ಭಾರತದ ರಾಷ್ಟ್ರೀಯ ಪರಿಕಲ್ಪನೆ
ಈ ಹೊತ್ತಿನ ಹೊತ್ತಿಗೆ
ಪ್ರೊ. ಕೆ. ಎನ್. ಪಣಿಕ್ಕರ್ ಅವರು ಜವಹರಲಾಲ್ ನೆಹರೂ ವಿವಿಯಲ್ಲಿ ಇತಿಹಾಸದ ಪ್ರಾಧ್ಯಾಪಕರಾ ಗಿ ಹಾಗೂ ಸಮಾಜ ವಿಜ್ಞಾನ ವಿಭಾಗದ ಡೀನ್ ಆಗಿ ನಿವೃತ್ತರಾ ದವರು. ಕೇರಳದ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದವರು. ಭಾರತದ ಸಾಂಸ್ಕೃತಿಕ ಮತ್ತು ಬೌದ್ಧಿಕ ಇತಿಹಾಸದ ಕ್ಷೇತ್ರದಲ್ಲಿ ಅವರು ಪ್ರಮುಖ ಆಸಕ್ತಿಯನ್ನು ಹೊಂದಿದ್ದಾರೆ. ‘ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ’ ಪಣಿಕ್ಕರ್ ಅವರ ಮಹತ್ವದ ಕೃತಿಗಳಲ್ಲೊಂದು. ಹಿಂದುತ್ವ ಕೋಮುವಾದದ ಬೆಳವಣಿಗೆಯ ಇತ್ತೀಚಿನ ಸಂದರ್ಭದಲ್ಲಿ ಅವರ ಬರೆದ ಪ್ರಬಂಧಗಳ ಸಂಗ್ರಹ ಈ ಕೃತಿ. ಕೋಮುವಾದ ಹೇಗೆ ತನ್ನದೇ ಬೆಳವಣಿಗೆಗೆ ಪರಿಕರವಾಗಿ ಇತಿಹಾಸ ಮತ್ತು ಸಂಸ್ಕೃತಿ ಕ್ಷೇತ್ರ ವನ್ನು ಬಳಸಿಕೊಳ್ಳುತ್ತದೆ ಎನ್ನುವುದನ್ನು ಈ ಲೇಖನಗಳು ಅವಲೋಕಿಸುತ್ತವೆೆ. ಇಲ್ಲಿರುವ ಪ್ರಬಂಧಗಳು ಸಾಂಸ್ಕೃತಿಕತೆ ಮತ್ತು ರಾಷ್ಟ್ರೀಯತೆಯ ನಡುವಿನ ನಂಟು ಎಂತಹದು ಎನ್ನುವು ದನ್ನು ಸಂಶೋಧಿಸುತ್ತವೆ. ಆ ಚರ್ಚೆಯ ಮೂಲಕ ಭಾರತದ ಪ್ರಜಾಪ್ರಭುತ್ವಕ್ಕೆ ಪೋಷಣೆ ನೀಡುವ ಸಂಯುಕ್ತ ಸಂಸ್ಕೃತಿಯ ಸ್ವರೂಪವನ್ನು ಸ್ಪಷ್ಟಗೊಳಿಸಲು ಯತ್ನಿಸುತ್ತವೆ. ಈ ಕೃತಿಯಲ್ಲಿ ಒಟ್ಟು ಒಂಬತ್ತು ಲೇಖನಗಳಿವೆ. ಅಧ್ಯಾಯ ಒಂದ ರಲ್ಲಿ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆಯ ಕುರಿತಂತೆ ಲೇಖಕರು ಚರ್ಚಿಸುತ್ತಾರೆ. ರಾಷ್ಟ್ರೀಯತೆಯ ಪರವಾದ ಸಾಹಿತ್ಯ, ಪ್ರಾದೇಶಿಕ ಸಂಸ್ಕೃತಿ, ಭೌಗೋಳಿಕ ಮತ್ತು ಅವುಗಳ ಇತಿಹಾಸವನ್ನು, ಅವುಗಳಿಂದ ಪಡೆದ ರೂಪಕಗಳನ್ನು ಆಧಾರ ಮಾಡಿಕೊಂಡು ಅವನ್ನೇ ದೇಶಭಕ್ತಿಯ ಕುರುಹುಗಳಾಗಿ ಬಿಂಬಿಸಿ ಹೇಗೆ ಸಂಭ್ರಮಿಸುತ್ತವೆ ಎನ್ನುವುದನ್ನು ಈ ಅಧ್ಯಾಯದಲ್ಲಿ ವಿವರಿಸುತ್ತಾರೆ. ಸಂಪ್ರದಾಯ, ಆವಿಷ್ಕಾರ ಮತ್ತು ಅಸ್ಮಿತೆ ಅಧ್ಯಾಯದಲ್ಲಿ, ವಸಾಹತು ಭಾರತದಲ್ಲಿ ಮತಧರ್ಮ ಮತ್ತು ಜಾತಿಯ ಸ್ಥಿತಿಗತಿಗಳನ್ನು ವಿವರಿಸುತ್ತಾರೆ. ಸಂಪ್ರದಾಯವೆನ್ನುವುದು ಹೇಗೆ ಗ್ರಂಥಸ್ಥ ಮತ್ತು ಸಾಮಾಜಿಕವಾಗಿ ಬೇರೆ ಬೇರೆ ಯಾಗಿತ್ತು ಎನ್ನುವುದನ್ನು ಆಧಾರ ಸಮೇತ ನಿರೂಪಿಸುತ್ತಾರೆ. ವಸಾಹತು ಕಾಲದ ಮತಧರ್ಮೀಯ ಚಳವಳಿಗಳಿಗೆ ಗ್ರಂಥಗಳಲ್ಲಿ ವಿಧಿಸಿದ್ದ ಸಂಪ್ರದಾಯಗಳನ್ನು ಪ್ರಚುರಪಡಿಸುವುದು ಮತ್ತು ಅವುಗಳನ್ನು ಸಾರ್ವತ್ರಿಕವಾಗಿಸುವುದು ಬಹಳ ಮುಖ್ಯ ಕೆಲಸವಾಗಿತ್ತು. ಪುನರುಜ್ಜೀವನ ಕಾಲದ ಬಹುತೇಕ ಮುಂದಾಳುಗಳು ಒಂದಲ್ಲಾ ಒಂದು ರೀತಿ ಸಂಪ್ರದಾಯವನ್ನು ಬೋಧಿಸಿರುವುದನ್ನು ಪಣಿಕ್ಕರ್ ಪ್ರಸ್ತಾಪಿಸುತ್ತಾರೆ. ಸತಿಯನ್ನು ಕುರಿತ ಚರ್ಚೆಯಲ್ಲಿ ಸುಧಾರ ಣಾವಾದಿಗಳು ಮತ್ತು ಸಂಪ್ರದಾಯವಾದಿಗಳು ಶಾಸ್ತ್ರದೊಳಗಿನ ಸಮರ್ಥನೆಯನ್ನು ಹೇಗೆ ತಮಗೆ ಪೂರಕವಾಗಿ ಬಳಸಿಕೊಂಡರು ಎನ್ನುವುದರ ಕಡೆಗೆ ಅವರು ಬೊಟ್ಟು ಮಾಡುತ್ತಾರೆ. ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಕೃತಿಯ ಪಾತ್ರವನ್ನು ಚರ್ಚಿಸುತ್ತಾ, ರಾಷ್ಟ್ರ ರಚನೆಗೆ ಅಗತ್ಯವಾದ ಮಿಕ್ಕ ಎಲ್ಲ ವಸ್ತು ನಿಷ್ಠ ಸಾಮಗ್ರಿಗಳನ್ನು ಒದಗಿಸಿ ಕೊಟ್ಟರೂ, ಎಷ್ಟೇ ಅಸಮರ್ಪಕವೆನಿಸಿದರೂ, ಅದರೊಂದಿಗೆ ಸಾಂಸ್ಕೃತಿಕ ಸಮಾನತೆಯನ್ನೂ ಸ್ಥಾಪಿಸಿಕೊಂಡಾಗ ಮಾತ್ರ, ಅದು ಒಂದು ರಾಷ್ಟ್ರವಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಡುತ್ತಾರೆ.
ಇಲ್ಲಿರುವ ಲೇಖನಗಳನ್ನು ಕೆ. ಎಸ್. ಪಾರ್ಥಸಾರಥಿ ಅವರು ಕನ್ನಡಕ್ಕೆ ಇಳಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 90 ರೂ.