ಗದಗದಲ್ಲಿ ಬರಗಾಲದ ಕರಾಳ ಛಾಯೆ
ಮರೀಚಿಕೆಯಾದ ಮುಂಗಾರು
► ಮುಗಿಲಿನತ್ತ ಮುಖ ಮಾಡಿದ ಅನ್ನದಾತ ► ಸಂಪೂರ್ಣ ಬೀಜ ಕಾಣದ ಭೂತಾಯಿ ಒಡಲು
ಗದಗ, ಆ.4: ಮುಂಗಾರು ಮಳೆಯ ಭರವಸೆಯಲ್ಲಿ ಭೂಮಿ ಕಾದು ಕುಳಿತಿದೆ. ಈತನಕ ಮಳೆರಾಯ ತನ್ನ ಮುನಿಸು ಮಾತ್ರ ಮುರಿದಿಲ್ಲ. ಜಿಲ್ಲೆಯಲ್ಲಿ ಸಮರ್ಪಕ ಮಳೆ ಮಾತ್ರ ಮರೀಚಿಕೆಯಾಗಿದೆ. ಇದರಿಂದ ಮತ್ತೆ ಜಿಲ್ಲೆಯಲ್ಲಿ ಬರಗಾಲದ ಕರಾಳ ಛಾಯೆ ಮುಂದುವರಿಯುತ್ತಲೆ ಇರುವಂತಹ ವಾತಾವರಣ ಗೋಚರಿಸುತ್ತಿದೆ. ಇದರ ಪರಿಣಾಮ ಕೃಷಿ ಇಲಾಖೆಯ ಬಿತ್ತನೆ ಗುರಿ ಸಾಧನೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿನ ಮಳೆಯ ಕೊರತೆಯಿಂದ ಅನ್ನದಾತ ಮತ್ತೆ ಮುಗಿಲಿನತ್ತ ಮುಖ ಮಾಡುವಂತಾಗಿದೆ.
ಹೌದು. ಇದು ಗದಗ ಜಿಲ್ಲೆಯಲ್ಲಿ ಕಂಡುಬರುವ ಭೂತಾಯಿಯ ಆರ್ಥನಾದ. ಗದಗ ಜಿಲ್ಲೆಯಾದ್ಯಂತ ಕಳೆದ 4 ವರ್ಷಗಳಿಂದ ಭೀಕರ ಬರಗಾಲ ತಾಂಡವಾಡುತ್ತಿದೆ. ಆದರೆ ಈ ಬಾರಿ ಹಿಂದಿನ ವರ್ಷಗಿಂತಲೂಅಧಿಕ ಭೀಕರತೆ ಜಿಲ್ಲೆಯಲ್ಲಿ ತಲೆದೋರಿದೆ. ಒಂದೆಡೆ ಬೆಳೆ ಇಲ್ಲದ ಜಮೀನು, ಮತ್ತೊಂದೆಡೆ ಮಳೆಗಾಗಿ ಮುಗಿಲಿನತ್ತ ಮುಖಮಾಡಿದ ರೈತ. ಈ ಪರಿಸ್ಥಿತಿಯಲ್ಲಿ ರೈತನ ಬದುಕು ಕಾಣುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ಗದಗ ತಾಲೂಕು ಸೇರಿದಂತೆ ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ ತಾಲೂಕುಗಳಲ್ಲಿಯೂ ಬರದ ಭೀಕರತೆ ವ್ಯಾಪಕವಾಗಿ ತಟ್ಟಿದೆ. ಬಾರದ ಮಳೆಯಿಂದಾಗಿ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಕೆಲ ರೈತರು ಮಳೆರಾಯನ ನಂಬಿ ತಮಗಿದ್ದ ಅಲ್ಪ ಭೂಮಿಯಲ್ಲೇ ತಮ್ಮ ಬಿತ್ತನೆ ಕಾರ್ಯ ಮುಗಿಸಿದ್ದಾರೆ.
ಮಳೆ ಇಲ್ಲದ ಕಾರಣ ಬೆಳೆ ಬೆಳೆಯದೆ, ಅಲ್ಲಿಯೇ ಕುಂಠಿತಗೊಂಡಿವೆ. ಅಲ್ಲದೆ, ಬಹುತೇಕ ರೈತರ ಜಮೀನುಗಳು ಈಗಲು ಖಾಲಿ-ಖಾಲಿಯಾಗಿವೆ. ಈಗಲೂ ಬಿತ್ತನೆ ಕಾರ್ಯಗೊಳ್ಳದೆ ಬರಿದಾದ ಭೂತಾಯಿಯ ಒಡಲು ಕಂಡು, ರೈತರು ಮಮ್ಮಲ ಮರಗುವಂತಾಗಿದೆ. ಸದ್ಯ ಈ ದಿನಗಳಲ್ಲಿ ಏನು ಮಾಡಬೇಕು ಎನ್ನುವುದು ಸಹ ರೈತರಿಗೆ ತೋಚದಂತಾಗಿದೆ. ಗದಗ ಜಿಲ್ಲೆಯಲ್ಲಿ ವಾಡಿಕೆ ಯಂ ತೆ 267 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈತನಕ ಕೇವಲ 152 ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಶೇ.43ರಷ್ಟು ಮಳೆಯ ಕೊರತೆ ಈ ಬಾರಿ ಎದುರಾಗಿದೆ.
ಇನ್ನು ಬಿತ್ತನೆಗೆ ಸಂಬಂಧಿ ಸಿದಂತೆ ಈಗಾಗಲೇ ಸುಮಾರು 2,39,700 ಹೆಕ್ಟೇರ್‌ನಷ್ಟು ಗುರಿ ಹೊಂದಲಾಗಿತ್ತು. ಆದರೆ ಇದರಲ್ಲಿ ಕೇವಲ 1,18,000 ಹೆಕ್ಟೇರ್‌ನಷ್ಟು ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಇಡೀ ಜಿಲ್ಲೆಯಲ್ಲಿ ಶೇ.46ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಲಾಗಿದೆ.
ಹೀಗಾಗಿ ಗದಗ ಜಿಲ್ಲೆಯಾದ್ಯಂತ ಶೇ.54ರಷ್ಟು ಪ್ರದೇಶ ಇನ್ನು ಬಿತ್ತನೆಯಾಗದೇ ಖಾಲಿಯಾಗಿ ಉಳಿದುಕೊಂಡಿವೆ. ಒಟ್ಟಾರೆ ಜಿಲ್ಲೆಯಲ್ಲಿ ಕಳೆದ ವರ್ಷ ಈ ಸಮಯಕ್ಕಾಗಲೇ ಶೇ.80ರಷ್ಟು ಪ್ರದೇಶ ಬಿತ್ತನೆ ಕಾರ್ಯ ಸಂಪೂರ್ಣ ಮುಗಿದಿತ್ತು. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಿಂದೆಗಿಂತಲೂ ಈ ವರ್ಷ ಭೀಕರ ಬರಗಾಲ ತಲೆದೋರಿದಂತಾಗಿದೆ. ರೈತನೊಂದಿಗೆ ಕೃಷಿ ಇಲಾಖೆಯು ಸಹ ನಿರಾಸೆಗೆ ತುತ್ತಾಗಿದೆ. ಅಲ್ಪಸ್ವಲ್ಪ ಬೆಳೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಕೂಡ ತೇವಾಂಶ ಕೊರತೆಯಿಂದ ಬಳಲುತ್ತಿವೆ. ಮಳೆ ಇಲ್ಲದೆ ಬಾಡುತ್ತಿರುವ ಬೆಳೆ ನೋಡಲಾಗದೇ ಕೆಲವೆಡೆ ರೈತರು ಅನಿವಾರ್ಯವಾಗಿ ಜಮೀನು ಹರಗುತ್ತಿದ್ದಾರೆ. ಸಾಲ ಮಾಡಿ ಬಿತ್ತಿದ ಬೀಜ ಸಸಿ ಹಂತದಲ್ಲೇ ಒಣಗಿ ಹೋಗಿ ರೈತರಲ್ಲಿ ಆತಂಕಗೊಳಿಸಿವೆ. ಹಾಗೇ ನೋಡುವುದಾದರೆ ಜಿಲ್ಲೆಯ ಕೃಷಿ ಯೋಗ್ಯ ಭೂಮಿಗಳಲ್ಲಿ ಈಗಾಗಲೇ ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ಹಸಿರಿನಿಂದ ನಳನಳಿಸಬೇಕಿತ್ತು.ಆದರೆ ಕನಿಷ್ಠ ಮಳೆ ನಡುವೆಯೇ ಬಿತ್ತನೆಯಾಗಿದ್ದ ಹೆಸರು ಬೆಳೆಗೆ ಈಗ ಮಳೆ ಕೊರತೆಯೊಂದಿಗೆ ಹಳದಿ ರೋಗಕ್ಕೆ ತುತ್ತಾಗುತ್ತಿದೆ. ಮಳೆ ಅವಕೃಪೆಯಿಂದ ಅಲ್ಪ ಸ್ವಲ್ಪಬೆಳೆದ ಹೆಸರು ಪ್ರಸಕ್ತ ವರ್ಷವೂ ಕೈಕೊಡುವ ಲಕ್ಷಣ ಗೋಚರಿಸುತ್ತಿದೆ.
ಇನ್ನು ಹಲವು ವರ್ಷಗಳಿಂದ ನೀರಿನ ದಾಹದಿಂದ ಬಾಯ್ದೆರೆದು ಕುಳಿತ ಭೂತಾಯಿ, ತನ್ನನ್ನೆ ನಂಬಿದ ತನ್ನ ಮಕ್ಕಳಿಗೆ ಅನ್ನ ನೀಡದಂತಹ ಸ್ಥಿತಿಗೆ ಬಂದಿದ್ದಾಳೆ. ವರ್ಷದಿಂದ ವರ್ಷಕ್ಕೆ ರೈತನ ಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕುತ್ತಿದೆ.
ಸಾಲ ಮಾಡಿ, ಬೀಜ-ಗೊಬ್ಬರ ತಂದು ಹಾಕಿದ್ದೇವು. ಆದರೆ ಮಳೆರಾಯ ಈ ಬಾರಿ ಮುನಿಸಿಕೊಂಡಿದ್ದಾನೆ. ಒಂದು ಹೊತ್ತಿನ ಊಟಕ್ಕೂ ಸಮಸ್ಯೆಯಾಗಿದೆ. ಹೀಗೆ ಮುಂದುವರಿದಲ್ಲಿ ದನಕರಗಳ ಸ್ಥಿತಿ ಚಿಂತಾಜನಕವಾಗಲಿದೆ.
- ಹಾಸಿಂಸಾಬ್, ರೈತ
ಶೇ.3ರಷ್ಟು ಮಳೆ ಕೊರತೆ!
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರು ತೀವ್ರ ಸಂಕಷ್ಟದ ಪರಿಸ್ಥಿತಿ ತಂದೊಡ್ಡಿದೆ. ಜಿಲ್ಲೆಯ ವಾಡಿಕೆ ಪ್ರಮಾಣದ ಮಳೆಯಲ್ಲಿ ಶೇ.3ರಷ್ಟು ಕೊರತೆಯಾಗಿದೆ.ರೋಹಿಣಿ, ಮೃಗಶಿರಾ, ಆರಿದ್ರಾ, ಕೃತಿಕಾ ಸೇರಿದಂತೆ ಪ್ರಮುಖ ಮಳೆ ನಕ್ಷತ್ರಗಳೇ ಈ ಬಾರಿ ಕೈ ಕೊಟ್ಟಿವೆ. ಪ್ರಸಕ್ತ ಜನವರಿ 1ರಿಂದ ಜು.3ರವರೆಗಿನ ಜಿಲ್ಲೆಯ ಾಡಿಕೆ ಪ್ರಮಾಣದ ಮಳೆ 27ಮಿ.ಮೀ. ಎದುರು ಕೇವಲ 12 ಮಿ.ಮೀ. ಮಾತ್ರ ಮಳೆಯಾಗಿದೆ.