ಬಸವಣ್ಣನ ಅಗತ್ಯವನ್ನು ಹೇಳುವ ದರ್ಗಾ
ಈ ಹೊತ್ತಿನ ಹೊತ್ತಿಗೆ
ಲಿಂಗಾಯತರು ತಮ್ಮದು ಸ್ವತಂತ್ರ ಧರ್ಮ ಎಂದು ಕೂಗೆಬ್ಬಿಸುತ್ತಿರುವ ಸಂದರ್ಭದಲ್ಲೇ ರಂಜಾನ್ ದರ್ಗಾ ಅವರ ಕೃತಿ ‘ಬಸವಣ್ಣ ಏಕೆ ಬೇಕು?’ ಹೊರ ಬಂದಿದೆ. ಕರ್ನಾಟಕ ಸರಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ಪಡೆದಿರುವ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಸಮಾಜ ವಿಜ್ಞಾನಿಯ ದೃಷ್ಟಿಕೋನವಿರುವ ದರ್ಗಾ ಅವರ ಚಿಂತನೆಗಳ ಕೇಂದ್ರ ಕಾಳಜಿ ಶರಣ ಸಾಹಿತ್ಯ. ಸಮತಾವಾದ ಮತ್ತು ಸೂಫಿ ವಿಚಾರಗಳ ನೆಲೆಯಲ್ಲಿ ವಚನ ಚಳವಳಿಯ ತತ್ವಗಳಿಗೆ ಹೊಸ ಹೊಳಹು ನೀಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ.
ಜಾತಿಭೇದ, ವರ್ಣಭೇದ, ಲಿಂಗಭೇದ ಮತ್ತು ವರ್ಗಭೇದವಿಲ್ಲದ ಸ್ಥಿತಿಯಲ್ಲಿ ಮಾತ್ರ ಪ್ರಜಾಪ್ರಭುತ್ವ ನೆಲೆಗೊಳ್ಳಲು ಸಾಧ್ಯ ಎಂಬುದು ಬಸವಣ್ಣನವರ ದೃಢವಾದ ನಂಬಿಕೆಯಾಗಿತ್ತು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿಯಾಗಿವೆ. ‘ಬಸವಣ್ಣ ಏಕೆ ಬೇಕು?’ ಎಂಬುದನ್ನು ಈ ಕಾಲಮಾನದಲ್ಲಿ ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುತ್ತಾ ಉತ್ತರ ಕಂಡುಕೊಳ್ಳಬೇಕಾಗಿದೆ. ಸುಲಿಗೆಕೋರರು ನಂಬಿಸುವ ಪ್ರಜಾಪ್ರಭುತ್ವದ ಜಾಗದಲ್ಲಿ ಜನರ ಪ್ರಜಾಪ್ರಭುತ್ವ ತರಬೇಕಿದೆ. ಅದಕ್ಕಾಗಿ ಮೊದಲಿಗೆ ಬಸವಣ್ಣನವರು ಆರಂಭಿಸಿದ ಜಾತಿ ವಿನಾಶ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ದರ್ಗಾ ಅವರು ಅಭಿಪ್ರಾಯಪಡುತ್ತಾರೆ. ಈ ಕೃತಿಯಲ್ಲಿ ಮೂರು ದೀರ್ಘ ಅಧ್ಯಾಯಗಳಿವೆ. ಒಂದು ಬಸವಣ್ಣ ಯಾಕೆ ಬೇಕು ಎನ್ನುವುದನ್ನು ಚರ್ಚಿಸಿದರೆ, ಎರಡನೆಯದು, ಬಸವ ಶಾಸನದ ಕುರಿತಂತೆ ವಿವರಿಸುತ್ತದೆ.
ಮೂರನೆಯ ಅಧ್ಯಾಯದ ಹೆಸರು ಪ್ರತಿಜ್ಞೆ. ಈ ಅಧ್ಯಾಯದಲ್ಲಿ ಶರಣರು ಸ್ವೀಕರಿಸುವ ಪ್ರತಿಜ್ಞೆಗಳನ್ನು ಹೇಳಲಾಗಿದೆ. ಮೊದಲ ಅಧ್ಯಾಯದಲ್ಲಿ ಹೇಗೆ ಬಸವಣ್ಣನವರ ಇಷ್ಟಲಿಂಗವು ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಾಯಕ ಜೀವಿಗಳನ್ನು ವಿಮೋಚನೆಗೊಳಿಸಿ ಹೊಸ ಜೀವನವಿಧಾನಕ್ಕೆ ನಾಂದಿ ಹಾಡಿತು ಎನ್ನುವುದನ್ನು ವಿವರಿಸುತ್ತಾರೆ. ಬಸವಣ್ಣನ ವರ್ತಮಾನದ ಅಗತ್ಯವನ್ನು ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ನೆಲೆಯಲ್ಲಿ ಅವರು ಬಿಡಿ ಬಿಡಿಯಾಗಿ ವಿವರಿಸುತ್ತಾರೆ. ಹಾಗೆಯೇ ಎರಡನೆಯ ಅಧ್ಯಾಯದಲ್ಲಿ ಬಸವ ಶಾಸನಗಳು ಹೇಗೆ ತಳಸ್ತರದ ಜನರಿಗೆ ಪೂರಕವಾಗಿದೆ ಎನ್ನುವುದನ್ನು ವಿವರಿಸುತ್ತಾರೆ. ಬಸವಧರ್ಮ ಉಳಿದೆಲ್ಲ ಧರ್ಮಗಳಿಗಿಂತ ಹೇಗೆ ಭಿನ್ನವಾಗಿದೆ ಮತ್ತು ಸ್ವತಂತ್ರವಾಗಿದೆ ಎನ್ನುವುದನ್ನೂ ಅವರು ಚರ್ಚಿಸುತ್ತಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 60 ರುಪಾಯಿ.