'ಗೋಸಿ ಗ್ಯಾಂಗ್' ಸಾಂಗ್ ಶೂಟಿಂಗ್
ರಾಜು ದೇವಸಂದ್ರ ನಿರ್ದೇಶನದ ದ್ವಿತೀಯ ಚಿತ್ರ 'ಗೋಸಿಗ್ಯಾಂಗ್' ಹಾಡೊಂದರ ಚಿತ್ರೀಕರಣ ದೊಡ್ಡಬಳ್ಳಾಪುರದ ಸೊನ್ನೇನಹಳ್ಳಿಯಲ್ಲಿ ಜರಗಿತು.
ಗ್ರಾಮ ಪ್ರದೇಶದ ಸೊಗಡನ್ನು ತೋರಿಸಲಾದ ಸನ್ನಿವೇಶದಲ್ಲಿ ಬಾಲಕಲಾವಿದರಾದ ಮಾಲಿನಿ, ಗಗನ್ , ಪುನೀತ್ ಮತ್ತು ಚಿನ್ಮಯ್ ನಟಿಸಿದರು. ಮಾಲಿನಿಗೆ ಇದು ಪ್ರಥಮ ಚಿತ್ರವಾಗಿದ್ದು, ಪುನೀತ್ ಈಗಾಗಲೇ 'ಸಾಹೇಬ'ದಲ್ಲಿ ಬಾಲನಟನಾಗಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ.
'ಹಳ್ಳಿ ಸೊಗಡು', 'ಸುಬ್ಬಸುಬ್ಬಿ' 'ಉಪ್ಪುಹುಳಿ ಖಾರ', 'ಸ್ಲಂಬಾಯ್ಸ್' ಮತ್ತು 'ಟೈಗರ್' ಮೊದಲಾದ ಚಿತ್ರಗಳಲ್ಲಿ ಚಿನ್ಮಯ್ ನಟಿಸಿದ್ದಾರೆ. ಗಗನ್ ಕೂಡ ಟೈಗರ್ ಮತ್ತು ಉಪ್ಪು ಹುಳಿ ಖಾರ ಚಿತ್ರದಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದಾರೆ. ಮೂರುಮಂದಿ ಮಕ್ಕಳು ಕೂಡ ಚಾಮರಾಜ್ ಮಾಸ್ಟರ್ ಬಳಿಯಲ್ಲಿ ನೃತ್ಯಾಭ್ಯಾಸ ಮಾಡುವ ಮೂಲಕ ಉತ್ತಮ ಡ್ಯಾನ್ಸರ್ ಗಳಾಗಿದ್ದಾರೆ. ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡ 'ಗೋಸಿ ಗ್ಯಾಂಗ್' ನೃತ್ಯ ನಿರ್ದೇಶಕ ಸುರೇಶ್ ಮಾಸ್ಟರ್ ಅವರು ಆಕರ್ಷಕವಾದ ನೃತ್ಯ ಸಂಯೋಜಿಸಿದ್ದರು. ಶಾಲಾ ವಠಾರ, ಗಂಗಮ್ಮನ ಗುಡಿ, ಕೆರೆ, ತೋಟ ಸುತ್ತಮುತ್ತ ಚಿತ್ರೀಕರಣ ನಡೆಸಲಾಯಿತು.
ಕೆ ಶಿವಕುಮಾರ್ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕ ರಾಜು ದೇವಸಂದ್ರ, ಸಹ ನಿರ್ದೇಶಕರಾದ ದುಷ್ಯಂತ್ ,ಮಹಾದೇವ್ ಜೊತೆಗೆ ಸಹಾಯಕ ನಿರ್ದೇಶಕರಾಗಿ ಗಿರೀಶ್ ಮತ್ತು ಅಪ್ಪುವರ್ಧನ್ ಕಾರ್ಯನಿರ್ವಹಿಸಿದ್ದಾರೆ. ಹಾಲೇಶ್ ಛಾಯಾಗ್ರಾಹಕರು.
ಮೂರುಮಂದಿ ಮಕ್ಕಳ ಪುಟಗೋಸಿ ಗ್ಯಾಂಗ್, ಮುಂದೆ ಬೆಳೆದು ಹೇಗೆ ದೊಡ್ಡವರಾಗಿ ಬದಲಾಗುತ್ತಾರೆ ಎನ್ನುವ ಅಂಶವನ್ನು ಇರಿಸಿಕೊಂಡಿರುವ ಕತೆಯಲ್ಲಿ ಜಗ್ಗೇಶ್ ಪುತ್ರ ಯತಿರಾಜ್ ಸೇರಿದಂತೆ ನವನಟರಾದ ಅಜಯ್ ಕಾರ್ತಿಕ್ ಮತ್ತು ರೋಹಿತ್ ಮತ್ತು ಅನಿರುದ್ಧ್ ನಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ. ನವ ನಟಿಯರಾದ ಅನುಷಾ ಮತ್ತು ಮೋನಿಕಾ ಸೋನು ಅವರಿಗೆ ಜೋಡಿಗಳಾಗಿದ್ದಾರೆ.