ಹಿಂದೂ ಸ್ತ್ರೀಯರ ಉನ್ನತಿ ಮತ್ತು ಅವನತಿ: ಯಾರು ಹೊಣೆಗಾರರು?
‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್ರ "the rise and fall of the hindu women: who was responsible for it?'' ಎಂಬ ಶೀರ್ಷಿಕೆಯ ಇಂಗ್ಲಿಷ್ ಲೇಖನದ ಅನುವಾದವಿದು.
ಭಾಗ-6
ಈ ಬಗೆಗೆ ಯಾವುದೇ ಸಂದೇಹ ಉಳಿಯಕೂಡದೆಂಬ ದೃಷ್ಟಿಯಿಂದ, ಮನುವು ಸ್ತ್ರೀಯರಿಗಾಗಿ ತಯಾರಿಸಿದ ಹಾಗೂ ಮನುಸ್ಮತಿಯಲ್ಲಿ ಕಾಣುವ ಕೆಲವು ಕಾನೂನುಗಳನ್ನು ಉಲ್ಲೇಖಿಸುವೆನು.
2.213. ಪುರುಷರನ್ನು ಆಕರ್ಷಿಸಿ ಭ್ರಷ್ಟರನ್ನಾಗಿ ಮಾಡುವುದು ಸ್ತ್ರೀಯರ ವೈಶಿಷ್ಟವಾಗಿದೆ. ಈ ಕಾರಣದಿಂದಾಗಿ ಜ್ಞಾನಿ ಜನರು ಸ್ತ್ರೀಯರ ಸಾನಿಧ್ಯದಲ್ಲಿ ಎಂದಿಗೂ ಎಚ್ಚರಗೇಡಿಗಳಾಗಿರುವುದಿಲ್ಲ.
2.214. ಸ್ತ್ರೀಯರು ಕೇವಲ ಮೂರ್ಖರನ್ನಷ್ಟೇ ವಾಮ ಮಾರ್ಗದತ್ತ ಕೊಂಡೊಯ್ಯುವರೆಂದಲ್ಲ, ಅವರು ಜ್ಞಾನಿ ಪುರುಷರನ್ನು ಕೂಡ ಕಾಮ ಮತ್ತು ಕ್ರೋಧಗಳ ಗುಲಾಮರನ್ನಾಗಿ ಮಾಡುತ್ತಾರೆ.
2.245. ಕಾಮ ವಾಸನೆಗಳು ಪ್ರಬಲವಾಗಿರುವುದರಿಂದ ಅವು ಜ್ಞಾನಿ ಪುರುಷನನ್ನು ಕೂಡಾ ಗುಲಾಮನನ್ನಾಗಿ ಮಾಡುತ್ತವೆ. ಹೀಗಾಗಿ ಯಾವನೂ ತನ್ನ ಮಾತೆ, ಭಗಿನಿ ಇಲ್ಲವೇ ಕನ್ಯೆಯೊಡನೆ ಏಕಾಂತದಲ್ಲಿ ಇರಕೂಡದು.
9.14.ಸ್ತ್ರೀಯರು ಪುರುಷನ ಸೌಂದರ್ಯದತ್ತ ಗಮನವನ್ನು ನೀಡುವುದಿಲ್ಲ ಅಥವಾ ಅವರ ವಯಸ್ಸಿನತ್ತಲೂ ನೋಡುವುದಿಲ್ಲ. ಸ್ತ್ರೀಯರು ‘ಇವನು ಪುರುಷನು’ ಎಂಬುದನ್ನಷ್ಟೇ ಮನದಲ್ಲಿ ಗಮನಿಸಿ ಅ ಪುರುಷರಿಗೆ ಸ್ವಾಧೀನರಾಗುತ್ತಾರೆ,- ಅವನು ಸುಂದರನಿರಲಿ ಅಲ್ಲವೇ ಕುರೂಪನಿರಲಿ.
9.15. ಸ್ತ್ರೀಯರನ್ನು ಅದೆಷ್ಟೇ ಹದ್ದುಬಸ್ತಿನಲ್ಲಿ ಇಟ್ಟರೂ ಪುರುಷರ ಬಗೆಗೆ ಅವರಲ್ಲಿರುವ ಕಾಮ ವಾಸನೆ, ಅವರ ಚಂಚಲ ಸ್ವಭಾವ, ಹಾಗೆಯೇ ನಿಸರ್ಗದತ್ತವಾದ ಅವರ ನಿರ್ದಯತೆಗಳಿಂದ ಅವರು ತಮ್ಮ ಪತಿಗೆ ವಿಶ್ವಾಸಘಾತವನ್ನು ಕೂಡ ಮಾಡುತ್ತಾರೆ.
9.16. ನಿರ್ಮಾತೃವಾದ ಈಶ್ವರನು ಸ್ತ್ರೀಯರನ್ನು ನಿರ್ಮಿಸುವ ಕಾಲಕ್ಕೆ ಅವರ ರಚನೆಯನ್ನು ಹೇಗೆ ಮಾಡಿರುವನೆಂದರೆ, ಅವರನ್ನು ಹದ್ದು ಬಸ್ತಿನಲ್ಲಿಡಲು ಪ್ರತಿಯೊಬ್ಬ ಪುರುಷನು ಪ್ರಯತ್ನಗಳ ಪರಾಕಾಷ್ಠೆಯನ್ನು ಮಾಡಬೇಕಾಗಿದೆ.
9.17. ಮನುವು ಕಾಮ ವಾಸನೆಯ ತೀವ್ರ ಇಚ್ಛೆ, ಶೃಂಗಾರ, ಅಪವಿತ್ರ ಕಾಮ ವಾಸನೆ, ಕ್ರೋಧ, ಅಪ್ರಾಮಾಣಿಕತೆ, ಮತ್ಸರ ಮತ್ತು ದುರ್ವರ್ತನೆಗಳನ್ನು ಸ್ತ್ರೀಯರಿಗೆ ದಯಪಾಲಿಸಿರುವನು. ಮನುವಿನ ದೃಷ್ಟಿಯಿಂದ ಸ್ತ್ರೀ ಅದೆಷ್ಟು ನೀಚಳಾಗಿದ್ದಳೆಂಬುವುದು ಇದರಿಂದ ಕಂಡುಬರುತ್ತದೆ.
ಸ್ತ್ರೀಯರ ವಿರುದ್ಧವಾಗಿರುವ ಮನುವಿನ ಕಾನೂನುಗಳೆಂದರೆ ಅವನೀ ದೃಷ್ಟಿಕೋನದ ಪುರಾವೆ ಎನ್ನಿಸಿದೆ. ಯಾವುದೇ ಪರಿಸ್ಥಿತಿಯಲ್ಲೂ ಸ್ತ್ರೀಯರು ಸ್ವತಂತ್ರರಾಗಿ ಇರಕೂಡದು.
ಮನುವಿನ ಅಭಿಪ್ರಾಯದಂತೆ: 9.2 ಪುರುಷರು ಹಗಳಿರುಳೆನ್ನದೆ ಕುಟುಂಬದ ಸ್ತ್ರೀಯರನ್ನು ತಮ್ಮ ಮೇಲೆ ಅವಲಂಬಿತರನ್ನಾಗಿ ಮಾಡಬೇಕು. ಅವರಲ್ಲಿ ವಿಷಯ ವಾಸನೆ ತಯಾರಾಗುತ್ತಿದ್ದರೆ ಅವರನ್ನು ಹದ್ದುಬಸ್ತಿನಲ್ಲಿ ಇಡಬೇಕು.
9.5. ಸ್ತ್ರೀಯನ್ನು ವಿಶೇಷವಾಗಿ ಪಾಪಮಯ ಪ್ರವೃತ್ತಿಯಿಂದ ಪರಾವೃತ್ತಳನ್ನಾಗಿ ಮಾಡಲೇಬೇಕು. ಅವಳನ್ನು ಪರಾವೃತ್ತಗೊಳಿಸದಿದ್ದರೆ ಎರಡೂ ಕುಟುಂಬಗಳು ತೀರಾ ಚಿಲ್ಲರೆ ಕಾರಣದಿಂದಲೂ ದುಃಖಕ್ಕೆ ಈಡಾಗುತ್ತವೆ.
9.6. ಎಲ್ಲ ಜಾತಿಗಳ ಎಲ್ಲಕ್ಕೂ ಹೆಚ್ಚು ಮಹತ್ವದ ಕರ್ತವ್ಯವೆಂದರೆ ದುರ್ಬಲರಾದ ಪತಿಗಳೂ ಕೂಡಾ ತಮ್ಮ ಪತ್ನಿಯರ ಸುರಕ್ಷೆಗಾಗಿ ಯತ್ನಗಳ ಪರಾಕಾಷ್ಠೆಯನ್ನು ಮಾಡತಕ್ಕದ್ದು.
5.147. ಮಗಳು, ಯುವತಿ ಇಲ್ಲವೇ ವೃದ್ಧೆಯೂ ಕೂಡ ತನ್ನ ಮನೆಯಲ್ಲಿ ಸ್ವತಂತ್ರವಾಗಿ ಏನನ್ನೂ ಮಾಡಕೂಡದು.
5.148. ಸ್ತ್ರೀಯು ಬಾಲ್ಯದಲ್ಲಿ ತನ್ನ ಪಿತ, ಯೌವನದಲ್ಲಿ ತನ್ನ ಪತಿ, ಅವನ ಮೃತ್ಯುವಿನ ತರುವಾಯ ತನ್ನ ಮಗನನ್ನು ಅವಲಂಬಿಸಿರತಕ್ಕದ್ದು. ಅವಳೊಂದಿಗೆ ಸ್ವತಂತ್ರಳಾಗಿ ಇರಲಾರಳು.
5.149. ಅವಳು ಪಿತ, ಪತಿ ಇಲ್ಲವೇ ಪುತ್ರರಿಂದ ಬೇರೆಯಾಗಲು ಯತ್ನಿಸಕೂಡದು. ಅವಳು ಅವರಿಂದ ಬೇರ್ಪಟ್ಟಳೆಂದರೆ(ತನ್ನ ಹಾಗೂ ತನ್ನ ಪತಿಯ) ಎರಡೂ ಬದಿಯ ಕುಟುಂಬಗಳಲ್ಲಿ ತಿರಸ್ಕರಣೀಯಳೆನ್ನಿಸುತ್ತಾಳೆ.
ಸ್ತ್ರೀಗೆ ವಿವಾಹ ವಿಚ್ಛೇದನೆಯನ್ನು ನೀಡುವ ಅಧಿಕಾರವಿಲ್ಲ.
9.45. ಪತಿಯು ಪತ್ನಿಯೊಂದಿಗೆ ಇರುವುದು ಬಂಧನಕಾರಕವಿದೆ. ಒಮ್ಮೆ ಮದುವೆಯಾದ ಬಳಿಕ ಪತ್ನಿಯು ಬೇರೆಯಾಗಲಾರಳು.
ಮನುವು ಸಂಸ್ಕಾರಗೊಂಡ ಮದುವೆಗಷ್ಟೇ ಗೌರವಯುತವಾದ ಮನ್ನಣೆಯನ್ನು ನೀಡಿದ್ದರಿಂದ ವಿಚ್ಛೇದನೆಗೆ ಅಪ್ಪಣೆಯನ್ನು ನೀಡಲಿಲ್ಲ. ಬಹಳಷ್ಟು ಜನ ಹಿಂದೂಗಳು ವಿವಾಹ ವಿಚ್ಛೇದನೆಗೆ ಸಂಬಂಧಿಸಿ ಮನುವಿನ ಕಾನೂನು ಏನೆಲ್ಲವೆಂದು ತಿಳಿದು ಅಲ್ಲಿಗೇ ನಿಲ್ಲುತ್ತಾರೆ. ಈ ವಿಚಾರದಿಂದ ಅವರು ತಮ್ಮ ವಿವೇಕವನ್ನು ಸಮಾಧಾನಪಡಿಸಿ, ಅದನ್ನು ಈಶ್ವರನದೆಂದೇ ಮನ್ನಿಸುತ್ತಾರೆ. ಆದರೆ ಇದು ಸತ್ಯದಿಂದ ಅದೆಷ್ಟೋ ದೂರದಲ್ಲಿದೆ. ವಿಚ್ಛೇದನೆಗೆ ವಿರೋಧಿಯಾದ ಮನುವಿನ ಕಾನೂನಿನ ಉದ್ದೇಶವು ತೀರಾ ಭಿನ್ನವಾದುದು. ಇಲ್ಲಿ ಪುರುಷನನ್ನು ಸ್ತ್ರೀಯು ಬಂಧನದಲ್ಲಿ ಇರಿಸುವುದಾಗಿರದೆ ಸ್ತ್ರೀಯನ್ನು ಪುರುಷನ ಬಂಧನದಲ್ಲಿ ಇರಿಸುವುದಲ್ಲದೆ ಪುರುಷನನ್ನು ಮಾತ್ರ ಸ್ವತಂತ್ರವಾಗಿ ಬಿಟ್ಟುಬಿಡುವ ಪ್ರಕ್ರಿಯೆ ಇದಾಗಿತ್ತು-
ಪುರುಷನು ಪತ್ನಿಯನ್ನು ಬಿಟ್ಟು ಬಿಡುವ ಬಗೆಗೆ ಮನುವು ಯಾವುದೇ ಬಗೆಯ ಬಂಧನವನ್ನು ಹಾಕಿಲ್ಲ. ನಿಜ ಹೇಳಬೇಕೆಂದರೆ ಅವನು (ಮನುವು) ಪತ್ನಿಯನ್ನು ಪೂರ್ತಿಯಾಗಿ ತ್ಯಜಿಸುವ ಸ್ವಾತಂತ್ರವನ್ನು ಪುರುಷನಿಗೆ ನೀಡಿದನು. ಇಷ್ಟೇ ಅಲ್ಲದೆ ಅವನು ಅವಳನ್ನು ಮಾರುವ ಅಧಿಕಾರವನ್ನೂ ನೀಡಿದನು. ಆದರೆ ಅವನು ಪತ್ನಿಯನ್ನು ಸ್ವತಂತ್ರಳಾಗುವುದರಿಂದ ಪೂರ್ತಿಯಾಗಿ ತಡೆಯುತ್ತಾನೆ. ಮನು ಏನೆನ್ನುತ್ತಾನೆ ಎಂಬುವುದನ್ನು ನೋಡಿ: 9.46. ಪತ್ನಿಯನ್ನು ಮಾರಿದ ತರುವಾಯ ಇಲ್ಲವೇ ಅವಳನ್ನು ಅಸ್ವೀಕರಿಸಿದ ತರುವಾಯವೂ ಅವಳು ಪತಿ ಬಂಧನದಿಂದ ಮುಕ್ತಳಾಗುವುದಿಲ್ಲ.
ಇದರ ಅರ್ಥ ಹೀಗಿದೆ: ಪತಿಯು ಪತ್ನಿಯನ್ನು ಮಾರಿದರೆ ಇಲ್ಲವೇ ಅವಳನ್ನು ಅಸ್ವೀಕರಿಸಿದರೂ ಕೂಡ ಅವಳು ಅದೆಂದಿಗೂ ಇನ್ನೊಬ್ಬನ (ಅವಳನ್ನು ಕೊಂಡು ಕೊಂಡವನ ಅಥವಾ ಆಶ್ರಯವನ್ನು ಇತ್ತವನ) ಕಾನೂನು ಬದ್ಧ ಪತ್ನಿಯಾಗಲಾರಳು. ಇದರಷ್ಟು ಕ್ರೂರವಾದುದು ಇನ್ನೇನು ಇರಲು ಸಾಧ್ಯವಿಲ್ಲ. ಕಾನೂನನ್ನು ತಯಾರಿಸುವಾಗ ಮನುವು ನ್ಯಾಯ, ಅನ್ಯಾಯಗಳ ಅರಿವನ್ನು ಇರಿಸಿಕೊಳ್ಳುವ ಬಗೆಗೆ ಚಿಂತಿಸುತ್ತಿರಲಿಲ್ಲ. ಅವನು ಸ್ತ್ರೀಯರು ಬೌದ್ಧ ಕಾಲದಲ್ಲಿ ದೊರೆತ ನಮ್ಮ ಸ್ವಾತಂತ್ರಕ್ಕೆ ಎದುರಾಗುವಂತೆ ಮಾಡ ಬಯಸಿದ್ದನು. ಮನು ಅವಳಿಗೆ ದೊರೆತ ಸ್ವಾತಂತ್ರ್ಯದಿಂದ ನೊಂದುಕೊಂಡಿದ್ದನು. ಹೀಗಾಗಿ ಅವನು ಅದನ್ನು ಪೂರ್ತಿ ನಿಷೇಧಿಸಿ, ಅವಳು ತನಗೆ ಲಭಿಸಿದ ಸ್ವಾತಂತ್ರಕ್ಕೆ ಎರವಾಗುವಂತೆ ಮಾಡಿದನು.
ಮನುವು ಸಂಪತ್ತಿನ ಸಂದರ್ಭದಲ್ಲಿ ಪತ್ನಿಯನ್ನು ಗುಲಾಮಳ ಮಟ್ಟಕ್ಕೆ ತಂದನು.
9.416 ಪತ್ನಿ, ಪುತ್ರ ಮತ್ತು ಗುಲಾಮ ಈ ಮೂವರಿಗೂ ಯಾವುದೇ ಬಗೆಯ ಸಂಪತ್ತನ್ನು ಸಂಪಾದಿಸುವ ಹಕ್ಕಿಲ್ಲ. ಅವರು ಗಳಿಸಿದ ಸಂಪತ್ತು ತಮ್ಮ ಒಡೆಯರಿಗೆ ಸೇರಿದ್ದು. ಪತಿಯು ಸಂಯುಕ್ತ ಕುಟುಂಬದವನಾಗಿದ್ದು ಪತ್ನಿಯ ವಿಧವೆಯಾದರೆ ಮನುವು ಒಬ್ಬ ಪೋಷಕನನ್ನು ಹೊಂದಲು ಅಪ್ಪಣೆಯನ್ನು ಅವಳಿಗೆ ಕೊಡುತ್ತಾನೆ. ಪತಿಯು ಕುಟುಂಬದಿಂದ ವಿಭಕ್ತನಾಗಿದ್ದರೆ ಅವಳನ್ನು ಅವನ ಸೊತ್ತಿನ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ ಮನು ಸಂಪತ್ತಿನ ಮೇಲಿನ ಅವಳ ವರ್ಚಸ್ಸಿಗೆ ಎಂದಿಗೂ ಒಪ್ಪಿಗೆಯನ್ನು ಕೊಡುವುದಿಲ್ಲ.
ಮನುವಿನ ಕಾನೂನಿನಂತೆ ಸ್ತ್ರೀಯು ದೇಹದಂಡಕ್ಕೆ ಅರ್ಹಳು. ಹಾಗೆಯೇ, ಮನು ಪತ್ನಿಯನ್ನು ಕೊಲ್ಲುವ ಅಧಿಕಾರವನ್ನು ಪತಿಗೆ ಕೊಡುತ್ತಾನೆ.
8.299. ಪತ್ನಿ, ಪುತ್ರ, ಗುಲಾಮ, ವಿದ್ಯಾರ್ಥಿ ಮತ್ತು ಸ್ವಂತದ ತಮ್ಮಂದಿರು ಏನಾದರೂ ತಪ್ಪು ಮಾಡಿದರೆ ಅವರನ್ನು ಹಗ್ಗ ಇಲ್ಲವೇ ಬಿದಿರಿನಿಂದ ಹೊಡೆಯಲು ಸಾಧ್ಯ.
ಮನುವಿನ ಹೇಳಿಕೆಯಂತೆ, ಸ್ತ್ರೀಗೆ ಜ್ಞಾನಾರ್ಜನೆಯ ಅಧಿಕಾರವಿಲ್ಲ.
ಮನುವು ವೇದಗಳನ್ನು ಕಲಿಯುವ ಅವಳ ಅಧಿಕಾರವನ್ನು ಪೂರ್ತಿ ನಿಷೇಧಿಸಿರುವನು.
2.66. ಸ್ತ್ರೀಯರು ಸಂಸ್ಕಾರಗಳನ್ನು ಮಾಡಿಸಿಕೊಳ್ಳುವುದು ಅಗತ್ಯದ್ದು. ಅವನ್ನು ಮಾಡಬೇಕು ಆದರೆ ವೇದ ಮಂತ್ರಗಳಿಲ್ಲದೆ ಮಾಡಬೇಕು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)