ಒಂದು ಮೊಟ್ಟೆಯ ಕಥೆಯ ಬಹುಮುಖ ಹೀರೋ 'ಪ್ರವೀಣ್ ಶ್ರೀಯಾನ್'
ಯಶಸ್ವಿ ಸಿನೆಮಾದ ತೆರೆಮರೆಯ ‘ಒಂದು ಸಾಧನೆಯ ಕಥೆ’
ಇವರು ಯಾವುದೇ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಪದವೀಧರರಲ್ಲ. ಯಾವುದೇಸಿನೆಮಾ ಹಿನ್ನೆಲೆ ಇಲ್ಲ. ಆದರೂ ಉಡುಪಿಯಲ್ಲಿದ್ದುಕೊಂಡೇ ತನ್ನ ಆಸಕ್ತಿ, ಪರಿಶ್ರಮದಿಂದ ಯೂ ಟ್ಯೂಬ್ ಟುಟೋರಿಯಲ್‌ನಲ್ಲಿ ಮೂವಿ ತಂತ್ರಜ್ಞಾನ ಕಲಿತು ಒಂದು ಯಶಸ್ವಿ ಸಿನೆಮಾವನ್ನು ಚಿತ್ರಿಸಿದ ಅದ್ಭುತ ಕಲಾವಿದ.
ಇದು ಇಂದು ರಾಜ್ಯಾದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಒಂದು ಮೊಟ್ಟೆಯ ಕಥೆ’ ಚಿತ್ರದ ತೆರೆಮರೆಯ ‘ಬಹುಮುಖ ಹೀರೋ’ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಬೆಂಗ್ರೆ ನಿವಾಸಿ ಪ್ರವೀಣ್ ಶ್ರೀಯಾನ್ (30) ಅವರ ‘ಒಂದು ಸಾಧನೆಯ ಕಥೆ’.
ಒಂದು ಸಿನೆಮಾದಲ್ಲಿ ಸಿನೆಮಾಟೋಗ್ರಫಿ (ಕ್ಯಾಮರಾ), ಎಡಿಟಿಂಗ್(ಸಂಕಲನ), ಗ್ರಾಫಿಕ್ಸ್, ಕಲರಿಸ್ಟ್, ವಿಎಫ್‌ಎಕ್ಸ್ ಪ್ರಮುಖ ವಿಭಾಗಗಳು. ಇದನ್ನು ಒಂದೊಂದು ತಂಡ ನಿರ್ವಹಿಸುತ್ತದೆ. ಆದರೆ ಒಂದು ಮೊಟ್ಟೆಯ ಕಥೆಯಲ್ಲಿ ಈ ಎಲ್ಲ ಜವಾಬ್ದಾರಿಯನ್ನು ಪ್ರವೀಣ್ ಶ್ರೀಯಾನ್ ಒಬ್ಬರೇ ನಿರ್ವಹಿಸಿ ದ್ದಾರೆ. ತನ್ನ ಚೊಚ್ಚಲ ಸಿನೆಮಾವನ್ನು ಅನುಭವಿಗಳ ಷ್ಟೇ ಅಚ್ಚುಕಟ್ಟಾಗಿ ಚಿತ್ರಿಸಿ ತಯಾರಿಸುವ ಮೂಲಕ ಪ್ರವೀಣ್ ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಬೆಂಗ್ರೆಯ ಮೊಗವೀರ ಸಮುದಾಯದ ಕಲ್ಯಾಣಿ ಶ್ರೀಯಾನ್ ಹಾಗೂ ಶೇಖರ್ ಮಾಬುಕಳ ದಂಪತಿ ಯ ಮೂವರು ಮಕ್ಕಳಲ್ಲಿ ಪ್ರವೀಣ್ ಶ್ರೀಯಾನ್ ಎರಡನೆಯವರು. ಇವರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಲು ಮುಂಬೈ ಹಾಗೂ ಮಣಿಪಾಲದಲ್ಲಿ ಗ್ರಾಫಿಕ್ಸ್ ಡಿಸೈನರ್ ಹಾಗೂ ಪ್ರೋಗ್ರಾಮರ್ ಆಗಿ ಕೆಲಸ ನಿರ್ವಹಿಸಿದ ಅವರ ಮಾವ ರಮೇಶ್ ಶ್ರೀಯಾನ್ ಪ್ರಮುಖ ಪ್ರೇರಣೆ. ಮಾವನ ಗ್ರಾಫಿಕ್ಸ್ ಕೆಲಸದಿಂದ ಆಕರ್ಷಿತಗೊಂಡ ಪ್ರವೀಣ್, ಗ್ರಾಫಿಕ್ಸ್ ಗೆ ಸಂಬಂಧಿಸಿದ ಹೆಚ್ಚಿನ ವಿಷಯಗಳನ್ನು ಅವರಿಂದ ಮನೆಯಲ್ಲಿಯೇ ಕಲಿತುಕೊಂಡರು.
ಕೆಲಸದ ಜೊತೆ ಕಲಿಕೆ: ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ನಂತರ ಇವರು, ಉಡುಪಿಯ ಖಾಸಗಿ ಚಾನೆಲ್‌ನಲ್ಲಿ ಗ್ರಾಫಿಕ್ಸ್ ಡಿಸೈನರ್ ವೀಡಿಯೊ ಎಡಿಟರ್, ಜಾಹೀ ರಾತು ರಚನೆಕಾರರಾಗಿ ಕೆಲಸಕ್ಕೆ ಸೇರಿಕೊಂಡರು. ಆ ಮಧ್ಯೆಯೇ ಅವರು ದೂರ ಶಿಕ್ಷಣದ ಮೂಲಕ ಬಿಕಾಂ ಪದವಿ ಮುಗಿಸಿದರು.
ನಾಲ್ಕೈದು ವರ್ಷಗಳ ಹಿಂದೆ ಅವರು ತನ್ನದೇ ಸ್ವಂತ ಆ್ಯಡ್ ಫಿಲ್ಮ್ ಪ್ರೊಡಕ್ಷನ್ ಹೌಸ್‌ನ್ನು ಆರಂಭಿಸಿ ದರು. ಉಡುಪಿಯ ಪ್ರತಿಷ್ಠಿತ ಕಂಪೆನಿಗಳ ಕಾನ್ಸೆಪ್ಟ್ ಜಾಹೀರಾತು ತಯಾರಿಸಿದ ಅವರು, ಸೃಜನಶೀಲತೆಯ ಜಾಹೀರಾತುಗಳ ರಚನೆ ಯ ಮೂಲಕ ಪ್ರಸಿದ್ಧಿ ಪಡೆದರು. ಇದೇ ವೇಳೆ ಅವರಿಗೆ ಸಿನೆಮಾದಲ್ಲಿ ಕೆಲಸ ಮಾಡಬೇಕೆಂಬ ಕನಸು ಹುಟ್ಟಿಕೊಂಡಿತು. ಚಿತ್ರದ ನಾಯಕ ಹಾಗೂ ನಿರ್ದೇಶಕ ರಾಜ್ ಶೆಟ್ಟಿ ಜೊತೆ ಸೇರಿ ಜಾಹೀರಾತು ತಯಾರಿಸಿದ ಅನುಭವವು ಇವರನ್ನು ಕಿರುಚಿತ್ರ ಗಳನ್ನು ತಯಾರಿಸಲು ಪ್ರೇರೇಪಿ ಸಿತು. ಹಾಗೆ ಇವರು ‘ಸುಮ್ನೆ ನಮಗೆ ಯಾಕೆ’ ಹಾಗೂ ‘ಫೈವ್ ಲೆಟರ್ಸ್’ ಕಿರುಚಿತ್ರಗಳನ್ನು ತಯಾರಿ ಸಿದರು. ಈ ಎರಡೂ ಚಿತ್ರಗಳಿಗೂ ಒಳ್ಳೆಯ ಪ್ರತಿಕ್ರಿ ಯೆ ಬಂದಿತ್ತು.
ಕುವೆಂಪು, ಪೂರ್ಣಚಂದ್ರ ತೇಜಸ್ವಿಯ ಸಹಿತ ಪ್ರಸಿದ್ಧ ಸಾಹಿತಿಗಳ ಹಲವು ಕೃತಿಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡ ಪ್ರವೀಣ್, ಅದರೊಂದಿಗೆ ಉತ್ತಮ ಅಭಿರುಚಿಯ ಇಂಗ್ಲಿಷ್, ಮಲಯಾಳಂ, ಇರಾನಿ ಭಾಷೆಗಳ ಸಿನೆಮಾಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿ ಅದರ ಸಿನೆಮಾಟೋಗ್ರಫಿ, ಹಿನ್ನೆಲೆಯ ದೃಶ್ಯ, ತಂತ್ರ ಜ್ಞಾನಗಳನ್ನು ಅರ್ಥೈಸಿಕೊಂಡರು.
ಅಲ್ಲದೆ ಯಶಸ್ವಿ ಜಗತ್ತಿನ ವಿವಿಧ ಭಾಷೆಗಳ ಸೂಪರ್‌ಹಿಟ್ ಸಿನೆಮಾಗಳ ಸಿನೆಮಾಟೋಗ್ರ ಫಿಗಳ ಸಂದರ್ಶನಗಳನ್ನು ವೀಕ್ಷಿಸಿದ್ದರು. ಇದುವೇ ನನ್ನ ಜ್ಞಾನದ ದೊಡ್ಡ ಬಂಡವಾಳ ಎನ್ನುತ್ತಾರೆ ಶ್ರೀಯಾನ್. ಎಮ್ಯಾನುವೆಲ್ ಲುಬೆಝ್ಕಿ, ರೋಗ ರ್ ಡೆಕೀನ್ಸ್, ಸಂತೋಷ್ ಸಿವನ್, ರಾಜೀವ್ ರವಿ, ಸೈಜು ಖಾಲಿದ್, ಸಮೀರ್ ತಾಹೀರ್ ಇವರ ಫೆವರಿಟ್ ಸಿನೆಮಾ ಟೋಗ್ರಾಫರ್‌ಗಳು.
ಇದರ ಜೊತೆ ತಾನೇ ಸ್ವತಃ ಯೂಟ್ಯೂಬ್ ಟುಟೋರಿಯಲ್ ಮೂಲಕ ಸಾಫ್ಟ್‌ವೇರ್, ಕ್ಯಾಮರಾ, ಫಿಲ್ಮ್ ಎಡಿಟಿಂಗ್‌ನ್ನು ಕಲಿತುಕೊಂಡ ಅವರು ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನ ವನ್ನು ಸಂಪಾದಿಸಿಕೊಂಡರು. ತನ್ನ ಚೊಚ್ಚಲ ಸಿನೆಮಾ ವನ್ನು ರೆಡ್ ಎಂಎಕ್ಸ್ ಕ್ಯಾಮರಾದಲ್ಲಿ ಚಿತ್ರೀಕರಿ ಸುವುದರೊಂದಿಗೆ ಸೈ ಎನಿಸಿಕೊಂಡ ಪ್ರವೀಣ್ ತನಗೆ ವಹಿಸಿದ ಎಲ್ಲ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿ ಯಶಸ್ವಿಯ ಮೆಟ್ಟಿಲೇರಿದ್ದಾರೆ.
ಪ್ರವೀಣ್ ಶ್ರೀಯಾನ್ ಉತ್ತಮ ಕಲಾವಿದ. ಅವರು ಈ ಸಿನೆಮಾದಲ್ಲಿ ತುಂಬಾ ಜವಾಬ್ದಾರಿ ವಹಿಸಿಕೊಂಡಿರು ವುದಕ್ಕಿಂತ ಅದರ ಗುಣಮಟ್ಟ ಕಾಯ್ದು ಕೊಂಡಿರುವುದು ಮುಖ್ಯವಾಗುತ್ತದೆ. ನಾವು ಈ ಸಿನೆಮಾವನ್ನು ಕೇವಲ 16 ದಿನಗಳಲ್ಲಿ ಚಿತ್ರೀಕರಣ ಮಾಡಿದ್ದು, ಅಷ್ಟು ಕಡಿಮೆ ಸಮಯದಲ್ಲಿ ಗುಣಮಟ್ಟದ ಚಿತ್ರೀಕರಣ ಮಾಡಲು ನಮಗೆ ಟ್ಯಾಲೆಂಟೆಡ್ ಕಲಾವಿದ ಬೇಕಾಗಿತ್ತು. ಆ ಕೆಲಸವನ್ನು ಗುಣಮಟ್ಟಕ್ಕೆ ಎಲ್ಲೂ ತೊಂದರೆ ಆಗದಂತೆ ಪ್ರವೀಣ್ ನಿರ್ವಹಿಸಿದ್ದಾರೆ. ಅವರು ತಂತ್ರಜ್ಞಾನಕ್ಕಿಂತ ಹೆಚ್ಚು ಭಾವನೆಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ.
ರಾಜ್ ಬಿ.ಶೆಟ್ಟಿ, ನಿರ್ದೇಶಕರು
ಯಶಸ್ವಿ ಸಿನೆಮಾಟೋಗ್ರಾಫರ್‌ಗಳ ಸಂದರ್ಶನವನ್ನು ನೋಡುತ್ತಿದ್ದೆ. ಅದರಲ್ಲಿ ಅವರು ತಮ್ಮ ಅನುಭವ, ಒಂದೊಂದು ಫ್ರೇಮ್‌ಗಳ ಅರ್ಥವನ್ನು ಬಿಡಿಸಿ ಹೇಳುತ್ತಿದ್ದರು. ಇದು ನನಗೆ ಸಿನೆಮಾಟೋಗ್ರಾಫರ್ ಏನು ಎಂಬುದು ತಿಳಿದುಕೊಳ್ಳಲು ಸಾಧ್ಯವಾಯಿತು. ಅದೇ ರೀತಿ ಸಿನೆಮಾದ ಮೇಕಿಂಗ್ ದೃಶ್ಯಗಳು ಕೂಡ ಸಾಕಷ್ಟು ಸಹಕಾರಿಯಾಗಿವೆ. ಅಲ್ಲದೆ ಕುವೆಂಪು ಅವರ ಸಾಹಿತ್ಯ, ಉತ್ತಮ ಅಭಿರುಚಿಯ ಸಿನೆಮಾಗಳು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.
ಪ್ರವೀಣ್ ಶ್ರೀಯಾನ್