ಮೋದಿ ಸರಕಾರದ ಕೃಷಿ ವಿಮಾ ಯೋಜನೆಗಳು: ಕಾರ್ಪೊರೇಟುಗಳಿಗೆ ಒಳ್ಳೆ ಕೊಯ್ಲು?
ಭಾಗ-1
ತಾನು ವಿಭಿನ್ನ ಪಕ್ಷವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೋದಿ ಸರಕಾರ ಆರಂಭದಿಂದಲೂ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿ ಕಾರ್ಪೊರೇಟುಗಳನ್ನೇ ಓಲೈಸುವುದರಲ್ಲಿ ತೊಡಗಿರುವಂತಿದೆ. ಇದಕ್ಕೆ ಪುರಾವೆ ಎಂಬಂತೆ ಅದರ ನೂತನ ಕೃಷಿ ವಿಮಾ ಯೋಜನೆಗಳ ಅಸಲಿ ಫಲಾನುಭವಿಗಳು ಕಾರ್ಪೊರೇಟು ಕುಳಗಳು ಎಂಬ ಆರೋಪಗಳು ಕೇಳಿಬರತೊಡಗಿವೆ. ಆ ಆರೋಪಗಳನ್ನು ವಿವರವಾಗಿ ಪರಿಶೀಲಿಸುವ ಮುನ್ನ 2004ರಲ್ಲಿ ಕೃಷಿವಲಯದ ಸುಧಾರಣೆಗೋಸ್ಕರ, ರೈತರ ಬದುಕನ್ನು ಸುಧಾರಿಸುವುದಕ್ಕೋಸ್ಕರ ರಚಿಸಲಾಗಿದ್ದ ಪ್ರೊ. ಸ್ವಾಮಿನಾಥನ್ ಆಯೋಗದ ವರದಿಯನ್ನು ಒಂದಿಷ್ಟು ಮೆಲುಕು ಹಾಕುವುದು ಒಳ್ಳೆಯದೆಂದು ಅನಿಸುತ್ತದೆ.
ಪ್ರೊ. ಸ್ವಾಮಿನಾಥನ್ ಆಯೋಗ ತನ್ನ ವರದಿಯನ್ನು ಸಲ್ಲಿಸಿ ಇಂದಿಗೆ ಸುಮಾರು ಹನ್ನೊಂದು ವರ್ಷಗಳೇ ಉರುಳಿವೆ. ಆಯೋಗದ ಹಲವಾರು ಸಲಹೆಗಳಲ್ಲಿ ಭೂ ಸುಧಾರಣೆ, ನೀರಾವರಿ ಸುಧಾರಣೆ, ಫಲವತ್ತತೆಯ ವೃದ್ಧಿ, ಆಹಾರ ಭದ್ರತೆ, ಕೃಷಿ ಸಾಲಗಳಿಗೆ ಶೇ. 4ರ ಬಡ್ಡಿದರ, ಸಾಲಾವಧಿಯ ವಿಸ್ತರಣೆ, ಆಹಾರ ಧಾನ್ಯಗಳಿಗೆ ಪ್ರತಿಫಲದಾಯಕ ಬೆಲೆಗಳ ನಿರ್ಧಾರ ಮುಂತಾದವು ಸೇರಿವೆ. ಕೃಷಿಯಷ್ಟು ಅಪಾಯವಿರುವ, ಅದರಷ್ಟು ಕಡಿಮೆ ಆದಾಯವಿರುವ ಕ್ಷೇತ್ರ ಇನ್ನೊಂದಿಲ್ಲವೆಂದ ಪ್ರೊ. ಸ್ವಾಮಿನಾಥನ್, ‘‘ರೈತರಿಗೆ ಮೂಲಭೂತ ಸಾಧನಗಳಾದ ಭೂಮಿ, ನೀರು, ಜೈವಿಕ ಸಾಧನಗಳು (ಪಶು ಸಂಗೋಪನೆ ಇತ್ಯಾದಿ), ಸಾಲ, ವಿಮೆ, ತಂತ್ರಜ್ಞಾನ ಹಾಗೂ ಮಾಹಿತಿ ನಿರ್ವಹಣೆ ಮತ್ತು ಮಾರುಕಟ್ಟೆಗಳು ಖಾತ್ರಿಯಾಗಿ ಲಭ್ಯವಾಗಬೇಕು ಮತ್ತು ಅವುಗಳ ಮೇಲೆ ನಿಯಂತ್ರಣವೂ ಇರಬೇಕು. ಉತ್ಪಾದನಾ ವೆಚ್ಚಕ್ಕೆ ಅದರ ಅರ್ಧದಷ್ಟನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಬೇಕು. ಕೃಷಿಯನ್ನು ರಾಜ್ಯಗಳ ಪಟ್ಟಿಯಿಂದ ಕೇಂದ್ರ ಹಾಗೂ ರಾಜ್ಯಗಳ ಸಹಯೋಗದ ಪಟ್ಟಿಗೆ ಬದಲಾಯಿಸಬೇಕು. ಭೂಮಿಯ ಅಸಮಾನ ಹಂಚಿಕೆ ಕೊನೆಗೊಳ್ಳಬೇಕು, ಬಡವರಿಗೂ ಭೂಮಿ ಸಿಗುವಂತಾಗಬೇಕು......’’ ಎಂದು ತಿಳಿಸಿದ್ದರು.
ಆದರೆ ರೈತರು ಕೊರಳುದ್ದ ಮಾಡಿ ಕಾದದ್ದೇ ಬಂತು. ಅವರ ಬದುಕು ಸುಧಾರಿಸುವ ಬದಲು ದಿನೇದಿನೇ ಇನ್ನಷ್ಟು ದುಸ್ತರವಾಗುತ್ತಾ ಸಾಗಿದೆ. 1995ರಿಂದ 2016ರ ತನಕ ಮೂರು ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅಧಿಕೃತ ಅಂಕಿ ಅಂಶಗಳೇ ಹೇಳುತ್ತವೆ. ಇವರಲ್ಲಿ ಹೆಚ್ಚಿನವರು ಸಾಲ ತೀರಿಸಲು ಅಸಾಧ್ಯವಾಗಿ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾದವರು. ಸರಕಾರಗಳು ಆಗಾಗ ಲೇಪಿಸುವ ‘ಸಾಲ ಮನ್ನಾ’ ಎಂಬ ಮುಲಾಮಿನಿಂದ ಏನೂ ಉಪಯೋಗವಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
ವಾಸ್ತವ ಏನೆಂದರೆ ಸ್ವಾಮಿನಾಥನ್ ಆಯೋಗದ ಸಲಹೆಗಳನ್ನು ಅದರಲ್ಲೂ ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆ ಕುರಿತ ಸಲಹೆಯನ್ನು (ಉತ್ಪಾದನಾ ವೆಚ್ಚ + ಅದರ ಶೇ. 50) ಪಾಲಿಸಲು ಸರಕಾರಗಳು ಹಿಂದೇಟು ಹಾಕುತ್ತಿವೆ. ಪರಿಣಾಮವಾಗಿ ರೈತರ ಆದಾಯಗಳಿಗೆ ಕನ್ನ ಬೀಳುತ್ತಿದೆ. ಇಂತಹ ದುರ್ಭರ ಪರಿಸ್ಥಿತಿಯಲ್ಲಿರುವ ರೈತರ ಮುಂದೆ ಎರಡೆರಡು ಸಮಸ್ಯೆಗಳಿವೆ. ಒಂದು ಕಡೆ ಬ್ಯಾಂಕುಗಳಿಂದ ಪಡೆದಿರುವ ಸಾಲಗಳನ್ನು ತೀರಿಸಬೇಕಾಗಿದೆ.
ಇನ್ನೊಂದು ಕಡೆ ವಿಮಾ ಕಂಪೆನಿಗಳಿಗೆ ಸಲ್ಲಿಸಿದ ಬೇಡಿಕೆಗಳು ಚುಕ್ತಾ ಆಗುತ್ತಿಲ್ಲ. ಮೋದಿ ಸರಕಾರವಂತೂ ರೈತರನ್ನು ಪೂರ್ತಿಯಾಗಿ ನಿರ್ಲಕ್ಷಿಸಿದ ಪರಿಣಾಮವಾಗಿ ಇಂದು ಅನೇಕ ರಾಜ್ಯಗಳಲ್ಲಿ ರೈತರು ಬಂಡಾಯ ಏಳುತ್ತಿದ್ದಾರೆ. ಸರಕಾರ ಹೆಸರಿಗೇನೋ ರೈತರ ಒಳಿತಿಗೆಂದು ಎರಡು ಹೊಸ ಕೃಷಿ ವಿಮಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆಯಾದರೂ ಅದರ ಪ್ರಯೋಜನವೆಲ್ಲ ಕಾರ್ಪೊರೇಟುಗಳ ಪಾಲಾಗುತ್ತಿರುವಂತಿದೆ.
ಮೋದಿ ಸರಕಾರದ ಕೃಷಿ ವಿಮಾ ಯೋಜನೆಗಳು
ಮೋದಿ ಸರಕಾರ ಯಥಾಪ್ರಕಾರವಾಗಿ ಭಾರೀ ಬಾಜಾಬಜಂತ್ರಿ ಹಾಗೂ ಅತೀ ಅಬ್ಬರದ ಪ್ರಚಾರದೊಂದಿಗೆ ಕಳೆದ ವರ್ಷದಿಂದ ಆರಂಭಿಸಿರುವ ಕೃಷಿ ವಿಮಾ ಯೋಜನೆಗಳು ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿವೆ. 2016ರ ಜನವರಿ 13ರಂದು ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ಮತ್ತು ಹೊಸರೂಪದ ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಗಳಿಗೆ ಚಾಲನೆ ನೀಡಲಾಗಿತ್ತು. ಈ ಹೊಸ ಯೋಜನೆಗಳಿಂದಾಗಿ ದೇಶದ ರೈತರು ಬರ, ನೆರೆ, ಅಕಾಲಿಕ ಮಳೆ ಮುಂತಾದ ಪ್ರಾಕೃತಿಕ ವಿಕೋಪಗಳ ಪರಿಣಾಮವಾಗಿ ಅನುಭವಿಸುವ ಬೆಳೆ ನಷ್ಟಕ್ಕೆ ಇನ್ನು ಮುಂದೆ ಸೂಕ್ತ ಪರಿಹಾರ ಸಿಗಲಿದೆ ಎಂದು ಜಾಹೀರಾತು ಮತ್ತು ಪಾವತಿ ಸುದ್ದಿಗಳ ಮೂಲಕ ಡಂಗುರ ಸಾರಲಾಗಿತ್ತು. ತುತ್ತೂರಿ ಮಾಧ್ಯಮಗಳು, ಮೋದಿಭಕ್ತ ಸಾಮಾಜಿಕ ಜಾಲತಾಣಗಳು ವಗೈರೆ ವಗೈರೆ ಮೋದಿ ಸರಕಾರದ ಕಾರ್ಯಕ್ರಮಗಳನ್ನು ‘ವಿನೂತನ’, ‘ರೈತಸ್ನೇಹಿ’ ಎಂದೆಲ್ಲ ಕೊಂಡಾಡಿದ್ದೇ ಕೊಂಡಾಡಿದ್ದು!
ಅಸಲಿ ಸಂಗತಿ
ಈ ಎರಡು ಯೋಜನೆಗಳಿಗೆ 2019ರ ಒಳಗಾಗಿ ಶೇ. 50ರಷ್ಟು ಬೆಳೆಭೂಮಿಗಳನ್ನು ಒಳಗೊಳ್ಳುವ ಗುರಿಯನ್ನು ವಿಧಿಸಲಾಗಿದೆ. ಆರಂಭದಲ್ಲಿ ಕೃಷಿ ವಿಮಾ ಸಂಸ್ಥೆಗಳು ನಿಯಮಿತ (Agriculture Insurance Companies Limited, ಎಐಸಿಎಲ್) ಎಂಬ ಸರಕಾರಿ ವಿಮಾ ಸಂಸ್ಥೆ ಮತ್ತು 10 ಖಾಸಗಿ ವಿಮಾ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.