ಮಕ್ಕಳಿಗೆ ರೂಮಿಯ ದರ್ಶನ-ಸೂಫಿ ಕಾಮಿಕ್ಸ್
ಈ ಹೊತ್ತಿನ ಹೊತ್ತಿಗೆ
ಸೂರ್ಯನಂತೆ ದಯೆ ಹಾಗೂ ಕ್ಷಮಾಗುಣವನ್ನು ಹೊಂದಿರಿ. ಇತರರ ತಪ್ಪುಗಳನ್ನು ಮರೆಮಾಚಲು ಇರುಳಿನಂತಿರಿ. ಉದಾರತೆಗಾಗಿ ಹರಿಯುವ ನೀರಿನಂತಿರಿ. ಕ್ರೋಧ ಹಾಗೂ ಆಕ್ರೋಶದ ವಿಷಯದಲ್ಲಿ ಸಾವಿನಂತಿರಿ. ಚಾರಿತ್ರದಲ್ಲಿ ಭೂಮಿಯಂತಿರಿ. ನೀವು ಹೇಗಿರುವಿರೋ ಹಾಗೆಯೇ ತೋರ್ಪಡಿಸಿಕೊಳ್ಳಿ. ನಿಮ್ಮ ತೋರಿಕೆಯಂತೆಯೇ ನೀವಿರಿ.
ರೂಮಿ
ಕೇವಲ ಕೆಲವೇ ಪದಗಳಲ್ಲಿ ಪರ್ಷಿಯನ್ ಕವಿ ಜಲಾಲುದ್ದೀನ್ ರೂಮಿ ನಿಮ್ಮನ್ನು ನಿದ್ದೆಯ ಮಂಪರಿನಿಂದ ಬಡಿದೆಬ್ಬಿಸುತ್ತಾರೆ ಹಾಗೂ ವಾಸ್ತವಿಕತೆಯ ಉನ್ನತ ಮಟ್ಟದೆಡೆಗೆ ಸಾಗಲು ನಿಮ್ಮಲ್ಲಿ ಜಾಗೃತಿ ಮೂಡಿಸುತ್ತಾರೆ. ಅತ್ಯಂತ ಸರಳವಾಗಿ ವಸ್ತುಗಳು, ಗಿಡಗಳು, ಪ್ರಾಣಿಗಳು, ಮಾನವನ ಪ್ರಾಪಂಚಿಕ ಚಟುವಟಿಕೆಗಳ ಕುರಿತಾದ ನೀತಿಕತೆಗಳನ್ನು ಬಳಸಿಕೊಂಡು ರೂಮಿ ಅತ್ಯಂತ ಗಾಢವಾದ ಹಾಗೂ ಕಾಲಾತೀತವಾದ ಸತ್ಯಗಳನ್ನು ಅಭಿವ್ಯಕ್ತಿಗೊಳಿಸುತ್ತಾರೆ. 700 ವರ್ಷಗಳ ಬಳಿಕವೂ ಅವರ ಪದಗಳು ನಮ್ಮ ಕಣ್ಣುಗಳನ್ನು ತೇವಗೊಳಿಸುತ್ತವೆ ಹಾಗೂ ನಮ್ಮ ಹೃದಯಗಳು ಹಂಬಲಿಸುವಂತೆ ಮಾಡುತ್ತವೆ.
ಜಲಾಲುದ್ದೀನ್ ರೂಮಿಯ ಸಾಲುಗಳೆಂದರೆ ಲೌಕಿಕ ಮತ್ತು ಅಲೌಕಿಕತೆಯ ನಡುವಿನ ಉಯ್ಯಲೆ. ಅವನು ತತ್ವಜ್ಞಾನಿಯೂ ಹೌದು. ಹಾಗೆಂದು ಕೇವಲ ಪಂಡಿತರಿಗಾಗಿ ರೂಮಿ ಯಾವತ್ತೂ ಬರೆಯಲಿಲ್ಲ. ಸಾಮಾನ್ಯರಿಗಾಗಿ, ಪ್ರಚಲಿತವಾದ ರೂಪಕಗಳ ಮೂಲಕ ಅವರು ಶ್ರೀಸಾಮಾನ್ಯನ್ನು ತಲುಪಲು ಪ್ರಯತ್ನಿಸಿದರು. ಆದುದರಿಂದಲೇ ರೂಮಿಯೆಂದರೆ ಶ್ರೀಸಾಮಾನ್ಯನೂ, ಪಂಡಿತನೂ ಸಮಾನವಾಗಿ ಪ್ರೀತಿಸುತ್ತಾರೆ. ರೂಮಿ ಅವರ ಸಾಲುಗಳು ಜಗತ್ತಿನ ಹಲವಾರು ಭಾಷೆಗಳಿಗೆ ಭಾಷಾಂತರಗೊಂಡಿವೆ. ರೂಮಿ ದೇಶ, ಭಾಷೆ, ಗಡಿ, ಜಾತಿ, ಧರ್ಮಗಳಾಚೆಗೆ ವಿಸ್ತರಿಸಿಕೊಂಡಿದ್ದಾರೆ.
ರೂಮಿಯ ಚಿಂತನೆಗಳನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನ ನಡೆದಿರುವುದು ತೀರಾ ಕಡಿಮೆ. ರೂಮಿಯನ್ನು ನಾವು ದೊಡ್ಡವರಿಗೆ, ಚಿಂತಕರಿಗಷ್ಟೇ ಸೀಮಿತಗೊಳಿಸಿರುವಾಗ ಅವರನ್ನು ಮಕ್ಕಳಿಗೂ ತಲುಪಿಸುವ ಪ್ರಯತ್ನವನ್ನು ಮೊಹಮ್ಮದ್ ಅಲಿ ವಕೀಲ್, ಮೊಹಮ್ಮದ್ ಆರಿಫ್ ವಕೀಲ್, ತಂಝೀಲುರ್ರಹಮಾನ್ ಅವರು ಮಾಡಿದ್ದಾರೆ. ಹೇಗೆ ಈ ದೇಶದ ಪುರಾಣ, ಇತಿಹಾಸಗಳನ್ನು ಅಮರಚಿತ್ರ ಕತೆಗಳ ಮೂಲಕ ಮಕ್ಕಳಿಗೆ ಯಶಸ್ವಿಯಾಗಿ ತಲುಪಿಸುವ ಪ್ರಯತ್ನ ನಡೆಯಿತೋ, ಅದೇ ಮಾದರಿಯನ್ನು ಅನುಸರಿಸಿ ರೂಮಿಯನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನವನ್ನು ಈ ತಂಡ ಮಾಡಿದೆ.
ಅವರು ತಮ್ಮ ಪ್ರಯತ್ನಕ್ಕೆ ‘ಸೂಫಿ ಕಾಮಿಕ್ಸ್’ ಎಂದು ಹೆಸರಿಟ್ಟಿರುವುದು ಇನ್ನೊಂದು ವಿಶೇಷವಾಗಿದೆ. ಎರಡು ಸಂಪುಟಗಳ ಮೂಲಕ ಈ ಕಾಮಿಕ್ಸ್‌ನ್ನು ಮಕ್ಕಳಿಗೆ ತಲುಪಿಸುವಂತೆ ನಿರೂಪಿಸುವಲ್ಲಿ ತಂಡ ಯಶಸ್ವಿಯಾಗಿದೆ. ರಾಹಿಲ್ ಮೊಹ್ಸಿನ್ ಅವರ ಕಲೆ ಮತ್ತು ಮುಖ್ತಾರ್ ಅಹ್ಮದ್ ಅವರ ಕ್ಯಾಲಿಗ್ರಫಿ, ರೂಮಿಯ ದರ್ಶನವನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮೂರ್ತರೂಪಕ್ಕಿಳಿಸಿದ್ದಾರೆ.ಇಲ್ಲಿನ ಎಲ್ಲಾ ಕವನಗಳನ್ನು ಹ್ಯಾಂಡ್ರು ಹಾರ್ವೆ ಅವರ ಇಂಗ್ಲಿಷ್ ಅನುವಾದ ಕೃತಿ: ಟೀಚಿಂಗ್ಸ್ ಆಫ್ ರೂಮಿಯಿಂದ ಪಡೆದುಕೊಳ್ಳಲಾಗಿದೆ.
ಮುಖ್ಯವಾಗಿ ರೂಮಿಯ ಕವಿತೆಗಳನ್ನು ಬರೇ ಲೌಕಿಕತೆಗೆ ಸೀಮಿತಗೊಳಿಸುವುದನ್ನು, ಆ ಮೂಲಕ ಕವಿತೆಯನ್ನು ತೀರಾ ಸರಳಗೊಳಿಸುವುದನ್ನು ಈ ಕಾಮಿಕ್ಸ್ ನಿರಾಕರಿಸುತ್ತದೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ರೂಮಿಯ ಅಧ್ಯಾತ್ಮ ದರ್ಶನವನ್ನು ಮಾಡುವ ಪ್ರಯತ್ನ ಈ ಕಾಮಿಕ್ಸ್‌ನದ್ದಾಗಿದೆ. ಈ ಪುಸ್ತಕದ ಪ್ರತಿಯೊಂದು ಅಧ್ಯಾಯದಲ್ಲೂ ರೂಮಿ ಪಾರ್ಸಿ ಭಾಷೆಯಲ್ಲಿ ಬರೆದಿರುವ ಕವಿತೆ ಹಾಗೂ ಅದರ ಇಂಗ್ಲಿಷ್ ಅನುವಾದವನ್ನು ನೀಡಲಾಗಿದೆ. ಕೇವಲ ಪದಗಳನ್ನಷ್ಟೇ ಬಳಸಿಕೊಳ್ಳದೆ ರೂಮಿಯ ಕವನಗಳ ದೃಶ್ಯ ಅನುಭವವನ್ನು ಒದಗಿಸಲು ಸಚಿತ್ರವಾಗಿ ನೀಡಲಾಗಿದೆ. ಪದಗಳಿಗೆ ಸಾಧ್ಯವಾಗದಂತಹ ಸಂದೇಶವನ್ನು ಅಭಿವ್ಯಕ್ತಗೊಳಿಸಲು ಚಿತ್ರಗಳಿಂದ ಅವಕಾಶವಾಗುತ್ತದೆ. ರೂಮಿಯ ಸೂಫಿ ಕಾಮಿಕ್ಸ್‌ಗಳ ಎರಡನೆ ಸಂಪುಟದಲ್ಲಿ, ಲೌಕಿಕ ಮತ್ತು ಅಲೌಕಿಕ ಬದುಕಿನ ಹಲವು ಮಗ್ಗುಲುಗಳನ್ನು ಸ್ಪರ್ಶಿಸುವ 12 ಕವಿತೆಗಳನ್ನು ಮಕ್ಕಳಿಗೆ ಇಷ್ಟವಾಗುವಂತೆ ಸರಳವಾಗಿ ಚಿತ್ರಗಳ ಮೂಲಕ ನಿರೂಪಿಸಲಾಗಿದೆ.
ಸೂಫಿ ಸ್ಟುಡಿಯೋ ತಂಡದ ಈ ಪ್ರಯೋಗ ಬಹುತೇಕ ಯಶಸ್ವಿಯಾಗಿದ್ದು, ಇದು ಇತರ ಸೂಫಿಗಳ ದರ್ಶನವನ್ನು ಮಕ್ಕಳ ಮುಂದಿಡುವುದಕ್ಕೆ ಸ್ಫೂರ್ತಿಯಾಗಬಹುದು. ಈ ಮೂಲಕ, ರಂಜನೆಗೆ ಸೀಮಿತವಾಗಿರುವ ಕಾಮಿಕ್ಸ್‌ಲೋಕ, ಸೂಫಿಗಳ ಅವರ್ಣನೀಯ ದರ್ಶನಗಳಿಗೆ ಮಾಧ್ಯಮವಾಗುವ ಸಾಧ್ಯತೆಯೊಂದನ್ನು ತೆರೆದುಕೊಟ್ಟಿದೆ. ಸುಮಾರು 150 ಪುಟಗಳ ಈ ಸಂಪುಟದ ಮುಖಬೆಲೆ 250 ರೂಪಾಯಿ. ಆಸಕ್ತರು ಸೂಫಿ ಸ್ಟುಡಿಯೋಸ್, 78, ಕೋರಮಂಗಲ ಇಂಡಸ್ಟ್ರಿಯಲ್ ಏರಿಯಾ, ಜ್ಯೋತಿ ನಿವಾಸ್ ಕಾಲೇಜು ರೋಡ್, ಬೆಂಗಳೂರು- 560095ನ್ನು ಸಂಪರ್ಕಿಸಬಹುದು. ಹಾಗೆಯೇ contact@sufistudios.com ನ್ನು ಸಂಪರ್ಕಿಸಬಹುದು. ಜೊತೆಗೆ www.suficomics.com ನಿಮಗೆ ಸೂಫಿ ಜಗತ್ತಿನ ಇನ್ನಷ್ಟು ವಿವರಗಳನ್ನು ನೀಡಬಹುದು.