ಅನಿವಾಸಿ ಕನ್ನಡಿಗರಿಗೆ ವಿಶಿಷ್ಟ ಗುರುತಿನ ಚೀಟಿ: ಡಾ.ಆರತಿ ಕೃಷ್ಣ
‘‘ಗ್ರಾಮ ಪಂಚಾಯತ್ ಮಟ್ಟದಿಂದ ನಾವು ಅನಿವಾಸಿ ಕನ್ನಡಿಗರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಲ್ಯಾಣ ಸಮಿತಿಗಳನ್ನು ರಚನೆ ಮಾಡಿದ್ದೇವೆ. ಇದರಿಂದಾಗಿ, ಅನಿವಾಸಿ ಕನ್ನಡಿಗರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.’’
ಪ್ರತಿಯೊಬ್ಬ ಕನ್ನಡಿಗನೂ ತನ್ನ ಮೂಲ ನೆಲೆಯೊಂದಿಗೆ ಸಂಪರ್ಕ ಹೊಂದುವ ದೃಷ್ಟಿಯಿಂದ ಅನಿವಾಸಿ ಕನ್ನಡಿಗರಿಗೆ ವಿಶಿಷ್ಟ ಗುರುತಿನ ಚೀಟಿ(ಎನ್ಆರ್ಕೆ ಕಾರ್ಡ್) ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ರಾಜ್ಯದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ರಾಜ್ಯ ಸರಕಾರದ ಎಲ್ಲ ಇಲಾಖೆಗಳಿಂದಲೂ ಕ್ಷಿಪ್ರ ಸೇವೆಗಳಲ್ಲದೆ ಹೊಟೇಲ್, ಆಭರಣ ಮಳಿಗೆ, ಆಸ್ಪತ್ರೆ ಮುಂತಾದೆಡೆಗಳಲ್ಲಿ ರಿಯಾಯಿತಿಗಳನ್ನೊಳಗೊಂಡಂತೆ ವಿಶಿಷ್ಟ ವೌಲ್ಯಗಳ ವಿಶೇಷಾಧಿಕಾರ ಒದಗಿಸುವಂತೆ ಬ್ಯಾಂಕು, ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಈ ಕಾರ್ಡ್ ನ್ನು ಮುದ್ರಾಂಕನಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
‘‘ಅನಿವಾಸಿ ಕನ್ನಡಿಗರ ಕಾರ್ಡ್ ಪಡೆದ ಅನಿವಾಸಿ ಕನ್ನಡಿಗರು ಅಪಘಾತಕ್ಕೀಡಾದ ಸಂದರ್ಭದಲ್ಲಿ 2 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಅನಿವಾಸಿ ಕನ್ನಡಿಗರು ಪ್ರವಾಸೋದ್ಯಮ ಕೈಗಾರಿಕೆಯಲ್ಲಿ, ಅದರಲ್ಲೂ ವಿಶೇಷವಾಗಿ ಪ್ರಕೃತಿ, ಪರಂಪರೆ, ವೈದ್ಯಕೀಯ, ಸಾಹಸ, ಆತಿಥ್ಯ, ವನವಿಹಾರ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಈ ಕಾರ್ಡ್ ಪ್ರಯೋಜನ ಕಾರಿಯಾಗಲಿದೆ’’ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.
‘‘ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ. ಸುಮಾರು 1.80 ಲಕ್ಷ ಜನ ಕೊಲ್ಲಿ ರಾಷ್ಟ್ರಗಳಲ್ಲಿದ್ದು, ಈ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರಿದ್ದಾರೆ. 90 ಸಾವಿರ ಕನ್ನಡಿಗರು ಅಮೆರಿಕದಲ್ಲಿದ್ದಾರೆ, ಇನ್ನುಳಿದಂತೆ ಯುಕೆ, ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 5 ಲಕ್ಷ ಕನ್ನಡಿಗರು ವಿದೇಶಗಳಲ್ಲಿದ್ದಾರೆ ಎಂದು ತಿಳಿದು ಬಂದಿದೆ.’’
‘‘ಗ್ರಾಮ ಪಂಚಾಯತ್ ಮಟ್ಟದಿಂದ ನಾವು ಅನಿವಾಸಿ ಕನ್ನಡಿಗರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಲ್ಯಾಣ ಸಮಿತಿಗಳನ್ನು ರಚನೆ ಮಾಡಿದ್ದೇವೆ. ಇದರಿಂದಾಗಿ, ಅನಿವಾಸಿ ಕನ್ನಡಿಗರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.’’
ಕೇರಳ ಮಾದರಿ ಪುನರ್ವಸತಿ:
‘‘ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸದನ ಸಮಿತಿಯು, ಗಲ್ಫ್ ರಾಷ್ಟ್ರಗಳಿಂದ ಉದ್ಯೋಗ ಕಳೆದುಕೊಂಡು ಹಿಂದಿರುಗಿರುವವರಿಗೆ ಕೇರಳ ರಾಜ್ಯದಲ್ಲಿ ಯಾವ ರೀತಿ ಪುನರ್ವಸತಿ ಕಲ್ಪಿಸಲಾಗಿದೆ ಎಂಬುದರ ಕುರಿತು ಅಧ್ಯಯನ ಮಾಡಿ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.’’
‘‘ನಮ್ಮ ಸಮಿತಿಗೆ 50 ಕೋಟಿ ರೂ.ಬಜೆಟ್ ಒದಗಿಸುವಂತೆ ಸದನ ಸಮಿತಿ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸರಕಾರವು ಇದೇ ಮೊದಲ ಬಾರಿಗೆ 2 ಕೋಟಿ ರೂ.ಯನ್ನು ಒದಗಿಸಿದೆ. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದೊಂದಿಗೆ ನಾವು ಹೊಂದಾಣಿಕೆ ಮಾಡಿಕೊಂಡು ಕೊಲ್ಲಿ ರಾಷ್ಟ್ರಗಳಿಂದ ಉದ್ಯೋಗ ಕಳೆದುಕೊಂಡು ಬಂದಿರುವವರಿಗೆ, ಉದ್ಯೋಗಾವಕಾಶಗಳನ್ನು, ಸ್ವಂತ ಉದ್ಯೋಗ ಆರಂಭಿಸಲು ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದೇವೆ.’’
ಕಾರ್ಯಾಗಾರ:
‘‘ರಾಜ್ಯದಿಂದ ವಿದೇಶಗಳಿಗೆ ತೆರಳುವ ವಿವಿಧ ವರ್ಗದ ಕಾರ್ಮಿಕರಿಗೆ ವಿದೇಶಕ್ಕೆ ತೆರಳುವ ಮುನ್ನ ಪೂರ್ವ ಪರಿಚಯ ಕಾರ್ಯಾಗಾರ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ. ಇದರಿಂದಾಗಿ, ಕಾರ್ಮಿಕರು ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗಗಳಿಗೆ ಪೂರ್ವಭಾವಿಯಾಗಿ ತರಬೇತಿ ಪಡೆದಂತಾಗುತ್ತದೆ’’ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.
‘ನಮ್ಮ ಊರು-ನಮ್ಮ ನಾಡು’:
‘‘ಅನಿವಾಸಿ ಭಾರತೀಯ ಕನ್ನಡಿಗರು ತಮ್ಮ ಊರುಗಳಿಗೆ ಏನಾದರೂ ಕೊಡುಗೆ ನೀಡಲು ಬಯಸುತ್ತಾರೆ. ಗ್ರಾಮ, ಶಾಲೆ, ಯಾತ್ರಾ ಸ್ಥಳಗಳನ್ನು ದತ್ತು ಪಡೆಯಲು ಮುಂದಾಗುವವರಿಗೆ ನಾವು ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬುದರ ಕುರಿತು ಮಾಹಿತಿ ನೀಡುತ್ತೇವೆ. ನಮ್ಮ ಮೂಲಕ ಹೂಡಿಕೆ ಮಾಡಲು ಮುಂದಾದರೆ ಅವರಿಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಿಂದ ವಿನಾಯಿತಿ ಸಿಗುತ್ತದೆ’’ ಎಂದು ಅವರು ಹೇಳಿದ್ದಾರೆ.
ಅನಿವಾಸಿ ಕನ್ನಡಿಗರ ಪ್ರತ್ಯೇಕ ಬಂಡವಾಳ ಹೂಡಿಕೆ ಘಟಕ:‘‘ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆಯು ಸ್ಥಾಪಿಸಿರುವ ‘ಕರ್ನಾಟಕ ಉದ್ಯೋಗ ಮಿತ್ರ’ ಘಟಕವು ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಡಿಯಲ್ಲಿ ಅನಿವಾಸಿ ಭಾರತೀಯ/ಅನಿವಾಸಿ ಕನ್ನಡಿಗರ ಬಂಡವಾಳ ಹೂಡಿಕೆ ಉತ್ತೇಜಕ ಘಟಕವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ’’ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.
‘‘ರಾಜ್ಯದ ಯುವಕರಿಗಾಗಿ ಉದಯೋನ್ಮುಖ ದೇಶ-ನಿರ್ದಿಷ್ಟ, ವಲಯ-ನಿರ್ದಿಷ್ಟ ವಿದೇಶಿ ಉದ್ಯೋಗಾವಕಾಶಗಳ ಆಧಾರ ದತ್ತಾಂಶವನ್ನು ಸ್ಥಾಪಿಸಲಾಗುವುದು. ವೃತ್ತಿಪರ ಸಂಸ್ಥೆಗಳು ಮತ್ತು ಖಾಸಗಿ ವಲಯದೊಂದಿಗೆ ಸಮಾಲೋಚಿಸಿ ಕೌಶಲ್ಯ ಅಭಿವೃದ್ಧಿ ಮತ್ತು ಕೌಶಲ್ಯಗಳ ಉನ್ನತೀಕರಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು’’
‘‘ಉದ್ಯೋಗದ ಆಶ್ವಾಸನೆ ನೀಡುವ ಸಂಸ್ಥೆಗಳಿಂದ ನಡು ನೀರಿನಲ್ಲಿ ಕೈ ಬಿಡುವಿಕೆ, ಲಘು ಅಪರಾಧಗಳಿಗಾಗಿ ಬಂಧನ, ದೌರ್ಜನ್ಯ, ಪೀಡನೆ, ಸಾಗರೋತ್ತರ ಉದ್ಯೋಗಿ ಪತಿಯಿಂದ ಪರಿತ್ಯಕ್ತ ಇತ್ಯಾದಿ ಸಮಸ್ಯೆಗಳಿಗೆ ಸಿಕ್ಕಿಕೊಂಡಿರುವ ಅನಿವಾಸಿ ಕನ್ನಡಿಗರಿಗೆ ಎಲ್ಲ ರೀತಿಯ ಕಾನೂನು ಸೇವಾ ಸೌಲಭ್ಯಗಳನ್ನು ವಿದೇಶಾಂಗ ಸಚಿವಾಲಯದ ಸಹಯೋಗದೊಂದಿಗೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.