮಾತು, ತಮ್ಮವರಿ ಗಾಗಿನ ಮಾತು ಅವರ ಬಾಯಿಂದ ಬಿದ್ದು ಹೋಗಿ ಸಂಕೋಲೆಗಳಲ್ಲಿ ಸಿಲುಕಿಕೊಂಡಿತ್ತು.
ರಾಜಾರಾಂ ಮೋಹನ್ ರಾಯ್ ಬಂದರು, ದಯಾನಂದ ಸರಸ್ವತಿ ಬಂದರು. ಬಂಕಿಮ ಚಂದ್ರ, ರವೀಂದ್ರನಾಥ ಠಾಗೋರ್, ಪರಮಹಂಸರು, ರಮಣಮಹರ್ಷಿಗಳು, ಅರಬಿಂದ ಘೋಷರು, ಸ್ವಾಮಿ ವಿವೇಕಾನಂದರು, ಅನಿ ಬೆಸೆಂಟರು, ನಾರಾಯಣ ಗುರುಗಳು, ಪೆರಿಯಾರರು, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆಯವರು, ಹೀಗೆ ಎಡೆಬಿಡದ ಸಮುದ್ರದಲೆಗಳಂತೆ ಸನಾತನ ಜಾತಿ ಶ್ರೇಣೀಕೃತ ಸಮಾಜದ ಬಂಡೆಗೆ ತೆರೆಗಳಪ್ಪಳಿಸಿದವು.ಚೂರು ಪಾರು ಚಕ್ಕೆಗಳೆದ್ದವು.
ಅಲ್ಪ ಸ್ವಲ್ಪ ಬಂಡೆ ಕದಲಿತು, ಅಲ್ಲಾಡಿತು.
ಆದರೂ ಜಾತಿ ಅಜೇಯವಾಗಿತ್ತು. ಜ್ಞಾನದೇವ, ನಾಮದೇವ, ಏಕನಾಥ, ಚೋಕಮೇಲ, ಗೋರ ಕುಂಬಾರ, ಭಕ್ತ ಚೈತನ್ಯ, ಸಂತ ಕನಕದಾಸ, ರೈದಾಸ, ಭಕ್ತೆ ಮೀರಾ, ಕಬೀರ, ಗುರುನಾನಕ್ ಹೀಗೆ, ಅದಕ್ಕೂ ಹಿಂದೆ ಬಹಳ ಜನ ಬಂದು ಹೋಗಿ ಬೆಳಕಿನ ಭರವಸೆಯನ್ನು ಬಿತ್ತಿದ್ದರು. ಆದರೆಚಾತುರ್ವರ್ಣ್ಯಾಧಾರಿತ ಜಾತಿ ಮೇಲು ಕೀಳಿನ ನೀತಿ ಪೂರ್ಣ ನೆಲಕ್ಕುರುಳಿರಲಿಲ್ಲ. ಕೈಗಾರಿಕಾ ಕ್ರಾಂತಿಯ ಆಧುನಿಕ ಉತ್ಪಾದನಾ ವ್ಯವಸ್ಥೆ ಭಾರತಕ್ಕೆ ಕಾಲಿಟ್ಟ ಮೇಲೂ, ಮಾಲಕರಾಗಿ ಮೇಲ್ಜಾತಿ ಯವರೂ, ನೌಕರರಾಗಿ ಮಧ್ಯಮ ಜಾತಿ ಯವರೂ, ಚಾಕರರಾಗಿ ಕೆಳಜಾತಿಯ ವರೂ ತಮ್ಮ ಸ್ಥಾನಾಂತರಗಳನ್ನು ಅನುಭವಿ ಸುತ್ತಲೇ ಬಂದರು.
ಅಂತಹ ಸಂದರ್ಭದಲ್ಲಿ, ಬ್ರಿಟಿಷ್‌ಭಾರತ ಚರಿತ್ರೆಯ ಒಂದು ನಗಣ್ಯ ಅವಧಿಯ ಲ್ಲಿ ಸಕ್ಪಾಲ್ ಪಂಥದ ಮಹರ್ ಜಾತಿ ಕುಟುಂಬದ ಮನೆಯೊಳಗೆ ಡಾ.ಅಂಬೇಡ್ಕರ್ ಹುಟ್ಟಿದರು. ಕಪ್ಪು ಕಪ್ಪು ಮೋಡದಲ್ಲಿ, ‘‘ಕಗ್ಗತ್ತಲ ಬಾನಿನಲಿ ಮೂಡಿ ತೊಂದು ಬೆಳ್ಳಿ ಚುಕ್ಕಿ’’ಯು ಎನ್ನುವ ಹಾಡಿನ ಸಾಲಿನಂತೆ ಅದು ಯುಗ ಪ್ರವರ್ತಕ ಶಿಶುವಿನ ಜನನ ಎಂದು ಯಾವ ದೇವದೂತರೂ ಭೂಮಿಗೆ ಬಂದು ಅರುಹಲಿಲ್ಲ, ಯಾವ ಬೆಳ್ಳಿ ತಾರೆಗಳು ಅಂದು ಹೊಳೆದವೋ ಏನೋ ನನಗೆ ಗೊತ್ತಿಲ್ಲ. ಆದರೆ 1947 ಆಗಸ್ಟ್ 15ರ ನಂತರ ಭಾರತೀಯ ಸಮಾಜ ತಾನು ನಡೆಯ ಬೇಕಾದ ಹಾದಿಗೆ ಹಿಂದಿನ ಶ್ರುತಿ, ಸ್ಮತಿ, ಶಾಸ್ತ್ರ ಪುರಾಣಗಳಿಗೆ, ಧರ್ಮ ಸೂತ್ರಗಳಿಗೆ ಭಿನ್ನವಾದ ಹಾದಿ ಯನ್ನು ಅನುಸರಿಸಬೇಕಾಗಿ ಬಂತು. ಹಾಗೆ ಅನುಸ ರಿಸುವುದಕ್ಕೆ ಇದ್ದ ಮಹತ್ತರ ಒತ್ತಡವೆಂದರೆ ಅಂಬೇಡ್ಕರ್ ಅವರ ಚಾರಿತ್ರಿಕ ಹಾಜರಿ.
ಅವರನ್ನು ನಿರ್ಲಕ್ಷಿಸಿ, ಅವರ ಆಶಯ ಹಾಗೂ ಹಕ್ಕು ಪ್ರತಿಪಾದನೆಗಳನ್ನು ತಳ್ಳಿ ಹಾಕಿ, ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವತಂತ್ರ ಭಾರತದ ರಾಜಕೀಯ ವ್ಯವಸ್ಥೆ ಮುನ್ನಡೆಯಲಾರದಾಗಿತ್ತು. ಅಂಬೇಡ್ಕರ್‌ಎಂಬ ಪ್ರತಿಭೆ, ನಾಯಕ, ದಾರ್ಶನಿಕ, ರಾಜಕೀಯ ಮುತ್ಸದ್ದಿ ಬ್ರಿಟಿಷರು ಜಾರಿಗೊಳಿಸಿದ ಸುಧಾರಣೆಗಳ ಫಲವೋ ಎಂಬಂತೆ ಅವರ ವಸಾಹತುಶಾಹಿ ಆಳ್ವಿಕೆಯ ದಮನ, ಲೂಟಿ, ಶೋಷಣೆಗಳ ಇನ್ನೊಂದು ಮುಖವಾಗಿದ್ದ ಉದಾರವಾದಿ ನಿಲುವು ಹಾಗೂ ಶಾಸನಗಳ ಕಾರಣವೋ ಎಂಬಂತೆ, ಕೋಟಿ ಕೋಟಿ ಕಪ್ಪು ಜನರ ಅನುಗಾಲದ ಹಂಬಲದ ಪರಿಣಾಮವೋ ಎಂಬಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಹೊಸ ಯುಗದ ನಿರ್ಮಾಪಕರಾಗಲು ಅವಕಾಶವಾಯಿತು.
ಇದು ಸುಲಭದ ದಾರಿಯಾಗಿರಲಿಲ್ಲ. ಭಾರತೀಯ ಮನಃಸ್ಥಿತಿಯ ಸನಾತನತೆಯ ಬಲೆ ಸರಳವಾದುದಾಗಿರಲಿಲ್ಲ. ಅದು ಮೇಲ್ಜಾತಿಗಳನ್ನು ರಕ್ಷಿಸಿದ್ದು ಮಾತ್ರವಲ್ಲದೆ, ಕೆಳಜಾತಿಗಳವರನ್ನೂ ತನ್ನ ಕಬಂಧ ಬಾಹುಗಳ ಮಧುರ ಆಲಿಂಗನದಲ್ಲಿರಿಸಿಕೊಂಡಿತ್ತು. ಇದರಿಂದಾಗಿ ಸ್ವತಃ ದಮನಿತ ಜಾತಿಗಳವರಿಗೆ ತಾವು ಗುಲಾಮರಾಗಿದ್ದೇವೆಂಬುದು ಅರಿವಿರದೆ, ಇದು ತಮ್ಮ ಕರ್ಮದ ಕಾರಣ ಎಂದು ಭಾವಿಸುವಂತೆ ಆಗಿತ್ತು. ಅಸ್ಪಶ್ಯತೆ ಎನ್ನುವುದು, ತಾರತಮ್ಯವೆನ್ನುವುದು, ಅವಲಂಬನೆ-ಅಧೀನತೆ ಯೆನ್ನುವುದು ದೇವರ ಶಾಪದಿಂದಾಗಿ ನಮ್ಮನ್ನು ಕಾಡುತ್ತಿರುವ ಶೂಲಗಳಾಗಿವೆಯೇ ಹೊರತು, ಇದಕ್ಕೆ ಮೇಲ್ಜಾತಿಯವರು ಕಾರಣರಾಗಿದ್ದಾರೆ ಎಂಬ ಅರಿವನ್ನು ಅವರು ಪಡೆದಿಲ್ಲವಾಗಿದ್ದರು.
ಇಂತಹ ಸನ್ನಿವೇಶದಲ್ಲಿ ಬದಲಾವಣೆಯ, ಸ್ವಾಭಿಮಾನದ, ಸಮಾನತೆಯ ಮಾತುಗಳ ನ್ನಾಡುವವರು ಯಾರೇ ಆಗಿರಲಿ, ದೈವನಿಂದಕರು, ಧರ್ಮ ವಿರೋಧಿಗಳು, ದ್ರೋಹಿಗಳು ಎನ್ನುವ ಬಿರುದಿಗೆ ಪಕ್ಕಾಗಬೇಕಾಗಿತ್ತು.ತಮ್ಮ ಜೀವಮಾನದಲ್ಲಿ ಅಂಬೇಡ್ಕರ್‌ರವರು ಅನುಭ ವಿಸಿದ ನಿಂದನೆ, ತಾರತಮ್ಯ ಹಾಗೂ ಮೋಸ-ವಂಚನೆಗಳಿಗೆ ಲೆಕ್ಕವೇ ಇಲ್ಲ. ಅವರು ಹುಟ್ಟಿದ ಜಾತಿ ಅವರನ್ನು ಪಾತಾಳಕ್ಕೆ ಎಳೆಯಲು ಸರಪಳಿ ಬಿಗಿದಿತ್ತು. ಅವರು ಓದಿದ ಓದು, ಕಟ್ಟಿಕೊಂಡ ಆದರ್ಶ, ಕನಸಿದ ಕನಸು ಮತ್ತು ನ್ಯಾಯವಾಗಿ ಬಯಸಿದ ಸಮಾನತೆ ಅವರನ್ನು ಆಕಾಶದ ಕಡೆ ಚಿಮ್ಮಿ ನುಗ್ಗುವಂತೆ ಎಳೆಯುತ್ತಿತ್ತು.
ಈ ಎರಡೂ ಧ್ರುವಗಳ ನಡುವಿನ ಹೊಯ್ದಟ, ಸಂಘರ್ಷ, ಆಕ್ರೋಶ, ಅನಿವಾರ್ಯತೆ, ಸಂಧಾನ ಹಾಗೂ ಎಂದೂ ಬಿಟ್ಟುಕೊಡಲಾಗದ ಆತ್ಮಾಭಿಮಾನ ಇವುಗಳು ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ನಿರೂಪಿಸಿದವು. ಪ್ರತೀ ಹಂತದಲ್ಲಿ, ಪ್ರತೀ ಹೋರಾಟದಲ್ಲಿ ಸೋಲು ಗೆಲುವು ಅನಿಶ್ಚಿತವಾಗಿದ್ದಾಗಲೂ, ಸನಾತನತೆಗೆ ಗುಲಾಮರಾಗಿರುವುದಕ್ಕಿಂತ ಸಮಾನತೆಗಾಗಿ ಹೋರಾಡಿ ಸೋತರೂ ಸಾರ್ಥಕವೇ ಎನ್ನುವ ಛಲದಿಂದ ಮುನ್ನಡೆದರು ಅಂಬೇಡ್ಕರ್.
ಆ ಕಾರಣಕ್ಕಾಗಿ ಕೋಟಿ ಕೋಟಿ ಕಪ್ಪು ಜನರ ಮೊತ್ತಮೊದಲ ಮಾತೇ ಆದರು.
ಪರಂಪರೆಯ ಸೇತುವೆಯನ್ನು ನಿರಾಕರಿಸಿ ಹಳ್ಳ, ಕೊಳ್ಳ, ಬೆಟ್ಟ, ಗುಡ್ಡಗಳ ದುರ್ಗಮ ಹಾದಿಯನ್ನು ಆರಿಸಿಕೊಂಡು ಅವರು ಯುಗ ಪುರುಷರಾದರು. ಅವರು ಮಹರರಾಗಿ ಹುಟ್ಟಿದ್ದರು. ಮಹರರಾಗಿ ಸಾಯಲಿಲ್ಲ. ಅವರು ಹುಟ್ಟಿದ ಜಾತಿ ಹಿಂದೂ ಧರ್ಮದ ಭಾಗವೆಂದು ಅನಿಸಿಕೊಂಡಿತ್ತು. ಅದನ್ನು ಅವರು ಅಲ್ಲೇ ಕೊಳೆಯಲು ಬಿಡಲಿಲ್ಲ.
ಭಾರತದ ಕೋಟಿ ಕೋಟಿ ಕಪ್ಪು ಜನರಿಗೆ ಅಂದರೆ ದಲಿತರಿಗೆ, ಅತಿ ಹಿಂದುಳಿದವರಿಗೆ, ಆದಿವಾಸಿಗಳಿಗೆ, ಅಲೆಮಾರಿಗಳಿಗೆ, ಧಾರ್ಮಿಕ ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಎಷ್ಟು ಗೊತ್ತೋ ಗೊತ್ತಿಲ್ಲವೋ ಆದರೆ ಅಂಬೇಡ್ಕರ್ ಅವರೆಲ್ಲರ ನ್ಯಾಯದ ಮಾತಾಗಿದ್ದರು.
ಬಹುಜನ ಹಿತಾಯ; ಬಹುಜನ ಸುಖಾಯ ಎನ್ನುವ ಬುದ್ಧವಾಣಿಯ ಅನುಯಾ ಯಿಯಾಗಿದ್ದರು. ಬಿಡುಗಡೆ ಎಂಬುದು, ಸಮಾನತೆಯೆಂಬುದು, ಘನತೆಯೆಂಬುದು, ಸಮಾನ ಅವಕಾಶ ಎಂಬುದು ಯಾವುದೋ ಒಂದು ಪಂಗಡಕ್ಕೆ, ಒಂದು ಗುಂಪಿಗೆ, ಒಂದು ಜಾತಿಗೆ ಮಾತ್ರ ತರುವ ದಿಸೆಯಲ್ಲಿ ಅವರು ಎಂದೂ ಚಿಂತಿಸಲಿಲ್ಲ.
ಕಾರ್ಮಿಕರ ಕ್ಷೇಮಕ್ಕಾಗಿ ಅವರು ಪ್ರತಿಪಾದಿಸಿದ ನೀತಿಗಳು; ರೈತರ-ಉಳುವವರ ಶ್ರೇಯಸ್ಸಿಗಾಗಿ ಅವರು ಪ್ರತಿಪಾದಿಸಿದ ಖಾಸಗೀ ಭೂ ಒಡೆತನದ ರದ್ಧತಿ, ಸಹಕಾರಿ ಕೃಷಿ ಪದ್ಧತಿಯ ಜಾರಿ ಮುಂತಾದವುಗಳು; ಕೆಳ ಜಾತಿಯವರ ಆರ್ಥಿಕ ಸಂಕ್ಷೇಮಕ್ಕಾಗಿ, ಸಮಪಾಲು, ಸಮಬಾಳುಗಳ ಜೀವನಾನುಷ್ಠಾನಕ್ಕಾಗಿ, ಸರಕಾರವೇ ಉತ್ಪಾದನಾ ಕ್ಷೇತ್ರದ ಪ್ರಮುಖ ಉದ್ದಿಮೆಗಳನ್ನು ನಿರ್ವಹಿಸಬೇಕೆಂಬ ನಿಲುವುಗಳು ಅಸಾಮಾನ್ಯವಾಗಿದ್ದವು.
ವೌಢ್ಯ ಮುಕ್ತರಾಗಿ, ಅವತಾರಗಳನ್ನು, ಪವಾಡಗಳನ್ನು ನಂಬದೆ, ತಮ್ಮ ಚಿಂತನೆಗಳ ಆಧಾರದಲ್ಲಿ ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕೆಂಬ ತತ್ತ್ವದರ್ಶನ ವಾಗಲೀ; ಸಮಾನತೆಯನ್ನು ತನ್ನ ಮೂಲ ತತ್ವವನ್ನಾಗಿ ಇರಿಸಿಕೊಳ್ಳದ ಯಾವುದೇ ಧರ್ಮವನ್ನು ದಮನಿತ ಜನತೆ ಅನುಸರಿಸಬಾರದೆಂದು ಹೇಳಿದ್ದರಲ್ಲಾಗಲೀ; ತಾವು ಬೌದ್ಧ ಮತಕ್ಕೆ ಮತಾಂತರಗೊಳ್ಳುವ ಕಾರಣವೇನೆಂದು ಸಮರ್ಥಿಸಿ ಕೊಂಡಿದ್ದರಲ್ಲಾಗಲೀ; ಸ್ವಂತ ಸ್ಥಾನಮಾನ, ಸಂಪತ್ತುಗಳಿಗೆ, ಕೀರ್ತಿಗೆ ಆಶಿಸದೆ, ಸದಾ ಪ್ರವಾಹದ ವಿರುದ್ಧ ಈಜಿದ್ದರಲ್ಲಾಗಲೀ; ಹಿಂದೂ ಕೋಡ್ ಬಿಲ್ ಮುಖಾಂತರ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಒದಗಿಸುವ, ವಿವಾಹ ವಿಚ್ಛೇದನದ ಹಕ್ಕು ಒದಗಿಸುವ ತಮ್ಮ ಕ್ರಾಂತಿಕಾರಕ ಮಸೂದೆಯನ್ನು ಮಂಡಿಸಲು ಅವಕಾಶವಾಗುತ್ತಿಲ್ಲ ಎಂದು ಕೊರಗಿ ಕಾನೂನು ಮಂತ್ರಿಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಲ್ಲಾಗಲೀ...
ಅಂಬೇಡ್ಕರ್ ಅವರ ಚೇತನದ ವಜ್ರಸಮ ಕಾಂತಿ ಪ್ರಕಟಗೊಂಡಿದೆ.
ಬುದ್ಧ
ವಿವೇಕಾನಂದರು
ಪೆರಿಯಾರ್ ರಾಮಸ್ವಾಮಿ
ಸಾವಿತ್ರಿ ಬಾಯಿ ಪುಲೆ
ಅಂಬೇಡ್ಕರ್ ಅವರು ಭಾರತದ ಜನತೆಗೆ ಹಲವಾರು ಕಾರಣಗಳಿಂದ ಚಿರಪರಿಚಿತರು. ಅವರ ಬಗ್ಗೆ ತಿಳಿಯದವರು ಭಾರತದಲ್ಲಿ ಇಲ್ಲವೇ ಇಲ್ಲ ಎಂದರೂ ಕೂಡ ಅದು ಅತಿಶಯೋಕ್ತಿಯಲ್ಲ. ಆದರೆ ಅವರ ನಿಜಾಶಯಗಳ ಬಗ್ಗೆ, ಜೀವನಾದರ್ಶಗಳ ಬಗ್ಗೆ, ಅವರು ತಮ್ಮ ಬದುಕಿನಲ್ಲಿ ಎದುರಿಸಿದ ಸಂಘರ್ಷಗಳ ಬಗ್ಗೆ, ಅನುಭವಿಸಿದ ಸಂಕಟಗಳ ಬಗ್ಗೆ, ಎಲ್ಲರ ಒಳಿತಿಗಾಗಿ ಅವರು ಪಟ್ಟಪಾಡುಗಳ ಬಗ್ಗೆ, ಅವರು ಇಟ್ಟುಕೊಂಡಿದ್ದ ಆದರ್ಶಗಳ ಸಾಕಾರಕ್ಕಾಗಿ ನಡೆಸಿದ ಹೋರಾಟಗಳು, ಮಾಡಿದ ತ್ಯಾಗಗಳ ಬಗ್ಗೆ ಎಷ್ಟು ಜನಕ್ಕೆ ಗೊತ್ತಿದೆ, ಅರ್ಥವಾಗಿದೆ ಎಂದು ಯೋಚಿಸಿದರೆ ನಿರಾಶೆಯ ಉತ್ತರ ದೊರೆಯುತ್ತದೆ. ಅಂಬೇಡ್ಕರರನ್ನು ತಪ್ಪಾಗಿ ಅರ್ಥಮಾ ಡಿಕೊಂಡಿ ರುವವರು, ಅವರನ್ನು ಪ್ರತಿಭಾ ವಿರೋಧಿ ಎಂದು, ಯಾರೋ ಕೆಲವರಿಗೆ ವಿನಾಕಾರಣ ಸವಲತ್ತು, ಸಂಪತ್ತು ದೊರಕಿಸಲು ಪಕ್ಷಪಾತದ ನಿಯಮಾವಳಿಗಳು್ನ ರಚಿಸಿದ ವರೆಂದು ಭಾವಿಸಿರುವವರ ಸಂಖ್ಯೆ ಹೇರಳವಾಗಿದೆ.ಅವರು ಆಶಿಸಿದ್ದು ಸರ್ವರಿಗೂ ಸಮಾನ ಅವಕಾಶವನ್ನು, ಸರ್ವರಿಗೂ ಸಮಾನ ಪ್ರಾತಿನಿಧ್ಯವನ್ನು, ಪಾಲುದಾರಿಕೆ ಪಡೆಯುವ ಸಂದರ್ಭದಲ್ಲಿ ಎದುರಾಗುವ ಅಶಕ್ತತೆಗಳನ್ನು ನಿವಾರಿಸಲು ಪ್ರಜ್ಞಾವಂತಿಕೆಯಿಂದ ಒಂದು ಸಮಾಜ ಒದಗಿಸಬೇಕಿರುವ ಸಕಾರಣಯುತ ಉತ್ತೇಜನ ಕ್ರಮಗಳನ್ನು.ಇದು ಎಲ್ಲರ ಪ್ರಾತಿನಿಧ್ಯ ಬೆಳೆಸುವುದಕ್ಕೆ ಪೂರಕವಾದ ತಾರತಮ್ಯ ಅಳಿಸುವುದಕ್ಕೆ ಅಗತ್ಯವಾದ ಸಕಾರಾತ್ಮಕ ಕ್ರಮಗಳೇ ಹೊರತು ಯಾರನ್ನೋ ವಂಚಿಸಿ ಮತ್ತೆ ಯಾರನ್ನೋ ಪೀಠಸ್ಥರನ್ನಾಗಿ ಮಾಡುವ ತಂತ್ರಗಳಾಗಿಲ್ಲ.
ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ ಜೀವನ ಯಾನದ ಕಥೆ, ಯಾವುದೇ ದಮನಿತ ಜೀವಿಗೆ, ನಿಷ್ಕಲ್ಮಶ ಹೃದಯಿಗೆ ಸ್ಫೂರ್ತಿದಾಯಕವಾದ ಮಾದರಿಯೆಂಬುದರಲ್ಲಿ ಎರಡನೆ ಮಾತಿಲ್ಲ. ನಮ್ಮ ಕಣ್ಣೆದುರಿಗೇ, ನಮ್ಮ ಜೀವನಾನುಭವದ ಅವಧಿಯಲ್ಲಿಯೇ ನಡೆದುಹೋದ ಪವಾಡವಿದು. ನಮ್ಮಂತಹ ಕೋಟ್ಯಂತರ ಜನರಿಗೆ ವಿಮುಕ್ತಿಯನ್ನು, ಸ್ವಾಭಿಮಾನವನ್ನು ಸಮಾನತೆಯ ಆಶಯವನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿದ ಆ ರಾಜರ್ಷಿಗೆ ನಮನ ಸಲ್ಲಿಸಲು, ಮೆಚ್ಚುಗೆಗೆ ಅರ್ಹವಾಗಿದೆ.
ಮತ್ತೆ ಮತ್ತೆ, ಮತ್ತೆ ನೂರಾರು ರೂಪ ಗಳಲ್ಲಿ, ಬಗೆಬಗೆಯಾಗಿ ಭಾರತೀಯರಿಗೆ ಅಂಬೇಡ್ಕರ್ ರವರ ಜೀವನ ಗಾಥೆ ಯನ್ನು, ಆದರ್ಶ ಜೀವನವನ್ನು, ಆದರ್ಶಗಳ ಮಾದರಿಯನ್ನು, ಆಶಯಗಳ ಔನ್ನತ್ಯವನ್ನು ಹೇಳಬೇಕಾದ ಅಗತ್ಯವಿದೆ.
ಅಂಬೇಡ್ಕರ್ ಎಂಬ ಪ್ರತಿಭೆ, ನಾಯಕ, ದಾರ್ಶನಿಕ, ರಾಜಕೀಯ ಮುತ್ಸದ್ದಿ ಬ್ರಿಟಿಷರು ಜಾರಿಗೊಳಿಸಿದ ಸುಧಾರಣೆಗಳ ಫಲವೋ ಎಂಬಂತೆ ಅವರ ವಸಾಹತುಶಾಹಿ ಆಳ್ವಿಕೆಯ ದಮನ, ಲೂಟಿ, ಶೋಷಣೆಗಳ ಇನ್ನೊಂದು ಮುಖವಾಗಿದ್ದ ಉದಾರವಾದಿ ನಿಲುವು ಹಾಗೂ ಶಾಸನಗಳ ಕಾರಣವೋ ಎಂಬಂತೆ, ಕೋಟಿ ಕೋಟಿ ಕಪ್ಪು ಜನರ ಅನುಗಾಲದ ಹಂಬಲದ ಪರಿಣಾಮವೋ ಎಂಬಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಹೊಸ ಯುಗದ ನಿರ್ಮಾಪಕರಾಗಲು ಅವಕಾಶವಾಯಿತು.