ದಿಲ್ಲಿ ದರ್ಬಾರ್
ಕಾಂಗ್ರೆಸ್ ಜಾಲತಾಣದಲ್ಲಿ ರಮ್ಯಾಯಣ
ಕಾಂಗ್ರೆಸ್ ತನ್ನ ನಾಯಕರಿಂದಾಗಿ ಮಾತ್ರವಲ್ಲ ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಪರಿಣತಿಯ ಕೊರತೆಯಿಂದಾಗಿ ಬಹಳ ಸಮಯದಿಂದ ತಮಾಷೆಗೊಳಗಾಗುತ್ತಿದೆ. ಆದರೆ ಈಗ ಈ ಪಕ್ಷವು ತುಸು ಎಚ್ಚೆತ್ತುಕೊಂಡಿರುವಂತೆೆ ಕಾಣುತ್ತಿದೆ. ಏನಿಲ್ಲವೆಂದರೂ ಸ್ಯಾಂಡಲ್‌ವುಡ್‌ನಿಂದ ರಾಜಕೀಯ ಪ್ರವೇಶಿಸಿರುವ ರಮ್ಯಾ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥೆಯಾದ ಬಳಿಕ ಇಂತಹ ಅನಿಸಿಕೆ ಉಂಟಾಗಿದೆ.
ಒಂದು ವೇಳೆ ವಿಶ್ವಸನೀಯ ಮೂಲಗಳಿಂದ ದೊರೆತ ಮಾಹಿತಿಯನ್ನು ನಂಬುವುದಾದರೆ. ಹಣಕಾಸಿನ ವಿಚಾರದಲ್ಲಿ ಜಿಗುಟುತನ ತೋರುವ ಎಐಸಿಸಿ, ಈಗ ತನ್ನ ಸಾಮಾಜಿಕ ಜಾಲತಾಣಕ್ಕೆ ನೀಡುವ ಆರ್ಥಿಕ ಅನುದಾನದಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ. ಪಕ್ಷದ ಮೇಲೆ ರಮ್ಯಾ ಹಿಡಿತ ಹೆಚ್ಚುತ್ತಿರುವುದು ಕೆಲವು ನಿರ್ದಿಷ್ಟ ವರ್ಗದ ಕಾಂಗ್ರೆಸಿಗರಿಗೆ ಎದೆಯುರಿ ಉಂಟು ಮಾಡಿದೆ. ಆಕೆಯ ಪೂರ್ವಾಧಿಕಾರಿ ದೀಪೇಂದ್ರ ಸಿಂಗ್ ಹೂಡಾ ಅವರಂತೂ ತುಂಬಾ ಸಿಟ್ಟುಗೊಂಡಿದ್ದಾರೆ. ಅವರು ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ನಿಯೋಜಿಸಿದ್ದ ಕೆಲವರನ್ನು ರಮ್ಯಾ ಕೈಬಿಟ್ಟಿರುವುದು ಇದಕ್ಕೆ ಕಾರಣ. ಆದರೆ ರಮ್ಯಾ ಇದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಅಮೆರಿಕನ್ ಗಣ್ಯರೊಬ್ಬರನ್ನು ಆಕೆ ತನ್ನ ಪಾಳಯದಲ್ಲಿ ನಿಯೋಜಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಅದರ ಸಂಕಷ್ಟಕ್ಕೊಳಗಾಗಿರುವ ‘ಯುವರಾಜ’ ರಾಹುಲ್‌ಗಾಂಧಿಗೆ ಇದು ನೆರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.
ನುಡಿದಂತೆ ನಡೆಯುವ ಸತ್ಪಥಿ
ಬೈಜಯಂತ್ ಪಾಂಡ ಸೇರಿದಂತೆ ತನ್ನ ಪಕ್ಷದ ಕೆಲವು ಸಂಸದರು ಬಿಜೆಪಿ ಜೊತೆ ಕೈಜೋಡಿಸಿಕೊಂಡಿರುವ ಈ ಸಮಯದಲ್ಲಿ ಹಿರಿಯ ಸಂಸದ ಹಾಗೂ ಲೋಕಸಭೆಯಲ್ಲಿ ಬಿಜು ಜನತಾದಳದ ಮುಖ್ಯ ಸಚೇತಕರಾಗಿರುವ ತಥಾಗತ ಸತ್ಪಥಿ ಮಾತ್ರ ಇವರಿಗಿಂತ ಭಿನ್ನವಾದ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ. ಹೆಚ್ಚುಕಮ್ಮಿ ಪ್ರತಿಯೊಂದಕ್ಕೂ ಆಧಾರ್ ಕಡ್ಡಾಯಗೊಳಿಸುವ ಕೇಂದ್ರ ಸರಕಾರದ ನಡೆಯನ್ನು ಅವರು ಬಹಿರಂಗವಾಗಿ ಟೀಕಿಸಿದ್ದಾರೆ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ಸರಕಾರವನ್ನು ಅವರು ತೀವ್ರವಾಗಿ ಟೀಕಿಸುತ್ತಾರೆ. ಇದರ ಹೊರತಾಗಿಯೂ ಪಕ್ಷದ ವರಿಷ್ಠ ನವೀನ್ ಪಟ್ನಾಯಕ್ ಅವರು ತನ್ನ ಪಕ್ಷದ ಸದಸ್ಯರಿಗೆ ಪರಸ್ಪರ ಜಗಳವಾಡದಂತೆ ಹಾಗೂ ಬಿಜೆಪಿಯನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಮಹಾಮೈತ್ರಿ ಕೂಟವನ್ನು ತೊರೆದು ಬಿಜೆಪಿಯೊಂದಿಗೆ ನಂಟು ಬೆಳೆಸಿರುವುದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕೂಡಾ ಸತ್ಪಥಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿತೀಶ್ ಹೊಸದಾಗಿ ಜನಾದೇಶ ಪಡೆಯಬೇಕೆಂದು ಅವರು ಹೇಳಿದ್ದಾರೆ. ತಾನು ಯಾವತ್ತೂ ಹೃದಯಾಂತರಾಳದಿಂದ ಮಾತನಾಡುವೆನೆಂದು ಸತ್ಪಥಿ ಹೇಳುತ್ತಾರೆ. ತನ್ನ ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಇವರು ಒಬ್ಬರು ಎನ್ನಬಹುದು.
ಪತ್ರಕರ್ತರ ಕಂಡರೆ ಮಾರು ದೂರ ಓಡುವ ಪ್ರಭು
ಹೊಸದಿಲ್ಲಿಯಲ್ಲಿ ರೈಲು ಭವನದ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಬಗ್ಗೆ ಬೇಸರ,ಕೋಪ ಎರಡೂ ಮೂಡಿದೆ. ಸುರೇಶ್ ಪ್ರಭು ಅವರನ್ನು ಭೇಟಿಯಾಗಲು ತಮಗೆ ಎಲ್ಲಾ ಸಮಯದಲ್ಲೂ ಅವಕಾಶ ದೊರೆಯುತ್ತದೆ. ಆದರೆ ಅವರ ಜೊತೆ ಮಾತನಾಡುವ ಅವಕಾಶ ದೊರೆಯುವುದು ತೀರಾ ಅಪರೂಪವೆಂದು ಪತ್ರಕರ್ತರು ದೂರುತ್ತಿದ್ದಾರೆ. ರೈಲ್ವೆ ಭವನದಲ್ಲಿ ಅಧಿಕೃತ ಕಾರ್ಯಕ್ರಮ ಮುಗಿದ ಕೂಡಲೇ ಸುರೇಶ್ ಪ್ರಭು ತರಾತುರಿಯಿಂದ ನಿರ್ಗ ಮಿಸುತ್ತಾರೆ. ಆ ಮೂಲಕ ತನ್ನನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳುವ ಅವಕಾಶ ‘ಸುದ್ದಿಗಳ ಬೇಟೆಗಾರರಿಗೆ’ ದೊರೆಯದಂತೆ ಮಾಡುತ್ತಿದ್ದಾರೆ. ಜಟಿಲವಾದ ಸನ್ನಿವೇಶಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪ್ರಭು ಅವರ ಅವಸರದ ಯತ್ನಗಳ ಬಗ್ಗೆ ಮಾಧ್ಯಮರಂಗದಲ್ಲಿ ಜೋಕ್‌ಗಳು ಸೃಷ್ಟಿಯಾಗಿವೆ. ಈ ಪೈಕಿ ಒಂದು ಜೋಕ್‌ನಲ್ಲಿ ಪ್ರಭು ಹಾಗೂ ಪತ್ರಕರ್ತರನ್ನು ಸಮಾನಾಂತರದಲ್ಲಿ ಸಾಗುವ ರೈಲ್ವೆ ಹಳಿಗಳಿಗೆ ಹೋಲಿಸಲಾಗಿದೆ. ಏಕೆಂದರೆ, ಈ ಇಂತಹ ಹಳಿಗಳು ಎಲ್ಲೂ ಒಂದುಗೂಡಲಾರವು.
ಭಲ್ಲೆ ಭಲ್ಲೆ ಬಾಗ್ಲೆ
ಪಾಕಿಸ್ತಾನದಲ್ಲಿ ಭಾರತದ ಮಾಜಿ ನಂ.2 ರಾಜತಾಂತ್ರಿಕರಾಗಿದ್ದ ಹಾಗೂ ಕಳೆದ ಕೆಲವು ತಿಂಗಳುಗಳಿಂದ ವಿದೇಶಾಂಗ ಸಚಿವಾಲಯದ ವಕ್ತಾರರಾಗಿರುವ ಗೋಪಾಲ್ ಬಾಗ್ಲೆ ಪ್ರಧಾನಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಹುದ್ದೆಗೆ ಭಡ್ತಿ ಪಡೆದಿರುವುದು, ರಾಜಧಾನಿಯ ಅಧಿಕಾರ ವಲಯದಲ್ಲಿ ಹಲವರನ್ನು ಅಚ್ಚರಿಗೀಡು ಮಾಡಿದೆ. ಸಾಮಾನ್ಯವಾಗಿ ವಿದೇಶಾಂಗ ಸಚಿವಾಲಯದ ವಕ್ತಾರರು ಕನಿಷ್ಠ ಒಂದು ವರ್ಷವನ್ನು ಹಾಗೂ ಹಲವು ಪ್ರಕರಣಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಮಯವನ್ನು ವಿದೇಶಾಂಗ ಕಚೇರಿಯಲ್ಲಿ ಕಳೆಯುವುದು ಸಾಮಾನ್ಯವಾಗಿದೆ.
ಆದರೆ ಬಾಗ್ಲೆ ಅವರಿಗೆ ಪಾಕಿಸ್ತಾನದ ಬಗ್ಗೆ ಅಪಾರ ತಿಳುವಳಿಕೆ ಹಾಗೂ ಪರಿಣಾಮಕಾರಿಯಾದ ಸಾರ್ವಜನಿಕ ಸಂವಹನದಲ್ಲಿ ಅನುಭವವಿದ್ದು, ಇವು ಪ್ರಧಾನಿ ಪಾಲಿಗೆ ಅತ್ಯಂತ ವೌಲ್ಯಯುತವಾದ ಅಸ್ತಿಯೆನಿಸಿದ್ದವು. ಆದಾಗ್ಯೂ ಬಾಗ್ಲೆಗಿದ್ದ ಇನ್ನೊಂದು ನೈಪುಣ್ಯತೆಯು ಅವರನ್ನು ಪ್ರಧಾನಿ ಕಾರ್ಯಾಲಯಕ್ಕೆ ಕರೆತರಲು ಸರಕಾರವು ಉತ್ಸುಕವಾಗುವಂತೆ ಮಾಡಿದೆ. ಮೂಲತಃ ಉತ್ತರಪ್ರದೇಶದವರಾದ ಬಾಗ್ಲೆ, ಹಿಂದಿ ಭಾಷೆಯಲ್ಲಿನ ಸೂಕ್ಷ್ಮತೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ.
ಹಿಂದಿ ಕವಿಗಳ ಕವನದ ಸಾಲುಗಳು ಹಾಗೂ ಸಂತರ ವಾಣಿಗಳನ್ನು ನಿರರ್ಗಳವಾಗಿ ಉಲ್ಲೇಖಿಸಬಲ್ಲರು. ಅಂತಾರಾಷ್ಟ್ರೀಯ ಸಭಿಕರ ಮುಂದೆಯೂ ಹಿಂದಿಯಲ್ಲಿ ಮಾತನಾಡುವುದಕ್ಕೆ ಆದ್ಯತೆ ನೀಡುವ ಮೋದಿ, ತನ್ನ ಭಾಷಣಗಳಿಗೆ ಕವನದ ಸಾಲುಗಳನ್ನು, ಹಿಂದಿ ನಾಣ್ಣುಡಿಗಳ ಮೆರುಗು ನೀಡಲು, ಬಾಗ್ಲೆ ಅವರ ಕೌಶಲ್ಯವು ಅತ್ಯಂತ ಮುಖ್ಯವಾದುದಾಗಿದೆ.
ರಾಷ್ಟ್ರಪತಿ ಭವನದಲ್ಲಿ ಆರೆಸ್ಸೆಸ್ ನಾಯಕರ ಭಾವಚಿತ್ರ?
ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಯ ಬದಲಾವಣೆಯು ಸಾಮಾಜಿಕ ಜಾಲತಾಣದಲ್ಲೂ ಪ್ರತಿಫಲನಗೊಂಡಿದೆ. ರಾಷ್ಟ್ರಪತಿ ಭವನದ ವೆಬ್‌ಸೈಟನ್ನು ಮರುವಿನ್ಯಾಸಗೊಳಿಸಲಾಗಿದೆ. ಸಂಜೆಯೊಳಗೆ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಫೋಟೋಗಳು ವೆಬ್‌ಸೈಟ್‌ನ ಮುಖ್ಯಪುಟದಲ್ಲಿ ಮೂಡಿವೆ. ಸಂಸತ್‌ನಲ್ಲಿ ಅವರು ಮಾಡಿದ ಭಾಷಣವನ್ನು ಕೂಡಾ ಅಪ್‌ಲೋಡ್ ಮಾಡಲಾಗಿದೆ. ಒಂದು ವೇಳೆ ರಾಷ್ಟ್ರಪತಿ ಭವನದ ಅಧಿಕಾರಿಗಳ ಮಾತನ್ನು ನಂಬುವುದಾದರೆ ರಾಷ್ಟ್ರಪತಿ ಭವನದಲ್ಲೂ ಹಲವಾರು ಬದಲಾವಣೆಗಳಾಗಲಿವೆ.
ವಿಶಾಲವಾದ ಈ ಭವನದಲ್ಲಿ ಸ್ವಾತಂತ್ರ ಹೋರಾಟಗಾರರ ಕುರಿತಾದ ವಸ್ತುಸಂಗ್ರಹಾಲಯವಿದೆ ಹಾಗೂ ಹಲವಾರು ಗ್ಯಾಲರಿಗಳಿವೆ. ಆರೆಸ್ಸೆಸ್ ಚಿಂತಕ ಎಂ.ಎಸ್.ಗೋಳ್ವಾಲ್ಕರ್ ಹಾಗೂ ಆರೆಸ್ಸೆಸ್ ಸ್ಥಾಪಕ ಕೆ.ಬಿ.ಹೆಡ್ಗೆವಾರ್ ಅವರ ಭಾವಚಿತ್ರಗಳನ್ನು ರಾಷ್ಟ್ರಪತಿ ಭವನದಲ್ಲಿ ಸ್ಥಾಪಿಸಲು ಆದೇಶಗಳು ಬಂದಿವೆ. ಕೋವಿಂದ್ ಈ ಭಾವಚಿತ್ರಗಳ ಸ್ಥಾಪನೆ ಬೇಡವೆಂದು ಹೇಳುವ ಸಾಧ್ಯತೆಗಳಿಲ್ಲ. ಆದಾಗ್ಯೂ ರಾಷ್ಟ್ರಪತಿ ಭವನದೊಳಗೆ ಈ ಭಾವಚಿತ್ರಗಳನ್ನು ಎಲ್ಲಿ ಸ್ಥಾಪಿಸಲಾಗುತ್ತದೆ ಹಾಗೂ ಅವುಗಳನ್ನು ಸ್ಥಾಪಿಸಿರುವುದಕ್ಕೆ ಸರಕಾರ ಯಾವ ಕಾರಣ ನೀಡುವುದು ಎಂಬುದನ್ನು ಕಾದುನೋಡಬೇಕಾಗಿದೆ.