ಅಮೃತಮತಿಯ ಮತಿ
ಕರ್ನಾಟಕದ ಪಶ್ಚಿಮ ಕರಾವಳಿಯ ಸಮುದ್ರಕ್ಕೆ ಬೆಂಕಿ ಹಚ್ಚುವ ಪ್ರಯತ್ನವನ್ನು ಸಾಕಷ್ಟು ಜನರು ಮಾಡಿದರು. ಈ ಬೆಳವಣಿಗೆಯನ್ನು ದೂರದಿಂದಲಾದರೂ ಗಮನಿಸಿದಾಗ ನಮ್ಮ ಸಮಾಜದ ದಿಕ್ಕೇನು ಎಂದು ಯೋಚಿಸುವಂತಾಗುತ್ತದೆ. ಬೆಂಕಿ ಹಚ್ಚುವವರೇ ಎಲ್ಲ, ಬೆಳಕು ನೀಡುವವರೇ ಇಲ್ಲವೆಂಬ ಸ್ಥಿತಿಗೆ ಕಾರಣರಾರು? ಉರಿಗೆ ಉರಿಯನ್ನು ತೋರಿಸುವ ಉತ್ಸಾಹದಲ್ಲಿ ನಿಷ್ಪಾಪಿಗಳು ಬಲಿಯಾಗುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಎಲ್ಲ ಕಡೆ ಶಾಂತಿ ನೆಲೆಸಿದೆ ಎಂದರೆ ಒಳಗೆ ಬೆಂಕಿಯಿದೆ- ಅದನ್ನು ಬೂದಿ ಮುಚ್ಚಿದೆ ಎಂದೇ ಅರ್ಥೈಸಬೇಕು. ಇದನ್ನು ಪರಿಹರಿಸುವ ಮನಸ್ಸು ಯಾರಿಗೂ ಇದ್ದಂತಿಲ್ಲ. ಪರಿಹಾರವಾದರೆ ಸಿಂಹಾಸನ ದಕ್ಕುವುದಾದರೂ ಹೇಗೆ?
ಮಹಾಭಾರತ ಯುದ್ಧದ ಕೊನೆಗೆ ಪಾಂಡವರು ಪಟ್ಟವೇರಬೇಕಾದರೆ ಅಲ್ಲಿ ಪ್ರಜೆಗಳೆಷ್ಟಿದ್ದರು ಮತ್ತು ಯಾವ ಸಾರ್ಥಕತೆಗೆ ಅವರು ಗೆದ್ದರು ಎಂಬ ಸಂಕಟದ ಸೂಚನೆಯಿದೆ. ಸಿಂಹಾಸನವನ್ನೇರಿದರೂ ಅಲ್ಲಿ ಸುಖವಿಲ್ಲ ಎಂದು ಗೊತ್ತಾಗುವ ಹೊತ್ತಿಗೆ ತೀರ ತಡವಾಗುತ್ತದೆ. ಸಮಾಜದ ಸಮೀಪದೃಷ್ಟಿ-ದೂರದೃಷ್ಟಿ ದೋಷಗಳಿಗೆ ಔಷಧಿ ದೊರಕುವ ಕಾಲಕ್ಕೆ ದಾರಿ-ನೀರು-ಅಧಿಕಾರ-ಆಹಾರ ಈ ನೆಪಗಳನ್ನು ಹೂಡಿ ಎಲ್ಲ ಕಡೆ ಕುರುಕ್ಷೇತ್ರ ನಡೆದಿರುತ್ತದೆ. ಇದನ್ನು ಯಾರಿಗೆ ಒಪ್ಪಿಸಬೇಕು? ಇದು ಸರಿಯೇ ಎಂದು ಕೇಳಿದರೆ ಪ್ರತಿಯೊಬ್ಬನೂ ತಾನು ಬೆಂಬಲಿಸುವ ಗುಂಪಿನ ಕುರುಡುತನವನ್ನೇ ಆದರ್ಶವೆಂದು ಬಗೆದು ಸಮರ್ಥಿಸುತ್ತಾನೆ. ಇದರಿಂದಾಗಿ ನಿಮಗೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ ತೊಂದರೆಯಾಗಿಲ್ಲವೆ ಎಂದು ಕೇಳಿ ನೋಡಿ: ಈ ಮಂದಿ ನಿಮಗೆ ಭವಿಷ್ಯದ ಭಾರೀ ಪಾಠ ಹೇಳುತ್ತಾರೆ. ಮಹಾನ್ ಆದರ್ಶಗಳನ್ನು ಪೂರೈಸಬೇಕಾದರೆ ಸಣ್ಣಪುಟ್ಟ ನೋವು-ಕಷ್ಟಗಳನ್ನು ಸಹಿಸಬೇಕು ಎನ್ನುತ್ತಾರೆ. ಅವರ ಮಹಾನ್ ಆದರ್ಶವೇನು? ಅದು ನೀರುಳ್ಳಿಯನ್ನು ಸುಲಿದಂತೆ; ಕೊನೆಗೆ ಏನೂ ಇರುವುದಿಲ್ಲ.
ಖಾಂಡೇಕರ್ ಅವರ ‘ಯಯಾತಿ’ ಕಾದಂಬರಿಯಲ್ಲಿ ‘‘ಲೋಕದಲ್ಲಿ ಜನ ದಾರಿಗೆಡುತ್ತಾರೆ. ದಾರಿಗೆಟ್ಟವರನ್ನು ಕಣ್ಣಾರೆ ನೋಡುತ್ತಾರೆ. ಆದರೆ ಅದರಿಂದ ಪಾಠ ಮಾತ್ರ ಕಲಿತುಕೊಳ್ಳುವುದಿಲ್ಲ! ಪ್ರತಿಯೊಬ್ಬನಿಗೂ ಬದುಕಿನ ಕೊನೆಯಲ್ಲಿ ಒಂದಿಷ್ಟು ಬುದ್ಧಿ ಕಾಣಿಸಿಕೊಳ್ಳುತ್ತದೆ. ಆದರೆ ಹಾಗಾಗುವುದು ಇನ್ನೊಬ್ಬರು ಎಡವಿದ್ದನ್ನು ನೋಡಿಯಲ್ಲ; ತಾನೇ ಪೆಟ್ಟು ತಿನ್ನುವುದರ ಮೂಲಕ’’ ಎಂಬ ಮಾತುಗಳಿವೆ.
ಜನ್ನನ ‘ಯಶೋಧರ ಚರಿತೆ’ ಕಾವ್ಯದಲ್ಲಿ ಬರುವ ಯಶೋಧರನೆಂಬ ಅರಸ ಮತ್ತು ಆತನ ಮನದನ್ನೆ ಪತ್ನಿ ರೂಪವತಿ ಅಮೃತಮತಿಯ ಕಥೆ ಒಂದು ರೂಪಕ. ವಿಚಾರ/ವಿಷಯ/ವಸ್ತುವಿನ ಪರಿಚಿತರಿಗೆ ಕೆಲವು ಪದಗಳು ಒಟ್ಟರ್ಥವನ್ನು ಮೊದಲೇ ಸೂಚಿಸುತ್ತವೆ. ವರ್ತಮಾನದ ಘಟನೆ-ವಿಘಟನೆಗಳನ್ನು ಅವಲೋಕಿಸಬೇಕಾದರೆ ಮತ್ತು ಮನುಷ್ಯಜನ್ಯ ಸ್ವಭಾವಗಳನ್ನು ವಿವೇಚಿಸಬೇಕಾದರೆ, ವಿಶ್ಲೇಷಿಸಬೇಕಾದರೆ ಈ ಕಾವ್ಯಭಾಗವನ್ನು ಒಂದಷ್ಟು ವಿವರಿಸಲೇಬೇಕಾಗಿದೆ: ರತಿ-ಮನ್ಮಥರಂತಿದ್ದ ಯಶೋಧರ-ಅಮೃತಮತಿಯರ ಪ್ರೇಮ ಜೀವನವನ್ನು ಜನ್ನ ಸೊಗಸಾಗಿ ವರ್ಣಿಸುತ್ತಾನೆ. ಅದು ಇಲ್ಲಿ ಪ್ರಸ್ತುತವಲ್ಲ. ಕಥೆಯಲ್ಲಿ ಅರಮನೆಯ ಪಕ್ಕದಲ್ಲಿಯೇ ಪಟ್ಟದಾನೆಯ ಮಾವುತ-ಆತನ ಹೆಸರು ಅಷ್ಟಾವಂಕ- ರಾತ್ರಿ ತನ್ನ ಮನಸ್ಸಂತೋಷಕ್ಕಾಗಿ ಹಾಡುತ್ತಾನೆ. ಆತನ ಧ್ವನಿ ಇಂಪು. ಅದು ಪತಿಯೊಂದಿಗೆ ಶಯ್ಯೆಯಲ್ಲಿರುವ ಅಮೃತಮತಿಯ ನಿದ್ದೆಗೆಡಿಸುತ್ತದೆ. ಹಾಡನ್ನು ಕೇಳಿ ಹಿಂದೆಮುಂದೆ ಯೋಚಿಸದೆ ತನ್ನ ಮನಸ್ಸನ್ನು ಆ ಹಾಡಿನ ಮೂಲಕ್ಕೆ ಅರ್ಪಿಸುತ್ತಾಳೆ. ಪ್ರೀತಿಸುವ ಪತಿ, ಬದುಕಿನಲ್ಲಿ ಸಿಗಬೇಕಾದ ಎಲ್ಲಾ ಸುಖಭೋಗಗಳು ಆ ಕ್ಷಣಕ್ಕೆ ಅವಳಿಗೆ ಗೌಣವಾಗುತ್ತದೆ. ಆ ಶಾರೀರದ ಶರೀರವನ್ನು ಕೂಡುವ ಬಯಕೆಯೇ ಕಡಲಿನಂತೆ ಭರತಗೊಳ್ಳುತ್ತದೆ. ಕಾಮದ ಬಯಕೆ ಉಕ್ಕಿ ಹರಿಯುತ್ತದೆ. ತನ್ನ ಸಖಿಯ ಮೂಲಕ ಆತನಿಗೆ ಸಂದೇಶ ಕಳುಹಿಸುತ್ತಾಳೆ. ಆದರೆ ಆತ ಕುರೂಪಿ; ರೂಪಾಧಮ; ಅಷ್ಟಾವಕ್ರ. ಸಖಿಗೇ ವಾಕರಿಕೆ ಬರುವಂತಹ ಸ್ವರೂಪ. ಸಖಿಯು ಹೇಳುವ ‘ಚಿತ್ರಮಪಾತ್ರೇ ರಮತೇ ನಾರೀ’ (ನಾರಿಯು ಅಪಾತ್ರನನ್ನು ರಮಿಸುತ್ತಾಳೆ) ಎಂಬ ಉದ್ಗಾರವು ಈ ವಿಲೋಮ ಪ್ರೇಮದ ಪೀಠಿಕೆಯಾಗಿದೆ.
ಆದರೆ ಅಮೃತಮತಿಯು ಆಕೆಯ ಬರವಿಗೆ ಕಾದಿದ್ದಾಳೆ. ಸಖಿಯು ಆತನ ನೈಜ ಕುರೂಪವನ್ನು ಹೇಳಿದರೂ ಕಪ್ಪುಕಸ್ತೂರಿ, ಗಂಟುಗಂಟಿನ ಗಂಧದ ಕೊರಡು, ಕೊಂಕು ಕಾಮನಬಿಲ್ಲು ಇವನ್ನು ಹೇಳಿ ಮೆಚ್ಚಿನವರ ಮೈಯ್ಯ ದೋಷವೇ ಅವರ ಮೇಲ್ಮೆಯೆಂದು ಸಖಿಯನ್ನು ಒಪ್ಪಿಸಿ ಆ ಮಾವುತನ ಸಂಗವನ್ನು ಪಡೆಯುತ್ತಾಳೆ. ಬೇವನ್ನು ಮೆಚ್ಚಿದ ಕಾಗೆಗೆ ಮಾವು ರುಚಿಸದಂತೆ ಆಕೆಗೆ ಯಶೋಧರನ ಸಂಗ ಅಹಿತವಾಗುತ್ತದೆ. ಅವಳ ಈ ನಡವಳಿಕೆಯಿಂದ ಸಂಶಯಿತನಾದ ಯಶೋಧರನು ಶಯ್ಯೆಯಲ್ಲಿ ಮಲಗಿದ ನಂತರ ಮೈಮರೆತು ನಿದ್ರಿಸುವವನಂತೆ ನಟಿಸುತ್ತಾನೆ. ಅಮೃತಮತಿಯು ಪತಿಯ ತೋಳ್ಸೆರೆಯಿಂ ನುಸುಳಿ ತನ್ನ ಜಾರನಲ್ಲಿಗೆ ಹೂಮಾಲೆ, ಗಂಧ, ತಾಂಬೂಲದೊಂದಿಗೆ ನಡೆಯುತ್ತಾಳೆ; ಯಶೋಧರನು ಖಡ್ಗವನ್ನು ಹಿರಿದು ‘ದೋಷದ ಬೆನ್ನೊಳೆ ಸಂಧಿಸುವ ದಂಡದಂತೆ’ ಆಕೆಯನ್ನು ಹಿಂಬಾಲಿಸುತ್ತಾನೆ. ಆದಿನ ಪ್ರಾಯಃ ಕಾಕತಾಳೀಯವೆಂಬಂತೆ ಆಕೆ ಹೋದ ಹೊತ್ತು ತುಸು ತಡವಾಗಿದೆ. ಆಕೆ ಸಮೀಪಿಸಿದೊಡನೆ ಆ ಮಾವುತನು ಆಕೆ ತಂದ ದ್ರವ್ಯಗಳನ್ನು ಸಿಟ್ಟಿನಿಂದ ಎಸೆದು ಅವಳ ಕೂದಲನ್ನು ಹಿಡಿದೆಳೆದು ಅವಳನ್ನು ಥಳಿಸುತ್ತಾನೆ ಮತ್ತು ಒದೆಯುತ್ತಾನೆ. ಆದರೂ ಅವಳು ‘ಕೇರೆ ಪೊರಳ್ವಂತೆ’ ಆತನ ಕಾಲ ಮೇಲೆ ಹೊರಳುತ್ತಾಳೆ ಮತ್ತು ಆತನಲ್ಲಿ ವಿಳಂಬಕ್ಕೆ ಕ್ಷಮೆಯನ್ನು ಯಾಚಿಸುತ್ತಾಳೆ. ತನ್ನ ಪತಿಯನ್ನು ‘ಅರಸನೆಂಬ ಪಾತಕನೆನ್ನಂ ತೊಡೆಯೇರಿಸಿ ಕೇಳಿಕೆಯದೊಡೆ’ ತಾನು ನೋಡುತ್ತ ಸುಮ್ಮನಿರಬೇಕಾಯಿತು ಎನ್ನುತ್ತಾಳೆ. ಆತನೇ ತನ್ನ ಸರ್ವಸ್ವವೆನ್ನುತ್ತ ಉಳಿದೆಲ್ಲ ಗಂಡಸರು ಸೋದರಸಮಾನರು ಎನ್ನುತ್ತಾಳೆ.
ಇವೆಲ್ಲವನ್ನೂ ಗಮನಿಸುತ್ತಿದ್ದ ಯಶೋಧರನು ಅವರಿಬ್ಬರನ್ನೂ ಕೊಲ್ಲಬೇಕೆನ್ನಿಸಿದರೂ ಜಿಗುಪ್ಸೆಯಿಂದ ಮರಳಿ ಬಂದು ನಿದ್ರಿಸುವಂತೆ ನಟಿಸುತ್ತಾನೆ. ಮುಂದೆ ಈ ಸಂಶಯವೇ ಆತನಿಗೂ ಆತನ ತಾಯಿ ಚಂದ್ರಮತಿಗೂ ಮುಳುವಾಗಿ ಅಮೃತಮತಿಯಿಕ್ಕಿದ ವಿಷಕ್ಕೆ ಬಲಿಯಾಗಿ ಜನ್ಮಾಂತರದ ಕೊಳೆಯನ್ನು ಅನುಭವಿಸುತ್ತಾರೆ. ಪ್ರಾಯಃ ನಮ್ಮ ಸಮಾಜವೂ ಯಾರೋ ಮಾುವ ಪಾಪಕ್ಕೆ ಹೀಗೆ ಬಲಿಯಾಗುತ್ತಾರೆ.
ಮೆಚ್ಚಿದವರಿಗೆ ಮಸಣ ಸುಖ ಎಂಬ ಮಾತಿದೆ. ಒಮ್ಮೆ ಮನಸ್ಸು ಒಲಿದರೆ ಮತ್ತೆ ಏನನ್ನೂ ಸಹಿಸುವ ಪ್ರಕೃತಿ, ಪ್ರವೃತ್ತಿ ಮನುಷ್ಯರದ್ದು. ಇಷ್ಟೇ ಅಲ್ಲ, ತಮ್ಮ ಒಲವಿಗೆ ಸರಿಯಾದ ತರ್ಕ, ಕುತರ್ಕ, ಸಮರ್ಥನೆ, ವಿವರಣೆ, ವ್ಯಾಖ್ಯಾನ ಇವೆಲ್ಲವನ್ನೂ ನಡೆಸುತ್ತ, ಇತರರ ಇಂತಹ (ಕು)ಕೃತ್ಯಗಳನ್ನು ಬೆಂಬಲಿಸುತ್ತ ವಿವೇಕಶೂನ್ಯರಾಗಿ ವರ್ತಿಸತೊಡಗುತ್ತಾರೆ. ಒಬ್ಬ ವ್ಯಕ್ತಿಯ ಭಾವನೆಯೇ ಅಮೃತಮತಿಯಂತೆ ಏನನ್ನೂ ಸಹಿಸುವ, ಮೆಚ್ಚುವ ಗುಣ ಪಡೆದು ತನಗೆ ಅಪ್ರಿಯರಾದ ಇತರರ ನಾಶಕ್ಕೆ ಕಾರಣವಾಗುವುದಾದರೆ ಇಡೀ ಸಮಾಜದ ವರ್ಗ, ಜಾತಿ, ಸಮುದಾಯಗಳನ್ನೊಳಗೊಂಡ ಮುಖ್ಯ ವಾಹಿನಿಯು ಗುಣಾವಗುಣಗಳನ್ನು ಪರಿಗಣಿಸದೆ ಇಂತಹ ಒಲವಿಗೆ ತುತ್ತಾದರೆ ಆ ಆ ಕಾಲ-ದೇಶದ ಸ್ಥಿತಿ ಏನಾಗಬೇಕು?
ಎಲ್ಲ ಕಾಲದಲ್ಲೂ ಇಂತಹ ನಡವಳಿಕೆಗಳು, ಪ್ರವೃತ್ತಿಗಳಿದ್ದವು. ಅವನ್ನು ಇತಿಹಾಸ ದಾಖಲಿಸಿದೆ; ಮುಚ್ಚಿಹೋದ ಸಂಗತಿಗಳೂ ಇರಬಹುದು. ಇವುಗಳು ಪುರಾಣ ಕಥನವಾಗುವ ಹೊತ್ತಿಗೆ ಕಥಾ ಮಹತ್ವದೊಂದಿಗೆ ರೂಪಕ ಮಹತ್ವವನ್ನು ಸಂಪಾದಿಸುತ್ತದೆ. ಯಾವ ಕಾಲದ ಬದುಕೂ ಕೊನೆಗೆ ವಿಷಾದದ ಪ್ರತಿಮೆಯಾಗಿ ಉಳಿಯುವುದು ಇದರಿಂದಾಗಿಯೇ ಇರಬೇಕು. ಸಾಹಿತ್ಯವು ಎಲ್ಲ ಭಾವ-ವಿಚಾರಗಳನ್ನು ಸಂಗ್ರಹಿಸಿ ಮಡುಗಟ್ಟಿಸಿ ಸಂಸ್ಕೃತಿಯ, ಜನಜೀವನದ ಭಾಗವಾಗಿ ಉಳಿಯುತ್ತದೆ. ಈ ಮಡುವಿನ ನೀರಾರಿದಾಗಲೂ ಇಲ್ಲೊಂದು ಕೆರೆಯಿತ್ತು, ಇದರ ಸುತ್ತ ಬದುಕಿತ್ತು, ಸುಖ-ದುಃಖಗಳ ಮಿಶ್ರಣ ಮತ್ತು ಸಂಯುಕ್ತವು ಇಲ್ಲಿ ಹಾಸುಹೊಕ್ಕಾಗಿತ್ತು ಎಂಬುದನ್ನು ಬಿಂಬಿಸುತ್ತದೆ. ವಾಲ್ಮೀಕಿ, ವ್ಯಾಸರ ಪುರಾಣಗಳೇ ಇರಲಿ, ಅಥವಾ ಸಾಫೋಕ್ಲಿಸ್, ಶೇಕ್ಸ್ ಪಿಯರ್, ಟಾಲ್‌ಸ್ಟಾಯ್, ಅಥವಾ ಇನ್ನಿತರ ಶ್ರೇಷ್ಠರ ಎಲ್ಲ ಬಗೆಯ ಸೃಜನಶೀಲ ಕೃತಿಗಳೇ ಇರಲಿ, ಕೊನೆಗೂ ಹೇಳುವುದು ಸಮಾಜದ ಇಂತಹ ನಂಬಿಕೆಗಳ, ನಡೆನುಡಿಗಳ ದುರಂತಗಳನ್ನೇ. ರಾಮನ ಜೊತೆಯಲ್ಲೇ ರಾವಣ, ವಾಲಿ, ಕೈಕೆಯರ ನೆನಪು; ಕೃಷ್ಣನ ಜೊತೆಗೇ ಕೌರವ, ಭೀಷ್ಮ, ಅಂಬೆ, ಕುಂತಿಯರ ನೆನಪು. ಮ್ಯಾಕ್‌ಬೆತ್ ಅನುಭವಿಸಿದ ಬದುಕೂ ಇದೇ; ಹಾಮ್ಲೆಟ್ ಅನುಭವಿಸಿದ್ದೂ ಇದನ್ನೇ. ಜ್ಯೂಲಿಯಸ್ ಸೀಝರ್ ತನ್ನ ಅಂತ್ಯದ ಕ್ಷಣಗಳಲ್ಲಿ ಬ್ರೂಟಸ್‌ನ ಕುರಿತು ಆಡಿದ ಮಾತುಗಳೂ (ಬ್ರೂಟಸ್, ಹಾಗಾದರೆ ಸೀಝರ್ ಸಾಯಬೇಕು) ಇವನ್ನೇ ಹೇಳುತ್ತವೆ.
ಕ್ಷೋಭೆಗೊಂಡ ಸಾಮಾಜಿಕ ಸಂದರ್ಭದಲ್ಲಿ ಇವೆಲ್ಲ ಯಾಕೆ ನೆನಪಾಗುತ್ತವೆಂದರೆ ಭವಿಷ್ಯದ ಕುರಿತು ಅಥವಾ ಬದುಕನ್ನು ಕಟ್ಟಿಕೊಳ್ಳುವ ಕುರಿತು ಸಮಾಜದ ಬಹುಪಾಲು ಜನರು ಯೋಚಿಸುವುದೇ ಇಲ್ಲ. ವೈಯಕ್ತಿಕವಾಗಿ ತಮ್ಮ ಭವಿಷ್ಯವನ್ನು ಹಸನುಮಾಡಿಕೊಳ್ಳಬೇಕೆಂದು ಬಯಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ, ಮತ್ತಿತರ ಸೌಕರ್ಯಗಳನ್ನು ಬಯಸುವ ಜನರು ಸಮಾಜದ ಮುಖ್ಯ ಹರಿವೂ ಇಷ್ಟೇ ಶಾಂತವಾಗಿರಬೇಕೆಂಬ ಬಗ್ಗೆ ಚಿಂತಿಸುವುದೇ ಇಲ್ಲ. ಹೇಗಾದರೂ ಪ್ರಗತಿಯ ಏಣಿಯೇರಬೇಕೆಂದು ಬಯಸುವ ಜನರು ಸಮೂಹ ಸಂಸ್ಕೃತಿಯ ದುಷ್ಟ ಪಾಲುದಾರರು ಬೆಳೆಸುತ್ತಿರುವ ದ್ವೇಷ-ವಿನಾಶದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬೇಟೆಯಾಡುವುದು ಮತ್ತು ಬೇಟೆಗೆ ಬಲಿಯಾಗುವುದು ಇವೆರಡರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದಂತೆ ಜನರು ಸಮಾಜದ ಗತಿಯಲ್ಲಿ ಪಾತ್ರವಹಿಸುತ್ತಾರೆ. ಇದರಿಂದಾಗಿ ಪ್ರಗತಿ-ಉನ್ನತಿ ಇತ್ಯಾದಿಗಳ ಮಾತನಾಡುತ್ತಲೇ ಜನರು ಖೆಡ್ಡಾದೊಳಗೆ ಸೆರೆಸಿಕ್ಕಿದ ಆನೆಗಳಂತೆ ಘೀಳನ್ನು ಕ್ಷೀಣವಾಗಿಸಿ ಮೌನವಾಗಬೇಕಾಗುತ್ತದೆ.
ಸಮಾಜದಲ್ಲಿ ಭಿನ್ನ ಹಿನ್ನೆಲೆ, ಜಾತಿ, ಮತ, ಜನಾಂಗ, ವರ್ಗ ಇವುಗಳಿಂದ ಬಂದ ಜನರಿರುತ್ತಾರೆ. ತಾನು ಮತ್ತು ತನ್ನವರು/ತಮ್ಮವರು ಎಂಬ ಗುಂಪುಗುಳಿತನದಿಂದ ಬದುಕುವುದು ಅಸಾಧ್ಯವೆಂಬುದು ಪ್ರತಿಯೊಬ್ಬ ವಿವೇಕಿಗೂ ಗೊತ್ತಿರುತ್ತದೆ. ಇದು ಹುಟ್ಟಿನಿಂದ ಸಾವಿನ ತನಕ ನಮ್ಮಿಂದಿಗೆ ಬರುವ ಗೆಳೆಯ; ನೆಂಟ. ಹೆರಿಗೆಗೆ ನನ್ನ ಜಾತಿಯ ಸೂಲಗಿತ್ತಿಯೇ ಬೇಕು, ಕಾಯಿಲೆ ಬಿದ್ದಾಗ ನನ್ನ ನೆಂಟ ವೈದ್ಯ-ದಾದಿಯರೆೇ ಬೇಕು, ನನ್ನ ಪರ ವಾದಿಸಲು ನನ್ನವರೇ ಆದ ವಕೀಲರು ಬೇಕು, ಅಥವಾ ನನ್ನ ಲೆಕ್ಕಪತ್ರಗಳನ್ನು ವ್ಯವಹರಿಸಲು ನನ್ನವರೇ ಆದ ಪರಿಶೋಧಕರೇ ಆಗಬೇಕು, ಅಥವಾ ಕೊನೆಗೆ ನಾನು ಹತ್ತುವ ಬಸ್ಸಿನ ಚಾಲಕ-ನಿರ್ವಾಹಕರು ನನ್ನವರೇ ಆಗಬೇಕು ಎಂಬುದಾಗಲೀ ಸಂತೆಯಲ್ಲಿ ತರಕಾರಿ-ಹಣ್ಣುಹಂಪಲು ಕೊಳ್ಳುವಾಗ ಮಾರಾಟಗಾರನ ಹಿನ್ನೆಲೆ ಯಾವುದು ಎಂಬುದಾಗಲೀ ನಿಜಕ್ಕೂ ಅಪ್ರಸ್ತುತ. ಅಂಗಡಿಯವನ ಜಾತಕ ನೋಡಿ ಯಾರೂ ಸರಕು ಕೊಳ್ಳುವುದಿಲ್ಲ.
ಇಷ್ಟು ಸಾಮರಸ್ಯದ, ತಾಳಮೇಳಗಳಿರುವ ಬದುಕನ್ನು ಕೆಲವೇ ಕ್ಷಣಗಳಲ್ಲಿ ಯಾರದೋ ಕೇಡುಮಾತುಗಳಿಗೆ, ಪ್ರೇರಣೆಗಳಿಗೆ ಬಲಿಯಾಗಿ ಕಳೆದುಕೊಳ್ಳ್ಳುತ್ತೇವೆ. ಯಾವುದು ಮೇಲ್ನೋಟಕ್ಕೆ ತಪ್ಪೆಂದು ಕಾಣಿಸುತ್ತದೆಯೋ ಅದನ್ನು ನಾವು ನಮ್ಮ ಪ್ರಾಥಮಿಕ ಆದ್ಯತೆಯಾಗಿ ಪರಿಗಣಿಸಿಕೊಂಡು ಬೆಂಬಲಿಸುತ್ತೇವೆ. ಜಾತಿ-ಮತ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಗೊಂದಲಗಳನ್ನು ಸ್ವಲ್ಪವಿವೇಕದೊಂದಿಗೆ ಪರಿಹರಿಸಿಕೊಳ್ಳಬಹುದು. ಆದರೆ ಕೇಡು ಮಾಡುವವರಿಗೆ ಅದು ಬೇಕಿಲ್ಲ. ಅವರಿಗೆ ನಯವಾದ, ವಿನಯವಾದ ಕೆಲವು ಪೋಷಾಕುಗಳು, ಮುಖವಾಡಗಳಿರುತ್ತವೆ- ಅಷ್ಟಾವಂಕನ ಧ್ವನಿಯಿರುತ್ತದೆ. ಇವುಗಳಿಗೆ ಮಾರುಹೋಗುವುದು ಬಹುಪಾಲು ಯಶೋಧರನಂತಹ ಗಂಡನನ್ನು ಹೊಂದಿದ ಅಮೃತಮತಿ ಯೆಂಬ ಹೆಣ್ಣಿನ ಹಾಗಿರುವ ಮುಗ್ಧ ಸಜ್ಜನರು. ಕಿವಿಯೊಂದಿಗೆ ಮನಸ್ಸನ್ನು ನೀಡುವ ನಮ್ಮ ಸಮಾಜದ ಬಹುಮಂದಿ ಇತರರ ಮತ್ತು ಪರೋಕ್ಷವಾಗಿ ತಮ್ಮದೇ ಕ್ರಿಯೆ-ಪ್ರತಿಕ್ರಿಯೆಗಳ ಪರಿಣಾಮ-ಫಲಿತಾಂಶಗಳ ಬಗ್ಗೆ ನಗಣ್ಯರಾಗಿರುತ್ತಾರೆ. ಯೋಚಿಸುವ ಮಂದಿಗೆ ಮಾತನಾಡಬೇಕೋ ಮೌನ ವಾಗಿರಬೇಕೋ ಎಂಬ ಸಂದಿಗ್ಧವೇ ಕೊನೆಗೂ ಪರಿಹಾರವೇನೋ?
ಒಬ್ಬ ವ್ಯಕ್ತಿಯ ಭಾವನೆಯೇ ಅಮೃತಮತಿಯಂತೆ ಏನನ್ನೂ ಸಹಿಸುವ, ಮೆಚ್ಚುವ ಗುಣ ಪಡೆದು ತನಗೆ ಅಪ್ರಿಯರಾದ ಇತರರ ನಾಶಕ್ಕೆ ಕಾರಣವಾಗುವುದಾದರೆ ಇಡೀ ಸಮಾಜದ ವರ್ಗ, ಜಾತಿ, ಸಮುದಾಯಗಳನ್ನೊಳಗೊಂಡ ಮುಖ್ಯ ವಾಹಿನಿಯು ಗುಣಾವಗುಣಗಳನ್ನು ಪರಿಗಣಿಸದೆ ಇಂತಹ ಒಲವಿಗೆ ತುತ್ತಾದರೆ ಆಗ ಆ ಕಾಲ-ದೇಶದ ಸ್ಥಿತಿ ಏನಾಗಬೇಕು?