ಶಾಲೆ ಮತ್ತು ದೂರುಗಳು
ಬೆಳೆಯುವ ಪೈರು
ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರು ಎರಡು ತರಹದ ದೂರುಗಳನ್ನು ಕೇಳಬೇಕಾಗುತ್ತದೆ ಅಥವಾ ಕೇಳಲು ಸಿದ್ಧವಿರಬೇಕು. ಒಂದು ತಮ್ಮ ಮಕ್ಕಳ ಮೇಲೆ ಶಾಲೆಯಿಂದ ಬರುವಂತಹ ದೂರುಗಳಾದರೆ, ಮತ್ತೊಂದು ಮಕ್ಕಳು ಶಾಲೆಯ ಕುರಿತಂತೆ ಮಾಡುವ ದೋಷಾರೋಪಗಳು. ಈ ಎರಡಕ್ಕೂ ಪೋಷಕರು ಮಾನಸಿಕವಾಗಿಯೂ ಮತ್ತು ತಾಂತ್ರಿಕವಾಗಿಯೂ ಸಿದ್ಧವಾಗಿರಬೇಕು. ಈ ಎರಡಕ್ಕೂ ಪೋಷಕರು ನಿರ್ಮೋಹದಿಂದಲೂ ಮತ್ತು ನಿರ್ಭೀತಿಯಿಂದಲೂ ಪ್ರತಿಕ್ರಿಯಿಸಬೇಕು. ಹಾಗೂ ಅತ್ಯಂತ ಸಂವೇದನಾಶೀಲರಾಗಿ ಬಹು ಎಚ್ಚರಿಕೆಯಿಂದ ಹೊಣೆಗಾರಿಕೆಯನ್ನು ನಿಭಾಯಿಸಬೇಕು.
ಮಕ್ಕಳ ಬಗ್ಗೆ ದೂರುಗಳು
ಶಾಲೆಯಿಂದ ಬರುವ ದೂರುಗಳು ಸಾಮಾನ್ಯವಾಗಿ ಬಹಳ ಕಡಿಮೆಯೇ ಆಗಿರುತ್ತವೆ. ಹಾಗೆ ಬಂದರೂ ಅವು ತೀರಾ ಅನಿರೀಕ್ಷಿತವೋ, ಆಘಾತಕಾರಿಯೋ ಆಗಿರುವುದಿಲ್ಲ. ನಾವು ನೋಡುತ್ತಿರುವ ನಮ್ಮದೇ ಮಗುವಿನ ಕುರಿತಾದ ದೂರಾದ ಕಾರಣ ತೀರಾ ಹೊಚ್ಚ ಹೊಸ ಆಘಾತಕಾರಿಯಾಗೇನೂ ಇರುವುದಿಲ್ಲ. ತೀರಾ ಅತಿರೇಕದ ಪ್ರಕರಣಗಳಲ್ಲಿ ಬೆಳೆದ ಮಕ್ಕಳ ಬಗ್ಗೆ ಮನಸ್ಸಿಗೆ ಘಾಸಿಯಾಗುವಂತಹ ದೂರುಗಳೇನಾದರೂ ಬರಬಹುದೇ ಹೊರತು, ಶಾಲೆಯಿಂದ ಬರುವಂತಹ ದೂರುಗಳ ಪ್ರಾಥಮಿಕ ಲಕ್ಷಣಗಳನ್ನು ಸ್ವಲ್ಪವೇ ಸೂಕ್ಷ್ಮ ಮನಸ್ಥಿತಿಯಿದ್ದರೂ ಮನೆಯಲ್ಲಿಯೇ ಗೋಚರಿಸುತ್ತಿರುತ್ತವೆ. ಹಾಗಾಗಿ ನಾವು ಮಕ್ಕಳು ಶಾಲೆಯ ಬಗ್ಗೆ ತರುವ ದೂರುಗಳ ಕಡೆಗೆ ಮೊದಲು ಗಮನ ಹರಿಸೋಣ.
ಶಾಲೆಯ ಬಗ್ಗೆ ದೂರುಗಳು
ಶಾಲೆಯಿಂದ ತರುವ ದೂರುಗಳು ಸಾಮಾನ್ಯ ವಾಗಿ ಹೆಚ್ಚು ಕಾಣುವುದು ನಾಲ್ಕನೆ ತರಗತಿ ಯಿಂದ ಏಳನೆ ತರಗತಿಯವರೆಗೆ. ನಾಲ್ಕಕ್ಕಿಂತ ಕಡಿಮೆ ಮತ್ತು ಏಳಕ್ಕಿಂತ ಹೆಚ್ಚಿನ ತರಗತಿ ಯಲ್ಲಿ ಓದುವ ಮಕ್ಕಳು ಅಷ್ಟೇನೂ ದೂರು ಗಳನ್ನು ತರುವುದಿಲ್ಲ. ನಾಲ್ಕನೆ ತರಗತಿಯ ಕೆಳಗಿನ ಮಕ್ಕಳಿಗೆ ಯಾವುದು ವ್ಯವಸ್ಥೆ, ಯಾವುದು ಅವ್ಯವಸ್ಥೆ ಮತ್ತು ಶಿಕ್ಷಣದಲ್ಲಿ ಯಾವುದು ಕ್ರಮ ಮತ್ತು ಅಕ್ರಮ ಎಂಬುದು ತಿಳಿಯದಿರದ ಕಾರಣ, ದೂರುವ ಸಾಧ್ಯತೆಗಳು ತೀರಾ ಕಡಿಮೆ ಇರು ವುದು. ಏಳರಿಂದ ಮೇಲಿನ ಮಕ್ಕಳು ಶಾಲೆ ಮತ್ತು ಶಿಕ್ಷಕರಿಂದ ಆರೋಪಗಳನ್ನು ಎದುರಿಸುವಂತಹ ತಮ್ಮ ಕಿಶೋರರ ಸಮೂಹವನ್ನು ಹೊಂದುವುದರಿಂದ ಆದಷ್ಟು ದೂರುಗಳನ್ನು ಮನೆಯವರೆಗೆ ಒಯ್ಯುವುದಿಲ್ಲ. ಏಕೆಂದರೆ ಶಾಲೆಯ ವರು ತಮ್ಮ ಮೇಲೆಯೇ ದೂರುಗಳನ್ನು ಹೇಳಲು ಪ್ರಾರಂಭಿಸಿದರೆ ತಾವೇ ತಪ್ಪಿತಸ್ಥರಾಗುತ್ತೇವೆ ಎಂಬ ಅಪರಾಧ ಪ್ರಜ್ಞೆ ಅವರಲ್ಲಿ ಇರುವುದು.
ಆದರೆ ಮಾಧ್ಯಮಿಕ ಶಾಲೆಯ ತರಗತಿಗಳಲ್ಲಿ ಓದುವ ಮಕ್ಕಳು ತಮ್ಮದೇ ಶಾಲೆಯ ಮತ್ತು ಶಿಕ್ಷಕರ ಕ್ರಮ ಮತ್ತು ಅಕ್ರಮಗಳನ್ನು ಗುರುತಿಸುವವರಾಗಿದ್ದು, ತಮ್ಮ ಗ್ಯಾಂಗ್ ಕಟ್ಟಿಕೊಂಡು ಅಷ್ಟೇನೂ ಆರೋಪಕ್ಕೆ ಒಳಗಾಗುವಂತಹ ಕೆಲಸಗಳನ್ನು ಅಷ್ಟಾಗಿ ಮಾಡದಿರುವುದರಿಂದ ಒಂದಷ್ಟು ದೂರುಗಳನ್ನು ನಿರೀಕ್ಷಿಸಬಹುದು.
ಯಾವ ಮಕ್ಕಳು ದೂರು ಹೇಳಲು ಸಾಧ್ಯ?
ಎಲ್ಲಾ ಮಕ್ಕಳೂ ಶಾಲೆಯ ಬಗ್ಗೆ ದೂರು ಹೇಳುವಷ್ಟು ಶಕ್ತರಾಗಿರುವುದಿಲ್ಲ. ಮೊದಲಿಗೆ ಶಾಲೆಯ ಅಧಿಕಾರಕ್ಕೆ ಪೋಷಕರು ಅಧೀನರಾಗಿರುವರು ಎಂಬಂತಹ ಸೂಚನೆಗಳನ್ನು ಅವರು ಗಮನಿಸಿರುತ್ತಾರೆ. ಶಾಲೆಯು ತಮ್ಮನ್ನು ನಿಯಂತ್ರಣದಲ್ಲಿಡುವಂತೆ ತಮ್ಮ ಪೋಷಕರನ್ನೂ ಕೂಡ ಹದ್ದುಬಸ್ತಿನಲ್ಲಿಟ್ಟಿರುತ್ತದೆ ಎಂದು ಭಾವಿಸಿರುತ್ತಾರೆ. ಏಕೆಂದರೆ, ಮಗುವನ್ನು ಅವರು ನೇರವಾಗಿ ಭೇಟಿಯಾ ಗಲು ಬರಲಾಗುವುದಿಲ್ಲ. ಒಂದು ವೇಳೆ ಪೋಷಕರು ಶಾಲೆಗೆ ಬಂದರೆ ಮುಖ್ಯಸ್ಥರ ಅನುಮತಿಯನ್ನು ಪಡೆದೇ ಬರಬೇಕು. ಶಾಲೆಯ ಸೂಚನೆಗಳನ್ನು ಪೋಷಕರು ಪಾಲಿಸುತ್ತಿರುತ್ತಾರೆ. ಹಣ ಕಟ್ಟೆಂದರೆ ಕಟ್ಟುತ್ತಾರೆ. ಬರಬೇಕೆಂದರೆಬರುತ್ತಾರೆ. ಯಾವುದಾದರೂ ಕಾರ್ಯಕ್ರಮ ಮತ್ತು ಸಮಾರಂಭವನ್ನು ಮಾಡಿದರೆ ಶಾಲೆಯವರ ಇಚ್ಛೆ ಮತ್ತು ಆಶಯಕ್ಕೆ ಪೋಷಕರು ಸ್ಪಂದಿಸಲೇಬೇ ಕಾಗುತ್ತದೆ. ಇಂತಹ ಹತ್ತು ಹಲವು ಸೂಚಿತ ಉದಾಹರಣೆಗಳನ್ನು ನೋಡಿರುವ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಮೂಹಕ್ಕಿಂತ ತಮ್ಮ ಪೋಷಕರು ಹೆಚ್ಚಿನ ಬಲವುಳ್ಳವರೆಂದೋ ಅಥವಾ ಅಧಿಕಾರವುಳ್ಳವರೆಂದೋ ಅನ್ನಿಸುವುದಿಲ್ಲ. ಹಾಗಾಗಿಯೇ ಶಾಲೆಯ ಬಗ್ಗೆ ಪೋಷಕರ ಬಳಿ ದೂರನ್ನು ಒಯ್ಯುವುದೇ ಕಡಿಮೆ.
ಶಾಲೆಯಲ್ಲಿ ಶಿಕ್ಷಕರು ಹೊಡೆದರೆ, ತಮ್ಮ ಮನೆಯಲ್ಲಿ ಅದನ್ನು ಹೇಳಲು ಬಹಳ ಮಕ್ಕಳು ಹೆದರುತ್ತಾರೆ. ಅದಕ್ಕೆ ಮುಖ್ಯ ಕಾರಣಗಳು ಎರಡು. ನೀನು ಹೊಡೆಸಿಕೊಳ್ಳುವಂತಹ ಕೆಲಸ ಏನು ಮಾಡಿದೆ ಎಂದು ಮರುವಿಚಾರಣೆಯಾಗಿ ಪೋಷಕರು ಕೂಡ ಅದೇ ವಿಷಯಕ್ಕೆ ದಂಡಿಸಬಹುದೆಂಬ ಭಯ ಒಂದಾದರೆ, ಮನೆಯಲ್ಲಿ ಹೇಳಿದ ಮೇಲೆ ಒಂದು ವೇಳೆ ಪೋಷಕರು ಬಂದು ಶಾಲೆಯಲ್ಲಿ ಗಲಾಟೆ ಮಾಡಿದರೆ, ಮತ್ತೆ ಅದೇ ಶಿಕ್ಷಕರ ಬಳಿ ಪೋಷಕರು ಇಲ್ಲದೇ ತಾವೇ ಹೆಣಗಿಕೊಂಡು ಇರಬೇಕು ಎಂಬ ಭಯ ಮತ್ತೊಂದು.
ಇನ್ನು ಸರಿಯಾಗಿ ಓದಿಲ್ಲ, ಬರೆದಿಲ್ಲ ಎಂಬ ಕಾರಣಕ್ಕೆ ಶಿಕ್ಷೆಗಳನ್ನು ಕೊಟ್ಟರೆ, ಮನೆ ಯವರ ಒತ್ತಡವೂ ಓದು ಬರಿ ಎಂಬುದೇ ಆಗಿರುವುದರಿಂದ ಆ ದೂರಿಗೆ ತಮ್ಮ ಮನೆ ಯಲ್ಲಿ ಯಾವ ಮಾನ್ಯತೆಯೂ ಸಿಗಲಾರದುಎಂದು ಸುಮ್ಮನಾಗಿ ಬಿಡುತ್ತಾರೆ. ಹೀಗಾಗಿ ಅನೇಕಾನೇಕ ದೂರುಗಳು ತಮ್ಮ ತೊಂದರೆ ಮತ್ತು ಕಿರುಕುಳಗಳನ್ನು ಅಲಂಬಿ ಸುತ್ತವೆ ಎಂಬ ಹೆದರಿಕೆಯಿಂದಲೇ ಮಕ್ಕಳಲ್ಲಿಯೇ ಉಳಿದು ಹೋಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಬಳಿ ಅತ್ಯಂತ ಮುಕ್ತವಾಗಿ ವರ್ತಿಸುವುದು ಮಾತ್ರ ವಲ್ಲದೇ, ಅವರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಸೂಕ್ತ ಪರಿಸರವನ್ನು ಮನೆಯಲ್ಲಿಯೇ ನಿರ್ಮಾಣ ಮಾಡಬೇಕು.
ಶಿಕ್ಷಕರೆಲ್ಲಾ ಆದರ್ಶಪ್ರಾಯರಲ್ಲ
ಶಾಲೆಯಲ್ಲಿನ ಎಲ್ಲಾ ಶಿಕ್ಷಕರನ್ನು ನಾವು ನಿಜಕ್ಕೂ ನಂಬುವಂತಿಲ್ಲ. ಏಕೆಂದರೆ ಅವರಲ್ಲಿ ವೈವಿಧ್ಯಮಯವಾದಂತಹ ಮನಸ್ಥಿತಿಯ ವ್ಯಕ್ತಿತ್ವಗಳಿರುತ್ತವೆ. ಕೆಲವು ಶಿಕ್ಷಕರಂತೂ ಇದು ಕೇವಲ ಅವರಿಗೆ ಸಂಬಳ ನೀಡುವ ಒಂದು ಯಾಂತ್ರಿಕ ಉದ್ಯೋಗವಷ್ಟೇ ಆಗಿರುತ್ತದೆ. ಇನ್ನು ಅವರು ವ್ಯವಹರಿಸುವ ಅಥವಾ ಅಧಿಕಾರದಲ್ಲಿಟ್ಟುಕೊಳ್ಳುವ ಜೀವಗಳು ಮಕ್ಕಳಾಗಿರುವುದರಿಂದ ತಮ್ಮ ಯಾವುದ್ಯಾವುದೋ ಅನಗತ್ಯ ಗುಣಗಳನ್ನು ಧಾರಾಳವಾಗಿ ಶಾಲೆಯಲ್ಲಿ ಪ್ರಯೋಗಿಸುತ್ತಿರುತ್ತಾರೆ, ತನ್ಮೂಲಕ ಪ್ರಭಾವಿಸುತ್ತಿರುತ್ತಾರೆ.
ಶಿಕ್ಷಕರಾಗುವ ಉದಾತ್ತ ಚಿಂತನೆಯಿಂದ ಮತ್ತು ಮುಂದಿನ ಪೀಳಿಗೆಗಳಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ ಮತ್ತು ವಲಯವನ್ನು ಸಮಾಜದಲ್ಲಿ ಸೂಕ್ತವಾಗಿ ಗಟ್ಟಿಗೊಳಿಸುತ್ತೇವೆ ಎಂದು ಬರುವ ಶಿಕ್ಷಕರ ಸಂಖ್ಯೆಯೇನೂ ಅಷ್ಟೇನೂ ಹೆಚ್ಚಿಲ್ಲದ ಕಾರಣ ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮತ್ತು ಅದರಿಂದ ರೂಪುಗೊಳ್ಳುವ ಮಗುವಿನ ವ್ಯಕ್ತಿತ್ವದ ಬಗ್ಗೆ ಪೋಷಕರೇ ಹೆಚ್ಚು ಗಮನ ಕೊಡಬೇಕು.
ಶಾಲೆಗಳೆಂಬ ವ್ಯಾಪಾರ ಸಂಸ್ಥೆಗಳು
ಬಹುತೇಕ ಶಿಕ್ಷಣದ ಸಂಸ್ಥೆಗಳು ಕೀರ್ತಿ ಮತ್ತು ವ್ಯಾಪಾರೋದ್ದೇಶಗಳನ್ನು ಹೊಂದಿ ರುವುದರಿಂದ ಅವರಿಗೆ ತಮ್ಮದೇ ಶಾಲೆಯಲ್ಲಿ ನಡೆಯುವಂತಹ ಶಿಕ್ಷಣದ ಕ್ರಮ ಮತ್ತು ಪ್ರಭಾವದ ಬಗ್ಗೆ ಗಮನವಿರಲಿ, ಅಂತಹದೊಂದಿದೆ ಎಂಬ ಅರಿವೇ ಇರುವುದಿಲ್ಲ. ಇನ್ನು ಅವರ ಕೈಕೆಳಗೆ ಕೆಲಸ ಮಾಡುವ ಶಿಕ್ಷಕರು ಮತ್ತು ಇತರರು ಮಾಡುವ ತಪ್ಪುಗಳನ್ನೂ ಕೂಡ ಗುರುತಿಸುವಂತಹ ಸಾಮರ್ಥ್ಯವೂ ಇರುವುದಿಲ್ಲ. ಮೊದಲಾಗಿ ಅವುಗಳನ್ನು ತಪ್ಪೆಂದೇ ಗುರುತಿಸದಿರುವಷ್ಟರ ಮಟ್ಟಿಗೆ ಅಜ್ಞಾನಿಗಳಾಗಿರುತ್ತಾರೆ. ತಮ್ಮ ಶಾಲೆಯು ಕಠಿಣ ಶಿಸ್ತನ್ನು ಹೊಂದಿದೆ ಎಂದರೆ ಸಾಕು ಅದು ಉತ್ತಮ ಶಿಕ್ಷಣ ನೀಡುವ ಸಂಸ್ಥೆ ಎಂಬಂತಹ ಭ್ರಮೆಯೂ ಕೂಡ ಉಂಟು. ಹೀಗಾಗಿ, ಸಮಾಜದಲ್ಲಿ ಅತ್ಯಂತ ಕಲುಷಿತಗೊಂಡಿರುವ ಮತ್ತು ಅತ್ಯಂತ ಕಡೆಗಣಿಸಲ್ಪಟ್ಟಿರುವಂತಹ, ಆದರೆ ಅತ್ಯಂತ ಲಾಭದಾಯಕ ಉದ್ಯಮವಾಗಿರುವಂತಹ ವ್ಯಾಪಾರ ಕೇಂದ್ರಗಳೆಂದರೆ ಅವು ಶಿಕ್ಷಣ ಸಂಸ್ಥೆಗಳು.
ಧಾರ್ಮಿಕ ರಾಷ್ಟ್ರೀಯತೆ
ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಬಹಳ ಎಚ್ಚರಿಕೆಯಿಂದ ತಮ್ಮ ಧಾರ್ಮಿಕತೆಯ ರಾಷ್ಟ್ರೀಯತೆಯನ್ನು ಮಕ್ಕಳ ಮನಸ್ಸಿಗೆ ತುಂಬುವಂತಹ ತರಬೇತಿ ಕೇಂದ್ರಗಳಾಗಿವೆ. ಅದಕ್ಕೆ ಶಾಲಾ ಸಂಸ್ಥೆಗಳು ಯಶಸ್ವೀ ಪ್ರಯೋಗಶಾಲೆಗಳಾಗಿವೆ. ಶಾಲೆಗಳನ್ನು ಕಾರ್ಖಾನೆಗಳಂತೆ ಭಾರತದ ಪೂರ್ತಿ ಹಲವು ಶಾಖೆಗಳನ್ನು ಮಾಡುತ್ತಿರುವ ಒಂದು ಶಾಲೆಯಲ್ಲಿ ರಾಷ್ಟ್ರಗೀತೆಗೆ ಪರ್ಯಾಯವಾಗಿ ಒಂದು ಸಂಸ್ಕೃತ ರಾಷ್ಟ್ರಗೀತೆಯನ್ನು ಹೇಳಿಕೊಡುತ್ತಾರಂತೆ. ಅವರು ಹೇಳುವ ಪ್ರಕಾರ ಸಂಸ್ಕೃತವೇ ನಮ್ಮ ದೇಶದ ಭಾಷೆ. ಅದೇ ಎಲ್ಲಾ ಭಾಷೆಗಳ ತಾಯಿ. ಪರಕೀಯರ ಆಕ್ರಮಣದಿಂದಾಗಿ ನಮ್ಮ ನಿಜವಾದ ಭಾಷೆ, ದೇವಭಾಷೆಯಾದ ಸಂಸ್ಕೃತವನ್ನು ಮರೆಯುತ್ತಿದ್ದೇವಂತೆ. ಹಾಗಾಗಿ ಅದರ ಬಗ್ಗೆ ಎಚ್ಚರವಹಿಸಬೇಕೆಂದು ಮೂರನೆಯ ತರಗತಿಯಿಂದಲೇ ಒಂದು ಸಂಸ್ಕೃತ ರಾಷ್ಟ್ರಗೀತೆಯನ್ನು ಹೇಳಿಕೊ ಡುತ್ತಾರಂತೆ. ಅದನ್ನು ಬರೆಯಿಸುವುದೂ ಇಲ್ಲ. ಬರಿಯ ವೌಖಿಕವಾಗಿ ತರಬೇತಿ ಕೊಡುತ್ತಾರೆ. ಅದನ್ನು ಹೊರಗೆ ಹೇಳಿಸುವುದೂ ಇಲ್ಲ.
ಅದು ಹೀಗಿದೆ,
ಗುಣಗಣ ಮಂಡಿತ ಯದುವರ ರಸಿತ
ರಾಜತಿ ಭಾರತ ಮಾತಾ,
ನೀತಿ ಬೋಧಕ ಪರಾಸ್ಪರ ಗೀತಾ
ಬೋಧಕ ಯೋಗಿಜನಾತಾ
ರಮ್ಯ ಸುರಾಲಯ ಸರಿತಾ ಕ್ರೀಡೈ
ಭವ್ಯಸುಲಲಿತಲಿ ಜಾಂಗ,
ಅಭಿಮನ ಸಿಧ್ಯಾ ಧನ್ಯಾ,
ಶುಭಮನ ವೃದ್ಧಿಸುಮಾನ್ಯ,
ಜೀಯತ್ ಭಾರತ ಮಾತಾ.
ಅನುದಿನ ಮಂಗಳ ದಾಯಕ ಜಯತಾತ್ರಾ
ಜತಿ ಭಾರತ ಮಾತಾ
ಜಯತಾತ್ ಜಯತಾತ್ ಜಯತಾತ್
ನಿಜ ಜನಗಣ ಮಮತಾತ್
ರಾಜತಿ ಭಾರತ ಮಾತಾ.
ಇದು ಮಗುವೇ ನನ್ನ ಮುಂದೆ ಹಾಡಿರುವುದರಿಂದ ಉಚ್ಚರಣೆಯಲ್ಲಿ ಕೆಲವು ತಪ್ಪುಗಳಿರಬಹುದು. ಆದರೆ ಇಂತಹ ಅನೇಕ ವಿಷಯಗಳನ್ನು ಮಕ್ಕಳ ತಲೆಯಲ್ಲಿ ತುಂಬುವಂತಹ ಕೆಲಸಗಳೂ ಕೂಡ ಶಾಲೆಯಲ್ಲಿ ಆಗುತ್ತಿರುತ್ತವೆ. ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗಳು ಯಾವ ಯಾವ ಉದ್ದೇಶಗಳಿಗೆ ಪ್ರಯೋಗಪಶುಗಳನ್ನಾಗಿ ಮಾಡಿಕೊಳ್ಳುತ್ತಿವೆ ಎಂಬ ಅರಿವು ನಿಜವಾಗಿ ಬರಬೇಕೆಂದರೆ, ಓದು ಬರಹದ ಬಗ್ಗೆ ಹಗುರವಾಗಿ ವಿಚಾರಿಸಿ ಮುಗಿಸು ವುದಕ್ಕಿಂತ ಶಾಲೆಯ ಎಲ್ಲಾ ಚಟುವಟಿಕೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. ಮಕ್ಕಳು ತಮಗೇ ಅರಿವಿಲ್ಲದಂತೆ ಶಾಲೆಯು ತಮ್ಮನ್ನು ಎಂತಹ ಪ್ರಯೋಗಗಳಿಗೆ ಈಡು ಮಾಡುತ್ತಿದ್ದಾರೆಂದು ನಮಗೆ ತಿಳಿಸುತ್ತಾರೆ. ನಂತರ ನಾವು ಅದಕ್ಕೆ ನೇರವಾಗಿ ಪ್ರತಿಕ್ರಿಯಿಸುವ ಬದಲು ಇನ್ನೂ ಅನೇಕ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಹಾಗೆ ಮಕ್ಕಳಲ್ಲಿ ವಿಚಾರಿಸಬೇಕು. ಮಕ್ಕಳು ಮೊದಲು ಶಾಲೆಯ ಬಗ್ಗೆ ಎಲ್ಲವನ್ನೂ ಹೇಳುವಷ್ಟು ಮುಕ್ತವಾಗಿ ಮತ್ತು ನಿರ್ಭಯವಾಗಿ ಪೋಷಕರ ಬಳಿ ಇರಬೇಕು.
ಇನ್ನೂ ಕೆಲವು ಶಿಕ್ಷಕರು ಒಂದು ಮಗುವು ತಪ್ಪು ಮಾಡಿದರೆ ಎಲ್ಲಾ ಮಕ್ಕಳಿಗೂ ಸಾಮೂಹಿಕವಾಗಿ ಶಿಕ್ಷೆ ಕೊಡುವುದು, ತೀರಾ ಲಘುವಾಗಿ ವರ್ತಿಸುವುದು, ಮಾತುಗಳನ್ನಾಡುವುದು, ಆಡಳಿತ ಮಂಡಳಿ ಅಥವಾ ಸಹಶಿಕ್ಷಕರ ಬಗ್ಗೆ ಅನುಚಿತವಾಗಿ ಮಾತಾಡುವುದು, ಧೋರಣೆ ತೋರುವುದು ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳು ಅವಕ್ಕೆ ಸಾಕ್ಷಿಯಾಗುವುದು ಮಾತ್ರವಲ್ಲದೇ ಅವರ ಮೇಲೆ ನೇರವಾದ ಪ್ರಭಾವವೂ ಬೀರುತ್ತಿರುತ್ತದೆ.
ಶಾಲೆಯೆಂದರೆ ಕಲಿಕೆ ಮಾತ್ರವಲ್ಲದೇ ಅನೇಕ ಪ್ರಭಾವಗಳನ್ನು ಬೀರುವ ಕೇಂದ್ರ ವಾಗಿರುವ ಕಾರಣದಿಂದ ಶಾಲೆಯ ವ್ಯವಸ್ಥಾಪಕ ಮಂಡಳಿ, ಶಿಕ್ಷಕರು ಮತ್ತು ಸಂಸ್ಥೆಯ ಧ್ಯೇಯ-ಉದ್ದೇಶಗಳನ್ನು ಗಮನಿಸುವಷ್ಟು ಸೂಕ್ಷ್ಮಮತಿಗಳಾಗಿ ಪೋಷಕರು ಇರಲೇಬೇಕು. ಇಲ್ಲವಾದರೆ, ಎಳೆಯ ಮನಸ್ಸಿನಲ್ಲಿ ಕುಟುಂಬ ವೆಂದೂ ನಿರೀಕ್ಷಿಸಿರದಂತಹ ಮತ್ತು ಸಮಾಜವೆಂದಿಗೂ ಸಹಿಸದಂತಹ ವ್ಯಕ್ತಿತ್ವವಾಗಿ ಮಗುವು ರೂಪುಗೊಳ್ಳಬಹುದು.
ಮಕ್ಕಳು ಶಾಲೆಯಿಂದ ತರುವ ದೂರುಗಳನ್ನು ಆಲಿಸುವುದು ಮಾತ್ರವ ಲ್ಲದೇ, ಮಕ್ಕಳು ಶಾಲೆಯ ಎಲ್ಲಾ ಮಾಹಿತಿಗಳನ್ನೂ ಪೋಷಕರ ಜೊತೆಗೆ ಹಂಚಿ ಕೊಳ್ಳುವಂತಹ ಅಗತ್ಯ ಮತ್ತು ಬಗೆಗಳನ್ನು ಮುಂದೆ ಗಮನಿಸೋಣ.