ಸರಳ ನಿರೂಪಣೆಯ ವಿಭಿನ್ನ ಕತೆಗಳು
ಈ ಹೊತ್ತಿನ ಹೊತ್ತಿಗೆ
ಭೌತ ವಿಜ್ಞಾನದ ನಿವೃತ್ತ ಅಧ್ಯಾಪಕಿಯಾಗಿರುವ ಬಿ. ಎಸ್. ಮಯೂರ ಅವರ ‘ನೆರೆಯ ಬಿಂಬಗಳು’ ಕನ್ನಡ ಕಥಾ ಲೋಕದಲ್ಲಿ ಒಂದು ನವೀನ ಪ್ರಯೋಗವಾಗಿದೆ. ಒಂದು ರೀತಿಯಲ್ಲಿ ಪ್ರಬಂಧದ ರೀತಿಯ ಕತೆಗಳು ಇವು. ಕಂಡದ್ದು, ಅನುಭವಿಸಿದ್ದು, ಕೇಳಿದ್ದು, ಇವೆಲ್ಲವೂ ಒಂದು ಲವಲವಿಕೆಯ ನಿರೂಪಣೆಯ ಮೂಲಕ ಮಯೂರ ಅವರು ಕಟ್ಟಿಕೊಟ್ಟಿದ್ದಾರೆ. ಕೌಟುಂಬಿಕ ಇಲ್ಲಿ ವಿಭಿನ್ನವಾಗಿ ಜೀವತಾಳಿವೆ. ಹಾಗೆ ನೋಡಿದರೆ ಕತೆಯೂ ಸಮೃದ್ಧವಾಗಿಲ್ಲ. ನೇರ ನೇರವಾಗಿ ಕಥೆಯ ತಿರುಳಿನ ಕಡೆಗೆ ಗಮನ ಇಟ್ಟಿವೆ. ಕೆಲವೇ ಕೆಲವು ಬಾಹ್ಯ ರೇಖೆಗಳಲ್ಲಿ ಪಾತ್ರಗಳನ್ನು, ಘಟನೆಗಳನ್ನು ಪೋಣಿಸಿ ಒಂದು ಗಟ್ಟಿಯಾದ ವಿಚಾರ ಪ್ರಧಾನವಾದ ಕಥೆಯನ್ನು ಅವರು ಹೆಣೆಯುತ್ತಾರೆ. ಅವರಿಗೆ ಪಾತ್ರ ಪೋಷಣೆಗಿಂತ, ಗುರಿ ಮುಖ್ಯ. ಆದುದರಿಂದಲೇ ಇಲ್ಲಿ ಅಲಂಕಾರ ರೂಪಗಳು ವಿಶೇಷ ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಮುಗ್ಧವಾದ ನಿರೂಪಣೆಯ ಬಗೆಯೊಂದನ್ನು ನಾವು ಪ್ರತಿ ಕತೆಗಳಲ್ಲಿ ಕಾಣುತ್ತೇವೆ.
ವೃತ್ತಿಯಲ್ಲಿಯೂ ಪ್ರವೃತ್ತಿಯಲ್ಲಿಯೂ ವಿಜ್ಞಾನವು ಅವರ ಮನಸ್ಸನ್ನು ವ್ಯಾಪಿಸಿದೆ. ಸಮಾಜವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವಂತೆ ಮಾಡುವ ಕೆಲವು ಕತೆಗಳೂ ಇಲ್ಲಿವೆ. ಕಥಾವಸ್ತುವಿನಲ್ಲಿ ವಿವಿಧ ಆಸಕ್ತಿ ತೋರುತ್ತದೆ. ಸಮಾಜಶಾಸ್ತ್ರದಿಂದ ವಿಜ್ಞಾನದವರೆಗೆ, ಸ್ವದೇಶದಿಂದ ಪರದೇಶದ ಜೀವನ ರೀತಿಯವರೆಗೆ, ಸಾಂಸಾರಿಕ ಖುಷಿ, ವೇದನೆಗಳು ವೈವಿಧ್ಯಗಳೊಡನೆ ಆಧುನಿಕ ಜೀವನದ ದುರ್ಬಲ ಗಳಿಗೆಗಳು, ಸೂಕ್ಷ್ಮ ಮನಸ್ಸಿನ ನಿರಾಶೆಗಳು ಕಾಣುವವು. ಇಲ್ಲಿ ಒಟ್ಟು 21 ಕತೆಗಳಿವೆ. ವೇಂಕಟ ಲಕ್ಷ್ಮಿಯ ಹೋರಾಟದ ಬದುಕನ್ನು ತಿಳಿಸುವ ವೇಂಕಟ ಲಕ್ಷ್ಮಿ ಕತೆ, ಮುಗ್ಧ ಮಕ್ಕಳ ಬದುಕಿನ ಮೇಲೆ ಎರಗುವ ಪಾಲಕರ ಕೌರ್ಯವನ್ನು ಹೇಳುವ ಸನ್ಯಾಸಿ ಹೇಳದ ಕತೆ ಮತ್ತು ರಾಧಿಕಾ ಮತ್ತು ಅವಳ ಗೊಂಬೆಗಳು, ಕೌಟುಂಬಿಕ ಹೊಣೆಗಾರಿಕೆಯನ್ನು ತಿಳಿಸುವ ಏಳು ಮಲ್ಲಿಗೆ ತೂಕದವಳು, ಪೌರ್ವಾತ್ಯ, ಪಾಶ್ಚಿಮಾತ್ಯರ ದೃಷ್ಟಿಕೋನವನ್ನು ಪರಾಮರ್ಶಿಸುವ ಜವಾಬ್ದಾರಿ, ಆಧುನಿಕ ವಿಜ್ಞಾನದ ಆವಿಷ್ಕಾರವನ್ನು ಪುರಾಣದ ಕಥೆ ಕಲ್ಪನೆಗಳನ್ನು ಸಾಕಾರವಾಗಿಸುವ ವಿಜ್ಞಾನಿಗಳ ಕಾರ್ಯಕ್ಷಮತೆಯನ್ನು ಹೇಳುವ ಅಂಗೈಯಲ್ಲಿ ಬ್ರಹ್ಮಾಂಡ ಹೀಗೆ ವೈವಿಧ್ಯಮಯ ಜಗತ್ತೊಂದನ್ನು ಇಲ್ಲಿನ ಕತೆಗಳು ಕಟ್ಟಿಕೊಡುತ್ತವೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 75 ರೂ.