ಕಾರವಾರ ಕಡಲತೀರದಲ್ಲಿ ಹೆಬ್ರಿಡ್ ತೆಂಗಿನ ತಳಿ
ಕಾರವಾರ, ಜು.21: ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರದ ಕಡಲ ತೀರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಖಾಲಿ ಇರುವ ಪ್ರದೇಶದಲ್ಲಿ ಹೈಬ್ರಿಡ್ ತಳಿಯ ತೆಂಗಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ರವೀಂದ್ರನಾಥ್ ಟಾಗೋರ್ ಕಡಲತೀರಗಳ ಅಭಿವೃದ್ಧಿ ಸಮಿತಿಯು ಆದಾಯ ಹೆಚ್ಚಿಸಲು ಹಾಗೂ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಕಾರ್ಯ ಪ್ರವೃತ್ತವಾಗಿದೆ.
ಪ್ರತಿವರ್ಷ ಇಲ್ಲಿ ಆಗಮಿಸುವ ಲಕ್ಷಾಂತರ ಪ್ರವಾಸಿಗರ ಅನುಕೂಲಕ್ಕಾಗಿ ಕಡಲತೀರದಲ್ಲಿ ಕುಡಿಯುವ ನೀರು, ಕುಳಿತು ಕೊಳ್ಳುವ ಆಸನ, ಫುಡ್‌ಕೋರ್ಟ್, ಉದ್ಯಾನವನ, ಮಕ್ಕಳ ಉದ್ಯಾನವನ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಸಮಿತಿಯು ಕಲ್ಪಿಸಿದೆ. ಜೊತೆಗೆ ಪ್ರಸಕ್ತ ವರ್ಷದ ಪ್ರಾರಂಭದಿಂದ ಆರಂಭಗೊಂಡಿರುವ ಜಲ ಸಾಹಸ ಕ್ರೀಡೆಗಳು, ಪ್ಯಾರಾಸೆಲ್ಲಿಂಗ್, ಪ್ಯಾರಾ ಗ್ಲೈಡಿಂಗ್ ಮುಂತಾದ ಚಟುವಟಿಕೆಗಳು ಪ್ರಮುಖ ಆಕರ್ಷಣೆಗಳ ಕೇಂದ್ರಗಳಾಗಿವೆ. ಈಗ ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸಮಿತಿಯು ಖಾಲಿ ಇರುವ ಸಮುದ್ರ ತೀರದ ಪ್ರದೇಶದುದ್ದಕ್ಕೂ ಉತ್ತಮ ತಳಿಯ ತೆಂಗಿನ ಗಿಡಗಳನ್ನು ನೆಟ್ಟು ಆ ಮೂಲಕ ಕಡಲತೀರದಲ್ಲಿ ಸೌಂದರ್ಯ ಹೆಚ್ಚಿಸುವುದರ ಜತೆಗೆ ಕಡಲತೀರದಲ್ಲಿ ತೆಂಗಿನಕಾಯಿಗಳ ಮೂಲಕ ಆದಾಯ ಗಿಟ್ಟಿಸಿಕೊಳ್ಳಲು ಯೋಜನೆ ಸಿದ್ದಪಡಿಸಿದೆ.
ಹೈಬ್ರಿಡ್ ತಳಿ: ಕಡಲತೀರದಲ್ಲಿ ಸೌಂದರ್ಯವನ್ನು ಹೆಚ್ಚಿಸಲು ಆಕರ್ಷಣೀಯ ವಾಗಿ ಕಾಣುವಂತಹ ಹೈಬ್ರಿಡ್ ತಳಿಗಳ ತೆಂಗಿನ ಗಿಡಗಳನ್ನು ವಿಶೇಷವಾಗಿ ಮಂಗಳೂರಿನ ನೇತಾನದಲ್ಲಿರುವ ಕೇಂದ್ರ ಸರಕಾರದ ಕ್ರಾಪ್ಸ್ ಸಂಶೋಧನಾ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದೆ. ಈಗಾಗಲೇ 200 ಮೊಳಕೆಯೊಡೆದ ತೆಂಗಿನ ಗಿಡಗಳನ್ನು ತರಿಸಿಕೊಳ್ಳಲಾಗಿದ್ದು ಇವುಗಳನ್ನು ನೆಟ್ಟ ಬಳಿಕ ಇನ್ನಷ್ಟು ಗಿಡಗಳನ್ನು ತಂದು ಕಡಲತೀರದಲ್ಲಿ ನೆಡಲು ಸಮಿತಿಯು ನಿರ್ಧರಿಸಿದೆ. ಸದ್ಯಕ್ಕೆ ವಿಪರೀತವಾಗಿ ಮಳೆ ಸುರಿಯುತ್ತಿರುವ ಕಾರಣ ಹಿನ್ನಡೆಯಾಗುತ್ತಿದೆ. ಮಳೆ ಮುಗಿಯುತ್ತಿದ್ದಂತೆ ಗಿಡಗಳನ್ನು ನೆಡಲು ಯೋಚಿಸಲಾಗಿದೆ.
ಕಡಲತೀರದಲ್ಲಿ ಹೆಚ್ಚು ಆಕರ್ಷಣೆ: ಇಲ್ಲಿನ ಕಡಲ ತೀರದಲ್ಲಿ ನೆಡಲು ಉದ್ದೇಶಿಸಲಾಗಿರುವ ಹೈಬ್ರಿಡ್ ತಳಿಯ ಈ ತೆಂಗಿನ ಗಿಡಗಳು ಬೆಳೆದು ದೊಡ್ಡದಾಗಿ ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಇತರ ತೆಂಗಿನ ಮರಗಳಂತೆ ಎತ್ತರಕ್ಕೆ ಬೆಳೆಯದ ಇವುಗಳು ಗರಿಷ್ಠ 10 ಅಡಿಗಳವರೆಗೆ ಬೆಳೆಯುತ್ತವೆ. ತೆಂಗಿನ ಕಾಯಿಗಳು ಕೂಡ ಕಿತ್ತಳೆ ಬಣ್ಣದಲ್ಲಿದ್ದು ಸುಂದರವಾಗಿ ಗೋಚರಿಸುತ್ತವೆ. ಆದ್ದರಿಂದ ಈ ತಳಿಯನ್ನು ಸಮಿತಿಯು ಆಯ್ಕೆ ಮಾಡಿದೆ. ಮಂಗಳೂರಿನ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ 36 ಸಾವಿರ ರೂ. ವೆಚ್ಚದಲ್ಲಿ ಖರೀದಿಸಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಕಾಂತ್ ಕೋಟಿಮಾನಿ ಮಾಹಿತಿ ನೀಡಿದರು.
ಆದಾಯ ಹೆಚ್ಚಿಸಲು ಯೋಜನೆ: ಕರಾವಳಿ ತೀರದ ಹಲವು ಭಾಗಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರವಾಸಿಗರು ಹಾಗೂ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಅಲ್ಲದೆ ಕಡಲತೀರದಲ್ಲಿ ಕೂಡ ಸಾಕಷ್ಟು ಜಾಗವಿದ್ದು, ಈ ಪ್ರದೇಶದಲ್ಲಿ ಇತರ ಸಸಿ ನೆಡುವ ಬದಲು ಆದಾಯ ತರುವಂತಹ ಗಿಡಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಹೆಚ್ಚು ಸಹಕಾರಿಯಾಗುವುದೆಂದು ನಿರ್ಧರಿಸಿದ ಸಮಿತಿಯು ಈ ಯೋಜನೆ ರೂಪಿಸಿದೆ. ಕುಬ್ಜವಾಗಿ ಬೆಳೆಯುವ ಈ ತಳಿಯು 3-4 ವರ್ಷಗಳಲ್ಲಿಯೇ ಫಲವನ್ನು ನೀಡುವುದಲ್ಲದೆ ಇದರ ಇಳುವರಿ ಕೂಡ ಹೆಚ್ಚಾಗಿದೆ.
ಕಡಲ ತೀರದಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಉತ್ತಮ ತಳಿಯ ತೆಂಗಿನ ಗಿಡಗಳನ್ನು ನೆಡುವುದರ ಮೂಲಕ ರವೀಂದ್ರನಾಥ್ ಟಾಗೋರ್ ಅಭಿವೃದ್ಧಿ ಸಮಿತಿಯ ಆದಾಯ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕಡಲತೀರದ ನಿರ್ವಹಣೆ, ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ.
ಎಚ್ ಪ್ರಸನ್ನ, ಅಪರ ಜಿಲ್ಲಾಧಿಕಾರಿ