ನಾಡಧ್ವಜ ಹೊಂದುವ ಹಕ್ಕು ಸಂವಿಧಾನ ಬದ್ಧ: ಪ್ರೊ.ರವಿವರ್ಮಕುಮಾರ್
ಸಂವಿಧಾನಾತ್ಮಕ ಕಾನೂನು, ಮಾನವ ಹಕ್ಕುಗಳ ಉಲ್ಲಂಘನೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಚುನಾವಣಾ ವಿವಾದ, ಶಿಕ್ಷಣ, ಲಂಚ ವಿರೋಧಿ ಪ್ರಕರಣಗಳಲ್ಲಿ ಕಳೆದ 40 ವರ್ಷಗಳಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ರವಿವರ್ಮಕುಮಾರ್, ರಾಮಮನೋಹರ ಲೋಹಿಯಾರ ಸಮಾಜವಾದ, ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ರೈತ ಹೋರಾಟ, ಎಲ್.ಜಿ.ಹಾವನೂರರ ಕಾನೂನು ಪಾಂಡಿತ್ಯ- ಮೂವರ ವಿಚಾರವನ್ನು ಅರಿತು ಅರಗಿಸಿಕೊಂಡವರು. ಅದೇ ಹಾದಿಯಲ್ಲಿ ಇವತ್ತಿಗೂ ಮುಂದುವರಿಯುತ್ತಾ, ಸಾಮಾಜಿಕ ಚಳವಳಿಗಳೊಂದಿಗೆ ಗುರುತಿಸಿಕೊಳ್ಳುತ್ತಾ, ಸಮಾಜದ ಸ್ವಾಸ್ಥವನ್ನು ತಮ್ಮ ಇತಿಮಿತಿಯಲ್ಲಿಯೇ ಕಾಪಾಡುತ್ತಿರುವವರು. ಹೈಕೋರ್ಟ್ ವಕೀಲರಾಗಿ, ಕರ್ನಾಟಕ ಸರಕಾರದ ಅಡ್ವೋಕೇಟ್ ಜನರಲ್ ಆಗಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಕನ್ನಡ ನಾಡಿಗೆ ಪ್ರತ್ಯೇಕ ಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಡಾ.ಪಾಟೀಲ ಪುಟ್ಟಪ್ಪಸೇರಿ ಹಲವಾರು ಕನ್ನಡಪರ ಹೋರಾಟಗಾರರು ಸಲ್ಲಿಸಿರುವ ಮನವಿಗಳ ಪರಿಶೀಲನೆಗೆ ರಾಜ್ಯ ಸರಕಾರ ಈಗಾಗಲೇ ಸಮಿತಿಯೊಂದನ್ನು ರಚನೆ ಮಾಡಿದೆ. ಆ ಸಮಿತಿ ನೀಡುವ ಶಿಫಾರಸಿನನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಭಾರತೀಯ ಜನತಾ ಪಕ್ಷ ಸಂವಿಧಾನದಲ್ಲಿ ಆಸ್ಪದವಿಲ್ಲ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಎಂದು ವಿರೋಧ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಹಿರಿಯ ನ್ಯಾಯವಾದಿ ರವಿವರ್ಮಕುಮಾರ್, ರಾಜ್ಯಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿದೆಯೇ, ಕಾನೂನಾತ್ಮಕ ರೀತಿ-ನೀತಿಗಳೇನು ಎಂಬುದರ ಸುತ್ತ ‘ವಾರ್ತಾ ಭಾರತಿ’ಯೊಂದಿಗೆ ಮಾತನಾಡಿದ್ದು ಇಲ್ಲಿದೆ.
ಭಾರತ ಸಂವಿಧಾನದಡಿಯಲ್ಲಿ ಮೂಲಭೂತ ಕರ್ತವ್ಯಗಳು ಪರಿಚ್ಛೇದ 51A(a)ರಲ್ಲಿ ಪ್ರಮುಖವಾದದು- ಭಾರತ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಭಾರತದ ಸಂವಿಧಾನದಡಿಯಲ್ಲಿ ಕಟಿಬದ್ಧವಾದ ಒಂದು ಬೃಹತ್ ಒಕ್ಕೂಟ ವ್ಯವಸ್ಥೆಯನ್ನು ರಚಿಸಲಾಗಿದೆ. ಇಂಡಿಯಾ ಈಸ್ ನಾಟ್ ಎ ಯೂನಿಟ್ರಿ ಸ್ಟೇಟ್- ಬದಲಾಗಿ ನೇಷನ್ ಎಂಬುದನ್ನು ಒತ್ತಿ ಹೇಳಿದೆ. ಅಲ್ಲದೆ, ಎಸ್.ಆರ್.ಬೊಮ್ಮಾಯಿ ಮೊಕದ್ದಮೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ 9 ಜನರ ಪೀಠ ಫೆಡರಿಲಿಸಮ್ ಒಂದು ಮೂಲಭೂತ ಅಂಶ ಅಥವಾ ಬೇಸಿಕ್ ಫೀಚರ್ ಅಂತ ಹೇಳಿದೆ. ಹಾಗಾಗಿ ರಾಜ್ಯಗಳು ಕೇಂದ್ರದ ಬಾಲಂಗೋಚಿಗಳಲ್ಲ. ಬದಲಾಗಿ ತಮಗೆ ಕೊಟ್ಟಿರುವ ಅಧಿಕಾರದಲ್ಲಿ ರಾಜ್ಯಗಳೇ ಸಾರ್ವಭೌಮರು. ಇದೇ ಒಕ್ಕೂಟ ವ್ಯವಸ್ಥೆಯ ತಿರುಳು. ರಾಜ್ಯಕ್ಕೆ ತನ್ನದೇ ಆದಂತಹ ವಿಧಾನ ಮಂಡಲವಿದೆ, ಕಾರ್ಯಾಂಗವಿದೆ, ನ್ಯಾಯಾಂಗವೂ ಇದೆ. ಕರ್ನಾಟಕ ರಾಜ್ಯದ ಕಾರ್ಯಾಂಗ ಮತ್ತು ವಿಧಾನಮಂಡಲ ಕೇಂದ್ರ ಸರಕಾರದ ಅಡಿಯಾಳಲ್ಲ. ಪಾರ್ಲಿಮೆಂಟಿನ ಅಡಿಯಾಳೂ ಅಲ್ಲ. ಕೇಂದ್ರ ಸರಕಾರಕ್ಕಿರುವಷ್ಟೇ ಅಧಿಕಾರ ಮತ್ತು ಶಕ್ತಿ ತನಗೆ ಕೊಟ್ಟಿರುವ ಕ್ಷೇತ್ರಗಳಲ್ಲಿ ರಾಜ್ಯ ಸರಕಾರಕ್ಕಿದೆ. ಪ್ರಮುಖವಾಗಿ ಸಂವಿಧಾನದಲ್ಲಿ ಎಲ್ಲಿಯೂ ಸಹ ರಾಜ್ಯಕ್ಕೆ ಪ್ರತ್ಯೇಕ ನಾಡಗೀತೆ, ರಾಜ್ಯ ಲಾಂಛನ ಅಥವಾ ರಾಜ್ಯಧ್ವಜ ಇರಬಾರದು ಎಂದು ಅಪ್ಪಣೆ ಮಾಡಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನಗಳ 50 ರಾಜ್ಯಗಳಲ್ಲಿ 50 ಪ್ರತ್ಯೇಕ ರಾಜ್ಯಧ್ವಜಗಳಿವೆ. ಯುನೈಟೆಡ್ ಕಿಂಗ್ಡಮ್ನ 4 ಕೌಂಟಿಗಳಾದ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ನಾರ್ದನ್ ಐರ್ಲೆಂಡ್- ಇವುಗಳೂ ತಮ್ಮದೇ ಆದ ನಾಡಗೀತೆ, ಲಾಂಛನ ಹಾಗೂ ಧ್ವಜಗಳನ್ನು ಹೊಂದಿವೆ. ಹಾಗೆ ನೋಡಿದರೆ, ಯುಕೆಯಲ್ಲಿ ಒಕ್ಕೂಟ ವ್ಯವಸ್ಥೆಯೇ ಇಲ್ಲ. ಪಾರ್ಲಿಮೆಂಟ್ಗೆ ಸರ್ವೋಚ್ಚ ಅಧಿಕಾರವಿದೆ. ಆದಾಗ್ಯೂ ನಾಡಗೀತೆ, ಧ್ವಜ ಪ್ರತಿಯೊಂದು ಕೌಂಟಿಯಲ್ಲೂ ರಾರಾಜಿಸುತ್ತವೆ.
ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ 3 ಕಾನೂನುಗಳನ್ನು ರಚನೆ ಮಾಡಲಾಗಿದೆ. ಮೊದಲನೆ ಕಾನೂನು 1950ರಲ್ಲಿ ರಚನೆಯಾದ ದಿ ಎಂಬ್ಲಮ್ಸ್ ಅಂಡ್ ನೇಮ್ಸ್ (ಪ್ರಿವೆನ್ಷನ್ ಆಫ್ ಇನ್ಪ್ರಾಪರ್ ಯೂಸ್), ಇದರಡಿಯಲ್ಲಿ ರಾಷ್ಟ್ರಧ್ವಜವನ್ನು ಯಾವುದೇ ವಾಣಿಜ್ಯ ಕಾರಣಗಳಿಗೆ ಬಳಸಬಾರದೆಂದು ಹೇಳಲಾಗಿದೆ. ವಾಣಿಜ್ಯ, ವ್ಯಾಪಾರ, ಉದ್ಯೋಗ- ವೃತ್ತಿ ಸಂಬಂಧ ಇಲ್ಲವೇ ಪೇಟೆಂಟ್, ಇಲ್ಲವೇ ಟ್ರೇಡ್ ಮಾರ್ಕ್ಗಳಲ್ಲಿ ಬಳಸಬಾರದೆಂಬ ನಿಷೇಧವಿದೆ. ಆದರೆ ಬೇರೆ ಧ್ವಜಗಳಿರಬಾರದೆಂದು ಎಲ್ಲಿಯೂ ನಿಯಮಗಳಿಲ್ಲ.
ಹಾಗೆಯೇ ಪ್ರಿವೆನ್ಷನ್ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಹಾನರ್ ಆಕ್ಟ್ 1971ರ ಅಡಿಯಲ್ಲಿ ರಾಷ್ಟ್ರಧ್ವಜವನ್ನು ಸುಡುವುದು, ಹಾಳು ಮಾಡುವುದು, ತುಳಿಯುವುದು ಇತ್ಯಾದಿ ವಿಷಯಗಳಲ್ಲಿ ಸ್ಪಷ್ಟ ನಿರ್ದೇಶನವಿದೆ. ರಾಷ್ಟ್ರಧ್ವಜಕ್ಕೆ ಸಾರ್ವಜನಿಕವಾಗಿ ಅಪಚಾರ ಮಾಡಿದಲ್ಲಿ 3 ವರ್ಷದವರೆಗೆ ಜೈಲು ಶಿಕ್ಷೆಗೆ ನಿರ್ದೇಶಿಸಿದೆ. ಈ ಕಾನೂನಿನಲ್ಲಿಯೂ ಸಹ ಬೇರೆ ಧ್ವಜಗಳ ಬಗ್ಗೆ ಯಾವುದೇ ನಿಷೇಧವಿಲ್ಲ
ಕೊನೆಯ ಕಾಯ್ದೆ ಫ್ಲಾಗ್ ಕೋಡ್ ಆಫ್ ಇಂಡಿಯಾ 2002ರಲ್ಲಿ ರಚನೆಯಾಗಿದ್ದು, ಅದರ ಪ್ರಕಾರ ರಾಷ್ಟ್ರಧ್ವಜವನ್ನು ಹಾರಿಸುವ ಹಕ್ಕನ್ನು ಕೊಡುತ್ತಾ ಬೇರೆ ಧ್ವಜಗಳ ಜೊತೆಗೆ ಒಂದೇ ಧ್ವಜಸ್ತಂಭದಲ್ಲಿ ಹಾರಿಸಬಾರದೆಂಬ ನಿಷೇಧವಿದೆ, ಮತ್ತು ಬೇರೆ ಧ್ವಜಗಳ ಅಡಿಯಲ್ಲಿ ಅಥವಾ ಆ ಧ್ವಜಗಳ ಕೆಳಗೆ ಹಾರಿಸಬಾರದೆಂಬ ನಿಯಮವಿದೆ. ಅಂದರೆ ಬೇರೆ ಧ್ವಜಗಳನ್ನು ಹಾರಿಸಬಹುದು. ಅದಕ್ಕೆ ಪ್ರತ್ಯೇಕ ಧ್ವಜಸ್ತಂಭವನ್ನು ಬಳಸಬೇಕು ಮತ್ತು ರಾಷ್ಟ್ರಧ್ವಜದ ಕೆಳಗೆ ಹಾರಿಸಬೇಕು ಎಂದು ಹೇಳುವ ಮೂಲಕ ಬೇರೆ ಧ್ವಜಗಳಿಗೂ ಅವಕಾಶವಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಕಾನೂನಿನ ಅಡಿಯಲ್ಲಿ ಇತರ ರಾಷ್ಟ್ರಗಳ ಧ್ವಜಗಳನ್ನೂ ಹಾರಿಸಬಹುದಾಗಿದ್ದು, ಅಂತಹ ಸನ್ನಿವೇಶದಲ್ಲಿ ರಾಷ್ಟ್ರಧ್ವಜಕ್ಕೆ ಕೊಡಬೇಕಾದಂತಹ ಗೌರವ ಮತ್ತು ಪ್ರಾಧಾನ್ಯತೆ ಬಗ್ಗೆ ಹೇಳಲಾಗಿದೆಯೇ ಹೊರತು ಎಲ್ಲಿಯೂ ನಿಷೇಧವಿಲ್ಲ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ ರಾಷ್ಟ್ರದ ಭೂಸೇನೆ, ನೌಕಾದಳ, ವಾಯುಸೇನೆಗಳಿಗೂ ಪ್ರತ್ಯೇಕ ಧ್ವಜಗಳಿವೆ. ಹಾಗೆಯೇ ಸಿಆರ್ಪಿಎಫ್, ಬಿಎಸ್ಎಫ್ಗಳಿಗೂ ಪ್ರತ್ಯೇಕ ಧ್ವಜಗಳಿವೆ. ಅಷ್ಟೇ ಅಲ್ಲ, ಭೂಸೇನೆಯ ವಿವಿಧ ವಿಭಾಗಗಳಿಗೂ ಪ್ರತ್ಯೇಕ ಧ್ವಜಗಳಿವೆ. ಮತ್ತು ಆ ಧ್ವಜಗಳನ್ನು ರಾಷ್ಟ್ರಪತಿಗಳೇ ಆಯಾ ವಿಭಾಗದ ಮುಖ್ಯಸ್ಥರಿಗೆ ಹಸ್ತಾಂತರಿಸುತ್ತಾರೆ. ಈ ಎಲ್ಲ ಧ್ವಜಗಳನ್ನು ಎಲ್ಲ ಸಂದರ್ಭಗಳಲ್ಲೂ ಸಹ ರಾಷ್ಟ್ರಧ್ವಜದ ಜೊತೆಗೆ ಹಾರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಲಾಂಛನವನ್ನು ಅಧಿಕೃತವಾಗಿ ಹೊಂದಿರುವ, ಪ್ರತ್ಯೇಕ ನಾಡಗೀತೆಯನ್ನು ಹೊಂದಿರುವ ರಾಜ್ಯಕ್ಕೆ ನಾಡಧ್ವಜವನ್ನು ಹೊಂದುವ ಅಧಿಕಾರ ಮತ್ತು ಹಕ್ಕು ಖಂಡಿತವಾಗಿಯೂ ಇದೆ.
ಅಂದಹಾಗೆ ಒಂದೇ ರಾಷ್ಟ್ರ ಒಂದೇ ಧ್ವಜ ಎನ್ನುವ ಕೂಗು ರಾಜ್ಯ ಸರಕಾರದ ವಿರುದ್ಧ ಇವತ್ತು ಹೊರಡುವುದಕ್ಕೆ ಕಾರಣ ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ಎಂ.ಎಸ್.ಗೋಳ್ವಾಲ್ಕರ್. 1956ರಲ್ಲಿ ಭಾಷಾವಾರು ಪ್ರಾಂತ ರಚನೆಗೆ ವಿರೋಧ ವ್ಯಕ್ತಪಡಿಸುತ್ತಾ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸ್ವಾಯತ್ತ ರಾಜ್ಯಗಳನ್ನು ಅಥವಾ ಅರೆಸ್ವಾಯತ್ತ ರಾಜ್ಯಗಳನ್ನು ಗುಡಿಸಿಹಾಕಿ ‘ಒಂದು ರಾಷ್ಟ್ರ, ಒಂದು ಶಾಸಕಾಂಗ ಮತ್ತು ಒಂದು ಕಾರ್ಯಾಂಗ’ ಎಂಬ ಘೋಷವಾಕ್ಯದ ಮೂಲಕ ಭಾರತದ ಸಂವಿಧಾನವನ್ನು ಪುನರ್ ರಚಿಸಬೇಕು ಎಂದು ಆರೆಸ್ಸೆೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಅದೇ ಆರೆಸ್ಸೆಸ್ ಅಜೆಂಡಾ. ಇವತ್ತು ರಾಜ್ಯ ಸರಕಾರದ ನಾಡಧ್ವಜ ರಚಿಸುವುದರ ವಿರುದ್ಧ ಹುಯಿಲೆಬ್ಬಿಸುತ್ತಿರುವುದಕ್ಕೂ ಇದೇ ಕಾರಣ. ಭಾಷಾವಾರು ಪ್ರಾಂತ ರಚನೆಯಾದ ಕೂಡಲೇ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಹಾಗೆಯೇ ನಾಡಗೀತೆ, ನಾಡಲಾಂಛನ, ನಾಡಧ್ವಜ ಇರಬೇಕೆಂಬುದು ಬಹುಜನರ ಒತ್ತಾಯ ನಿರಂತರವಾಗಿದೆ. ನಾಡಗೀತೆ, ನಾಡಲಾಂಛನ ಈಡೇರಿದೆ. ನವೆಂಬರ್ ಒಂದರ ರಾಜ್ಯೋತ್ಸವದ ವೇಳೆಗೆ ನಾಡಧ್ವಜವನ್ನು ರಚಿಸಿ, ಅದಕ್ಕೆ ಕಾನೂನಿನ ರಕ್ಷಣೆ ಕೊಡುವುದರ ಮೂಲಕ ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕಿದೆ. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಭಾರತದಲ್ಲಿರುವ ರಾಜಿಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವೈವಿದ್ಯತೆಯೇ ಈ ಒಕ್ಕೂಟ ವ್ಯವಸ್ಥೆಯ ಅಡಿಪಾಯ. ಭಾಷಾವಾರು ಪ್ರಾಂತ ರಚನೆಯೇ ಭಾರತದ ವೈವಿದ್ಯತೆಯನ್ನು ಸಂವಿಧಾನಬದ್ಧಗೊಳಿಸಿದೆ. ರಾಷ್ಟ್ರಧ್ವಜದ ಜೊತೆಗೆ ದೇಶದ 29 ರಾಜ್ಯಗಳಿಗೂ ಪ್ರತ್ಯೇಕ ಧ್ವಜಗಳನ್ನು ಹಾರಿಸುವುದು ಭಾರತ ಒಕ್ಕೂಟ ವ್ಯವಸ್ಥೆಯ ದ್ಯೋತಕವಷ್ಟೇ ಅಲ್ಲ, ಬದಲಾಗಿ ಭಾರತದ ವೈವಿಧ್ಯತೆಯ ಸಂಭ್ರಮಾಚರಣೆಯಾಗಿದೆ.
ಒಂದೇ ರಾಷ್ಟ್ರ, ಒಂದೇ ಧ್ವಜ ಎನ್ನುವವರು ಸಂವಿಧಾನ ವಿರೋಧಿಗಳು. ಒಕ್ಕೂಟ ವ್ಯವಸ್ಥೆಯ ವಿರೋಧಿಗಳು. ಆರೆಸ್ಸೆಸ್, ಗೋಳ್ವಾಲ್ಕರ್ ಅವರ ಹಿಂದೂ ರಾಷ್ಟ್ರದ ಅಜೆಂಡಾವನ್ನು ಪ್ರತಿಪಾದಿಸುವವರು. ಹಾಗಾಗಿ ರಾಜ್ಯ ಸರಕಾರ ಅವರ ವಿರೋಧಕ್ಕೆ ಬೆಲೆ ಕೊಡದೆ, ನಾಡಿನ ಬಹುಸಂಖ್ಯಾತರ ಬಯಕೆಯಂತೆ, ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ, ನಾಡಧ್ವಜವನ್ನು ಹೊಂದುವುದು ರಾಜ್ಯದ ಸಂವಿಧಾನಬದ್ಧ ಅಧಿಕಾರ ಮತ್ತು ಹಕ್ಕು ಎಂದರಿತು ಮುನ್ನಡೆಯಬೇಕಾಗಿದೆ.