varthabharthi


ತಾರಸಿ ನೋಟ

ನಮ್ಮ ಯೋಚನೆಗಳಲ್ಲಿ ಅವರ ಹಿತವೂ ಇರಲಿ!

ವಾರ್ತಾ ಭಾರತಿ : 5 Aug, 2017
ವೆಂಕಟಲಕ್ಷ್ಮಿ ವಿ.ಎನ್

ಕೂತು ಇದನ್ನು ಬರೆಯುತ್ತಿರುವಾಗ, ಗೃಹಕೃತ್ಯದ ‘ನಿತ್ಯ ಕರ್ಮ’ಗಳೆಲ್ಲ ಒಂದು ಹದಕ್ಕೆ ಬಂದಿವೆ ಎಂದಾದರೆ, ಮನಸ್ಸಿಗೆ ನಿರಾಳ: ತಿಕ್ಕಿ ಒರೆಸಿದ ನೆಲ ನಿರ್ಮಲವಾಗಿ ಥಳಥಳಿಸುತ್ತಿದೆ. ಬೆಳಗಿದ ಭಾಂಡೆಗಳು ತಾಜಾತನ ತುಂಬಿಕೊಂಡಿವೆ. ಸಿಂಕ್‌ನಲ್ಲಿ ಮುಸುರೆ ಇಲ್ಲ. ಬಕೆಟ್‌ನಲ್ಲಿದ್ದ ಮಲಿನ ವಸ್ತ್ರಗಳು ಯಾವುದೋ ಜಾಹೀರಾತಿನಲ್ಲಿ ಬರುವಂತೆ, ತಂತಿಗೆ ಜಿಗಿದು ಸಾಲಿನಲ್ಲಿ ಪರಸ್ಪರ ಕುಶಲ ಕೇಳಿಕೊಳ್ಳುತ್ತಿವೆ.

ಇನ್ನು ನಾಲ್ಕಾರು ಗಂಟೆ ನಿಶ್ಚಿಂತೆ; ನಮ್ಮ ವಂದನೆಗಳು ಆಕೆಗೆ ಸಲ್ಲಲಿ! ನಂಜಮ್ಮ, ಸಾಕಮ್ಮ, ಬಸಮ್ಮ ಹೆಸರಿನ ಮಹಿಳೆಯರು ನಮ್ಮ ಮನೆಗಳಲ್ಲಿ ದುಡಿಯುತ್ತಿದ್ದುದರ ನೆನಪು ನಮ್ಮ ಬಾಲ್ಯದೊಂದಿಗೇ ಹೆಣೆದುಕೊಂಡಿದೆ. ಕೆಲಸ ಮುಗಿದ ಮೇಲೆ ಅಮ್ಮ-ಅಜ್ಜಿ-ಅತ್ತೆಯರೊಂದಿಗೆ ಅವರ ಆಪ್ತ ಸಂವಾದ ಒಂದಷ್ಟು ಹೊತ್ತು ನಡೆಯುತ್ತಿತ್ತು. ತಾರುಣ್ಯಾವಸ್ಥೆಗೆ ಬರುತ್ತಿರುವ ಮನೆ ಮಕ್ಕಳೊಂದಿಗೆ ಸ್ನೇಹ ಸಲುಗೆ, ಚಿಣ್ಣರೊಂದಿಗೆ ಆಟಕ್ಕೂ ಸಮಯ ಹೊಂದಿಸಿಕೊಳ್ಳುತ್ತಿದ್ದರು. ತಮ್ಮ ಮಕ್ಕಳನ್ನು ಆಗಾಗ ಕರೆತರುತ್ತಿದ್ದರು. ಹೊಸದಾಗಿ ಬಂದ ನೆರೆಯೊಂದಿಗೆ ಅಮ್ಮ, ಆಕೆಯ ಪ್ರಾಮಾಣಿಕತೆ, ಶುದ್ಧ ಹಸ್ತ ಕುರಿತು ಮನದುಂಬಿ ಹೇಳುತ್ತಿದ್ದಳು. ಇನ್ನೊಂದಷ್ಟು ಮನೆ ಸಿಕ್ಕರೆ ಇನ್ನಷ್ಟು ಕಷ್ಟ ಪರಿಹಾರವಾಗುತ್ತೆ ಎಂದು ಮರುಗುತ್ತ ಅವರೂ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದಳು. ಹಬ್ಬ ಹರಿದಿನಗಳಲ್ಲಿ ಸೀರೆ-ಉಡುಪುಗಳನ್ನು ಆಕೆಗೆ ಕೊಡಲು ಜೋಡಿಸಿಡುತ್ತಿದ್ದಳು...

 ಹಳ್ಳಿ-ಪಟ್ಟಣಗಳಲ್ಲಿ ಕಾಣಸಿಗುತ್ತಿದ್ದ ಈ ಸೌಹಾರ್ದ, ಶಹರದ ಚಿಕ್ಕಪ್ಪ, ಅಣ್ಣ, ಸೋದರ ಮಾವ ಮುಂತಾದವರ ಮನೆಗಳಿಗೆ ಹೋದಾಗ ಒಂದೋ ಇನ್ನೂ ವೃದ್ಧಿಸಿದಂತೆ ಕಾಣುತ್ತಿತ್ತು ಅಥವಾ ಮುಗುಂ ಆಗಿರುತ್ತಿತ್ತು. ಶಿಸ್ತಾಗಿ ಜಡೆ ಹೆಣೆದು, ಹೂ ಮುಡಿದು, ಒಳ್ಳೆಯ ಸೀರೆ ಉಟ್ಟು ಬರುತ್ತಿದ್ದ ಬಾಯಿ ಧಡಬಡ ಮಾಡುತ್ತ ಮನೆಯೊಡತಿಯೊಂದಿಗೆ ಬೇಕಾದಷ್ಟೇ ಮಾತಾಡುತ್ತಿದ್ದಳು ಅಥವಾ ಸ್ನೇಹಮಯಿಯಾಗಿ ಮಾರುಕಟ್ಟೆಗೆ ಹೋಗಲೂ ಜತೆ ಕೊಡುತ್ತಿದ್ದಳು. ವಿವಾಹದ ತನಕ ಗ್ರಾಮ ವಾಸಿಗಳಾಗಿದ್ದು, ಮದುವೆಯಾಗಿ ದಿಢೀರನೆ ಮಾಯಾನಗರಿಯ ಅಖಾಡಾಕ್ಕೆ ಬಿದ್ದ ನಮ್ಮ ಬಂಧುವರ್ಗದ ಎಳೆ ಗೃಹಿಣಿಯರಿಗೆ ಎಷ್ಟೋ ಧೈರ್ಯ.

ಆತ್ಮೀಯತೆಯ ಸುರಕ್ಷಾ ಚಕ್ರ. ಸಮವಯಸ್ಕರಾಗಿದ್ದರೆ ಅದಕ್ಕಿಂತ ಹೆಚ್ಚಾಗಿ ಸಮಾನ ಮನಸ್ಕರಾಗಿದ್ದರೆ ಇಬ್ಬರೂ ಕೂಡಿ ಸಿನೆಮಾಕ್ಕೂ ನುಗ್ಗುತ್ತಿದ್ದರು. ಡೊಮೆಸ್ಟಿಕ್ ಹೆಲ್ಪ್, ಹೌಸ್ ಅಸಿಸ್ಟೆಂಟ್ ಮುಂತಾಗಿ ಇತ್ತೀಚೆಗೆ ಕರೆಸಿಕೊಳ್ಳುತ್ತಿರುವ ಮನೆಗೆಲಸದಾಕೆ, ಬಹುಪಾಲು ಗೃಹಿಣಿಯರ ಹಾಗೂ ಎಲ್ಲ ಉದ್ಯೋಗಸ್ಥ ಮಹಿಳೆಯರ ಬೆಂಬಲ ವ್ಯವಸ್ಥೆ-ಸಪೋರ್ಟ್ ಸಿಸ್ಟಮ್‌ನ ಅವಿಭಾಜ್ಯ ಅಂಗ. ಉನ್ನತ ಅಧಿಕಾರದಲ್ಲಿರುವ ವರಿಷ್ಠೆಯರಿಂದ ಹಿಡಿದು ಸಾಧಾರಣ ಕೆಲಸದಲ್ಲಿರುವವರ ತನಕ ಎಲ್ಲರಿಗೂ ಅಂಥದೊಂದು ಆತುಗೋಡೆ ಬೇಕು. ಆದರೆ ಅಲ್ಲೊಂದು ಪರಸ್ಪರ ಅವಲಂಬನೆಯ, ಮಾನವೀಯ ಸಂಬಂಧ ನೆಲೆಗೊಂಡಾಗ ಮಾತ್ರ ಅದು ಸಹ್ಯ ಹಾಗೂ ಹಿತಕರ. ಹೊಟ್ಟೆಪಾಡಿಗಾಗಿ ಇನ್ನೊಬ್ಬರ ಮನೆ ಕೆಲಸ ಮಾಡಲು ಬಂದವರನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುವ ನಿದರ್ಶನಗಳು ಆಗಾಗ ಬೆಳಕಿಗೆ ಬರುತ್ತವೆ; ಬೆಚ್ಚಿಬೀಳಿಸುತ್ತವೆ. ನಮ್ಮ ಹೆಗಲು ಮುಟ್ಟಿನೋಡಿಕೊಳ್ಳಲೂ ಪ್ರೇರೇಪಿಸುತ್ತವೆ.

ವ್ಯತಿರಿಕ್ತವಾಗಿ, ಸಹಾಯಕಿಗೆ ಹೆಜ್ಜೆ ಹೆಜ್ಜೆಗೂ ಸಹಾಯಹಸ್ತ ಚಾಚುವ ಸಂವೇದನಾಶೀಲ ಕುಟುಂಬಗಳೂ ಉಂಟು. ಆಕೆ ಅನಕ್ಷರಸ್ಥಳಾಗಿದ್ದರೆ, ಓದು-ಬರಹ ಕಲಿಸುವುದು, ಕಷ್ಟಪಟ್ಟು ದುಡಿದ ಹಣ ಸುರಕ್ಷಿತವಾಗಿರಲು ಬ್ಯಾಂಕ್‌ನಲ್ಲಿ ಠೇವಣಿ ಇಡಿಸುವುದು, ಚಿಕ್ಕ ಪುಟ್ಟ ಮಕ್ಕಳ ತಾಯಿಯಾಗಿದ್ದರೆ, ಅವನ್ನು ಶಾಲೆಗೆ ಸೇರಿಸಲು, ಫೀ ತುಂಬಲು ಕೈಲಾದ ನೆರವು ನೀಡುವುದು...ಹೀಗೆ ತೋಚಿಕೊಂಡು ಸಹಾಯ ಮಾಡುತ್ತ ಮಾಡುತ್ತ ಒಂದು ಸಂಸಾರವನ್ನು ಬಡತನದ ರೇಖೆಯಿಂದ ಮೇಲೆತ್ತಿ ಬಿಡುತ್ತಾರೆ, ಈ ಹೃದಯ ಶ್ರೀಮಂತಿಕೆಯನ್ನೂ ಹೊಂದಿರುವ ಜನ. ಮಕ್ಕಳು ಕಲಿತು ಉದ್ಯೋಗಸ್ಥರಾಗುವ ವೇಳೆ ಆಕೆಯ ಮನೆಯಲ್ಲಿಯೂ ಒಂದು ಖಾತರಿ ವರಮಾನ, ಮದುವೆ-ಸಮಾರಂಭಗಳ ಹಿಗ್ಗು, ಸಾಮಾನು-ಸರಂಜಾಮುಗಳ ಕೊಳ್ಳುವಿಕೆ.

ಈ ಸಣ್ಣಪುಟ್ಟ ಕರುಣೆಗಳ ನಡುವೆಯೂ ಒಂದು ಸಮಾನ ಸಂಬಂಧ ಅಲ್ಲಿ ಸ್ಥಾಪಿತವಾಗುವುದಿಲ್ಲ, ಸ್ಥಾಪಿತವಾಗಲಾರದು ಎಂಬುದೂ ಅಷ್ಟೇ ನಿಜ. ಸಾಮಾಜಿಕ ಸ್ತರದ ಅದೃಶ್ಯ ರೇಖೆ ಮಧ್ಯೆ ಗೆರೆ ಕೊರೆದಿರುತ್ತದೆ. ಇದು ಪ್ರಜ್ಞೆಯನ್ನು ಚುಚ್ಚಿದಾಗ, ಸಹಾಯಕಿಯರನ್ನು ಜತೆಗೆ ಕೂರಿಸಿಕೊಂಡು ಉಣ್ಣುವುದು, ‘‘ನಮ್ಮ ಟಾಯ್ಲೆಟ್‌ಗಳನ್ನು ಅವರು ಬಳಸಲು ಬಿಡುವುದು ಯಾಕಾಗಬಾರದು’’ ಎಂಬ ಪ್ರಶ್ನೆಗಳನ್ನೊಳಗೊಂಡ ಚರ್ಚೆಗಳು ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರ ಕಾಣುತ್ತವೆ. ಅತ್ಯಾಧುನಿಕತೆ ಹಾಗೂ ಮಲೆತು ನಿಂತ ಕಂದಾಚಾರ ಎರಡೂ ಒಟ್ಟೊಟ್ಟಿಗೇ ಇರುವ ಇಂಡಿಯಾ, ಅನೇಕ ಕಾಲಮಾನಗಳಲ್ಲಿ ಜೀವಿಸುತ್ತದೆ ಎಂಬ ಸಾಮಾನ್ಯೀಕರಣದಂತೆ ಎರಡು ಕೊನೆಗಳು ಈ ವಿಷಯದಲ್ಲಿಯೂ ಇವೆ. ‘ಮೇಡ್ ಇನ್ ಇಂಡಿಯಾ-ಸ್ಟೋರೀಸ್ ಆಫ್ ಇನ್‌ಈಕ್ವಾಲಿಟಿ ಆ್ಯಂಡ್ ಆಪರ್ಚ್ಯುನಿಟಿ ಇನ್‌ಸೈಡ್ ಅವರ್ ಹೋಮ್ಸ್’ ಕಳೆದ ಸೆಪ್ಟಂಬರ್‌ನಲ್ಲಿ ಪ್ರಕಾಶಿತವಾದ ಬೃಹತ್ ಪುಸ್ತಕ. ಮನೆಗೆಲಸದ ಸಹಾಯಕಿಯರನ್ನು ಕುರಿತ (ಭಾರತದಲ್ಲಿ) ಮೊಟ್ಟ ಮೊದಲ ಕೃತಿ ಎಂಬ ಹೆಗ್ಗಳಿಕೆ ಅದರದು.

ಆದರೆ ಉಳ್ಳವರ ಹೃದಯಹೀನತೆ ಹಾಗೂ ಸಂಕುಚಿತ ನಡೆವಳಿಕೆಗೆ ದುರ್ಬೀನು ಹಿಡಿಯುತ್ತ ಅವರು ಮಾಡಿಕೊಳ್ಳಬೇಕಾಗಿರುವ ಆತ್ಮಪರಿಶೀಲನೆಗೆ ಒತ್ತಾಯಿಸುವ ಪುಸ್ತಕದ ಓದು ಸಾಕಷ್ಟು ಡಿಸ್ಟರ್ಬಿಂಗ್-ಮನೋವೇದಕವಾಗಿ ಇದೆ ಎಂಬುದು ಪರಾಮರ್ಶಿಸಿದವರ ನುಡಿ. ಸ್ಥಿತಿವಂತರಾಗಿದ್ದೂ ವಿಕಸಿತ ಸಂವೇದನೆ-ನಡವಳಿಕೆಯ ಕುಟುಂಬದಿಂದ ಬಂದವರಾಗಿರುವುದು, ಊಳಿಗಮಾನ್ಯ ಎನಿಸಿಕೊಳ್ಳದ ಅಮೆರಿಕದಲ್ಲಿ ವಿದ್ಯಾಭ್ಯಾಸ ಪಡೆದಿರುವುದು ಈ ವಿಷಯದಲ್ಲಿ ತಾವು ತೆರೆದ ಮನಸ್ಸಿನವರಾಗಿರಲು ಸಹಾಯಮಾಡಿತು ಎಂದು ಲೇಖಕಿ-ಪತ್ರಕರ್ತೆ ತೃಪ್ತಿ ಲಾಹಿರಿ ಹೇಳಿಕೊಂಡಿದ್ದಾರೆ. ಅದೇ ಉಸಿರಲ್ಲಿ, ಪುಸ್ತಕ ಬರೆಯುತ್ತ ಬರೆಯುತ್ತ ತಮ್ಮ ಸಹಾಯಕಿಗೆ ಗಂಟೆಗೆ 20 ರೂ. ನಂತೆ (ದಶಕ ಹಿಂದೆ) ನೀಡುತ್ತಿದ್ದ ವೇತನ ಎಷ್ಟೊಂದು ಕಡಿಮೆಯಾಗಿತ್ತು ಎಂದು ಹೊಳೆದು ಹೌಹಾರಿದ್ದನ್ನೂ, ಇಂಡಿಯಾದ ಶೇ.1 ಉಳ್ಳ ಜನತೆ, ಶೇ.99 ಇಲ್ಲದ ಜನತೆಯನ್ನು ಶೋಷಿಸುವ ಮಿನಿ ಚಿತ್ರಣವನ್ನು ಮನೆಮನೆಯಲ್ಲಿಯೂ ಹೀಗೆ-ಒಡತಿ ಅಥವಾ ಮೇಮ್‌ಸಾಹಿಬ್ ಹಾಗೂ ಕೆಲಸದಾಕೆ ನಡುವಿನ ಸಂಕೀರ್ಣ ಸಂಬಂಧದಲ್ಲಿ ಕಾಣಬಹುದು ಎನ್ನುವುದು ಅವರು ಹಿಗ್ಗಿಸಿರುವ ದೃಷ್ಟಿಕೋನ.

ಜಾಗತೀಕರಣ ಮತ್ತು ಉದಾರೀಕರಣೋತ್ತರ ಕಾಲದಲ್ಲಿ ದಿಲ್ಲಿ, ಕೋಲ್ಕತಾ, ಮುಂಬೈ ಹಾಗೂ ಬೆಂಗಳೂರುಗಳಂತಹ ಮಹಾನಗರಗಳಿಗೆ ವಲಸೆ ಬಂದು ಮನೆಗೆಲಸ ಮಾಡಿ ಸಂಪಾದಿಸಲು ಅಸ್ಸಾಂ, ಒಡಿಶಾ, ಜಾರ್ಖಂಡ್, ಹಿಮಾಚಲ ಪ್ರದೇಶಗಳ ಅನೇಕ ತರುಣಿಯರು ಮುಂದಾ ದರು. ಇಂತಹ ಸಹಾಯ ಪಡೆಯಲು ಹಿಂದೆಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಜನರು ಮುಂದಾಗಿದ್ದೂ ಜಾಗತೀಕರಣದ ಫಲವೇ. ಆಗ ಉದ್ಭವವಾಗಿದ್ದು ಮನೆಗೆಲಸ ಸಹಾಯಕರ ಮಾರುಕಟ್ಟೆ. ಕುಗ್ರಾಮಗಳಿಂದ ಬಂದ ಮುಗ್ಧ ಅನರಕ್ಷರಸ್ಥರು, ಆದಿವಾಸಿ ತರುಣಿಯರೇ ಮೊದಲಾಗಿ ಅವರಲ್ಲಿ ಕೆಲವರು ಎಷ್ಟು ದಾರುಣವಾಗಿ ದಳ್ಳಾಳಿಗಳ ಜಾಲಕ್ಕೆ ಸಿಕ್ಕಿಬಿದ್ದರು, ನರಕಗಳಂತಹ ಮನೆ ಹೊಕ್ಕರು ಎನ್ನುವುದರ ದಟ್ಟ ವರದಿಗಾರಿಕೆ, ವಿಪುಲ ಅಂಕಿಸಂಖ್ಯೆ ಪುಸ್ತಕದಲ್ಲಿದೆ.

ದೇಶದ ರಾಜಧಾನಿಯಲ್ಲಿ ವಾಸಿಸುವ ಅಧಿಕಾರಸ್ಥ ಕುಲೀನರಿಗೆ ಮೇಯ್ಡೆಗಳ ‘ಪ್ಲೇಸ್‌ಮೆಂಟ್’ ಮಾಡುವ ಮುನ್ನ ಅವರ ಮನೆಗಳಲ್ಲಿ ಹೇಗೆ ನಡೆದುಕೊಳ್ಳಬೇಕು, ಸಂಭಾಷಿಸಬೇಕು, ಅಡುಗೆಯನ್ನು ಟೇಬಲ್ ಮೇಲೆ ಯಾವ ಪ್ರಕಾರ ಜೋಡಿಸಬೇಕು ಮುಂತಾದ ಶಿಷ್ಟಾಚಾರ ತರಬೇತಿಯನ್ನೂ ಕೆಲ ಏಜೆನ್ಸಿಗಳು ಹಮ್ಮಿಕೊಂಡವು. (ಇಷ್ಟೆಲ್ಲ ಇದ್ದೂ ಊಳಿಗಮಾನ್ಯ ಮನಸ್ಥಿತಿಯ ಕುರೂಪ ಅಲ್ಲಿ ಇಲ್ಲಿ ಪ್ರತ್ಯಕ್ಷವಾಗುತ್ತ ಇರುತ್ತದೆ. ದರ್ಪಿಷ್ಟ ದಾನವರಿಗೆ ಅವರು ಈಗಲೂ ಕೆಲಸದವರಾಗಿ ಕಾಣುತ್ತಾರೆ ಮತ್ತು ಅದನ್ನು ಕಾರಣವಾಗಿ ಹೇಳಿ ಅನೇಕ ಕಡೆ ಪ್ರವೇಶ ನಿರಾಕರಿಸಲಾಗುತ್ತದೆ: ಇತ್ತೀಚೆಗೆ ಅಂಥದೊಂದು ತೇಜೋವಧೆ ಅನುಭವಿಸಿದ ಮೇಘಾಲಯದ ಗವರ್ನೆಸ್ ಒಬ್ಬರು ‘‘ನಾನು ಪ್ರಪಂಚವೆಲ್ಲಾ ಸುತ್ತಿದ್ದೇನೆ, ವಿಶ್ವದ ಬೆಸ್ಟ್ ಹೋಟೆಲುಗಳಲ್ಲಿ ಊಟಮಾಡಿದ್ದೇನೆ. ಆದರೆ ಎಲ್ಲಿಯೂ ನನ್ನನ್ನು ಇಷ್ಟು ಕೆಟ್ಟದಾಗಿ ನಡೆಸಿಕೊಂಡಿರಲಿಲ್ಲ’’ ಎಂದು ನೋವು ತೋಡಿಕೊಂಡರು.

ಪ್ರತಿಷ್ಠಿತ ದಿಲ್ಲಿ ಜಮ್‌ಖಾನಾ ಕ್ಲಬ್‌ನಲ್ಲಿ ಏರ್ಪಡಿಸಿದ ಔತಣಕೂಟಕ್ಕೆ ಆಹ್ವಾನಿತರಾಗಿದ್ದ ಮಾಲಕರ ಜತೆ ಹೋದವರನ್ನು ಅಧಿಕಾರಿಗಳು ರೂಕ್ಷವಾಗಿ ಹೊರಗೆ ಕಳುಹಿಸಿದರು.) ಮನೆ ಒಡೆಯರು ಹಾಗೂ ಕೆಲಸದ ಸಹಾಯಕರ ನಡುವೆ ನಿಯಮಿತವಾಗಿ ಉಂಟಾಗುವ ಘರ್ಷಣೆಗಳಿಗೂ ದಿಲ್ಲಿ ಕುಪ್ರಸಿದ್ಧಿ ಪಡೆದಿದೆ. ಎರಡು-ಮೂರು ವಾರಗಳ ಹಿಂದೆ ನೊಯ್ಡಿ ಪ್ರದೇಶದಲ್ಲಿರುವ ಒಂದು ಹೌಸಿಂಗ್ ಸೊಸೈಟಿಯಲ್ಲಿ ಒಬ್ಬ ಮನೆಗೆಲಸದಾಕೆ ಏನನ್ನೋ ಕದ್ದಳು ಎಂಬ ಗಲಾಟೆ ಶುರುವಾಯಿತು. ನಂತರದ ದಿನಗಳಲ್ಲಿ ಆಕೆ ಮನೆಗೆ ಮರಳಿಲ್ಲ ಎಂದು ಕ್ರುದ್ಧರಾದ ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ಸೊಸೈಟಿಗೆ ಮುತ್ತಿಗೆ ಹಾಕಿ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದರು; ಘಟನೆ ಹಿಂಸಾಚಾರಕ್ಕೆ ತಿರುಗಿತು.

ಸೊಸೈಟಿಯ ಎಲ್ಲಾ ಮನೆಗಳವರೂ ತಂತಮ್ಮ ಸಹಾಯಕರನ್ನು ಬಿಡಿಸಿಬಿಟ್ಟರು. ಅಸಂಘಟಿತ ಕಾರ್ಮಿಕರಾಗಿಯೇ ಮನೆಗೆಲಸದವರು ಇನ್ನೂ ಉಳಿದಿರುವುದರಿಂದ ಈ ಬಗೆಯ ಅಸುರಕ್ಷಿತತೆ, ದೌರ್ಜನ್ಯವನ್ನೂ ಅವರು ಎದುರಿಸಬೇಕು. ನಮ್ಮ ಕೆಲಸಗಳನ್ನು ಬೇರೆಯವರ ಕೈಲಿ ಮಾಡಿಸಿಕೊಳ್ಳುವುದೇ ಮನುಷ್ಯ ಘನತೆಗೆ ಕುಂದು. ಅಂತಹುದರಲ್ಲಿ ಯಾವ್ಯಾವುದೋ ಅನಿವಾರ್ಯ ಕಾರಣಗಳಿಂದ ನೆರವು ಪಡೆಯಬೇಕಾಗಿ ಬಂದಾಗ, ನಮ್ಮ ಮನೆವಾರ್ತೆ ಸುಸೂತ್ರವಾಗಿ ನಡೆಯುವಂತೆ ಮಾಡುವ ಮನೆಗೆಲಸದವರನ್ನು ಆತ್ಮೀಯತೆಯಿಂದ, ಮಾನವೀಯತೆಯಿಂದ ನಡೆಸಿಕೊಂಡರಷ್ಟೇ ಉಳಿಗಾಲ, ಅವರಿಗೆ ನಮ್ಮದಲ್ಲದಿದ್ದರೆ ಇನ್ನೊಂದು ಮನೆ ಸಿಗುವುದೇನೂ ಕಷ್ಟವಿಲ್ಲ ಎಂಬ ಪ್ರತಿಕ್ರಿಯೆಗಳೂ ಕೇಳಿಬಂದವು.

ಇಂತಹ ಸಂಬಂಧವನ್ನು ವಿಷಮವಾಗಲು ಬಿಡದೆ ನಿಭಾಯಿಸುವುದೇ ವಿವೇಕ. 60-70ರ ದಶಕದಲ್ಲಿ ಮುಂಬೈಯ ಉದ್ದಗಲಕ್ಕೂ ಸಾವಿರಾರು ಕೆಲಸದವರು ಮನೆಗಳನ್ನು ಸ್ವಚ್ಛವಾಗಿಟ್ಟು ಗೃಹಿಣಿಯರಿಗೆ ಮನಶ್ಶಾಂತಿ ನೀಡುತ್ತಿದ್ದರು. ರಾಮಾಗಳೆಂದು ಅವರನ್ನು ಕರೆಯಲಾಗುತ್ತಿತ್ತು. (ರಾಜ್‌ಕಪೂರನ ಪ್ರಸಿದ್ಧ ಸಿನೆಮಾ ಹಾಡು ರಾಮಯ್ಯಿ ವಸ್ತಾವಯ್ಯಾ ಮೂಲಕ ಅವರು ಅಮರರಾಗಿದ್ದಾರೆ!) ಬಿಳಿಯ ಶರಟು, ದೊಗಳೆ ಪೈಜಾಮಾ ಅಥವಾ ಧೋತಿ ತೊಟ್ಟು ಬರುತ್ತಿದ್ದ ಅವರು ತೆಳ್ಳಗೆ ಎತ್ತರಕ್ಕಿರುತ್ತಿದ್ದರು. ಒಂದು ಮೂಲದ ಪ್ರಕಾರ, ಆಂಧ್ರದ ಭೀಕರ ಬರ ಪ್ರದೇಶಗಳಿಂದ ಹೊಟ್ಟೆಪಾಡಿಗೆ ಬಂದವರಂತೆ.

ಮುಂಬೈಯ ಗಡಿಬಿಡಿ ಬದುಕಿಗೆ ತಕ್ಕಂತೆ ಬೆಳಗ್ಗೆ ಬಂದು ಪಾತ್ರೆ, ಕಸ, ಬಟ್ಟೆ ಒಗೆತ ಎಲ್ಲ ಮಾಡುವುದಲ್ಲದೆ ಮತ್ತೆ ರಾತ್ರಿ ಎಂಟು ಗಂಟೆಗೆ ಬಂದು ಅಚ್ಚುಕಟ್ಟಾಗಿ ಬಿಸಿಬಿಸಿ ರೊಟ್ಟಿ ಮಾಡಿಹಾಕಲೂ ತಯಾರಿರುತ್ತಿದ್ದರಂತೆ. ಎಲ್ಲಾ ಮರಾಠಿ ಬಾಯಿಗಳ ಹಾಗೆ ರಜಾ ಹಾಕುತ್ತಿರಲಿಲ್ಲವಾದ್ದರಿಂದ ಮುಂಬೈ ಜನಕ್ಕೆ ಪ್ರಿಯರಾಗಿಬಿಟ್ಟರು! ಎಂಟು-ಹತ್ತು ಮಂದಿ ಕೂಡಿ ರೂಮುಗಳಲ್ಲಿರುತ್ತಿದ್ದರು. ವರ್ಷಕ್ಕೊಮ್ಮೆ ಊರಿಗೆ ಹೋಗಿ ಹೆಂಡತಿ-ಮಕ್ಕಳು, ತಂದೆ-ತಾಯಿಗಳನ್ನು ನೋಡಿಕೊಂಡು ಬರುತ್ತಿದ್ದರಂತೆ. ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆ ಒಡೆಯುವ ಆಟದಲ್ಲಿ ತುಂಬ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಆದರೆ ತಾವು ಏನು ಕೆಲಸ ಮಾಡುತ್ತೇವೆಂದು ಊರಿನಲ್ಲಿ ಹೇಳುತ್ತಿರಲಿಲ್ಲವಂತೆ.

 ಕನ್ನಡ ಲೇಖಕಿ ಉಮಾ ರಾವ್ ಒಂದೆಡೆ ಬರೆದಿರುವ ಸಿಹಿ-ಕಹಿ ಸ್ವಾದದ ಈ ‘ಅಕೌಂಟ್’ ನೆನಪಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)