'ಮೇಘ ಅಲಿಯಾಸ್ ಮ್ಯಾಗಿ' ಹಾಡುಗಳ ಬಿಡುಗಡೆ
'ಜಟ್ಟ' ಚಿತ್ರದ ಮೂಲಕ ಗಟ್ಟಿ ಮಹಿಳಾ ಪಾತ್ರಕ್ಕೆ ಮರುಜೀವ ನೀಡದಿ ಸುಕೃತಾ ವಾಗ್ಲೆ 'ಮೇಘ ಅಲಿಯಾಸ್ ಮ್ಯಾಗಿ'ಯಾಗಿ ಬಂದಿದ್ದಾರೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು.
ಅಮ್ಮ ಮಂಜುಳಾ ಅಕ್ಕ ಮಾಲಾಶ್ರೀಯಾಗಿದ್ದರೆ ಅವರ ತಂಗಿ ಎಂಬಂಥ ಕ್ಯಾರೆಕ್ಟರ್ ಈ ಮ್ಯಾಗಿ. ಆ ಲೆಜೆಂಡ್ ಪಾತ್ರಗಳ ಸಾಲಿನಲ್ಲಿ ನಿಲ್ಲಬೇಕು ಎನ್ನುವ ಪ್ರಯತ್ನ ಮಾಡಲಾಗಿದೆ ಎಂದು ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ವಿವರಿಸಿದರು ನಾಯಕಿ ಸುಕೃತಾ ವಾಗ್ಲೆ. ಮೇಘ ಮತ್ತು ಮ್ಯಾಗಿ ಎಂಬ ಶೀರ್ಷಿಕೆಯ ಪಾತ್ರವಾಗಿರುವ ಅವರದು ಚಿತ್ರದಲ್ಲಿ ದ್ವಿಪಾತ್ರ ಅಲ್ಲವಂತೆ.
'ಅಗಮ್ಯ' ಚಿತ್ರ ನಿರ್ದೇಶಿಸಿದ್ದ ವಿಶಾಲ್ ಪುಟ್ಟಣ್ಣ ಚಿತ್ರದ ಮೂಲಕ ಮರಳಿ ಬಂದಿದ್ದಾರೆ. ಇದರ ಗಂಡುಬೀರಿಯಾಗಿರುವ ಮಹಿಳೆಯಲ್ಲೂ ಪ್ರೀತಿ ಇರುತ್ತದೆ ಎಂಬುದನ್ನು ತೋರಿಸುವ ಚಿತ್ರ ಎಂದು ಹೇಳಿದ ಅವರು, ಇಂಥದೊಂದು ಚಿತ್ರ ಇತ್ತೀಚಿಗಂತೂ ಬಂದಿಲ್ಲ ಎಂದರು. ಕಳಸ, ಕುಂದಾಪುರ ಮೊದಲಾದೆಡೆಗಳಲ್ಲಿ ಚಿತ್ರೀಕರಣ ನಡೆದಿರುವ ಮಾಹಿತಿ ನೀಡಿದರು. ಚಿತ್ರದ ನಾಯಕ ತೇಜ್ ತಮಗಿದು ಪ್ರಥಮ ಚಿತ್ರ ಎಂದರು. ಸಿನಿಮಾ ಪೂರ್ತಿ ಟೆನ್ಷನಲ್ಲಿ ಇರುವಂಥ ಪಾತ್ರ ತಮ್ಮದೆಂದು ಅವರು ಹೇಳಿದರು. ನವನಟಿ ನೀತುಬಾಲ ಮಾತನಾಡಿ, ನಾನು ಮೂಲತಃ ಕೇರಳದವಳು. ಇದು ನನ್ನ ಪ್ರಥಮ ಚಿತ್ರ ಎಂದು ಸ್ಪಷ್ಟ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು.
ನಿರ್ಮಾಪಕ ವಿನಯ್ ಕುಮಾರ್ ಮಾತನಾಡಿ, "ನಾನು ವಾರಕ್ಕೆರಡು ಸಿನಿಮಾ ನೋಡುತ್ತಿರುತ್ತೇನೆ. ಆದರೆ ಇಂಥ ಕತೆ ನೋಡಿದ್ದು ಇದೇ ಪ್ರಥಮ. ಅದೇ ಕಾರಣಕ್ಕೆ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದರು. ಅಂದಹಾಗೆ
ಚಿತ್ರ ಸೆನ್ಸಾರ್ ಗೆ ಹೋಗಿದೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಮಲ್ಲೇಶ್ವರಂನ ಶಾಸಕ
ಸಿಎನ್ ಅಶ್ವಥ್ ನಾರಾಯಣ್, ಹಾಡುಗಳ ಸಿಡಿ ಬಿಡುಗಡೆಗೊಳಿಸಿ" ಚಿತ್ರದ ನಾಯಕರೊಂದಿಗೆ , ತಂತ್ರಜ್ಞರಿಗೂ ಒಳಿತಾಗಲಿ" ಎಂದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾನಿಸಲಾಯಿತು. ಚಿಕ್ಕಮಗಳೂರಿನ ಪಶುವೈದ್ಯಾಧಿಕಾರಿ ಡಾ.ರಮ್ಯಾ, ಮೈಸೂರಿನ ಸ್ವ ಉದ್ಯೋಗದ ಸಾಧಕಿ ಪ್ರೀತಿ, ಭರತನಾಟ್ಯ ಕಲಾವಿದೆ ಪದ್ಮಶ್ರೀ, ಹಾಗೂ ವಿದ್ಯಾರ್ಥಿನಿ ರಂಜನಾ ಮೊದಲಾದವರು ಸನ್ಮಾನಿತರಾದರು. ಚಿತ್ರದ
ಸಂಗೀತ ನಿರ್ದೇಶಕ ಅತಿಶಯ ಜೈನ್ ಪ್ರಾರ್ಥಿಸಿದರು. ಸಾಯಿ ಆಡಿಯೋ ಸಂಸ್ಥೆಯ ದೀಪು ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು.