ಕನ್ನಡತನದೊಳಗೆ ‘ಬಕಾವಲಿಯ ಹೂ’
ಈ ಹೊತ್ತಿನ ಹೊತ್ತಿಗೆ
ರಂಗಕರ್ಮಿ ಸುಧೀರ್ ಅತ್ತಾವರ್ ಅವರ ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ ‘ಬಕಾವಲಿ ಹೂ’. ಈ ನಾಟಕದ ವಸ್ತು ಭಾರತೀಯರಿಗೆ ಚಿರಪರಿಚಿತ. ಭಾರತ ಉಪಖಂಡದ ಬಲು ಜನಪ್ರಿಯವಾಗಿರುವ ‘ಗುಲ್ ಎ ಬಕಾವಲಿ’ ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ ಸುಧೀರ್. ತನ್ನೊಳಗೆ ಭಾರತೀಯತೆಯನ್ನು ಬಚ್ಚಿಕೊಂಡಿರುವ ಈ ಪರ್ಶಿಯನ್ ಕಥಾನಕ, ತಾಜುಲ್ ಮುಲ್ಕ್ ಎನ್ನುವ ಅನಾಥ ರಾಜಕುಮಾರನ ಕರುಣೆ, ತ್ಯಾಗ, ವಿವೇಕ, ಜಾಣ್ಮೆ, ಸಾಹಸ, ನವಿರು ಶೃಂಗಾರಗಳ ಕಥೆ. ನಾಟಕೀಯತೆಗೆ ಶಕ್ತಿ ತುಂಬಬಲ್ಲ ಫ್ಯಾಂಟಸಿ, ರೋಚಕತೆಗಳು ಇಲ್ಲಿ ವ್ಯಾಪಕವಾಗಿರುವುದರಿಂದ, ಸಹಜವಾಗಿಯೇ ಉಜ್ವಲವಾದ ದೃಶ್ಯವೈಭವ ಮೇಳೈಸಿದೆ. ರಂಗಪ್ರಯೋಗ ಈ ನಿಟ್ಟಿನಲ್ಲಿ ನಿರ್ದೇಶಕನಿಗೆ ಹಲವು ಸವಾಲುಗಳನ್ನು ಒಡ್ಡುತ್ತವೆ. ಮುನ್ನುಡಿಯಲ್ಲಿ ಹೇಳುವಂತೆ, ಕಾವ್ಯಾತ್ಮಕ ಪ್ರಸ್ತುತಿಯಷ್ಟೇ ಅಲ್ಲ, ದೃಶ್ಯ ಜೋಡಣೆಯಲ್ಲೂ ಸುಧೀರ್ ತಮ್ಮ ಸಾಮರ್ಥ ಮೆರೆದಿದ್ದಾರೆ. ಸಾಧುಗಳು ಅರಸನಿಗೆ ಭವಿಷ್ಯವಾಣಿ ಹೇಳುವ ದೃಶ್ಯ, ಟೈರೀಸಿಯಸ್ ಈಡಿಪಸ್‌ಗೆ ಅವನ ಕರಾಳ ಭವಿಷ್ಯವನ್ನು ನುಡಿಯುವ ದೃಶ್ಯದಂತೆಯೇ ತಲ್ಲಣ ಗೊಳಿಸುತ್ತದೆ. ಕಣ್ಣು ಕಳೆದುಕೊಂಡ ಅರಸನ ವಿಲಾಪವೂ ಸಹಾ ಈಡಿಪಸ್‌ನ ರೋಧನದಂತೆಯೇ ಹೃದಯ ವಿದ್ರಾವಕವಾಗಿದೆ. ಅರ್ಥಪೂರ್ಣ ಚುರುಕು ಸಂಭಾಷಣೆಗಳು, ಪದ್ಯದ ಲಯವಿರುವ ಗದ್ಯಗಳು ಒಂದು ರೋಚಕ ಜಾನಪದ ಕತೆಗೆ ಪೂರಕವಾಗಿದೆ. ಸುಮಾರು 10 ಮುಖ್ಯಪಾತ್ರಗಳು ಈ ನಾಟಕಗಳಲ್ಲಿದೆ. ರಂಗಭೂಮಿಗೆ ಕನಿಷ್ಠ ಎರಡುಗಂಟೆಯಾನ್ನಾದರೂ ಈ ಸಂಗೀತನಾಟಕ ಬೇಡುತ್ತದೆ. ನೃತ್ಯ ರೂಪಕವಾಗಿಯೂ ನಾಟಕವನ್ನು ರಂಗಕ್ಕಿಳಿಸುವ ವ್ಯಾಪಕ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ರಂಗದಲ್ಲಿ ಪ್ರಯೋಗಿಸುವ ನಾಟಕಗಳ ಸಂಖ್ಯೆ ಇಳಿಮುಖವಾಗುತ್ತಿವೆ. ನಾಟಕಗಳನ್ನು ಗಂಭೀರವಾಗಿ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಕಾಲದಲ್ಲಿ ಎಚ್. ಎಸ್. ಶಿವಪ್ರಕಾಶ್, ಲಂಕೇಶ್, ಕಾರ್ನಾಡ್ ಸಹಿತ ಹಲವು ಹಿರಿ-ಕಿರಿಯ ಮಹತ್ವದ ಬರಹಗಾರರು ನಾಟಕ ಕ್ಷೇತ್ರದಲ್ಲಿ ಕೈಯಾಡಿಸಿದ್ದಾರೆ. ಇವರಲ್ಲೆಲ್ಲ, ರಂಗಭೂಮಿಯಿಂದ ಬಂದವರು ತೀರಾ ಕಡಿಮೆಯಾದರೂ, ರಂಗಪ್ರಯೋಗದಲ್ಲಿ ಅವರ ನಾಟಕಗಳು ಮಾಡಿದ ಕ್ರಾಂತಿ ಬಹುದೊಡ್ಡದು. ಇಲ್ಲಿ ಸುಧೀರ್ ಅತ್ತಾವರ್ ಅವರು ಸ್ವತಃ ರಂಗಕರ್ಮಿಯಾಗಿದ್ದುಕೊಂಡು ಬರೆದಿರುವ ನಾಟಕ ಇದಾದುದರಿಂದ, ರಂಗಪ್ರಯೋಗಕ್ಕೆ ಪೂರಕವಾಗಿರುವಂತೆಯೇ ನಾಟಕವನ್ನು ರಚಿಸಿದ್ದಾರೆ. ‘ಬಕಾವಲಿಯ ಹೂ’ ಕನ್ನಡ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳಬೇಕಾಗಿದೆ. ನುರಿತ ನಿರ್ದೇಶಕರು ಈ ಬಗ್ಗೆ ಗಮನಹರಿಸಬೇಕಾಗಿದೆ.
ಅಭಿರುಚಿ ಪ್ರಕಾಶನ ಮೈಸೂರು ಹೊರತಂದಿರುವ ಕೃತಿಯ ಮುಖಬೆಲೆ 80 ರೂ. ಪುಟಗಳು 112. ಆಸಕ್ತರು 99805 60013 ದೂರವಾಣಿಯನ್ನು ಸಂಪರ್ಕಿಸಬಹುದು.