‘ಆಧಾರ್’ ಭಯಗಳು ನಿಜವಾಗಲಾರಂಭಿಸಿವೆ...
ಈ ಹಿಂದೆ ಸೇವೆಗಳನ್ನು ಒದಗಿಸಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವಂತಿಲ್ಲವೆಂದು ಎರಡು ಬಾರಿ ಘೋಷಿಸಿದ ಬಳಿಕ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದಾಯ ತೆರಿಗೆ ಸಲ್ಲಿಸಲು ಪಾನ್ ಕಾರ್ಡನ್ನು ಆಧಾರ್ ಜತೆ ಸೇರಿಸುವ ಆದಾಯ ತೆರಿಗೆ ಕಾಯ್ದೆಯನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಹಶ್ಮಿ ಪ್ರಕರಣ ತುಂಬ ಮಹತ್ವ ಪಡೆಯುತ್ತದೆ.
ದಿಲ್ಲಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹಾಕಿದ ಬೆದರಿಕೆಗಳು ನಿಜವಾದಲ್ಲಿ, ವಿಳಾಸ ತಿಳಿದಿಲ್ಲದ ಮತ್ತು ಆಧಾರ್ ಸಂಖ್ಯೆ ಅಥವಾ ಕಾರ್ಡ್‌ಗಳನ್ನು ಹೊಂದಿರದವರ ವಿರುದ್ಧ ಸರಕಾರವು ‘ಸುತ್ತುವರಿ ಮತ್ತು ಕೊನೆಗಾಣಿಸು’ ಅಭಿಯಾನವೊಂದನ್ನು ಆರಂಭಿಸಿರುವಂತೆ ಕಾಣುತ್ತದೆ. ಇದು ನಂಬಲಸಾಧ್ಯ ಅನ್ನಿಸಿದರೂ, ಸತ್ಯ; ಸಾಮಾಜಿಕ ಕಾರ್ಯಕರ್ತೆ ಶಬ್ನಮ್ ಹಶ್ಮಿಗೆ, ಓರ್ವ ಪೊಲೀಸ್ ಅಧಿಕಾರಿ ಈ ರೀತಿ ಅಭಿಯಾನ ನಡೆಸುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ನೈಋತ್ಯ ದಿಲ್ಲಿಯ ಜೈತ್‌ಪುರ್ ಎಂಬಲ್ಲಿ ‘ಪೆಹಚಾನ್’ ಎನ್ನುವ ಸರಕಾರೇತರ ಸಂಸ್ಥೆ (ಎನ್‌ಜಿಒ)ಯೊಂದನ್ನು ನಡೆಸುತ್ತಿರುವ ಹಶ್ಮಿ, ಜುಲೈ 14ರ ರಾತ್ರಿ ಆ ಅಧಿಕಾರಿಗೆ ದೂರವಾಣಿ ಕರೆ ಮಾಡಿ, ತನ್ನ ಸಂಸ್ಥೆಯಲ್ಲಿ ಹೊಲಿಗೆ ಕಲಿಯುತ್ತಿರುವ ಮಹಿಳೆಯೊಬ್ಬಳ ಪತಿಯನ್ನು ತಡರಾತ್ರಿ ಪೊಲೀಸ್ ಠಾಣೆಗೆ ಕರೆಸಿದ್ದು ಯಾಕೆ? ಎಂದು ಕೇಳಿದರು. ಆಗ ಆ ಪೊಲೀಸ್ ಅಧಿಕಾರಿ ಆಕೆಗೇ ಬೆದರಿಕೆ ಹಾಕಿ ಕೆಟ್ಟದಾಗಿ ಬೈದ ಎನ್ನಲಾಗಿದೆ ಮತ್ತು ಹೀಗೆ ತಡರಾತ್ರಿ ಠಾಣೆಗೆ ಕರೆಸಿದ್ದರಲ್ಲಿ ತಪ್ಪೇನೂ ಇಲ್ಲ; ಸರಕಾರದ ಹೊಸ ಸೂಚನೆಯ ಪ್ರಕಾರ ಈ ರೀತಿ ನಡೆದುಕೊಳ್ಳುವ ಪೊಲೀಸ್ ಸಿಬ್ಬಂದಿ ತಮ್ಮ ಹಕ್ಕಿನ ಪರಿಧಿಯೊಳಗೆಯೇ ಇದ್ದಾರೆ ಎಂದೂ ಒತ್ತಿ ಹೇಳಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡ.
ಆತ ಹೀಗೆ ಹೇಳಿದ್ದು ಆತನ ವೈಯಕ್ತಿಕ ಅಭಿಪ್ರಾಯವೆಂದು ಹೇಳಿ ಪೊಲೀಸರು ಆತನ ಮಾತನ್ನು ತಳ್ಳಿ ಬಿಡಬಹುದು ಅಥವಾ ಹಶ್ಮಿ ಮತ್ತು ಆ ಪೊಲೀಸ್ ಅಧಿಕಾರಿಯ ಮಧ್ಯೆ ನಡೆದ ಸಂಭಾಷಣೆ, ಮಾತಿನ ಚಕಮಕಿ ನಿಜವಲ್ಲದಿರಬಹುದು ಎಂದೂ ಅವರು ಆ ಸಂಭಾಷಣೆಯ ಸತ್ಯಾಸತ್ಯತೆಯನ್ನು ಅಲ್ಲಗಳೆಯಬಹುದು. ಆದರೆ ಹಶ್ಮಿ ಸಂಭಾಷಣೆಯನ್ನು ದಾಖಲು ಮಾಡಿಕೊಂಡು ಮೀಡಿಯಾದ ಜತೆ ಹಂಚಿಕೊಂಡಿದ್ದಾರೆ. ಸತ್ಯ ಸಂಗತಿ ಏನೆಂದರೆ, ಈಗ ಸರಕಾರ ಎಲ್ಲರೂ ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಿರುವುದರಿಂದಾಗುವ ಪರಿಣಾಮಗಳ ಬಗ್ಗೆ ಆ ಸಂಭಾಷಣೆ ಕೆಲವು ಪ್ರಶ್ನೆಗಳನ್ನು ಎತ್ತುತ್ತದೆ.
ಆಧಾರ್ ಕಾರ್ಡನ ಬೇಜವಾಬ್ದಾರಿಯುತ ಬಳಕೆ ಅಥವಾ ದುರ್ಬಳಕೆಯು ಭಾರತದ ಒಂದು ‘ಕಣ್ಗಾವಲು ರಾಷ್ಟ್ರ’ ಅಥವಾ ‘ಪೊಲೀಸ್ ರಾಷ್ಟ್ರ’ವಾಗಲು ಕಾರಣವಾಗಬಹುದೆಂಬ ಭಯವನ್ನು ಈ ಹಿಂದೆ ಆಧಾರ್ ಕಾರ್ಡ್‌ನ ಟೀಕಾಕಾರರು ವ್ಯಕ್ತಪಡಿಸಿದ್ದರು. ಅಪ್ರಾಮಾಣಿಕ ಸರಕಾರಿ ಅಧಿಕಾರಿಗಳ ಕೈಗೆ ಅಪರಿಮಿತ ಅಧಿಕಾರ ನೀಡುವ ಮೂಲಕ ‘ಪೊಲೀಸ್ ರಾಷ್ಟ್ರ’ಕ್ಕೆ ಸರಕಾರ ಹಾದಿ ಮಾಡಿಕೊಟ್ಟಂತಾಗುವುದು ಎಂಬುದು ಅವರ ಭಯವಾಗಿತ್ತು.
ಆಧಾರ್ ದುರ್ಬಳಕೆಯ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವರು ಈ ಅಪಾಯದ ಬಗ್ಗೆ ಎಚ್ಚರ ನೀಡಿದ್ದರು.
ಈ ವರ್ಷದ ಆದಿಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ನಾಯಕ ಬಿನೋಯ್ ವಿಸ್ವಂ, ಸುಪ್ರೀಂ ಕೋರ್ಟಿನಲ್ಲಿ ಒಂದು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರು ಆಧಾರ್ ಕಾರ್ಡ್‌ಗಳನ್ನು ಪಾನ್ ಕಾರ್ಡ್ ಗಳ ಜೊತೆಗೆ ಲಿಂಕ್ ಮಾಡಲೇಬೇಕೆನ್ನುವ ಆದಾಯ ತೆರಿಗೆ ಕಾಯ್ದೆಯ 139ನೆ ಎಎ ಸೆಕ್ಷನ್‌ನನ್ನು ಪ್ರಶ್ನಿಸಿದ್ದರು. ತರುವಾಯ ಈ ವರ್ಷ ಎಪ್ರಿಲ್‌ನಲ್ಲಿ ಸಂದರ್ಶನವೊಂದರಲ್ಲಿ ಅವರು ‘‘ಸರಕಾರದ ಕೈಯಲ್ಲಿ ನಾಗರಿಕರು ದಾಳಗಳಾಗುತ್ತಿದ್ದಾರೆ’’, ‘‘ಸರಕಾರವು ತನ್ನ ಮರ್ಜಿಗನುಸಾರವಾಗಿ ಬೇಕಾಬಿಟ್ಟಿಯಾಗಿ ಈ (ಆಧಾರ್) ದತ್ತಾಂಶವನ್ನು ಬಳಸಿಕೊಳ್ಳ ಬಹುದು’’ ಎಂದು ಹೇಳಿದ್ದರು. ವಿಸ್ವಂ ಹೇಳಿದ್ದು ಪೂರ್ಣವಾಗಿ ಸರಿಯಾಗಿಯೇ ಇದೆ. ದತ್ತಾಂಶವನ್ನು ಬಳಸುವ ಮೊದಲೇ ಸರಕಾರದ ‘ಶಕ್ತಿಗಳು’ ಜನರನ್ನು ಬೆದರಿಸುವ ಒಂದು ಸಲಕರಣೆಯಾಗಿ ಆಧಾರ್‌ಅನ್ನು ಬಳಸಲಾರಂಭಿಸಿವೆ. ಆಧಾರ್ ಕಾರ್ಡನ್ನು ಹೇಗೆ ದುರುಪಯೋಗ ಪಡಿಸಬಹುದು ಎಂಬುದನ್ನು ಹಶ್ಮಿಯ ಪ್ರಕರಣ ಸ್ಪಷ್ಟಪಡಿಸುತ್ತದೆ.
ಜುಲೈ 14ರ ತಡರಾತ್ರಿ ನಡೆದ ಘಟನೆಯನ್ನು ಹಶ್ಮಿ ಜ್ಞಾಪಿಸಿಕೊಳ್ಳು ತ್ತಾರೆ. ಶಾಲೆ ತೊರೆದ ಮಕ್ಕಳಿಗೆ 10 ಮತ್ತು 12ನೆಯ ತರಗತಿಯ ಪರೀಕ್ಷೆಗಳಿಗೆ ಹಾಜರಾಗಲು ತರಬೇತಿ ನೀಡುವ ‘ಪೆಹಚಾನ್’ ಮಹಿಳೆಯರಿಗೆ ಹೊಲಿಗೆ ತರಗತಿಗಳನ್ನೂ ನಡೆಸುತ್ತದೆ. ಅಲ್ಲಿ ಹೊಲಿಗೆ ಕಲಿಯುತ್ತಿರುವ ಮುಬೀನಾ ಎಂಬಾಕೆಯ ಪತಿ ಹಸೀನ್‌ನನ್ನು ಓರ್ವ ಸಬ್ ಇನ್‌ಸ್ಪೆಕ್ಟರ್ ಠಾಣೆಗೆ ಬರುವಂತೆ ಕರೆದ, ಯಾಕೆ? ಎಂದು ಕೇಳಲು ಹಶ್ಮಿ ಫೋನ್ ಮಾಡಿದಾಗ, ಆ ಪೊಲೀಸ್ ಅಧಿಕಾರಿ ಆಕೆಗೆ ಕೆಟ್ಟ ಮಾತುಗಳಲ್ಲಿ ಬೈದ ಮತ್ತು ‘ತೀರಾ ಆಕ್ಷೇಪಾರ್ಹವಾದ ಮತ್ತು ಅನಾಗರಿಕವಾದ ಭಾಷೆ’ಯನ್ನು ಬಳಸಿದ. ಮೊದಲ ಬಾರಿ ಕರೆ ಮಾಡಿದಾಗ ಹಶ್ಮಿಯ ಪೋನ್‌ನಲ್ಲಿ ರೆಕಾರ್ಡರ್ ಇಲ್ಲವಾದರೂ, ಬಳಿಕ ಆಕೆ ತನ್ನ ಸಂಭಾಷಣೆಯೊಂದನ್ನು ಡೌನ್‌ಲೋಡ್ ಮಾಡಿ ಅದೇ ಅಧಿಕಾರಿಯ ಜತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡರು. ಮೊದಲ ಸಂಭಾಷಣೆ ವೇಳೆ ಕರ್ತವ್ಯದಲ್ಲಿದ್ದಾಗ ಆತ ಕುಡಿದ ಅಮಲಿನಲ್ಲಿದ್ದ. ನಂತರದ ಸಂಭಾಷಣೆಯನ್ನು ಆಕೆ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದಾಗ ಸಹಜವಾಗಿಯೇ ಆತ ಸ್ವಲ್ಪ ಮೆತ್ತಗಾದ.
ವಿಳಾಸದ ಪುರಾವೆ, ಆಧಾರ್ ಇಲ್ಲದವರನ್ನು ‘ಕೊನೆಗಾಣಿಸ ಬಹುದು’ ಎಂದು ಪೊಲೀಸ್ ಅಧಿಕಾರಿ ಒತ್ತಿ ಹೇಳಿದ. ಆಧಾರ್ ಇಲ್ಲದವರಿಗೆ ‘ಗತಿ ಕಾಣಿಸಬಹುದು’ ಎಂದು ಪೊಲೀಸ್ ಅಧಿಕಾರಿ ಒತ್ತಿ ಹೇಳುತ್ತಲೇ ಇದ್ದ. ಅಲ್ಲದೆ ‘‘ಸಂಸತ್‌ನಲ್ಲಿ ಒಂದು ಕಾನೂನು ಆಗಿದೆ. ಅದರ ಪ್ರಕಾರ ಗಡಿಯಲ್ಲಿ ಅಥವಾ ಗಡಿಯೊಳಗೆ ನಿಯುಕ್ತರಾದ ಯಾವ ಪೊಲೀಸ್ ಬೇಕಾದರೂ, ಗುರುತು ಪುರಾವೆ ಇಲ್ಲದ ಒಬ್ಬನನ್ನು ನೋಡಿಕೊಳ್ಳಲು ಈ ಕಾನೂನನ್ನು ಬಳಸಬಹುದು. ಆಗ ಯಾವ ಮಂತ್ರಿಯಾಗಲಿ ಅಥವಾ ಪ್ರಧಾನಿಯೇ ಆಗಲಿ ಯಾರೂ ಮಧ್ಯ ಪ್ರವೇಶಿಸುವುದಿಲ್ಲ’’ ತನ್ನ ಗುರುತನ್ನು ಪ್ರಕಟಪಡಿಸದವರನ್ನು ಕೊಲ್ಲಬಹುದು ಎಂಬುದಕ್ಕೆ ಉದಾಹರಣೆಯಾಗಿ ಆತ ‘ನಮ್ಮ ಯುವಕರು’ ‘ಕಾಶ್ಮೀರದ ಗಡಿಯಲ್ಲಿ’ ಸಾಯುತ್ತಿರುವುದನ್ನು ವಿವರಿಸಿದ.
ಈ ಹಿಂದೆ ಸೇವೆಗಳನ್ನು ಒದಗಿಸಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವಂತಿಲ್ಲವೆಂದು ಎರಡು ಬಾರಿ ಘೋಷಿಸಿದ ಬಳಿಕ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದಾಯ ತೆರಿಗೆ ಸಲ್ಲಿಸಲು ಪಾನ್ ಕಾರ್ಡನ್ನು ಆಧಾರ್ ಜತೆ ಸೇರಿಸುವ ಆದಾಯ ತೆರಿಗೆ ಕಾಯ್ದೆಯನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಹಶ್ಮಿ ಪ್ರಕರಣ ತುಂಬ ಮಹತ್ವ ಪಡೆಯುತ್ತದೆ.
‘‘ಸಮಾಜದ ಘಟಕಗಳಾಗಿ ಜನರು ಗುರುತಿಸುವಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ.’’ ಮತ್ತು ‘‘ಯಾವುದೇ ಹಕ್ಕು ಅಂತಿಮವಲ್ಲ, ಪ್ರಶ್ನಾತೀತವಲ್ಲ; ನಮ್ಮ ದೇಹದ ಮೇಲಿರುವ ನಮ್ಮ ಹಕ್ಕು ಕೂಡ ಅಂತಿಮವಲ್ಲ, ಪ್ರಶ್ನಾತೀತವಲ್ಲ. ವಿಶೇಷ ಸಂದರ್ಭಗಳಲ್ಲಿ ಸರಿಯಾದ ಪ್ರಕ್ರಿಯೆಯ ಮೂಲಕ, ಒಬ್ಬ ವ್ಯಕ್ತಿಯ ಬದುಕುವ ಹಕ್ಕನ್ನು ಕೂಡ ಕಿತ್ತುಕೊಳ್ಳಬಹುದು.’’ ಎಂದು ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿ ವಾದಿಸಿದ್ದರು. ಆಧಾರ್ ದುರ್ಬಳಕೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.
ಕಾನೂನು ತಜ್ಞರ ಪ್ರಕಾರ, ಆಧಾರ್‌ಗೆ ಸಂಬಂಧಿಸಿದ ಕಾನೂನು ಅಕ್ರಮಗಳು ಮೇಲೆ ಹೇಳಿದಂತಹ ರೊಹಟ್ಗಿ ವಾದಗಳೊಂದಿಗಷ್ಟೇ ಕೊನೆಗೊಳ್ಳುವುದಿಲ್ಲ. ಸಿಂಗಾಪುರ್‌ನ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾನಿಲಯದ ಪ್ರಶಾಂತ್ ರೆಡ್ಡಿ ಟಿ. ಹೇಳುವಂತೆ ‘‘ ಈಗ ನಿಮ್ಮ ಮುಂದಿರುವ ಪ್ರಶ್ನೆ ಈ ಹೊಸ ಕಡ್ಡಾಯ ಆಧಾರ್ ಅವಶ್ಯಕತೆ (ಮತ್ತು ಆಧಾರ್ ಇಲ್ಲದಿದರ್ದಲ್ಲಿ ನೀಡಲಾಗುವ ಶಿಕ್ಷೆಯ ಬೆದರಿಕೆ) ಕಾನೂನುಬದ್ಧವೇ?’’
ಕೃಪೆ: thewire.in