ಸಾಂಕ್ರಾಮಿಕ ರೋಗಗಳ ತಡೆಗೆ ಜನಜಾಗೃತಿ ಅಭಿಯಾನ
ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಡೆಂಗ್ ಪ್ರಕರಣಗಳು
ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದೆ 60 ಜನರ ತಂಡ
ಶಿವಮೊಗ್ಗ, ಜು.25: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ ಜ್ವರದ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದ್ದು, ಶಿವಮೊಗ್ಗ ನಗರದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಇದು ನಾಗರಿಕರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಈ ನಡುವೆಯೇ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತವು ಡೆಂಗ್ ಜ್ವರದ ಬಗ್ಗೆ ಜನರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಇದಕ್ಕಾಗಿ ಸ್ವಸಹಾಯ ಸಂಘಗಳ 60 ಕಾರ್ಯಕರ್ತರ ತಂಡವೊಂದನ್ನು ಪಾಲಿಕೆ ಆಡಳಿತ ಸಜ್ಜುಗೊಳಿಸಿದೆ. ಈ ಕಾರ್ಯ ಕರ್ತರಿಗೆ ಆರೋಗ್ಯ ಇಲಾಖೆಯಿಂದ ತರಬೇತಿ ಕೊಡಿಸಲಾಗಿದೆ. ಡೆಂಗ್ ಜ್ವರ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕೊಡಿಸಲಾಗಿದೆ.
ಇದೀಗ ಈ ಕಾರ್ಯಕರ್ತರ ತಂಡವು ನಗರದ ಮನೆ ಮನೆ ಗಳಿಗೆ ಭೇಟಿ ನೀಡಿ ಡೆಂಗ್ ಜ್ವರ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುತ್ತಿದೆ. ಜೊತೆಗೆ ಲಾರ್ವಾ ಸರ್ವೇ ಕೂಡ ನಡೆಸುತ್ತಿದೆ. ಕಳೆದ ಕೆಲ ದಿನಗಳಿಂದ ಕಾರ್ಯ ಕರ್ತರ ತಂಡ ಈ ಜನಜಾಗೃತಿ ಕಾರ್ಯದಲ್ಲಿ ತೊಡಗಿದೆ ಎಂದು ಪಾಲಿಕೆ ಆಡಳಿತ ಮೂಲಗಳಿಂದ ತಿಳಿದುಬಂದಿದೆ.
ಡೆಂಗ್ ಜ್ವರಕ್ಕೆ ಕಾರಣ ವಾಗುವ ಸೊಳ್ಳೆಗಳು ಶುದ್ಧ ಕುಡಿ ಯುವ ನೀರಿನಲ್ಲಿಯೂ ಬೆಳವಣಿಗೆ ಹೊಂದುತ್ತವೆ. ಈ ಬಗ್ಗೆ ಕಾರ್ಯಕರ್ತರು ನಾಗರಿಕರಿಗೆ ತಿಳಿ ಹೇಳುವ ಕೆಲಸ ನಡೆಸಲಿದ್ದಾರೆ. ಡೆಂಗ್ ಜ್ವರ ಬರದಂತೆ ಏನು ಮಾಡಬೇಕು? ಸೊಳ್ಳೆಗಳ ನಿಯಂತ್ರಣ, ಸಂತಾನೋಭಿವೃದ್ಧಿ ತಡೆಗಟ್ಟುವುದು ಹೇಗೆ? ಸುತ್ತಮುತ್ತಲಿನ ಪರಿಸರ ಯಾವ ರೀತಿಯಲ್ಲಿ ಸ್ವಚ್ಛ ವಾಗಿಟ್ಟುಕೊಳ್ಳಬೇಕು? ಎಂಬಿತ್ಯಾದಿ ಆರೋಗ್ಯ, ಸ್ವಚ್ಛತೆಗೆ ಸಂಬಂಧಿಸಿದ ಮಾಹಿತಿಗಳನ್ನು ಮನೆಮನೆಗೆ ತೆರಳಿ ನೀಡಲಿದ್ದಾರೆ ಎಂದು ಪಾಲಿಕೆ ಆಯುಕ್ತ ಎಂ.ಪಿ.ಮುಲ್ಲೈಮುಹಿಲನ್ರವರು ತಿಳಿಸಿದ್ದಾರೆ.
ಮಂಗಳವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾರ್ಯ ಕರ್ತರ ತಂಡದ ಜೊತೆ ಜೊತೆಗೆ ಮೂರು ಪ್ರತ್ಯೇಕ ಸ್ವಚ್ಛತಾ ತಂಡಗಳನ್ನು ಕೂಡ ರಚನೆ ಮಾಡ ಲಾಗಿದೆ. ಈ ತಂಡವು ವಿವಿಧ ಬಡಾವ ಣೆಗಳಿಗೆ ಭೇಟಿ ನೀಡಿ ಏಕಕಾಲಕ್ಕೆ ಆ ಪ್ರದೇಶದಲ್ಲಿ ಚರಂಡಿ ಸ್ವಚ್ಛತೆ, ಫಾಗಿಂಗ್, ಔಷಧ ಸಿಂಪಡಣೆ ಕಾರ್ಯವನ್ನು ಬೆಳಗ್ಗೆ ಹಾಗೂ ಸಂಜೆಯ ವೇಳೆ ನಡೆಸುತ್ತಿದೆ ಎಂದು ಹೇಳಿದರು.
ಮಾಹಿತಿ ಸಂಗ್ರಹ: ಶಿವಮೊಗ್ಗ ನಗರದಲ್ಲಿ ಈ ಹಿಂದಿನ ವರ್ಷಗಳಲ್ಲಿ ಹಾಗೂ ಪ್ರಸಕ್ತ ಡೆಂಗ್ ಜ್ವರ ಕಾಣಿಸಿಕೊಂಡ ಪ್ರದೇಶಗಳ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ. ಈ ಮಾಹಿತಿಯನುಸಾರ ಡೆಂಗ್ ಪ್ರಕರಣಗಳು ಕಂಡುಬಂದ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆಯ ಮೇಲೆ ಜನಜಾಗೃತಿ, ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಮುಲ್ಲೈಮುಹಿಲನ್ ಮಾಹಿತಿ ನೀಡಿದರು.
ನಾಗರಿಕರು ಕೂಡ ಎಚ್ಚರಿಕೆವಹಿಸಬೇಕು. ತಮ್ಮ ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರಿನಲ್ಲಿಯೂ ಡೆಂಗ್ ಜ್ವರ ಹರಡಲು ಕಾರಣವಾದ ಸೊಳ್ಳೆ ಬೆಳವಣಿಗೆ ಹೊಂದುವ ಕಾರಣದಿಂದ, ಮನೆಯಲ್ಲಿನ ನೀರಿನ ಸಂಗ್ರಹದ ಮೇಲೆಯೂ ಗಮನಹರಿಸಬೇಕು. ಲಾರ್ವಾ ಸಂಗ್ರಹವಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದ್ದಾರೆ.
ಒಟ್ಟಾರೆ ಶಿವಮೊಗ್ಗ ನಗರದಲ್ಲಿ ಈ ಬಾರಿಯೂ ಡೆಂಗ್ ಜ್ವರ ನಾಗರಿಕರ ನಿದ್ದೆಗೆಡಿಸಲಾರಂಭಿಸಿದೆ. ಈ ನಡುವೆ ಪಾಲಿಕೆ ಆಡಳಿತವು ಜನಜಾಗೃತಿ ಮೂಡಿಸುವ, ಸ್ವಚ್ಛತಾ ಕಾರ್ಯಕ್ಕೆ ವಿಶೇಷ ಒತ್ತು ನೀಡುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರಿ ಶಾಲೆಗಳಲ್ಲಿಯೂ ಅಭಿಯಾನ: ಮೇಯರ್ ಏಳುಮಲೈ
ಶಿವಮೊಗ್ಗ ನಗರದಲ್ಲಿ ಕೆಲ ಶಾಲಾ ಮಕ್ಕಳು ಕೂಡ ಡೆಂಗ್ ಜ್ವರಕ್ಕೆ ತುತ್ತಾಗು ತ್ತಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಬರುತ್ತಿವೆ. ಈ ಹಿನ್ನೆಲೆ ಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಲ್ಲ ಸರಕಾರಿ ಶಾಲೆಗಳಲ್ಲಿಯೂ ಡೆಂಗ್ ಸೇರಿ ದಂತೆ ಇತರ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುವುದು. ಹಾಗೆಯೇ ಶಾಲೆಗಳ ಆವರಣ- ಸುತ್ತಮುತ್ತಲು ಸ್ವಚ್ಛತಾ ಕಾರ್ಯ, ಔಷಧ ಸಿಂಪಡಣೆ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಮೇಯರ್ ಏಳುಮಲೈ ಹೇಳಿದ್ದಾರೆ.
ಸೂಕ್ತ ಚಿಕಿತ್ಸೆ, ಔಷಧ ಲಭ್ಯವಿದೆ: ಡಾ. ಧನಂಜಯ ಸರ್ಜಿ
ಡೆಂಗ್ ಜ್ವರದ ಬಗ್ಗೆ ಅನಗತ್ಯ ಆತಂಕ ಬೇಡ. ನಾಗರಿಕರು ಗಾಬರಿಗೊಳಗಾಗುವ ಆವಶ್ಯಕತೆಯಿಲ್ಲ. ಎಲ್ಲ ಜ್ವರಗಳು ಡೆಂಗ್ ಆಗಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಪಡಿಸಿಕೊಂಡು ಖಾತ್ರಿ ಪಡಿಸಿಕೊಳ್ಳಿ ಎಂದು ಶಿವಮೊಗ್ಗ ನಗರದ ಖ್ಯಾತ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿಯವರು ನಾಗರೀರಿಗೆ ಕಿವಿಮಾತು ಹೇಳಿದ್ದಾರೆ.
ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು. ಪ್ರಸ್ತುತ ಸಾಮಾನ್ಯ ಜ್ವರ ಲಕ್ಷಣ ಹೊಂದಿದವರು ಡೆಂಗ್ ಜ್ವರದ ಆತಂಕ ವ್ಯಕ್ತಪಡಿಸಿ ಡೆಂಗ್ತಪಾಸಣೆ ನಡೆಸಿ ಎಂದು ವೈದ್ಯರಿಗೆ ಒತ್ತಾಯಿಸುತ್ತಾರೆ. ಈ ಮನೋಭಾವ ಸರಿಯಲ್ಲ. ಒಂದು ವೇಳೆ ಡೆಂಗ್ ಜ್ವರಕ್ಕೆ ತುತ್ತಾಗಿದ್ದರೂ ಗಾಬರಿಯಾಗಬೇಡಿ. ಇದಕ್ಕೆ ಸೂಕ್ತ ಚಿಕಿತ್ಸೆ, ಔಷಧ ಲಭ್ಯವಿದೆ ಎಂದು ಸಲಹೆ ನೀಡಿದ್ದಾರೆ. ನಿರ್ಲಕ್ಷ್ಯ ಬೇಡ: ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿವಹಿಸಬೇಕು. ಮಕ್ಕಳಲ್ಲಿ ಜ್ವರದ ಸಮಸ್ಯೆ ಕಂಡುಬಂದರೆ ಊದಾಸೀನ ಮಾಡಬಾರದು. ಸೂಕ್ತ ಔಷೋಧಪಚಾರ ಮಾಡಬೇಕು. ಜ್ವರ ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ. ಮನೆಯ ಒಳಾಂಗಣ-ಹೊರಾಂಗಣ ಪರಿಸರ ಸ್ವಚ್ಛ್ಚವಾಗಿಟ್ಟುಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಬೇಕು ಎಂದರು.
ಡೆಂಗ್ ಪೀಡಿತ ಏರಿಯಾಗಳ ವಿವರ ಸಂಗ್ರಹ: ಮುಲ್ಲೈಮುಹಿಲನ್
ಶಿವಮೊಗ್ಗ ನಗರದಲ್ಲಿ ಈ ಹಿಂದಿನ ವರ್ಷಗಳಲ್ಲಿ ಡೆಂಗ್ ಜ್ವರ ಕಾಣಿಸಿ ಕೊಂಡ ಪ್ರದೇಶಗಳ ವಿವರ ವನ್ನು ಆರೋಗ್ಯ ಇಲಾಖೆಯಿಂದ ಪಾಲಿಕೆ ಆಡಳಿತ ಸಂಗ್ರಹಿಸಿದೆ. ಈ ಪ್ರದೇಶ ಗಳಲ್ಲಿ ಆದ್ಯತೆಯ ಮೇರೆಗೆ ಜನ ಜಾಗೃತಿ, ಸ್ವಚ್ಛತಾ ಕಾರ್ಯ ಕ್ರಮಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಾಗರಿ ಕರಿಗೆ ಮಾಹಿತಿ ನೀಡುವ ಕೆಲಸ ನಡೆಸುವುದರ ಜೊತೆಗೆ ಲಾರ್ವಾ ಸಂಗ್ರಹ ಕಾರ್ಯ ನಡೆಸಲಾಗುತ್ತಿದೆ. ತರಬೇತಿ ಪಡೆದ 60 ಕಾರ್ಯಕರ್ತರ ಪಡೆಯೂ ಈಗಾಗಲೇ ನಗರದ ವಿವಿಧೆಡೆ ಜನಜಾಗೃತಿ ಮೂಡಿಸುವ ಕಾರ್ಯವನ್ನು ಬಿರುಸಿನಿಂದ ನಡೆಸಲಾರಂಭಿಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಎಂ.ಪಿ.ಮುಲ್ಲೈಮುಹಿಲನ್ ತಿಳಿಸಿದ್ದಾರೆ.