ಭಾರತಕ್ಕೆ ಎಪ್ಪತ್ತು, ನೀಗಿದೆಯೇ ಆಪತ್ತು?
ಪ್ರಜಾಪ್ರಭುತ್ವ ಈಗ ಕಾರ್ಪೊರೇಟ್ ಪ್ರಭುತ್ವವಾಗಿ ಬದಲಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದಕವನ್ನು ಮತ್ತಷ್ಟು ಆಳಗೊಳಿಸುವ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ, ಕರುಣಾಜನಕ ಸ್ಥಿತಿಯಲ್ಲಿರುವ ಅಸಹಾಯಕ ವರ್ಗದ ಕಣ್ಣೀರು ಒರೆಸುವ ನಮ್ಮ ಬದ್ಧತೆ ದುರ್ಬಲವಾಗುತ್ತಿದೆ. ಸರಕಾರ ಉಳ್ಳವರ ಪರವಾಗಿರುವಂತೆ ಕಾಣುತ್ತಿದೆ. ಅವರು ಕ್ಷಿಪ್ರವಾಗಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಜಾತಿ ಗುರುತಿಸುವಿಕೆಗಳು ರಾಜಕೀಯ ಪಕ್ಷಗಳಾಗಿ ದೃಢವಾಗುತ್ತಿವೆ ಮತ್ತು ರಾಜಕೀಯ ಕ್ರೋಡೀಕರಣದ ಆಧಾರಸ್ತಂಭಗಳಾಗುತ್ತಿವೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಬಹುತ್ವಕ್ಕೆ ಎದುರಾಗಿರುವ ಅಪಾಯಕ್ಕೆ ಪ್ರತಿರೋಧ ಒಡ್ಡುವ ಶಕ್ತಿಗಳು ಧ್ರುವೀಕರಣದ ಸವಾಲಿಗೆ ಪರ್ಯಾಯ ಕಂಡುಕೊಳ್ಳಲು ವಿಫಲರಾಗಿರುವುದು.
ಭಾರತ ಬ್ರಿಟಿಷ್ ದಾಸ್ಯದಿಂದ ಮುಕ್ತವಾಗಿ ಸ್ವತಂತ್ರ ಪಯಣದಲ್ಲಿ 70 ಮೈಲುಗಲ್ಲುಗಳನ್ನು ದಾಟಿದೆ. ನಮ್ಮ ನಾಗರಿಕತೆಯ ಪ್ರಾಚೀನತೆಗೆ ಹೋಲಿಸಿದರೆ 70 ವರ್ಷಗಳ ಅವಧಿಗೆ ಅಂಥ ಮಹತ್ವವೇನೂ ಇಲ್ಲ. ಆದರೆ ವಿಸ್ತೃತ ಆಯಾಮ, ಅಗಾಧ ವೈವಿಧ್ಯತೆ ಈ ಹಂತದಲ್ಲಿ ಸಾಧಿಸಿರುವುದು ನಿರ್ಲಕ್ಷಿಸಬಹುದಾದ ಹೆಜ್ಜೆಯೇನೂ ಅಲ್ಲ. ಬಹುತೇಕ ಇಂಥದ್ದೇ ಸ್ಥಿತಿ ಹೊಂದಿರುವ ನೆರೆಯ ದೇಶಗಳ ಸಾರ್ವಭೌಮತ್ವಕ್ಕೇ ಧಕ್ಕೆ ಬರುವ ಆತಂಕದ ಸ್ಥಿತಿಗೆ ಹೋಲಿಸಿದರೆ ಟೀಕಾಕಾರರ ಬಾಯಿಮುಚ್ಚಿಸುವ ರೀತಿಯಲ್ಲಿ ಭಾರತ ಅದ್ಭುತ ಕ್ರಿಯಾಶೀಲ ದೇಶವಾಗಿ ಹೊರಹೊಮ್ಮಿದೆ.
ಸ್ವತಂತ್ರ ಹಾಗೂ ಆಧುನಿಕ ದೇಶವಾಗಿ 70ನೆ ವರ್ಷ ಪೂರೈಸಿದ ಸಂಭ್ರಮದಲ್ಲಿರುವ ನಾವು, ಪ್ರಾಚೀನ ನಾಗರಿಕತೆ ಹಾಗೂ ಬ್ರಿಟಿಷ್ ಸಾಮ್ರಾಜ್ಯಶಾಹಿ ದಾಸ್ಯವನ್ನು ಮೀರಿ ಪ್ರಾದೇಶಿಕ ಶಕ್ತಿಯಾಗಿ, ಅಭಿವೃದ್ಧಿಶೀಲ ದೇಶವಾಗಿ ಹಲವು ವಲಯಗಳಲ್ಲಿ ಅಗ್ರಗಣ್ಯ ಸ್ಥಾನವನ್ನೂ ಗಳಿಸಿದ್ದೇವೆ. ನಮ್ಮ ಮೊದಲ ಪ್ರಜಾಪ್ರಭುತ್ವ ದಿನಾಚರಣೆವರೆಗೂ ರಾಜಪ್ರಭುತ್ವ ಹೊಂದಿದ್ದ ನಾವು ಪ್ರಜಾಪ್ರಭುತ್ವ ದೇಶವಾಗಿ ರೂಪುಗೊಂಡಿದ್ದೇ ದೈತ್ಯ ಸಾಧನೆ.
ನಮ್ಮ ವೈವಿಧ್ಯತೆ ಮತ್ತು ಆರಂಭಿಕ ದಿನಗಳಲ್ಲಿ ರಾಜ್ಯಗಳ ಪಕ್ಷಪಾತ ವಿರುದ್ಧದ ಸಂಘರ್ಷದ ಹಿನ್ನೆಲೆಯಲ್ಲಿ ನಮ್ಮ ಸಾಧನೆಯನ್ನು ಕಡೆಗಣಿಸುವಂತಿಲ್ಲ. ದೇಶದ ವೈಶಿಷ್ಟ್ಯಗಳೆನಿಸಿದ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವದ ಮೇಲೆ ದಟ್ಟ ಕಾರ್ಮೋಡ ಕವಿದಿದೆ. ಸಾಕಷ್ಟು ಅಡೆತಡೆಗಳಿವೆ. ಕೋಮು ವಿಭಜನೆ, ಮೊಂಡು ತತ್ವಗಳನ್ನು ಒಗ್ಗೂಡಿಸಿ ಸಮಗ್ರತೆ ತರುವುದು, ರಾಜ್ಯಗಳ ಪುನರ್‌ವಿಂಗಡಣೆಯಂಥ ಸವಾಲುಗಳು ದೇಶಕ್ಕೆ ಎದುರಾಗಿದ್ದವು. 1975-77ರವರೆಗಿನ ಕಠಿಣ ತುರ್ತುಪರಿಸ್ಥಿತಿ, 1984ರಲ್ಲಿ ಆಪರೇಷನ್ ಬ್ಲೂಸ್ಟಾರ್, ಇಂದಿರಾಗಾಂಧಿ ಹತ್ಯೆ, 1992ರಲ್ಲಿ ಬಾಬರಿ ಮಸೀದಿ ಧ್ವಂಸ, ಗುಜರಾತ್ ನರಮೇಧ (2002)ದಂಥ ಘಟನಾವಳಿಗಳನ್ನೂ ದೇಶ ಮೆಟ್ಟಿನಿಂತಿದೆ. ಇಷ್ಟಾಗಿಯೂ ಜೀವನ ಹೊಸ ಶಕ್ತಿಯೊಂದಿಗೆ ಪುಟಿದೆದ್ದಿದ್ದು, ಇವು ಜಾತ್ಯತೀತತೆಯ ಭದ್ರಕೋಟೆಯ ತಳಹದಿಯಾಗಿವೆ.
ಭಾರತದ ವಿನಾಶದ ಬಗ್ಗೆ ಭವಿಷ್ಯ ನುಡಿದವರು ಬ್ರಿಟಿಷ್ ಪ್ರಧಾನಿ ಚರ್ಚಿಲ್ ಮಾತ್ರವಲ್ಲ; ‘ನ್ಯೂಯಾರ್ಕ್ ಟೈಮ್ಸ್’ ನಿಯಂತ್ರಿಸುವ ಕುಟುಂಬದ ಸುಲ್ಜ್ ಬರ್ಗೆರ್, ಜವಾಹರಲಾಲ್ ನೆಹರೂ ಅವರನ್ನು ‘‘ವಿವಿಧ ಕೇಂದ್ರಾಪಗಾಮಿ ಶಕ್ತಿಗಳ ವಿರುದ್ಧ ಭಾರತವನ್ನು ದೇಶವಾಗಿ ಹಿಡಿದಿಡಲು ಹೇಗೆ ಸಾಧ್ಯ’’ ಎಂದು ಪ್ರಶ್ನಿಸಿದ್ದರು. ಇಡೀ ದೃಷ್ಟಿಕೋನವನ್ನು ಅಳೆದ ನೆಹರೂ, ‘‘ಒಂದೇ ಶಬ್ದದಲ್ಲಿ ಹೇಳಬೇಕೆಂದರೆ ನಿಶ್ಚಿತವಾಗಿ ಅದು ರಾಷ್ಟ್ರೀಯ ಭಾವನೆ. ಇದು ಇತಿಹಾಸದ ಆಳಕ್ಕೆ ಹೋಗುತ್ತದೆ. ಇತಿಹಾಸದುದ್ದಕ್ಕೂ, ಭಾರತ ರಾಜಕೀಯವಾಗಿ ವಿಭಜನೆ ಹೊಂದಿರಬಹುದು. ಆದರೆ ಬಹುತೇಕ ಅದು ಘಟಕವಾಗಿಯೇ ಉಳಿದಿದೆ. ಇಡೀ ದೇಶದಲ್ಲಿ ಆ ಭಾವನೆ ಇದೆ. ಇದೇ ಸಾಂಸ್ಕೃತಿಕ ಹಿನ್ನೆಲೆ. ಜನರು ಎಂದೂ ರಾಜಕೀಯಕ್ಕೆ ವಿಶೇಷ ಮಹತ್ವ ನೀಡಿಲ್ಲ. ಅದು ರಾಜರು ಮತ್ತು ಚಕ್ರವರ್ತಿಗಳಿಗಾಗಿ. ಈ ಇತಿಹಾಸಕ್ಕೆ ಎರಡು ಅಥವಾ ಮೂರು ರಾಜಕೀಯ ಹುಳಗಳನ್ನು ಕಸಿ ಮಾಡಲಾಗಿದೆ. ರಾಜಕೀಯವಾಗಿ ಏಕೀಕರಣದ ಶಕ್ತಿಗಳಲ್ಲಿ ಬ್ರಿಟಿಷ್ ಆಕ್ರಮಣ ಕೂಡಾ ಒಂದು ಕಾರಣ ಎಂದು ಹೇಳಲೇಬೇಕಾಗುತ್ತದೆ’’ ಎಂದು ಪ್ರತಿಕ್ರಿಯಿಸಿದ್ದರು.
ನೆಹರೂ ಅವರ ಆಧುನಿಕ ಭಾರತದ ದೃಷ್ಟಿಕೋನ ಮತ್ತು ಮಹಾತ್ಮಾ ಗಾಂಧೀಜಿಯವರ ಅಗಾಧಜ್ಞಾನ ದೇಶ ನಿರ್ಮಾಣದ ಆರಂಭಿಕ ಬುನಾದಿಯಾಯಿತು. ಅಂತರ್ಗತವಾದ ದೋಷ ಇಲ್ಲದಿದ್ದರೂ, ಸಂಕಷ್ಟಗಳನ್ನು ಅವರು ಎದುರಿಸಬೇಕಾಯಿತು. ಭಾಷಾವಾರು ಪ್ರಾಂತ್ಯಗಳಾಗಿ ರಾಜ್ಯಗಳನ್ನು ವಿಂಗಡಿಸುವ ಬಗ್ಗೆ ನೆಹರೂ ಅವರ ವಿರೋಧವಿತ್ತು. ಕೋಮು ಅಧಾರದಲ್ಲಿ ದೇಶ ವಿಭಜನೆಯಿಂದ ಆಗಿರುವ ಆಘಾತದ ಅರಿವು ಅವರಿಗಿತ್ತು. ಆದರೆ ಇಂದು ಈ ಭಾಷಾ ವಿಭಜನೆ ವಿಭಜನಾತ್ಮಕ ಪ್ರವೃತ್ತಿಯನ್ನು ಉತ್ತೇಜಿಸುವ ಬದಲು ವಾಸ್ತವವಾಗಿ ದೇಶದ ಏಕತೆಯನ್ನು ಕ್ರೋಢೀಕರಿಸಲು ನೆರವಾಗಿವೆ ಎಂದು ನಿಚ್ಚಳವಾಗಿ ಹೇಳಬಹುದು. ಗಾಂಧೀಜಿ ನಿಧನದ ಬಳಿಕ, ಖಾದಿ, ಗ್ರಾಮಸ್ವರಾಜ್ಯದಂಥ ಪರಿಕಲ್ಪನೆಗಳು ಸುಧಾರಣಾವಾದಿಗಳ ವಿಚಾರಧಾರೆ ಜತೆ ಸಂಘರ್ಷಕ್ಕೆ ಬೀಳಬೇಕಾಯಿತು. ಇಂಥ ಸಾಂಕೇತಿಕತೆಯನ್ನು ಕೆಳಗಿಸಿದರು. ಆದರೆ ಗಾಂಧೀಜಿಯವರ ನೈತಿಕತೆಯ ಔನ್ನತ್ಯಕ್ಕೆ ಅಗೌರವ ತೋರಲಿಲ್ಲ.
ನೆಹರೂ ಪ್ರಜಾಪ್ರಭುತ್ವವಾದಿಯಾಗಿದ್ದರೂ, ಎರಡು ಪ್ರಮುಖ ಭ್ರಮೆಗಳನ್ನು ಹೊಂದಿದ್ದರು; ಅವುಗಳೆಂದರೆ ಭಾರತೀಯರ ಏಕೈಕ ವಕ್ತಾರ ಎಂಬ ಕಾಂಗ್ರೆಸ್ ಸಮರ್ಥನೆಯನ್ನು ಯಾರೂ ದುರ್ಬಲಗೊಳಿಸಲಾರರು ಎನ್ನುವುದು ಒಂದು; ಸರಕಾರದ ವ್ಯವಹಾರಗಳಿಗೆ ಧರ್ಮದ ಮಧ್ಯಪ್ರವೇಶವನ್ನು ಮನಸ್ಸಾಕ್ಷಿಯಾಗಿ ಹೊರಗಿಡಬೇಕು ಎನ್ನುವುದು ಇನ್ನೊಂದು. ಆದರೆ ಅವರ ಏಕಪಕ್ಷೀಯ ದೃಷ್ಟಿಕೋನಕ್ಕೆ ಅವರ ಜೀವಿತಾವಧಿಯಲ್ಲೇ ಪ್ರತಿರೋಧ ಕಾಣಿಸಿಕೊಂಡಿತು. ಅವರು ನಿಧನರಾದ ತಕ್ಷಣ ಇದು ಸ್ಫೋಟಗೊಂಡಿತು. ತಮಿಳುನಾಡು ಪ್ರಾದೇಶಿಕ ಶಕ್ತಿಯಾಗಿ ಹೊರಹೊಮ್ಮಿತು ಹಾಗೂ 1967ರಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ಮೊತ್ತಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂತು. ರಾಜ್ಯಗಳ ಪುನರ್ವಿಂಗಡಣೆ ಕೂಡಾ ಎಲ್ಲರಿಗೂ ತೃಪ್ತಿ ತರಲಿಲ್ಲ. ಭಾರತದ ನಕ್ಷೆಯಲ್ಲಿ ರಾಜ್ಯಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಸ್ವಾತಂತ್ರ್ಯದ ಬಳಿಕ ಮೂಲವಾಗಿ ಇದ್ದ ರಾಜ್ಯಗಳ ಸಂಖ್ಯೆ ದುಪ್ಪಟ್ಟಾಯಿತು. ಜಾತ್ಯತೀತತೆಗೆ ಸಾಂಸ್ಕೃತಿಕ ರಾಷ್ಟ್ರೀಯತೆಯ ಅಪಾಯ ಎದುರಾಯಿತು. ವಿಚಿತ್ರವೆಂದರೆ, ಶಿಕ್ಷಣ, ಸಹಕಾರಿ ಬ್ಯಾಂಕಿಂಗ್, ಮಹಿಳಾ ಸಬಲೀಕರಣದಂಥ ಅಸ್ತ್ರಗಳ ಮೂಲಕ ದೇಶವನ್ನು ಆಧುನೀಕರಿಸುವ ಪ್ರಯತ್ನಗಳು ಕೂಡಾ ಜಾತಿ ಅಥವಾ ಧರ್ಮ ಆಧರಿತ ಸಮುದಾಯಗಳ ಮೂಲಕ ತಪ್ಪುದಾರಿ ಹಿಡಿದವು. ತಪ್ಪುದಾರಿ ಹಿಡಿದವರು ಕೂಡಾ ನೆಹರೂ ಅವರನ್ನು ಶ್ಲಾಘಿಸಿದರು.
ಇಂದಿರಾಗಾಂಧಿ ಅಧಿಕಾರಾವಧಿ ಎಷ್ಟು ನಿರ್ದಯವಾಗಿತ್ತು ಎನ್ನುವುದಕ್ಕೆ ತುರ್ತು ಪರಿಸ್ಥಿತಿಯೇ ಸಾಕ್ಷಿ. ಆದರೆ ಪ್ರತ್ಯೇಕತಾವಾದಿ ಚಳವಳಿಗಳು ಕಾಶ್ಮೀರ, ಪಂಜಾಬ್ ಮತ್ತು ಈಶಾನ್ಯ ಭಾರತದಲ್ಲಿ ದೇಶದ್ರೋಹ ಕೃತ್ಯಕ್ಕೆ ಇಳಿದವು. ಹಸಿರುಕ್ರಾಂತಿಯ ಕಾರಣದಿಂದ ಅಗಾಧ ಸಂಪತ್ತಿನ ಮೂಲಕ ಸದೃಢಗೊಂಡ ಮಂದಿ ಹಿಂದಿ ಹೃದಯಭಾಗದ ನೆಲದಲ್ಲಿ ಬೇರೂರಿದರು. ಕೇಂದ್ರ ಇದಕ್ಕೆ ಎರಡು ಪ್ರತಿಕ್ರಿಯೆ ನೀಡಿತು. ಒಂದು 1974ರ ಅಣ್ವಸ್ತ್ರ ಸ್ಫೋಟ ಹಾಗೂ ತನಗೆ ಇಷ್ಟವಾಗದ ರಾಜ್ಯ ಸರಕಾರದ ಮೇಲೆ 356ನೆ ವಿಧಿಯ ಹೇರಿಕೆ ಇನ್ನೊಂದು. ಆದರೆ 1990ರ ಯುಗಾರಂಭವಾಗುತ್ತಿದ್ದಂತೆ ಅಧಿಕಾರಾಕಾಂಕ್ಷಿಗಳ ಜತೆ ಅಧಿಕಾರ ಹಂಚಿಕೊಳ್ಳುವುದು ಅನಿವಾರ್ಯವಾಯಿತು. ಮಂಡಲ್ ಸಮಿತಿ ವರದಿಯ ಅನುಷ್ಠಾನ ಅದ್ಭುತ ಲೇಪನವಾಯಿತು. ಸಂವಿಧಾನದ 356ನೆ ವಿಧಿಯನ್ನು ಬೇಕಾಬಿಟ್ಟಿಯಾಗಿ ಬಳಸುವುದರ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪು, ರಾಜ್ಯಗಳಿಗೆ ಬಲ ಕೊಟ್ಟಿತು. ಕೇಂದ್ರದ ದುರಹಂಕಾರದ ವಿರುದ್ಧ ಪ್ರಾದೇಶಿಕ ಪಕ್ಷಗಳಿಗೆ ಅಗತ್ಯವಾಗಿದ್ದ ದೃಢತೆ ಮತ್ತು ಶಾಂತಿಯನ್ನು ನೀಡಿತು.
ಪ್ರಗತಿಪರ ಚಿಂತನೆ ಹಾಗೂ ಪುರೋಗಾಮಿ ಪ್ರವೃತ್ತಿಗಳ ನಡುವೆ, ಹಲವು ಏಳುಬೀಳುಗಳನ್ನು ಕಂಡಿತು. ಹಲವು ಆಘಾತಗಳು ಹಿನ್ನಡೆಗಳು ಎದುರಾದವು. ಒಂದು ಸಂಸ್ಥೆ ನೆಲಸಮವಾದಾಗ ಮತ್ತೊಂದು ರಕ್ಷಣೆಗೆ ಬಂತು. ಒಂದು ಕಡೆಯಲ್ಲಿ ನ್ಯಾಯದ ಬಾಗಿಲು ಮುಚ್ಚಿದಾಗ ಮತ್ತೊಂದು ಕಡೆಯಿಂದ ಸುಧಾರಣಾ ಕ್ರಮಗಳ ಬಲ ಹೊಸ ಅಸ್ತ್ರವಾಗಿ ಕೈಗೆ ಸಿಕ್ಕಿತು. ಈ ಅಂಶಗಳೇ ಪ್ರಜಾಪ್ರಭುತ್ವ ದೃಢವಾಗಿದೆ ಎನ್ನುವುದನ್ನು ಖಚಿತಪಡಿಸುತ್ತದೆ. ರಾಷ್ಟ್ರೀಯ ನಂಬಿಕೆಯ ವ್ಯವಸ್ಥೆಯ ಕೋಟೆ ಭದ್ರವಾಗುತ್ತಿದೆ. ನಮ್ಮನ್ನು ಸಹಜತೆಗೆ ಪುನಃಸ್ಥಾಪಿಸಿಕೊಳ್ಳುವ ಇಚ್ಛಾಶಕ್ತಿ ಹಾಗೂ ಅದಮ್ಯ ಚೇತನ ಪುಟಿದೆದ್ದಿತು.
ದೇಶದ ಬಗೆಗಿನ ಹೆಮ್ಮೆಯ ಪ್ರಬಲ ಪ್ರಜ್ಞೆಯಿಂದ ಭಾರತ ಯಶಸ್ವಿಯಾಗಿ 45 ವರ್ಷಗಳ ಕಾಲ ಸಮಾಜವಾದದ ಮಾದರಿಯನ್ನು ಅನುಭವಿಸಿದೆ. ಸಾಮ್ರಾಜ್ಯಶಾಹಿ ಅವಲಂಬನೆಯ ಬಂಧವನ್ನು ಕತ್ತರಿಸಿಕೊಂಡು, ಆರ್ಥಿಕತೆಯ ಊಳಿಗಮಾನ್ಯ ಮಾದರಿಯನ್ನು ಕಿತ್ತೆಸೆದದ್ದು ಕಳವಳಕಾರಿ ಎನಿಸಿದರೂ, ಹೊಸ ಮಾರ್ಗವನ್ನು ಆಯ್ಕೆ ಮಾಡಿಕೊಂಡದ್ದು ಸರಿಯಾದ ಹೆಜ್ಜೆ ಎನಿಸಿದೆ. ಅವರ ಉತ್ತರಾಧಿಕಾರಿಗಳು ಕೂಡಾ ದೇಶವನ್ನು ಜಾಗತಿಕ ಅರ್ಥವ್ಯವಸ್ಥೆಗೆ ವಿವೇಕಯುತವಾಗಿ ಹೆಣೆದು, ನಮ್ಮೆಲ್ಲರಿಗಿಂತಲೂ ಮುನ್ನ ಅಭಿವೃದ್ಧಿಯ ಸಮೃದ್ಧಿಯನ್ನು ಅನುಭವಿಸುತ್ತಿದ್ದಾರೆ. ಹೊಸ ತಂತ್ರಜ್ಞಾನವು ಇದನ್ನು ಬಯಸುತ್ತದೆ ಹಾಗೂ ವಿಸ್ತೃತವಾದ ಆಕಾಂಕ್ಷಿವರ್ಗ ಅಭಿವೃದ್ಧಿ ಮಾದರಿಯ ಪ್ರಮುಖ ವರ್ಗಾಂತರಕ್ಕೆ ಕಾಯುತ್ತಿದೆ.
ಇಷ್ಟಾಗಿಯೂ ಪ್ರಜಾಪ್ರಭುತ್ವದ ಮುಖದಲ್ಲಿ ಇಂದು ಬಳಲಿಕೆಯನ್ನು ನಾವು ಕಾಣಬಹುದು. ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಹೇರುವ ಸಂವಿಧಾನದ ಆಶಯ ದಿಗ್ಭ್ರಾಂತಿಗೆ ಕಾರಣವಾಗಿದೆ. ಹಿಂದಿಯನ್ನು ಇಂಗ್ಲಿಷ್‌ಗೆ ಪರಿವರ್ತಿಸುವ ಪ್ರಯತ್ನಕ್ಕೂ ದಕ್ಷಿಣದಲ್ಲಿ ವಿರೋಧವಿದೆ. ಈ ಪರಿವರ್ತನೆ ರಾಷ್ಟ್ರೀಯತೆಯನ್ನು ಏಕಭಾಷೆಯ ಭಾರತವಾಗಿ ಮಾರ್ಪಡಿಸುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಈ ಸವಾಲನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದು, ತೀವ್ರ ಆಗ್ರಹ ಅಥವಾ ತೀವ್ರ ಪರಿಹಾರವನ್ನು ಒದಗಿಸದ ಲಕ್ಷಣವನ್ನು ಕಾಪಾಡಿಕೊಂಡು ಬಂದಿದೆ. ಆದರೆ ದಿಲ್ಲಿಯಲ್ಲಿ ಹೊಸದಾಗಿ ಅಧಿಕಾರ ಹಿಡಿದಿರುವ ವ್ಯವಸ್ಥೆ, ಇಂಥ ದೊಡ್ಡ ಪ್ರಜಾಪ್ರಭುತ್ವದಲ್ಲಿ ಇಂಥ ಸವಾಲುಗಳನ್ನು ನಿಭಾಯಿಸುವ ಕಲೆಯನ್ನು ರೂಢಿಸಿಕೊಳ್ಳಬೇಕಿದೆ.
ಭವಿಷ್ಯದ ದಾರಿ ಕೂಡಾ ಅಡೆತಡೆಗಳಿಂದ ಮತ್ತು ವೈರುಧ್ಯದ ಒತ್ತಡದಿಂದ ಮುಕ್ತವಾಗಿಲ್ಲ. ಸ್ವತಂತ್ರ ಭಾರತದಲ್ಲಿ ಜಾತೀಯತೆಗೆ ಬೆಟ್ಟದಷ್ಟು ಸವಾಲುಗಳಿವೆ. ಪಾಶ್ಚಿಮಾತ್ಯ ಚಿಂತನೆಗೆ ಬದಲಾಗಿ ಭಾರತದ ಸಾಂಪ್ರದಾಯಿಕ ಬಹುತ್ವದ ಹುರುಪಿನ ಬೆಳಕಿನಲ್ಲಿ ಜಾತೀಯತೆಯನ್ನು ಪ್ರವರ್ತಿಸುವ ಪ್ರಯತ್ನ ಯಶಸ್ವಿಯಾಗಿಲ್ಲ. ವಿಭಜನಕಾರಿ ಶಕ್ತಿಗಳು ಚುನಾವಣೆ ಸಂದರ್ಭದಲ್ಲಿ ಕೋಮು ಕ್ರೋಡೀಕರಣದಿಂದ ಬೆಂಬಲ ಪಡೆಯುವುದು ಮಾತ್ರವಲ್ಲದೇ, ಕಾಶ್ಮೀರ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದಿಂದ ಮತ್ತು ಈ ಪ್ರದೇಶ ಸದಾ ಕುದಿಬಿಂದುವಾಗಿಯೇ ಉಳಿಯಲು ಬಹಿರಂಗವಾಗಿಯೇ ರಾಜತಾಂತ್ರಿಕ ಪ್ರಯತ್ನ ಮತ್ತು ಉಗ್ರರಿಗೆ ನೆರವು ನೀಡುವ ಕ್ರಮದಿಂದಲೂ ಪುಷ್ಟಿ ಪಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಆಧುನಿಕ ರಾಷ್ಟ್ರದ ಪರಿಕಲ್ಪನೆ ಭಾರತ ಉಪಖಂಡದ ಎರಡು ಪ್ರಬಲ ಸಮುದಾಯಗಳ ವರೆಗೆ ತಲುಪದಿರುವುದು. ಇದರಿಂದ ಕಲಿಯಬೇಕಾದ ಪಾಠವೆಂದರೆ, ಬಹುಜನಾಂಗೀಯ ಉಪಖಂಡದ ಒಂದು ಘಟಕ, ಮತ್ತೊಂದು ಘಟಕವನ್ನು ಪ್ರತ್ಯೇಕವಾಗಿರಿಸಿ ಜಾತ್ಯತೀತತೆ ಅಳವಡಿಸಿಕೊಳ್ಳಲಾಗದು. ಇತಿಹಾಸ, ಸಂಸ್ಕೃತಿ, ಧರ್ಮ ಹಾಗೂ ಭಾಷೆ ನಮ್ಮನ್ನು ಏಕ ನಾಗರಿಕತೆಯ ಅಂಶವಾಗಿ ಒಗ್ಗೂಡಿಸುತ್ತದೆ.
ಇತರ ರಂಗಗಳಲ್ಲೂ ಸವಾಲುಗಳಿವೆ. ಪ್ರಜಾಪ್ರಭುತ್ವ ಈಗ ಕಾರ್ಪೊರೇಟ್‌ಪ್ರಭುತ್ವವಾಗಿ ಬದಲಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಕಂದಕವನ್ನು ಮತ್ತಷ್ಟು ಆಳಗೊಳಿಸುವ ಆರ್ಥಿಕ ಉದಾರೀಕರಣದ ಹಿನ್ನೆಲೆಯಲ್ಲಿ, ಕರುಣಾಜನಕ ಸ್ಥಿತಿಯಲ್ಲಿರುವ ಅಸಹಾಯಕ ವರ್ಗದ ಕಣ್ಣೀರು ಒರೆಸುವ ನಮ್ಮ ಬದ್ಧತೆ ದುರ್ಬಲವಾಗುತ್ತಿದೆ. ಸರಕಾರ ಉಳ್ಳವರ ಪರವಾಗಿರುವಂತೆ ಕಾಣುತ್ತಿದೆ. ಅವರು ಕ್ಷಿಪ್ರವಾಗಿ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಜಾತಿ ಗುರುತಿಸುವಿಕೆಗಳು ರಾಜಕೀಯ ಪಕ್ಷಗಳಾಗಿ ದೃಢವಾಗುತ್ತಿವೆ ಮತ್ತು ರಾಜಕೀಯ ಕ್ರೋಡೀಕರಣದ ಆಧಾರಸ್ತಂಭಗಳಾಗುತ್ತಿವೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಬಹುತ್ವಕ್ಕೆ ಎದುರಾಗಿರುವ ಅಪಾಯಕ್ಕೆ ಪ್ರತಿರೋಧ ಒಡ್ಡುವ ಶಕ್ತಿಗಳು ಧ್ರುವೀಕರಣದ ಸವಾಲಿಗೆ ಪರ್ಯಾಯ ಕಂಡುಕೊಳ್ಳಲು ವಿಫಲರಾಗಿರುವುದು.
(ಲೇಖಕರು ಬೆಂಗಳೂರು ಮೂಲದ ಪತ್ರಕರ್ತರು)