ಮುಂಬೈ ಮಾತು
ತನಿಖೆಗೊಳಗಾಗುತ್ತಿರುವ ಬ್ಲಡ್ ಬ್ಯಾಂಕ್‌ಗಳು!, ಪದೋನ್ನತಿಗೆ ನಕಲಿ ಸರ್ಟಿಫಿಕೇಟ್!

ಮುಂಬೈಯಲ್ಲಿ ಪ್ರಥಮ ಬಾರಿಗೆ ‘ರಕ್ತ’ ಸಂಬಂಧಿತ ಪ್ರಕರಣವೊಂದನ್ನು ‘ಆ್ಯಂಟಿ ಕರಪ್ಶನ್ ಬ್ಯೂರೋ’ ತನಿಖೆ ಮಾಡುತ್ತಿದೆ. ಶುಶ್ರೂಷೆಯ ಸಮಯ ರಕ್ತವು ರೋಗಿಗೆ ಅತೀ ಮಹತ್ವವಾಗಿದೆ. ರಕ್ತದ ಕೊಡುಕೊಳ್ಳುವಿಕೆಗಾಗಿ ‘ಬಿಪಿಒ’ (ಬ್ಲಡ್ ಟ್ರಾನ್ಸ್‌ಫ್ಯೂಷನ್ ಆಫೀಸರ್) ಪಾತ್ರ ಮಹತ್ವದ್ದು. ಬ್ಲಡ್‌ಬ್ಯಾಂಕ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಬಿಪಿಒಗೆ ಮುಖ್ಯ ಪಾತ್ರವಿದೆ. ಆದರೆ ಹಣ ಉಳಿತಾಯ ಮಾಡಲು ಖಾಸಗಿ ಬ್ಲಡ್‌ಬ್ಯಾಂಕ್‌ಗಳು ನಿರ್ಧರಿತ ಸಂಖ್ಯೆಗಿಂತ ಕಡಿಮೆ ಬಿಪಿಒ ಇರಿಸಿರುವುದು ಬೆಳಕಿಗೆ ಬಂದಿವೆ. ಹೀಗಾಗಿ ನಿರ್ಧರಿತ ಸಂಖ್ಯೆಗಿಂತ ಕಡಿಮೆ ಬಿಪಿಒ ಇರಿಸಿ ಸಂಚಾಲನೆ ಮಾಡುವ ಇಂತಹ ಬ್ಲಡ್‌ಬ್ಯಾಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರ್‌ಟಿಐ ಕಾರ್ಯಕರ್ತ ಚೇತನ್ ಕೊಠಾರಿ ಹೇಳಿದ್ದಾರೆ.
ಮೆಡಿಕಲ್ ಕ್ಷೇತ್ರದ ತಜ್ಞರು ಹೇಳುವಂತೆ ರಕ್ತದ ಕೊಡುಕೊಳ್ಳುವಿಕೆಯಲ್ಲಿ ಬಿಪಿಒ ಪಾತ್ರ ಮಹತ್ವದ್ದು. ಬ್ಲಡ್ ಬ್ಯಾಂಕ್‌ಗಳು ರಕ್ತದಾನ ಶಿಬಿರ ನಡೆಸುವ ಸಂದರ್ಭದಲ್ಲಿ ‘ಬಿಟಿಒ’ ರಕ್ತದಾನಿಗಳ ಹೆಪಟೈಟೀಸ್, ಎಚ್‌ಐವಿ ಸಹಿತ ಇತರ ರೋಗಗಳ ಬಗ್ಗೆ ತನಿಖೆಯನ್ನೂ ನಡೆಸುತ್ತಾರೆ. ಯಾರಿಗಾದರೂ ರಕ್ತ ನೀಡಬೇಕಾದ ಸಂದರ್ಭದಲ್ಲಿ ಅವರ ರಕ್ತದ ಮ್ಯಾಚಿಂಗ್ ಕೂಡಾ ನೋಡುವುದು ಇವರ ಮಹತ್ವಪೂರ್ಣ ಪಾತ್ರವಾಗಿದೆ. ಇಂತಹ ಸಮಯದಲ್ಲಿ ಬಿಟಿಒ ಅಭಾವದಲ್ಲಿ ರೋಗಿಗಳ ಸಮಸ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಮಹಾರಾಷ್ಟ್ರ ಸ್ಟೇಟ್ ಬ್ಲಡ್ ಟ್ರಾನ್ಸ್‌ಫ್ಯೂಷನ್ ಕೌನ್ಸಿಲ್‌ನ ನಿರ್ದೇಶಕ ಡಾ. ಅರುಣ್ ಥೊರಾತ್ ಅವರು ‘‘ಬ್ಲಡ್‌ಬ್ಯಾಂಕ್ ನಡೆಸುವವರಿಗೆ ಗೈಡ್‌ಲೈನ್ಸ್ ಇದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’’ ಎಂದಿದ್ದಾರೆ.
‘‘ಆರ್‌ಟಿಐ ಮೂಲಕ ದೊರೆತ ಮಾಹಿತಿಯಂತೆ ಮುಂಬೈಯ 34 ಪ್ರೈವೇಟ್ ಬ್ಲಡ್ ಬ್ಯಾಂಕ್‌ಗಳು ಬಿಟಿಒ ಕೊರತೆ ಇದ್ದರೂ ನಿರ್ವಹಣೆ ಮಾಡುತ್ತಿವೆ. ಇದರಲ್ಲಿ ಮುಂಬೈಯ ದೊಡ್ಡ ಆಸ್ಪತ್ರೆಗಳು ನಿರ್ವಹಿಸುವ ಬ್ಲಡ್ ಬ್ಯಾಂಕ್‌ಗಳ ಹೆಸರೂ ಸೇರಿವೆ’’ ಎಂದಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಚೇತನ್ ಕೊಠಾರಿಯವರು ಇದರ ಹಿಂದೆ ದೊಡ್ಡ ಷಡ್ಯಂತ್ರದ ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರು ಆ್ಯಂಟಿ ಕರಪ್ಶನ್ ಬ್ಯೂರೋಗೆ ದೂರು ನೀಡಿದ್ದರು. ನಂತರ ವಿಭಾಗವು ಇದರ ತನಿಖೆ ನಡೆಸಲು ಶುರುಮಾಡಿದೆ. ತಜ್ಞರ ಪ್ರಕಾರ ಮುಂಬೈಯಲ್ಲಿ ಬ್ಲಡ್‌ಗೆ ಸಂಬಂಧಿಸಿದ ಪ್ರಕರಣವನ್ನು ಆ್ಯಂಟಿ ಕರಪ್ಶನ್ ಬ್ಯೂರೋ ತನಿಖೆ ಮಾಡುತ್ತಿರುವುದು ಇದೇ ಪ್ರಥಮವಾಗಿದೆ.
ತಜ್ಞರ ಪ್ರಕಾರ 24 ಗಂಟೆ ತೆರೆದಿರುವ ಬ್ಲಡ್ ಬ್ಯಾಂಕ್‌ನಲ್ಲಿ 8-8ರ ಶಿಫ್ಟ್ ನಲ್ಲಿ 3 ಬಿಪಿಒ ಅಗತ್ಯವಿರುತ್ತೆ. ಹಾಗೂ ರಾತ್ರಿಗೆ ಮತ್ತು ಎಮರ್ಜೆನ್ಸಿಗಾಗಿ ಪ್ರತ್ಯೇಕ ಬಿಪಿಒ ಅಗತ್ಯವಿದೆ. ಒಂದು ಬಿಪಿಒ ಮೇಲೆ ತಿಂಗಳಿಗೆ ಸುಮಾರು ಒಂದು ಲಕ್ಷ ರೂ. ಖರ್ಚು ಬರುತ್ತದೆ. ಹಾಗಿರುವಾಗ 4 ಬಿಪಿಒ ಇದ್ದಾಗ ವಾರ್ಷಿಕ 48 ಲಕ್ಷ ರೂಪಾಯಿ ಬ್ಲಡ್ ಬ್ಯಾಂಕ್‌ಗಳಿಗೆ ಖರ್ಚು ಬರುತ್ತದೆ. ಇಷ್ಟೊಂದು ಖರ್ಚಿನಿಂದ ಪಾರಾಗಿ ಹಣ ಉಳಿಸುವುದಕ್ಕೆ ಬ್ಲಡ್ ಬ್ಯಾಂಕ್‌ಗಳು ನಿರ್ಧರಿತ ಸಂಖ್ಯೆಗಿಂತ ಕಡಿಮೆ ಬಿಪಿಒ ಇರಿಸಿ ಕೆಲಸ ನಿರ್ವಹಿಸುತ್ತಿರುವ ಆರೋಪ ಮಾಡಲಾಗಿದ್ದು ತನಿಖೆ ಶುರುವಾಗಿದೆ.
* * *
ಅನಧಿಕೃತ ಸರ್ಟಿಫಿಕೇಟ್‌ನಿಂದ ಪದೋನ್ನತಿ!
ನವಿಮುಂಬೈ ಮಹಾನಗರ ಪಾಲಿಕೆಯಲ್ಲಿ 15 ಇಂಜಿನಿಯರ್‌ಗಳು ನಕಲಿ ಡಿಗ್ರಿಯ ಬಲದಲ್ಲಿ ಪ್ರಮೋಶನ್ ಪಡೆದಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಬೆಳಕಿಗೆ ಬಂದಿದ್ದು ಆರ್‌ಟಿಐ ಮಾಧ್ಯಮದಿಂದ. ಆರ್‌ಟಿಐಯಿಂದ ದೊರೆತ ಮಾಹಿತಿಯಂತೆ ನವಿಮುಂಬೈ ಮನಪಾದ ಈ ನೌಕರರು ಪ್ರಮೋಶನ್‌ಗಾಗಿ ರಾಜಸ್ಥಾನದ ಯುನಿವರ್ಸಿಟಿಯ ಕಾಲೇಜೊಂದರಿಂದ ನಕಲಿ ಬಿ.ಟೆಕ್. ಸರ್ಟಿಫಿಕೇಟ್ ತಯಾರಿಸಿ ನೀಡಿದ್ದರು. ಮನಪಾ ಆಡಳಿತ ಯಾವುದೇ ಸರ್ಟಿಫಿಕೇಟ್‌ನ ತನಿಖೆ ನಡೆಸದೆಯೇ ಇವರಿಗೆಲ್ಲ ಪ್ರಮೋಶನ್ ನೀಡಿತ್ತು.
ಆರ್‌ಟಿಐ ಕಾರ್ಯಕರ್ತ ಅನರ್ಜಿತ್ ಚೌಹಾಣ್ ಪ್ರಕಾರ, ‘‘ರಾಜಸ್ಥಾನದ ಯುನಿವರ್ಸಿಟಿಯಿಂದ ಈ ನೌಕರರು ಯಾವ ಡಿಗ್ರಿಯನ್ನು ಪಡೆದಿದ್ದರೋ, ರಾಜಸ್ಥಾನದಲ್ಲಿ ಅಂತಹ ಯುನಿವರ್ಸಿಟಿಗೆ ಮಾನ್ಯತೆಯೇ ಇಲ್ಲ. ಹಾಗಿರುವಾಗ ಇವರಿಗೆಲ್ಲ ಡಿಗ್ರಿ ಸರ್ಟಿಫಿಕೇಟ್ ಹೇಗೆ ದೊರೆಯಿತು?’’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತರು ಪಾಲಿಕೆ ಆಯುಕ್ತ ಎಸ್. ರಾಮಸ್ವಾಮಿ ಮತ್ತು ಸಂಬಂಧಿತ ವಿಭಾಗದ ಅಧಿಕಾರಿಗಳ ಜೊತೆ ಈ ಬಗ್ಗೆ ದೂರು ನೀಡಿದ್ದಾರೆ. ರಾಜಸ್ಥಾನದ ಯುನಿವರ್ಸಿಟಿ ಕಾಲೇಜ್ ನೋಂದಣಿ ಆಗಿಲ್ಲ ಎಂದು ಹೇಳಲಾಗಿದೆ. 2010-2012 ರ ನಡುವೆ ಈ ನೌಕರರು ಈ ನಕಲಿ ಡಿಗ್ರಿಯ ಲಾಭ ಎತ್ತಿಕೊಂಡು ಮನಪಾದಲ್ಲಿ ಪದೋನ್ನತಿ ಪಡೆದಿದ್ದರು.
ಇದೀಗ ಆರೋಪ ನಿಜವೆಂದು ಸಾಬೀತಾದರೆ ವಿಭಾಗೀಯ ತನಿಖೆ ನಡೆಸಿ ಪೊಲೀಸರಿಗೆ ದೂರು ನೀಡಲಾಗುವುದು ಎಂದಿದ್ದಾರೆ ಆಯುಕ್ತರು. ಆದರೆ ಆರ್‌ಟಿಐ ಕಾರ್ಯಕರ್ತರು ಇಲ್ಲಿ ಈ ನೌಕರರಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
* * *
ಮಳೆಗೆ ಮನಪಾ ಹೊಣೆಯಲ್ಲ!?
ಕಳೆದ ವಾರ ಮುಂಬೈಯಲ್ಲಿ ಭಾರೀ ಮಳೆ. ನಿರಂತರ ಮುಸಲಧಾರೆಯಿಂದಾಗಿ ಜನಜೀವನ ಅಸ್ತವ್ಯಸ್ತ. ಮುಂಬೈ ಮಹಾನಗರ ಪಾಲಿಕೆಯು ಮಳೆಗಾಲದಲ್ಲಿ ಜನರಿಗೆ ಯಾವ ತೊಂದರೆಯೂ ಆಗದಂತೆ ಎಲ್ಲಾ ಕ್ರಮ ಕೈಗೊಂಡಿದೆ ಎಂದ ಭರವಸೆಯ ಮಾತೂ ಸುಳ್ಳಾಯಿತು. ನಿವಾಸಿಗಳು ಹತ್ತಾರು ಸಮಸ್ಯೆಗಳಿಗೆ ಗುರಿಯಾದರು. ಧಾರಾವಿಯಲ್ಲಿ ಗೋಡೆ ಕುಸಿಯಿತು. ಎಲ್ಲರೂ ಮುಂಬೈ ಮಹಾನಗರ ಪಾಲಿಕೆಯನ್ನು ತರಾಟೆಗೆ ಎಳೆದರೆ, ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮನಪಾ ರಕ್ಷಣೆಗೆ ಮುಂದೆ ಬಂದರು.
ಯಾಕೆಂದರೆ ಮುಂಬೈ ಮನಪಾ ಶಿವಸೇನೆ ಕೈಯಲ್ಲಿದೆ. ರಸ್ತೆಗಳಲ್ಲಿ ಹೊಂಡಗಳೆದ್ದಿವೆ. ನೀರು ಗಟಾರದಿಂದ ಹೊರಗೆ ಬರುತ್ತಿದೆ. ಇಂತಹ ದೃಶ್ಯಗಳ ನಡುವೆ ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ ‘‘ಮುಂಬೈಯಲ್ಲಿ ಲೆಕ್ಕಕ್ಕಿಂತ ಹೆಚ್ಚು ಮಳೆ ಬಂದರೆ ಮನಪಾ ಮಾಡುವುದಾದರೂ ಏನು?’’ ಮುಲುಂಡ್‌ನ ಕಾಳಿದಾಸ ನಾಟ್ಯಾಗೃಹದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಉದ್ಧವ್ ಉಪಸ್ಥಿತರಿದ್ದರು. ಅಲ್ಲಿ ಮೇಯರ್ ವಿಶ್ವನಾಥ ಮಹಾಡೇಶ್ವರ್ ಮತ್ತು ಮನಪಾ ಆಯುಕ್ತ ಅಜೋಯ್ ಮೆಹ್ತಾ ಕೂಡಾ ಉಪಸ್ಥಿತರಿದ್ದರು. ಉದ್ಧವ್ ಪ್ರಕಾರ ‘‘ಮುಂಬೈಯಲ್ಲಿ ಏನೇ ಸಮಸ್ಯೆ ಕಂಡರೂ ಅದಕ್ಕೆ ಮನಪಾ ಹೊಣೆ ಎನ್ನುವುದು ಅನೇಕರಿಗೆ ಅಭ್ಯಾಸವಾಗಿದೆ. ಮುಂಬೈಯಲ್ಲಿ ಈ ಬಾರಿ ಅಧಿಕ ಮಳೆ ಬಿದ್ದರೆ ಮನಪಾ ಏನು ಮಾಡಲು ಸಾಧ್ಯ?’’ ಎನ್ನುವುದರ ಜೊತೆಗೆ ‘‘ಮನಪಾ ಆಡಳಿತ ಮುಂದಿನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಕಾರ್ಯನಿರತವಾಗಿದೆ’’ ಎಂದಿದ್ದಾರೆ.
ಮಳೆಗಾಲ ಇನ್ನೂ ಒಂದೂವರೆ ತಿಂಗಳಿದೆಯಲ್ಲಾ. ಉದ್ಧವ್ ಮಾತು ಎಷ್ಟು ನಿಜವಾಗುವುದೋ ಕಾದು ನೋಡಬೇಕು.
* * *
ಕಸ ಹೆಕ್ಕುವ ಮಹಿಳೆಯರಿಗೆ ಗುರುತುಪತ್ರ
ನವಿ ಮುಂಬೈ ನಗರದ ಫುಟ್‌ಪಾತ್, ಗಲ್ಲಿಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿ ಕಸ ಹೆಕ್ಕುವ 200 ಮಹಿಳೆಯರಿಗೆ ನವಿ ಮುಂಬೈ ಮನಪಾ ಗುರುತು ಪತ್ರ ನೀಡಿ ಗೌರವಿಸಿದೆ.
ಈ ನತದೃಷ್ಟ ಮಹಿಳೆಯರಿಗೆ ಸ್ವತಃ ಮೇಯರ್ ಸುಧಾಕರ್ ಸೋನಾವಣೆ ತಮ್ಮ ಹಸ್ತದಿಂದಲೇ ಪ್ರಮುಖ ಅತಿಥಿಗಳ ಉಪಸ್ಥಿತಿಯಲ್ಲಿ ಗುರುತುಪತ್ರ ನೀಡಿದರು.
‘‘ನವಿ ಮುಂಬೈಯಲ್ಲಿ ಕಸ ಆರಿಸಿ ಬದುಕು ಸಾಗಿಸುವ ಮಹಿಳೆಯರಿಗಾಗಿ ‘ಸ್ತ್ರೀ ಮುಕ್ತಿ ಸಂಘಟನೆ’ ಹೆಸರಿನ ಒಂದು ಎನ್‌ಜಿಒ ಕಳೆದ ಅನೇಕ ಸಮಯದಿಂದ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಇದುವರೆಗೆ ನವಿ ಮುಂಬೈಯಲ್ಲಿ ಕಸ ಹೆಕ್ಕಿ ಜೀವನ ಸಾಗಿಸುವ 700 ಮಹಿಳೆಯರನ್ನು ಸಂಘಟಿಸಿದೆ. ಇವರಲ್ಲಿ 200 ಮಹಿಳೆಯರಿಗೆ ಮನಪಾ ಈಗ ಗುರುತು ಪತ್ರ ನೀಡಿದೆ. ಶೀಘ್ರವೇ ಉಳಿದ 500 ಮಹಿಳೆಯರಿಗೂ ಗುರುತು ಪತ್ರ ನೀಡಲಾಗುವುದು’’ ಎಂದಿದ್ದಾರೆ ಮೇಯರ್. ಇವರೆಲ್ಲ ನವಿ ಮುಂಬೈಯ ಸ್ವಚ್ಛತಾ ಕಾರ್ಯದಲ್ಲಿ ತಮ್ಮ ಪಾಲೂ ನೀಡಿದ್ದಾರೆ ಎಂದು ಮೇಯರ್ ಸುಧಾಕರ್ ಸೋನಾವಣೆ ಅಭಿನಂದಿಸಿದರು.
***
ನವಿ ಮುಂಬೈಯಲ್ಲಿ ಓಡಲಿದೆ ಚೀನಾದ ಮೆಟ್ರೋ
‘ಚೀನಾದ ವಸ್ತುಗಳನ್ನು ನಿಷೇಧಿಸಿ’ ಎನ್ನುವ ಕೂಗಿನ ನಡುವೆ ನವಿಮುಂಬೈಯಲ್ಲಿ ಚೀನಾದಲ್ಲಿ ನಿರ್ಮಿತ ಮೆಟ್ರೋ ಬೋಗಿಗಳನ್ನು ತರಿಸಲಾಗುತ್ತಿದೆ! ವಿಭಿನ್ನ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ನವಿ ಮುಂಬೈಯ ಮೆಟ್ರೋ ರೈಲು ಯೋಜನೆಯ ಮೊದ ಹಂತದ ಕೆಲಸ ಡಿಸೆಂಬರ್ 2018ರೊಳಗೆ ಪೂರ್ಣಗೊಳಿಸಲಾಗುತ್ತದೆ. ಆನಂತರ ಬೇಲಾಪುರದಿಂದ ಪೆಂಧರ್ ತನಕ 11 ಕಿ.ಮೀ. ಮಾರ್ಗದಲ್ಲಿ ಚೀನಾ ನಿರ್ಮಿತ ಮೆಟ್ರೋ ರೈಲು ಈ ಮಾರ್ಗದಲ್ಲಿ ಓಡಲಿದೆ. ಮೆಟ್ರೋ ರೈಲಿನ ಬೋಗಿ ನಿರ್ಮಿಸುವುದಕ್ಕೆ ಸಿಡ್ಕೋ ಚೀನೀ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದ 320 ಕೋಟಿ ರೂಪಾಯಿಯದ್ದಾಗಿದೆ. ಈ ಹಣದಲ್ಲಿ ಸಿಡ್ಕೋಗೆ ಮೆಟ್ರೋ ರೈಲಿನ 8 ರ್ಯಾಕ್‌ಗಳನ್ನು ಚೀನೀ ಕಂಪೆನಿ ನೀಡಲಿದೆ.
ಸಿಡ್ಕೋ 2011ರಲ್ಲಿ ನವಿ ಮುಂಬೈಯಲ್ಲಿ ಮೆಟ್ರೋ ರೈಲು ಯೋಜನೆ ಆರಂಭಿಸಿತ್ತು. ಇದನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಇದಕ್ಕಾಗಿ 4,000 ಕೋಟಿ ರೂಪಾಯಿ ವೆಚ್ಚದ ಅಂದಾಜು ಮಾಡಲಾಗಿತ್ತು. ಮೊದಲ ಹಂತದಲ್ಲಿ ಬೇಲಾಪುರದಿಂದ ಪೆಂಧರ್ ತನಕ ಇದ್ದು ಇಲ್ಲಿ ಏಳು ಸ್ಟೇಷನ್‌ಗಳ ಕೆಲಸ ತೀವ್ರಗತಿಯಲ್ಲಿದ್ದು ಐದು ಸ್ಟೇಷನ್‌ಗಳ ಕೆಲಸ ಸ್ಥಗಿತಗೊಂಡಿದೆ. ಇದಕ್ಕೆ ಆರ್ಥಿಕ ಕೊರತೆ ಕಾರಣ ಎನ್ನಲಾಗಿದೆ. ಆದರೆ ರಾಜ್ಯ ಸರಕಾರದ ಹಸ್ತಕ್ಷೇಪದ ನಂತರ ಆರ್ಥಿಕ ಸಮಸ್ಯೆ ಒಂದು ಹಂತದ ತನಕ ಕಡಿಮೆಯಾಗಿದೆ.
ಮೆಟ್ರೋ ರೈಲು ಯೋಜನೆಯ ವಿಷಯವಾಗಿ ಸಿಡ್ಕೋ ನಿರ್ದೇಶಕ ಭೂಷಣ್ ಗಗ್ರಾನಿ ಮಾತನಾಡುತ್ತಾ ‘‘ತಾಂತ್ರಿಕ ಸಮಸ್ಯೆ ದೂರವಾಗಿದ್ದು ಡಿಸೆಂಬರ್ 2018 ರೊಳಗೆ ಮೆಟ್ರೋ ಸೇವೆ ಆರಂಭವಾಗಲಿದೆ’’ ಎಂದಿದ್ದಾರೆ.
* * *
ಗೋಶಾಲೆಗಳು ಮುಂಬೈಯ ಹೊರಗಿರಲಿ
ಮುಂಬೈ ಮಹಾನಗರ ಕ್ಷೇತ್ರದಲ್ಲಿ ಕಂಡುಬರುವ ಅನಧಿಕೃತ ಗೋಶಾಲೆಗಳ ಸಹಿತ ಯಾವುದೇ ಗೋಶಾಲೆಗಳು ಮನಪಾ ಕ್ಷೇತ್ರದಿಂದ ಹೊರಗಡೆ ಹೋಗಬೇಕು ಎಂದು ಮನಪಾ ಆಡಳಿತ ಸ್ಪಷ್ಟಪಡಿಸಿದೆ. ಮನಪಾ ಆಡಳಿತ ಯಾವುದೇ ಗೋಶಾಲೆಗಳಿಗೆ ಅನುಮತಿ ನೀಡುವುದಿಲ್ಲ. ಸುಧಾರ್ ಸಮಿತಿಯ ಬೈಠಕ್‌ನಲ್ಲಿ ಈ ಪ್ರಸ್ತಾವ ಚರ್ಚೆಗೆ ಬಂದಿತ್ತು. ಬಿಜೆಪಿ ನಗರ ಸೇವಕರು ಗೋವಿನ ಉಪಯೋಗದ ಜೊತೆ ಧಾರ್ಮಿಕ ಮಹತ್ವವನ್ನೂ ಮುಂದಿಟ್ಟರು. ಆದರೆ ಮನಪಾ ಆಡಳಿತ ಒಪ್ಪಲಿಲ್ಲ.
2016ರಲ್ಲಿ ಮರು ಪ್ರಕಟಿಸಲಾದ ‘ಡಿಪಿ ಪ್ಲ್ಯಾನ್ 2034’ರಲ್ಲಿ ಮುಂಬೈ ಮತ್ತು ಉಪನಗರಗಳಲ್ಲಿ ಎಲ್ಲೂ ಗೋಶಾಲೆಗಳಿಗಾಗಿ ಯಾವುದೇ ತರಹದ ಸ್ಥಳವನ್ನು ಇರಿಸಲಾಗಿಲ್ಲ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ