ಲಿಂಕನ್‌ನ ಮೂರು ಕವಿತೆಗಳು
ಈ ಹೊತ್ತಿನ ಹೊತ್ತಿಗೆ
ಅಮೆರಿಕದ 16ನೆಯ ರಾಷ್ಟ್ರಾಧ್ಯಕ್ಷ ಅಬ್ರಹಾಂ ಲಿಂಕನ್ ವಿಶ್ವದ ಮಹಾ ಮುತ್ಸದ್ದಿಗಳ, ಸರ್ವಸಮತಾವಾದಿ ನಾಯಕರ ಹಾಗೂ ಅತ್ಯಂತ ಪ್ರಭಾವೀ ವಾಕ್ಪಟುಗಳ ಸಾಲಿನಲ್ಲಿ ನಿಂತ ನಾಯಕ. ವಿಶ್ವ ಇಂದಿಗೂ ಅವರನ್ನು ಬೇರೆ ಬೇರೆ ಕಾರಣಗಳಿಗಾಗಿ ನೆನೆಯುತ್ತಲೇ ಇದೆ. ಸಾಮಾಜಿಕ ಬದಲಾವಣೆಯ ಹರಿಕಾರ ಅವರು. ಒಬ್ಬ ಸಹೃದಯವನ್ನು ಹೊಂದಿದ ನಾಯಕ, ಶೋಷಿತರ ಕಣ್ಮಣಿ. ಹಾಗೆಯೇ ಅವರು ತನ್ನ ಮಕ್ಕಳಿಗೆ ಒಳ್ಳೆಯ ತಂದೆಯೂ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಒಳ್ಳೆಯ ಕವಿಯೂ ಆಗಿದ್ದರು. ಅವರ ಮಾತುಗಾರಿಕೆಯಲ್ಲೇ ಕಾವ್ಯದ ಲಯವಿದೆ. ಹಾಗೆಯೇ ಅವರು ತನ್ನ ಮಕ್ಕಳಿಗೆ ಬರೆದ ಪತ್ರಗಳು ಆ ಕಾವ್ಯ ಗುಣವನ್ನು ನಾವು ಕಾಣಬಹುದು. ರಾಜಕೀಯ ನಾಯಕನ ಮರೆಯೊಳಗೆ ಬಚ್ಚ್ಟಿಟ್ಟುಕೊಂಡ ಆ ಅಜ್ಞಾತ ಕವಿಯ ಮೂರು ದೀರ್ಘ ಕವನಗಳನ್ನು ಕನ್ನಡದ ಮಾನವ್ಯ ಕವಿ ಬಿ. ಎ. ಸನದಿಯವರು ಕನ್ನಡಕ್ಕಿಳಿಸಿದ್ದಾರೆ. ಇವುಗಳು ಕವಿಯ ಜೀವನ ದರ್ಶನದ ಗಾಢತೆಯನ್ನು ಸೂಚಿಸುತ್ತದೆ. ಒಬ್ಬ ರಾಜಕೀಯ ನಾಯಕನ ಆಳದಲ್ಲಿ ಇಂತಹದೊಂದು ಜೀವನ ದರ್ಶನದ ತೊರೆ ಹರಿಯುತ್ತಿತ್ತೇ ಎಂದು ಅಚ್ಚರಿ ಪಡುವಂತಹ ಸಾಲುಗಳು ಇಲ್ಲಿವೆ. ಒಂದು ವಿಷಾದದ ಛಾಯೆ ಪ್ರತಿ ಸಾಲುಗಳಲ್ಲಿ ಕೆನೆ ಕಟ್ಟಿದೆ.
ಮೊದಲನೆಯ ಕವಿತೆಯ ಹೆಸರು ‘ನನ್ನ ಎಳೆತನದ ಮನೆ’. ‘ಭವ್ಯ ತಡಸಲು ಕಂಡು ಕಿವಿದುಂಬಿದಬ್ಬರವು/ಹಿಂದೆ ಉಳಿದರು ಮತ್ತೆ ಕೇಳುವಾಸೆ/ ನಮಗಿಂತು ತಿಳಿದುದನು ತಿಳಿಯದೆಯೇ ಉಳಿದುದನು/ ಜೀವಂತಗೊಳಿಸುವುದು ಸ್ಮತಿಯ ಭಾಷೆ’ ಎಂದು ಅಪ್ಪಟ ನವೋದಯದ ಲಯದಲ್ಲಿ ಲಿಂಕನ್ ಕವಿತೆಯನ್ನು ಸನದಿ ಕನ್ನಡಕ್ಕಿಳಿಸುತ್ತಾರೆ. ಎಳೆತನದ ಮನೆಯ ಕುರಿತಂತೆ ಬರೆಯುತ್ತಲೇ ಸಾಗುವ ಲಿಂಕನ್, ಕೊನೆಯಲ್ಲಿ ಮಸಣದ ಮನೆಯ ಮುಂದೆ ಬಂದು ನಿಲ್ಲುತ್ತಾರೆ. ‘ವಸ್ತುವೊಂದಿಹುದಿಲ್ಲಿ’ ಮತ್ತು ‘ಕರಡಿಯ ಬೇಟೆ’ ಕೂಡ ಇಂತಹದೊಂದು ಮೃತ್ಯು ಛಾಯೆಯನ್ನು ಹೊತ್ತುಕೊಂಡೇ ಬರೆದಂಥವುಗಳು. ಈ ಪುಟ್ಟ ಕೃತಿಯಲ್ಲಿ ಲಿಂಕನ್ ಅವರ ಮೂಲ ಕವಿತೆಗಳನ್ನೂ ನೀಡಲಾಗಿದೆ. ಸಮತಾ ಪ್ರಕಾಶನ ಕುಮಟಾ ಅವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. 1999ರಲ್ಲಿ ಪ್ರಕಟವಾದ ಈ ಕೃತಿಯ ಮರು ಮುದ್ರಣ ಇದಾಗಿದೆ. ಕೃತಿಯ ಮುಖಬೆಲೆ 50 ರೂ.