ಅಹಿಂಸಾತ್ಮಕ ಚಳವಳಿಗೆ ಮಾದರಿಯಾದ ಶಿವಪುರ ಧ್ವಜ ಸತ್ಯಾಗ್ರಹ
ಸ್ವಾತಂತ್ರದ ಕನವರಿಕೆ...
ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ ಚಳವಳಿಯೇ ಹುಟ್ಟುವುದಿಲ್ಲ ಎಂಬ ರಾಷ್ಟ್ರೀಯ ಕಾಂಗ್ರೆಸ್ಸಿಗರಲ್ಲಿದ್ದ ದಟ್ಟ ಗುಮಾನಿಯನ್ನು 1938 ಎಪ್ರಿಲ್ 10 ರಂದು ನಡೆದ ಶಿವಪುರ ಧ್ವಜಸತ್ಯಾಗ್ರಹ ಆಂದೋಲನವು ತ್ರಿವರ್ಣ ಧ್ವಜಾರೋಹಣ ಮಾಡುವುದರ ಮೂಲಕ ಸುಳ್ಳು ಮಾಡಿತಲ್ಲದೆ, ಸ್ವಾತಂತ್ರ ಘೋಷಣೆಗೆ ಪೂರಕವಾಗಿ ರಾಷ್ಟ್ರಮಟ್ಟದಲ್ಲಿ ರೂಪುಗೊಳ್ಳಬೇಕಾದ ಅಹಿಂಸಾತ್ಮಕ ಚಳವಳಿಗೆ ಮಾದರಿ ಒದಗಿಸಿದ ಕೀರ್ತಿಗೆ ಭಾಜನವಾಗಿರುವುದು ಚರಿತ್ರಾರ್ಹ ಘಟನೆಯಾಗಿದೆ.
ರಾಜ್ಯದ ಸತ್ಯಾಗ್ರಹ ಚಳವಳಿಗಳಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಚಳವಳಿ ಪ್ರಮುಖವಾದ ಸ್ಥಾನ ಪಡೆದಿದೆ. 1938ರಲ್ಲಿ ನಡೆದ ಈ ಚಳವಳಿ ಜನಸಾಮಾನ್ಯರಲ್ಲಿ ಸ್ವಾತಂತ್ರದ ಕಿಚ್ಚು ಹೊತ್ತಿಸಿ ದೇಶಭಕ್ತಿ ಮೂಡಿಸಿತು. ಗುಜರಾತ್‌ನ ಹರಿಹರಪುರದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನದ ನಿರ್ಣಯದಂತೆಯೇ ಮೈಸೂರು ಕಾಂಗ್ರೆಸ್ ಸ್ಥಾಪನೆಯಾಗಿ ಶಿವಪುರ ರಾಷ್ಟ್ರಕೂಟ (ಧ್ವಜ ಸತ್ಯಾಗ್ರಹ ಚಳವಳಿ) ನಡೆಸಲು ತೀರ್ಮಾನಿಸಲಾಯಿತು. ಹರಿಹರಪುರ ಅಧಿವೇಶನಕ್ಕೂ ಶಿವಪುರ ಅಧಿವೇಶನಕ್ಕೂ ಕೆಲವು ಸಾಮ್ಯತೆಗಳಿವೆ. ರಾಷ್ಟ್ರಮಟ್ಟದ ಹರಿಹರಪುರ ಅಧಿವೇಶನದಲ್ಲಿ ಲಕ್ಷಾಂತರ ಜನ ಸೇರಿದ್ದರು. ಆದರೆ, ಕೇವಲ ಒಂದು ಸಂಸ್ಥಾನಕ್ಕೆ ಸೇರಿದ್ದಾದರೂ ಶಿವಪುರದ ಅಧಿವೇಶನದಲ್ಲಿ ಲಕ್ಷಲಕ್ಷವಲ್ಲದಿದ್ದರೂ ಸುಮಾರು 35 ಸಾವಿರ ಜನರು ಸೇರಿದ್ದರು. ಹರಿಹರಪುರ ಹೊರತುಪಡಿಸಿದರೆ, ನಿಷೇಧಾಜ್ಞೆ ಉಲ್ಲಂಘಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ದೇಶದ ಎರಡನೆಯ ಸ್ಥಳವೆಂಬ ಹೆಗ್ಗಳಿಕೆ ಶಿವಪುರ ಧ್ವಜ ಸತ್ಯಾಗ್ರಹ ಚಳವಳಿಗೆ ಸಲ್ಲುತ್ತದೆ.
ಸಾಹುಕಾರ್ ಚನ್ನಯ್ಯ, ಎಚ್.ಸಿ.ದಾಸಪ್ಪ, ಎಚ್.ಕೆ.ವೀರಣ್ಣಗೌಡ, ಪಿ.ತಿರುಮಲೇಗೌಡ, ಇಂಡುವಾಳು ಹೊನ್ನಯ್ಯ, ಪಾಲಹಳ್ಳಿ ಸೀತಾರಾಮಯ್ಯ, ಮಳವಳ್ಳಿ ವೀರಪ್ಪ, ಎ.ಜಿ. ಬಂದಿಗೌಡ, ನಂಜನಗೂಡಿನ ವಿಶ್ವೇಶ್ವರಗೌಡ ಸೇರಿದಂತೆ ಹಲವರು ಸಭೆ ನಡೆಸಿ ಬ್ರಿಟಿಷ್ ಸರಕಾರದ ದಬ್ಬಾಳಿಕೆ ಪ್ರತಿಭಟಿಸಲು ಶಿವಪುರದಲ್ಲಿ ಅಧಿವೇಶನ ನಡೆಸಲು ಮುಂದಾದರು.
ಮೈಸೂರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಟಿ.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರಕೂಟ (ಅಧಿವೇಶನ) ನಡೆಸಲು ತೀರ್ಮಾನಿಸಿ, ಸಾಹುಕಾರ್ ಚನ್ನಯ್ಯ ಅಧ್ಯಕ್ಷತೆಯಲ್ಲಿ ರಾಷ್ಟ್ರಕೂಟ ಸ್ವಾಗತ ಸಮಿತಿ ರಚಿಸಲಾಯಿತು. ಎಚ್.ಕೆ.ವೀರಣ್ಣಗೌಡ, ಎ.ಜಿ.ಬಂದಿಗೌಡ ಕಾರ್ಯದರ್ಶಿಗಳಾದರೆ, ಎಂ.ಎನ್.ಜೋಯಿಸ್ ಜಿಒಸಿ (ಜನರಲ್ ಆಫೀಸರ್ ಕಮಾಂಡಿಂಗ್) ಆದರು. ಶಿವಪುರದ ತಿರುಮಲೇಗೌಡರ ಮನೆಯ ಆವರಣವೇ ಸಮಿತಿ ಕಾರ್ಯ ಚಟುವಟಿಕೆಗಳ ಕೇಂದ್ರವಾಯಿತು.
ಶಿಂಷಾನದಿ ತೀರದ ಬೆಂಗಳೂರು-ಮೈಸೂರು ಹೆದ್ದಾರಿಯ ಶಿವಪುರದ ವಿಶಾಲವಾದ ಬಯಲಿನಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಚಳವಳಿಗೆ ಜಿಲ್ಲೆಯಲ್ಲದೆ, ಮೈಸೂರು ಸಂಸ್ಥಾನದ ಜಿಲ್ಲೆಗಳಿಂದ ಜನಸ್ತೋಮ ಹರಿದುಬಂದಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ.ಎಂ.ಮೇಕ್ರಿಯವರು ಮದ್ದೂರು ಸುತ್ತಳತೆ 3 ಮೈಲಿ ವ್ಯಾಪ್ತಿಯಲ್ಲಿ ಒಂದು ತಿಂಗಳು ಸಭೆ, ಮೆರವಣಿಗೆ ನಿಷೇಧಾಜ್ಞೆ, ಧ್ಜಜಾರೋಹಣ ನಡೆಸದಂತೆ ನಿಷೇಧಾಜ್ಞೆ ಹೊರಡಿಸಿದ್ದರು. 1938 ಎಪ್ರಿಲ್ 9ರಂದು ಹೋರಾಟಗಾರರು ನಿಷೇಧಾಜ್ಞೆ ಉಲ್ಲಂಘಿಸಿ ಧ್ವಜಾರೋಹಣ ಮಾಡುವ ತೀರ್ಮಾನಕ್ಕೆ ಬಂದರು. ಸಮವಸ್ತ್ರಧಾರಿಗಳಾದ ಸ್ವಯಂಸೇವಕರು ಮತ್ತು ಸ್ವಯಂಸೇವಕಿಯರೂ ಶಿಸ್ತಿನಿಂದ ನಿಯೋಜಿತರಾಗಿದ್ದರು. ಅನತಿ ದೂರದಲ್ಲಿ ನೂರಾರು ಪೊಲೀಸರು ಕೋವಿಗಳನ್ನು ಹಿಡಿದು ಮ್ಯಾಜಿಸ್ಟ್ರೇಟರ್ ಹುಕುಂ ನಿರೀಕ್ಷಣೆಯಿಲ್ಲದ್ದರು. ಮ್ಯಾಜಿಸ್ಟ್ರೇಟ್ ಮೇಕ್ರಿ, ಮಂಡ್ಯ ಸಬ್ ಡಿವಿಜನ್ ಆಫೀಸರ್ ಬೀರಪ್ಪ ಅವರೂ ಇದ್ದರು.
ಸಿಂಗರಿಸಿದ ರಥದಲ್ಲಿ ಮೆರವಣಿಗೆಯ ಮೂಲಕ ಸ್ಥಳಕ್ಕೆ ಆಗಮಿಸಿದ ಅಧಿವೇಶನದ ಅಧ್ಯಕ್ಷ ಟಿ.ಸಿದ್ದಲಿಂಗಯ್ಯ ಅವರನ್ನು ಧ್ವಜ ವೇದಿಕೆಗೆ ಕರೆತರಲಾಯಿತು. ತಾನು ನಿಷೇಧಾಜ್ಞೆಯನ್ನು ಉಲ್ಲಂಘಿಸುತ್ತೇನೆಂದು ಘೋಷಣೆ ಮಾಡಿದ ಸಿದ್ದಲಿಂಗಯ್ಯ ಧ್ವಜಾರೋಹಣದ ದಾರಕ್ಕೆ ಕೈಹಾಕುತ್ತಿದ್ದಂತೆ, ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡುಬಿಟ್ಟರು. ಆದರೆ, ಪಕ್ಕದಲ್ಲೇ ಇದ್ದ ಎಂ.ಎನ್.ಜೋಯಿಸ್ ಧ್ವಜಾರೋಹಣ ಕಾರ್ಯವನ್ನು ಪೂರ್ಣಗೊಳಿಸಿಬಿಟ್ಟರು. ಕೂಡಲೇ ಅವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡರು. ನೆರೆದಿದ್ದ ಸಾವಿರ ಸಾವಿರ ದೇಶಾಭಿಮಾನಿಗಳು ಕರತಾಡನ ಮಾಡಿದರು. ಹಲವು ಮುಖಂಡರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಒಂದು ತಿಂಗಳ ಕಾಲವೂ ನಿಷೇಧಾಜ್ಞೆ ನಡುವೆಯೂ ಧ್ವಜಾರೋಹಣ ಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು. ಆದರೆ, ಯಾವುದೇ ಅಹಿತಕರ ಘಟನೆ ನಡೆಯದೇ ಧ್ವಜಾರೋಹಣ ಪ್ರಕ್ರಿಯೆ ನಡೆದಿದ್ದು, ದೇಶದಲ್ಲೇ ಹೆಸರು ಪಡೆಯಿತು. ಶಿವಪುರ ಧ್ವಜಸತ್ಯಾಗ್ರಹವು ಮೈಸೂರು ಸಂಸ್ಥಾನಕ್ಕೆ ಪ್ರಜಾರಾಜ್ಯವನ್ನು ಸಂಪಾದಿಸಿ ಕೊಡಲು ಮೂಲ ಶಕ್ತಿಯಾಯಿತು. ಇಂತಹ ಚಾರಿತ್ರಿಕವಾದ ಘಟನೆಗೆ ಒಂದು ಸ್ಮಾರಕ ನಿರ್ಮಿಸಬೇಕೆಂದು ತೀರ್ಮಾನಕ್ಕೆ ಬಂದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ಶಿವಪುರದಲ್ಲಿ ನಿರ್ಮಿಸಿರುವ ‘ಶಿವಪುರ ಧ್ವಜಸತ್ಯಾಗ್ರಹ ಸೌಧ’ ಸ್ವಾತಂತ್ರಹೋರಾಟದ ದಿನಗಳನ್ನು ಸಾಕ್ಷೀಕರಿಸುತ್ತಿದೆ!