ಭಟ್ಟರಿಗೆ ದೇವಸ್ಥಾನದ ದುಡ್ಡೇ ಬೇಕಂತೆ...
‘‘ಅಮ್ಮಾ...ತಾಯಿ...’’ ಹೊರಗಿನಿಂದ ಯಾರೋ ಭಿಕ್ಷುಕಿ ಜೋರಾಗಿ ಕೂಗಿದಂತಾಗಿ, ಕಲ್ಲಡ್ಕದ ತಾಯಿಯೊಬ್ಬಳು ರಾತ್ರಿಯ ಅನ್ನ ಮತ್ತು ಕೋಳಿ ಸಾರಿನ ಜೊತೆಗೆ ಬಾಗಿಲು ತೆಗೆದರು. ನೋಡಿದರೆ ದಷ್ಟಪುಷ್ಟ ಹೆಂಗಸು ಜೋಳಿಗೆ ಹಿಡಿದು ನಿಂತಿದೆ. ಅದರ ಜೊತೆ ಜೊತೆಗೇ ನಾಲ್ಕೈದು ದಷ್ಟಪುಷ್ಟರಾದ ಗಂಡಸರೂ ಇದ್ದಾರೆ. ತಾಯಿಗೆ ಸಿಟ್ಟು ಏರಿ ಬಂತು.
‘‘ಕೈಕಾಲು ಚೆನ್ನಾಗಿದೆ. ನನಗಿಂತ ದುಬಾರಿ ಸೀರೆ ಉಟ್ಕೊಂಡಿದ್ದೀಯ? ಭಿಕ್ಷೆ ಬೇಡಿ ತಿನ್ನೋದಕ್ಕೆ ನಾಚ್ಕೆ ಆಗೋದಿಲ್ವೆ? ಹಿಂದುಗಡೆ ಮುಸುರೆ ಬಿದ್ದಿವೆ. ಅದನ್ನು ಚೆನ್ನಾಗಿ ತೊಳೆದಿಟ್ಟು, ರಾತ್ರಿ ಊಟ, ಕೋಳಿ ಸಾರು ಇದೆ. ಉಂಡು ಹೋಗು...’’ ಜೋರಾಗಿ ಹೇಳಿದರು. ‘‘ಅಮ್ಮಾ, ಇವರು ಭಿಕ್ಷುಕಿಯಲ್ಲ, ಶೋಭಾಕರಂದ್ಲಾಜೆ....ಭಟ್ಟರ ಶಾಲೆಗೆ ಭಿಕ್ಷೆ ಬೇಡಲು ಬಂದಿದ್ದಾರೆ....’’ ಯಾರೋ ತಪ್ಪು ತಿಳುವಳಿಕೆಯನ್ನು ದೂರ ಮಾಡಲು ಯತ್ನಿಸಿದರು.
‘‘ಯಾವ ಕರಂದ್ಲಾಜೆಯಾದರೇನು? ಮೈಕೈ ಗಟ್ಟಿ ಇರುವಾಗ ದುಡಿದು ತಿನ್ನಬೇಕು...ಮುಸುರೆ ತೊಳೆದು, ಅಂಗಳ ಚೆನ್ನಾಗಿ ಗುಡಿಸಿದರೆ ಭಿಕ್ಷೆ...ಇಲ್ಲವಾದರೆ ಏನೂ ಇಲ್ಲ’’ ಎಂದು ಬಾಗಿಲು ಹಾಕಲು ಹೋದರು.
‘‘ಹಾಗಲ್ಲಮ್ಮ, ಇವರು ಸಂಸದರು...ಉಡುಪಿಯ ಎಂಪಿ ಇವರು...’’ ಇನ್ಯಾರೋ ಪರಿಚಯಿಸಿದರು.
‘‘ಹೋ...ಹಾಗಾ...ಓಟಿನ ಭಿಕ್ಷೆ ಕೇಳೋಕೆ ಬಂದಿದ್ದಾರಾ?...ಇಷ್ಟು ಬೇಗ ಇಲೆಕ್ಷನ್ ಬಂದ್ ಬಿಡ್ತಾ...ನಮ್ಮನ್ನೆಲ್ಲ ನೆನಪಾಯಿತಾ?’’ ತಾಯಿ ಗಲಿಬಿಲಿಯಿಂದ ಕೇಳಿದರು.
‘‘ಹಂಗಲ್ಲಮ್ಮಾ....ನಮ್ಮ ಭಟ್ಟರ ಶಾಲೆಗೆ ಭಿಕ್ಷೆ ಕೇಳುವುದಕ್ಕೆ ಬಂದಿದ್ದಾರೆ...’’
‘‘ಯಾವ ಭಟ್ಟರ ಶಾಲೆಗೆ? ...’’
‘‘ಅದೇ ತಾಯಿ...ಪ್ರಭಾಕರ ಭಟ್ಟರ ಶಾಲೆಗೆ...’’
‘‘ಓ...ಭಟ್ಟರು ಹೊಸ ಶಾಲೆ ಕಟ್ಟಿಸೋದಕ್ಕೆ ಶುರು ಹಚ್ಚಿದ್ದಾರಾ....ಅವರು ಈಗಾಗಲೇ ಕಟ್ಟಿರೋ ಶಾಲೆಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಹಾವಳಿಯನ್ನು ತಡೆಯೋಕೇ ಆಗ್ತಾ ಇಲ್ಲ. ಇನ್ನೊಂದು ಶಾಲೆಯನ್ನು ಕಟ್ಟಿದರೆ ಈ ಊರು ಬಿಟ್ಟೇ ಹೋಗಬೇಕಾಗತ್ತೆ?’ ತಾಯಿ ಅಸಮಾಧಾನದಿಂದ ಹೇಳಿದರು.
‘‘ಹಾಗಲ್ಲಮ್ಮ...ಭಟ್ಟರ ಶಾಲೆಗೆ ದೇವಸ್ಥಾನದ ದುಡ್ಡು ಬರ್ತಾ ಇತ್ತು. ಅದನ್ನು ಸರಕಾರದೋರು ನಿಲ್ಲಿಸಿದ್ದಾರೆ. ಮಕ್ಕಳಿಗೆ ಊಟಕ್ಕಿಲ್ಲ. ಆದುದರಿಂದ ಶೋಭಕ್ಕ ಭಿಕ್ಷೆ ಬೇಡಿ ಭಟ್ಟರ ಶಾಲೆಗೆ ದುಡ್ಡು ಮಾಡುವುದಕ್ಕೆ ಹೊರಟಿದ್ದಾರೆ....’’
‘‘ಈ ಪ್ರಭಾಕರ ಭಟ್ಟರು ದೇವಸ್ಥಾನದ ದುಡ್ಡನ್ನೂ ತನ್ನ ಶಾಲೆ ಹೆಸರಲ್ಲಿ ನುಂಗ್ತಾ ಇದ್ರ...ಹಿಂದೆ ಅಯೋಧ್ಯೆಯಲ್ಲಿ ದೇವಸ್ಥಾನ ಕಟ್ಟಿಸ್ತೀವಿ ಎಂದು ಮನೆ ಮನೆ ಭಿಕ್ಷೆ ಬೇಡಿದ್ರು. ಮಕ್ಕಳ ಹೊಟ್ಟೆಬಟ್ಟೆ ಕಟ್ಟಿ ಕೊಟ್ಟೆವು. ಶಾಲೆಯ ಫೀಸನ್ನು ವರ್ಷ ವರ್ಷ ವಸೂಲಿ ಮಾಡ್ತಾರೆ. ಈಗ ನಮ್ಮ ಮಕ್ಕಳ ಹೆಸರಲ್ಲಿ ಭಿಕ್ಷೆ ಎತ್ತುತ್ತಾ ಮಾನ ಮರ್ಯಾದೆ ಕಳೀತಾ ಇದ್ದಾರೆ...ಎಲ್ಲಿ ಅವರು...?’’
‘‘ಅವರು ಕಾಂಪೌಂಡ್ ಹೊರಗಡೆ ಇದ್ದಾರಮ್ಮ. ಮೈಲಿಗೆ ಆಗತ್ತಂತೆ...’’
‘‘ನಮ್ಮ ದುಡ್ಡು ಮಾತ್ರ ಮೈಲಿಗೆ ಆಗಲ್ವಂತೆಯೋ?’’
‘‘ದುಡ್ಡು ಬೇಡಮ್ಮ...ಶೋಭಕ್ಕನ ಜೋಳಿಗೆಗೆ ಅಕ್ಕಿ ಹಾಕಿದ್ರೆ ಸಾಕು...’’
‘‘ಇದೇ ಅಕ್ಕಿಯನ್ನು ಬೇಯಿಸಿ ಮಕ್ಕಳಿಗೆ ಕೊಡ್ತಾರಂತೆಯೋ? ಅದೇನೋ ಸರಕಾರ ಕೊಡುತ್ತಲ್ಲ, ಅದಕ್ಕೆ ಅರ್ಜಿ ಹಾಕೋಕೆ ಏನು ಧಾಡಿ?’’
‘‘ಸರಕಾರ ಅಕ್ಕಿ ಕೊಟ್ರೆ ಅದಕ್ಕೆ ಲೆಕ್ಕ ಕೇಳುತ್ತೆ. ಆದರೆ ದೇವಸ್ಥಾನದ ಹಣಕ್ಕೆ ಲೆಕ್ಕ ಕೊಡಬೇಕು ಅಂತ ಇಲ್ಲ...ಆದುದರಿಂದ ಭಟ್ರಿಗೆ ಸರಕಾರದ ಹಣ ಬೇಡವಂತೆ, ದೇವಸ್ಥಾನದ ಹಣವೇ ಬೇಕಂತೆ...’’
‘‘ಅವರ ಅಡಿಕೆ ತೋಟ ಇದೆಯಲ್ಲ, ಅದನ್ನು ಮಾರಿ ಮಕ್ಕಳಿಗೆ ಊಟ ಹಾಕಲಿ....’’
‘‘ಅಡಿಕೆ ತೋಟ ಮಾರಿದ್ರೆ ಅವರ ಹೆಂಡತಿ ಮಕ್ಕಳು ಊಟ ಮಾಡವೇ ತಾಯಿ...?’’
‘‘ಅಯೋಧ್ಯೆ ಅದು ಇದು ಅಂತ ನಮ್ಮ ಕೈಯಲ್ಲಿ ದುಡ್ಡು ವಸೂಲಿ ಮಾಡಿ ಕಲ್ಲಡ್ಕದ ಮಧ್ಯೆ ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಕಟ್ಟಿದ್ದಾರೆ. ಆ ದುಡ್ಡಲ್ಲಿ ಮಕ್ಕಳಿಗೆ ಊಟ ಹಾಕ್ಲಿ...’’
‘‘ಕಲ್ಲಡ್ಕಕ್ಕೆ ಆಗಾಗ ಬೆಂಕಿ ಹಚ್ಚೋದಕ್ಕೆ ಅಂತ ಒಂದಿಷ್ಟು ಹೈಕಳನ್ನು ಸಾಕಿದ್ದರಮ್ಮ, ಅವರಿಗೆ ಊಟ ಹಾಕಬೇಕಲ್ಲ ಅಂತ ಆ ಕಾಂಪ್ಲೆಕ್ಸ್ ಕಟ್ಟಿದ್ದಾರೆ....’’
‘‘ಶಾಲೆಯಲ್ಲಿ ಮಕ್ಕಳಿಂದ ವಸೂಲಿ ಮಾಡಿದ ದುಡ್ಡನ್ನೆಲ್ಲ ಏನು ಮಾಡ್ತಾರೆ ಅವರು?’’
‘‘ನೋಡಿ ತಾಯಿ, ಅವರು ಕಟ್ಟಿದ ಈ ಶಾಲೆಯಿಂದ ಹೊರಬಿದ್ದ ಮಕ್ಕಳಿಗೆ ಉದ್ಯೋಗ ಕೊಡಬೇಕಲ್ಲ...ಅದಕ್ಕಾಗಿ ಆ ಹಣವನ್ನು ಬಳಸ್ತಾರಮ್ಮ....’’
‘‘ಎಲ್ಲಿ ಉದ್ಯೋಗ ಕೊಟ್ಟಿದ್ದಾರೆ ಹೇಳಿ?’’
‘‘ಅರೆ! ಇಡೀ ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚೋ ಕೆಲಸಕ್ಕೆ ಅವರ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ತಾಯಿ. ಆದುದರಿಂದಲೇ ಕಲ್ಲಡ್ಕದಲ್ಲಿ ನಿರುದ್ಯೋಗ ಎಂಬ ಮಾತೇ ಇಲ್ಲ. ಒಂದು ಕೋಮುಗಲಭೆ ಆದರೆ ಸಾಕು, ಎಲ್ಲ ಯುವಕರ ಕೈಯಲ್ಲಿ ಮೊಬೈಲ್, ದುಡ್ಡು ಓಡಾಡುವುದಕ್ಕೆ ಶುರುವಾಗುತ್ತದೆ....’’
ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಏರಿ, ಶೋಭಕ್ಕನ ಕಡೆ ತಿರುಗಿದರು ‘‘ಏನಮ್ಮ...ಹೀಗೆ ಮಾನ ಮರ್ಯಾದೆ ಇಲ್ಲದೆ ಭಿಕ್ಷೆ ಕೇಳೋಕೆ ಬಂದಿದ್ದೀಯಲ್ಲ, ನಿನಗೆ ಗಂಡ, ಮಕ್ಕಳು ಮರಿ ಇಲ್ಲವೇ?’’
ಆ ಪ್ರಶ್ನೆ ಕೇಳಿದ್ದೇ, ಶೋಭಕ್ಕ ಅಲ್ಲಿಂದ ದಡಬಡನೆ ಹೊರಟು ಬಿಟ್ಟರು.
***
ತಾಯಿ ದಡಕ್ಕನೆ ಬಾಗಿಲು ಹಾಕಿ ಹಿತ್ತಲಿಗೆ ಹೋಗಿ ಪಾತ್ರೆ ತೊಳೆಯ ತೊಡಗಿದರು. ತುಸು ಹೊತ್ತು ಕಳೆದಿರಬೇಕು, ಮತ್ತೆ ‘‘ಅಮ್ಮಾ, ತಾಯಿ....’’ ಎಂಬ ಸ್ವರ. ಈಗ ನೋಡಿದರೆ ಗಂಡಸಿನ ಸ್ವರ. ಸಿಟ್ಟು ಒತ್ತರಿಸಿ ಬಂತು. ‘‘ಈ ಮಾನಗೆಟ್ಟವರಿಂದ ಭಿಕ್ಷುಕರ ಮಾನ ಹರಾಜಾಗುತ್ತಿದೆ....’’ ಎನ್ನುತ್ತಾ ಬಾಗಿಲು ತೆರೆದರು.
ನೋಡಿದರೆ ಭಿಕ್ಷುಕ ಒಬ್ಬ ಜೋಳಿಗೆ ಹಿಡಿದು ನಿಂತಿದ್ದ. ನೋಡಿದರೆ ಕಳೆದ ಹತ್ತು ಹದಿನೈದು ವರ್ಷಗಳಿಂದ ಊಟ ಕಾಣದವನಂತೆ ಇದ್ದ. ‘‘ಇರಪ್ಪ....ಈಗ ಬಂದೆ...ರಾತ್ರಿಯ ಅನ್ನ ಇದೆ....’’
‘‘ಅನ್ನ ಬೇಡ ತಾಯಿ....ಮಧ್ಯಾಹ್ನದ ಬಿಸಿಯೂಟಕ್ಕೆ ಅಕ್ಕಿ ಬೇಕಾಗಿದೆ...’’
ತಾಯಿಗೆ ಅಚ್ಚರಿ ‘‘ಅಲ್ರೀ...ಯಾಕ್ರೀ ಅಕ್ಕಿ..’’
‘‘ಇದು ದೇವರಿಗೆ ತಾಯಿ...ನಮ್ಮ ಕಲ್ಲಡ್ಕದ ದೇವರಿಗೆ...’’
‘‘ಕಲ್ಲಡ್ಕದ ದೇವರಿಗೆ ಬಿಸಿಯೂಟವೇ? ಯಾರ್ರೀ ನಿಮ್ಮ ದೇವರು?’’
‘‘ಭಟ್ಟರು, ಪ್ರಭಾಕರ ಭಟ್ಟರು ತಾಯಿ...’’ ಭಿಕ್ಷುಕ ಹೇಳಿದ.
ತಾಯಿಗೇಕೋ ಅನುಮಾನ ಬಂತು ‘‘ನಿನ್ನ ಹೆಸರೇನಪ್ಪ....?’’
‘‘ಜನಾರ್ದನ ಪೂಜಾರಿ ತಾಯಿ...ಸಾಲಮೇಳ ಖ್ಯಾತಿಯ ಜನಾರ್ದನ ಪೂಜಾರಿ...’’
‘‘ಓಹೋ...ನೀವೇನೂ ಜನಾರ್ದನ ಪೂಜಾರಿ....ಕಾಯ್ತ ಇದ್ದೆ...ಇರಿ ಬಂದೆ....’’ ಎಂದು ಒಳ ಹೋದರು.
‘‘ಗಂಧಸಾಲೆ ಅಕ್ಕಿಯನ್ನೇ ಕೊಡಿ ತಾಯಿ. ಭಟ್ರಿಗೆ ನನ್ನ ಮೇಲೆ ಖುಷಿಯಾಗಲಿ....’’ ಜೋರಾಗಿ ಕೂಗಿ ಹೇಳಿದರು.ಅಷ್ಟರಲ್ಲಿ ತಾಯಿ ಕೈಯಲ್ಲಿ ಪೊರಕೆ ಹಿಡಿದು ಹೊರ ಬಂದರು ‘‘ಊರಿಗೆ ಬೆಂಕಿ ಬಿದ್ದಾಗ ನೀವು ಬರಲಿಲ್ಲ. ನಮ್ಮ ಮಕ್ಕಳನ್ನು ಈ ಭಟ್ರು ಕ್ರಿಮಿನಲ್ ಮಾಡಿ ಜೈಲಿಗೆ ತಳ್ಳುವಾಗ ಬರಲಿಲ್ಲ... ದೇವಸ್ಥಾನದ ದುಡ್ಡು ಕದ್ದು ಆ ಭಟ್ರು ಕಾಂಪ್ಲೆಕ್ಸ್ ಕಟ್ಟುವಾಗ ನೀವು ಬರಲಿಲ್ಲ....ಈಗ ಭಿಕ್ಷೆ ಬೇಡಿ ಭಿಕ್ಷುಕರ ಮಾನ ಕಳೆಯೋದಕ್ಕೆ ಬಂದಿದ್ದೀರಾ...’’ ಎನ್ನುತ್ತಾ ತಾಯಿ ಪೊರಕೆ ಎತ್ತಿದ್ದೇ ಜನಾರ್ದನ ಪೂಜಾರಿಯವರು ‘‘ನನಗೆ ಗೊತ್ತುಂಟು...ನೀನು ಸಿದ್ದರಾಮಯ್ಯನ ಪಕ್ಷದವಳು...ಸಿದ್ದರಾಮಯ್ಯನ ಏಜೆಂಟ್ ನಿನ್ನನ್ನು ....ಬಿಡುವುದಿಲ್ಲ....ನಾನು ಪ್ರೆಸ್‌ಮೀಟ್ ಮಾಡುತ್ತೇನೆ....’’ ಎನ್ನುತ್ತಾ ಓಡತೊಡಗಿದರು.