ದೇಶದ ಸ್ವಾತಂತ್ರಕ್ಕಾಗಿ ಕನವರಿಸಿದ ಇನ್ನೊಬ್ಬ ಅಜ್ಞಾತ ಬೋಸ್ ರಾಷ್ ಬಿಹಾರಿ ಬೋಸ್
ಓರ್ವ ಭಾರತೀಯ ಸ್ವಾತಂತ್ರ ಹೋರಾಟಗಾರನ ಖಾದ್ಯ ಜಪಾನ್ನಲ್ಲಿ ಒಂದು ಸೆನ್ಸೇಶನ್ ಆದ ಕತೆ
ಪತ್ನಿ ತೋಶಿಕಾರೊಂದಿಗೆ ಬೋಸ್.
ಭಾಗ- 2
ನೇತಾಜಿಗೆ ಹೋಲಿಸಿದರೆ, ಜನಪ್ರಿಯ ಇತಿಹಾಸದಲ್ಲಿ ಭಾರತದ ಸ್ವಾತಂತ್ರ ಹೋರಾಟದಲ್ಲಿ ರಾಷ್ ಬಿಹಾರಿ ಬೋಸ್ ವಹಿಸಿದ್ದ ಪಾತ್ರ, ತುಲನಾತ್ಮಕವಾಗಿ, ಅಜ್ಞಾತವಾಗಿಯೇ ಉಳಿದಿದೆ. ಆದರೂ, ಬಹುಮುಖ ವ್ಯಕ್ತಿತ್ವದ ಈ ಸ್ವಾತಂತ್ರ ಹೋರಾಟಗಾರ ತಾನು ಆಯ್ದುಕೊಂಡ ಮನೆಯ ಅಂದರೆ ಜಪಾನಿನ, ಜನತೆಯ ಕಲ್ಪನೆಯಲ್ಲಿ ಪರಿಚಯಿಸಿದ ಚಿಕನ್ಕರಿ ಅಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ.
ಇಂಡೋ-ಕರಿ ಟೋಕಿಯೊ ನಗರದ ಮನೆಮಾತಾದ ಅವಧಿಯ ಉದ್ದಕ್ಕೂ ರಾಷ್ ಬಿಹಾರಿ ಬೋಸ್ ಭಾರತದ ಸ್ವಾತಂತ್ರ ಹೋರಾಟದ ದಿಕ್ಕಿನಲ್ಲಿ ತನ್ನ ಕೆಲಸವನ್ನು ಮುಂದುವರಿಸಿದರು. ‘ಇಂಡಿಯನ್ ಕ್ಲಬ್’ನ ಸ್ಥಾಪನೆಯಿಂದ ಆರಂಭಿಸಿ ತನ್ನ ಬರಹಗಳು ಮತ್ತು ಬ್ರಿಟಿಷ್ ವಿರೋಧಿ ರೇಡಿಯೊ ಪ್ರಸಾರಗಳವರೆಗೆ, ಭಾರತದಲ್ಲಿ ಬ್ರಿಟಿಷ್ ವಸಾಹತು ಆಳ್ವಿಕೆಯನ್ನು ಅಂತ್ಯಗೊಳಿಸಲು ಜಾಗತಿಕ ಬೆಂಬಲ ಪಡೆಯಲಿಕ್ಕಾಗಿ ಅವರು ಅವಿಶ್ರಾಂತವಾಗಿ ದುಡಿದರು. ಉದಾಹರಣೆಗೆ, 1925ರ ಜುಲೈಯಲ್ಲಿ ‘ದಿ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ’ ದಲ್ಲಿ ಬರೆದ ಪತ್ರವೊಂದರಲ್ಲಿ ಅವರು, ಶಾಂಘೈ ನರಮೇಧದಲ್ಲಿ ಸಿಖ್ ಪೊಲೀಸರ ನಿಯೋಜನೆಯನ್ನು ಬಲವಾಗಿ ಖಂಡಿಸಿದರು. ಅದನ್ನು (ಸಿಖ್ಖರ ನಿಯೋಜನೆಯನ್ನು) ಭಾರತೀಯ ಮಾನವ ಶಕ್ತಿಯ ವಸಾಹತುಶಾಹಿ ದುರ್ಬಳಕೆಯ ಇನ್ನೊಂದು ಉದಾಹರಣೆ ಎಂದು ಬಲವಾಗಿ ವಾದಿಸುತ್ತ ಅವರು ಹೀಗೆ ಬರೆದರು: ‘‘ಎಲ್ಲಿಯವರೆಗೆ ಭಾರತ ಬ್ರಿಟನಿನ ನಿಯಂತ್ರಣದಲ್ಲಿರುತ್ತದೋ, ಅಲ್ಲಿಯವರೆಗೆ ದುರ್ಬಲ ರಾಷ್ಟ್ರಗಳ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿ ಸುರಕ್ಷಿತವಲ್ಲ ಮತ್ತು ವಿಶ್ವದಲ್ಲಿ ಎಂದೆಂದಿಗೂ ಶಾಂತಿ ನೆಲೆಸಲಾರದು... ಆದ್ದರಿಂದ ಭಾರತದ ಸ್ವಾತಂತ್ರ ಭಾರತೀಯರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ; ಅದು ಇಡೀ ವಿಶ್ವಕ್ಕೆ ಸಂಬಂಧಿಸಿದ ವಿಷಯ...’’
ಭಾರತದಲ್ಲಿ ನಡೆಯುತ್ತಿದ್ದ ಚಳವಳಿಗಳನ್ನು ವಿಶೇಷವಾಗಿ ಗಾಂಧಿ ಮತ್ತು ಸುಭಾಶ್ಚಂದ್ರ ಬೋಸ್ರವರ ನಡೆಯನ್ನು, ಸೂಕ್ಷ್ಮವಾಗಿ ಅವರು ಗಮನಿಸುತ್ತಿದ್ದರು. ಅವರು ಗಾಂಧಿಯವರ ವಿಚಾರ ಹಾಗೂ ತ್ಯಾಗ ಮನೋಭಾವ ವನ್ನು ಮೆಚ್ಚಿದರಾದರೂ, ‘ಇಂದಿನ ವ್ಯಕ್ತಿ’ (ಪರ್ಸನ್ ಆಫ್ ಟುಡೇ) ಎಂದು ಅವರು ವಿವರಿಸಿದ ಯುವ ನಾಯಕ ಸುಭಾಶ್ಚಂದ್ರ ಬೋಸ್ರವರ ಬಗ್ಗೆ ಹೆಚ್ಚು ಪ್ರಭಾವಿತರಾಗಿದ್ದರು.
ದ್ವಿತೀಯ ಮಹಾಯುದ್ಧ ಆರಂಭವಾಗಿ, ಬಳಿಕ 1942ರಲ್ಲಿ ಸಿಂಗಾಪುರ ಜಪಾನ್ನ ಕೈವಶವಾದಾಗ ನೈಋತ್ಯ ಏಷ್ಯಾದಲ್ಲಿ ಸುಮಾರು 32,000 ಮಂದಿ ಭಾರತೀಯ ಯುದ್ಧ ಕೈದಿಗಳಿದ್ದರು. ಸಿಂಗಾಪುರದ ಉಸ್ತುವಾರಿ ವಹಿಸಿಕೊಂಡಿದ್ದ ಮೇಜರ್ ಫುಜಿವಾರಾ, ತಾನು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತನ್ನಿಂದಾಗುವ ಎಲ್ಲ ನೆರವು ನೀಡುವುದಾಗಿ ಈ ಭಾರತೀಯ ಸೈನಿಕರಿಗೆ ಆಶ್ವಾಸನೆ ನೀಡಿದ್ದ.
ಜಪಾನೀಯರ ನೆರವು ಪಡೆದು ಭಾರತವನ್ನು ಬಂಧಮುಕ್ತ ಗೊಳಿಸುವ ಈ ಸೈನಿಕರ ಗುರಿ ಸಾಧಿಸಲು ಅವರಿಗೆ ನೆರವಾಗುವು ದಕ್ಕಾಗಿ ಬಿಹಾರಿ ಬೋಸ್ ಟೋಕಿಯೊ ತೊರೆದು ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಿದರು. ಬ್ರಿಟಿಷರ ವಿರುದ್ಧವಾಗಿ ಕ್ರಾಂತಿಕಾರಕ ದಂಗೆಯನ್ನು ಏಕತ್ರಗೊಳಿಸಲು ‘ಇಂಡಿ ಯನ್ ಇಂಡಿಪೆಂಡೆನ್ಸ್ ಲೀಗ್’ ಎನ್ನುವ ಸಂಘಟನೆಯನ್ನು ಅವರು ಸ್ಥಾಪಿಸಿದ್ದು ಇಲ್ಲಿಯೇ. ಐಎನ್ಎ ಆ ಲೀಗ್ನ ಮಿಲಿಟರಿ ಅಂಗವಾಗಿತ್ತು. ಅಲ್ಲದೆ ಸ್ವಾತಂತ್ರ ಹೋರಾಟಕ್ಕೆ ಸೇರಿಕೊಳ್ಳುವಂತೆ ಅವರು ಮಲಯಾ, ಚೀನಾ, ಜಪಾನ್ ಮತ್ತು ಥಾಯ್ಲೆಂಡ್ನ ಭಾರತೀಯ ಪ್ರತಿನಿಧಿಗಳನ್ನು ಆಹ್ವಾನಿಸಿದರು.
1943ರ ಮೇ ತಿಂಗಳಲ್ಲಿ ಅವರು (ಬರ್ಲಿನ್ನಿಂದ ರಹಸ್ಯ ವಾದ ಒಂದು ಸಬ್ಮೆರಿನ್ ಪ್ರಯಾಣದ ಮೂಲಕ ಜಪಾನ್ ತಲುಪಿದ್ದ) ಸುಭಾಶ್ಚಂದ್ರಬೋಸ್ರನ್ನು ಮೊದಲ ಬಾರಿ ಭೇಟಿಯಾಗಿ ಬಂಗಾಲಿ ಭಾಷೆಯಲ್ಲಿ ನಿರರ್ಗಳ ವಾಗಿ ಸಂಭಾಷಣೆ ನಡೆಸಿದರು. ಒಂದು ತಿಂಗಳ ಬಳಿಕ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ನ ನಾಯಕತ್ವವನ್ನು ಅವರು ಆಕರ್ಷಕ ವ್ಯಕ್ತಿತ್ವದ ತನ್ನ ಕಿರಿಯ ಸಹೋದರ ಬೋಸ್ರವರಿಗೆ ಹಸ್ತಾಂತರಿಸಿದರು.
1944ರಲ್ಲಿ, ಬೋಸ್ರವರು ತೀವ್ರ ಸ್ವರೂಪದ ಶ್ವಾಸಕೋಶಗಳ ಸಮಸ್ಯೆಗೆ ಗುರಿಯಾದರು. ಇದರಿಂದ ಅವರು ಮತ್ತೆಂದೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿಲ್ಲ. ಅವರನ್ನು ಟೋಕಿಯೊದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ತನ್ನ ಮಾತೃಭೂಮಿಯ ವಿಮೋಚನೆಯ ಸುದ್ದಿಗಾಗಿ ಭರವಸೆಯಿಂದ ಕಾಯುತ್ತ, ಐಎನ್ಎಯ ಮುನ್ನಡೆಯ ಬಗ್ಗೆ ಪ್ರಸಾರವಾಗುವ ರೇಡಿಯೋ ಪ್ರಸಾರವನ್ನು ಆಲಿಸುತ್ತ ಸಮಯ ಕಳೆಯುತ್ತಿದ್ದರು. ದುಃಖದ ವಿಷಯವೆಂದರೆ, ಭಾರತ ಸ್ವತಂತ್ರಗೊಳ್ಳುವ ಎರಡು ವರ್ಷಗಳ ಮೊದಲು, 1945ರ ಜನವರಿಯಲ್ಲಿ ಅವರು ನಿಧನರಾದರು.
ಬೋಸ್ ಆಸ್ಪತ್ರೆಯಲ್ಲಿ ಕಳೆದ ಕೊನೆಯ ವಾರಗಳ ಬಗ್ಗೆ ಒಂದು ದೃಷ್ಟಾಂತ ಕತೆ ಇದೆ.
ಅವರ ಹಸಿವಿನ ಬಗ್ಗೆ ವೈದ್ಯರು ಪ್ರಶ್ನಿಸಿದಾಗ ಬೋಸ್ ಹೇಳಿದರು. ‘‘ನಾನು ಅತ್ಯಂತ ಆಸೆಪಡುವ ಆಹಾರ ಸೇವಿಸಲು ದಾದಿಯರು ಅವಕಾಶ ನೀಡದಿರುವಾಗ ನನಗೆ ಹಸಿವಾಗಲು ಹೇಗೆ ಸಾಧ್ಯ’’
‘‘ಏನದು?’’ ವೈದ್ಯರು ಕೇಳಿದರು. ಆ ಪ್ರಶ್ನೆಗೆ ಉತ್ತರ ಬೇರೆ ಏನೂ ಅಲ್ಲ; ಖಂಡಿತವಾಗಿಯೂ ಅದೇ ‘ನಕಮುದಾಯ’ದ ಇಂಡಿಯನ್ ಕರಿ!
ನೇತಾಜಿಗೆ ಹೋಲಿಸಿದರೆ, ಜನಪ್ರಿಯ ಇತಿಹಾಸದಲ್ಲಿ ಭಾರತದ ಸ್ವಾತಂತ್ರ ಹೋರಾಟ ದಲ್ಲಿ ರಾಷ್ ಬಿಹಾರಿ ಬೋಸ್ ವಹಿಸಿದ್ದ ಪಾತ್ರ, ತುಲನಾತ್ಮಕವಾಗಿ, ಅಜ್ಞಾತವಾಗಿಯೇ ಉಳಿದಿದೆ. ಆದರೂ, ಬಹುಮುಖ ವ್ಯಕ್ತಿತ್ವದ ಈ ಸ್ವಾತಂತ್ರ ಹೋರಾಟಗಾರ ತಾನು ಆಯ್ದುಕೊಂಡ ಮನೆಯ ಅಂದರೆ ಜಪಾನಿನ, ಜನತೆಯ ಕಲ್ಪನೆಯಲ್ಲಿ ಪರಿಚಯಿಸಿದ ಚಿಕನ್ಕರಿ ಅಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ.
ಬೋಸ್ ಸ್ಥಾಪಿಸಿದ್ದ ಬಳಿಕ ಪ್ರಸಿದ್ಧವಾದ, ರೆಸ್ಟೋರೆಂಟ್ ಬಗ್ಗೆ ಹೇಳುವುದಾದರೆ, ಅದಿನ್ನೂ ರೆಂಜುಕುವಿನಲ್ಲಿ ತನ್ನ ಮೂಲ ಸ್ಥಾನದಲ್ಲೇ ಇದೆ. ಅಲ್ಲಿ ಸೊಮಾ ಕುಟುಂಬ ಮತ್ತು ಅದು ಆಶ್ರಯ ನೀಡಿದ್ದ ಭಾರತೀಯ ಕ್ರಾಂತಿಕಾರಿಯ ಫೋಟೊಗಳಿಂದ ಅಲಂಕೃತವಾಗಿರುವ ಒಂದು ಹಜಾರ ಇದೆ.
ನೀವು ಯಾವತ್ತಾದರೂ ಟೋಕಿಯೊಗೆ ಹೋದರೆ, ಈ ಐತಿಹಾಸಿಕ ರೆಸ್ಟೋರೆಂಟ್ಗೆ ಭೇಟಿ ನೀಡಲು ಮರೆಯಬೇಡಿ. ಎಷ್ಟೆಂದರೂ, ‘‘ಪ್ರೇಮ ಮತ್ತು ಕ್ರಾಂತಿಯ ರುಚಿ’’ಯನ್ನು ಅಲ್ಲಿ ಅಲ್ಲದೆ ಬೇರೆ ಇನ್ನೆಲ್ಲಿ ತಾನೆ ನೀವು ಸವಿಯಲು ಸಾಧ್ಯ?
ಕೃಪೆ: thebetterindia.com