varthabharthi


ಮುಂಬೈ ಮಾತು

ಆತ್ಮಹತ್ಯೆಗೆ ಅನುಮತಿ ಕೊಡಿ: ವೈದ್ಯರಿಂದ ಮನವಿ?, ಫ್ಲೈಓವರ್ ಕೆಳಗಡೆ ಅನಧಿಕೃತ ಪೊಲೀಸ್ ಚೌಕಿಗಳು!

ವಾರ್ತಾ ಭಾರತಿ : 21 Aug, 2017
ಶ್ರೀನಿವಾಸ್ ಜೋಕಟ್ಟೆ

ದಹಿಹಂಡಿ-ಗಣೇಶ ಚತುರ್ಥಿಗೆ ಜಿಎಸ್‌ಟಿ ಕಿರಿಕಿರಿ

ಈ ಬಾರಿ ಕೃಷ್ಣ ಜನ್ಮಾಷ್ಠಮಿ, ಗೋವಿಂದಾ (ವಿಟ್ಲಪಿಂಡಿ) ಮತ್ತು ಸ್ವಾತಂತ್ರ್ಯ ದಿನ ಜೊತೆಯಾಗಿ ಬಂದಿದ್ದರಿಂದ ಮುಂಬೈಕರ್ ಇದನ್ನು ತಿರಂಗೋತ್ಸವ ಎಂದು ಕರೆದು ಸಂಭ್ರಮಿಸಿದ್ದಾರೆ. ಆದರೆ ದಹಿಹಂಡಿ (ವಿಟ್ಲಪಿಂಡಿ)ಯ ಆಯೋಜಕರಿಗೆ ಜಿಎಸ್‌ಟಿ ಕಿರಿಕಿರಿ ಹುಟ್ಟಿಸಿತು. ದಹಿಹಂಡಿ ಸಮನ್ವಯ ಸಮಿತಿಯ ವಕ್ತಾರರ ಅನುಸಾರ ಗೋವಿಂದಾಗಳು ಜಿಎಸ್‌ಟಿಯಿಂದಾಗಿ ಅನೇಕ ಕಡೆ ತಣ್ಣಗಿದ್ದರು. ಅರ್ಥಾತ್ ಪ್ರಮುಖ ಆಯೋಜಕರು ಹಿಂದೆ ಸರಿದಿದ್ದರು. ಯಾರು ಆಯೋಜಿಸಿದ್ದರೋ ಅವರೂ ಬಹುಮಾನದ ಮೊತ್ತ ಕಡಿಮೆಗೊಳಿಸುವಂತಾಗಿತ್ತು. ಈ ಬಾರಿ ಕೋರ್ಟ್ ದಹಿಹಂಡಿಯ ಎತ್ತರದ ಮಿತಿಯನ್ನೂ ರದ್ದುಗೊಳಿಸಿತ್ತಲ್ಲದೆ ಜಿಎಸ್‌ಟಿ ಯಿಂದಾಗಿ ಈ ಬಾರಿ ಶೇ. 50 ಆಯೋಜಕರು ಹಿಂದೆ ಸರಿದಿದ್ದರು.

ನಗರದಲ್ಲಿ ಈ ಬಾರಿ ದೊಡ್ಡ ಆಯೋಜಕರ ಸಂಖ್ಯೆ 15 ಮೀರಲಿಲ್ಲ. ಈ ಬಾರಿ 162 ಗೋವಿಂದಾಗಳು ಗಾಯಗೊಂಡಿದ್ದರು. ಪಾಲ್ಘರ್‌ನಲ್ಲಿ ಓರ್ವ ಗೋವಿಂದಾ ಸಾವನ್ನಪ್ಪಿದ್ದ. ಅತ್ತ ಈ ಘಟನೆಯ ವರದಿ ಮಾಡಲು ಆಸ್ಪತ್ರೆಗೆ ಹೋಗಿದ್ದ ಪತ್ರಕರ್ತ ಸಂಜಯ್‌ಸಿಂಗ್ ಅವರಿಗೆ 20-25 ಜನರ ತಂಡ ಹಲ್ಲೆ ಕೂಡಾ ನಡೆಸಿತು. ಗಾಯಗೊಂಡ ಪತ್ರಕರ್ತನನ್ನು ಪಕ್ಕದ ಆಸ್ಪತ್ರೆಗೆ ಸೇರಿಸಲಾಯಿತು.

ಮುಂಬೈ ಮಹಾನಗರ ಈ ಸಮಯ ಗಣೇಶನ ಸ್ವಾಗತದ ತಯಾರಿಯಲ್ಲಿ ಮುಳುಗಿದೆ. ದಾದರ್-ಪರೇಲ್-ಲಾಲ್‌ಬಾಗ್ ಕ್ಷೇತ್ರಗಳಲ್ಲಂತೂ ಮೂರ್ತಿ ತಯಾರಕರ ಅಂಗಡಿಗಳಿಗೆ ಭಕ್ತರು ಧಾವಿಸಿ ಬರುತ್ತಿದ್ದಾರೆ. ತಮ್ಮ ತಮ್ಮ ಇಷ್ಟದ ಗಣೇಶ ಪ್ರತಿಮೆಗಳನ್ನು ಬುಕ್ ಮಾಡಿಟ್ಟು ಹೋಗುತ್ತಿದ್ದಾರೆ. ರವಿವಾರವಂತೂ ದೊಡ್ಡ ದೊಡ್ಡ ಗಣೇಶ ಪ್ರತಿಮೆಗಳನ್ನು ಮಂಟಪದಲ್ಲಿರಿಸಲು ಗಣೇಶ ಮಂಡಲಗಳು ಮೆರವಣಿಗೆ ಮೂಲಕ ಗಣೇಶ ಪ್ರತಿಮೆಗಳನ್ನು ಪೆಂಡಾಲ್ ಕಡೆ ಒಯ್ದಿದ್ದಾರೆ. ಪೂಜಾ ಸಾಮಗ್ರಿಗಳ, ಗಣೇಶನ ಅಲಂಕಾರ ವಸ್ತುಗಳ ಮಾರಾಟದ ಅಂಗಡಿಗಳಲ್ಲಿ ಜನವೇ ಜನ. ಪರಿಸರ ಪ್ರೇಮಿ ಗಣೇಶ ಪ್ರತಿಮೆಗಳಿಗೆ ಈ ಬಾರಿಯೂ ಬೇಡಿಕೆ ಬಂದಿದೆ. ಆದರೆ ಈ ಬಾರಿ ಖರೀದಿದಾರರು ಜಿಎಸ್‌ಟಿ ಹೊರೆಯನ್ನೂ ಹೊತ್ತುಕೊಳ್ಳಬೇಕಾಗಿದೆ.

ಆಯುರ್ವೇದ ವೈದ್ಯರು ಕೇಳುತ್ತಿದ್ದಾರೆ...ಆತ್ಮಹತ್ಯೆಗೆ ಅನುಮತಿ!

ತಮ್ಮನ್ನು ನಿರಂತರ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಗ್ರಾಮೀಣ ಕ್ಷೇತ್ರಗಳಲ್ಲಿ ಸೇವೆ ಗೈಯುತ್ತಿರುವ ಆಯುರ್ವೇದ ವೈದ್ಯರು ಇದೀಗ ಮುಖ್ಯಮಂತ್ರಿಯವರ ಬಳಿ ತಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ವಿನಂತಿಸಲು ಸಿದ್ಧತೆಯಲ್ಲಿದ್ದಾರೆ. ಮಹಾರಾಷ್ಟ್ರದ ಆದಿವಾಸಿ ಕ್ಷೇತ್ರಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಟೆಂಪರರಿ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯ ಆಯುರ್ವೇದ ವೈದ್ಯರು ಇದೀಗ ಆಂದೋಲನಕ್ಕೆ ಇಳಿದಿದ್ದಾರೆ.

ಕಳೆದ ವರ್ಷ ವಿಧಾನಸಭಾ ಅಧಿವೇಶನದಲ್ಲಿ ಸರಕಾರವು ಇವರಿಗೆ ಮೂರು ತಿಂಗಳ ಒಳಗಡೆ ಸೇವೆಯನ್ನು ಖಾಯಂ ಗೊಳಿಸುವ ಆಶ್ವಾಸನೆ ನೀಡಿತ್ತು. ಆದರೆ ಇಲಾಖೆ ಇನ್ನೂ ಇವರನ್ನು ಖಾಯಂ ಗೊಳಿಸಲಿಲ್ಲ. ಇದನ್ನು ಮುಂದಿಟ್ಟು ರಾಜ್ಯ ಸರಕಾರದ ವಿರುದ್ಧ ವೈದ್ಯರು ಆಂದೋಲನಕ್ಕೆ ತಯಾರಾಗಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಈಗಲೂ ಡಾಕ್ಟರ್‌ಗಳ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಗ್ರಾಮೀಣ ಕ್ಷೇತ್ರದಲ್ಲಿ ಸೇವೆಗೆ ತೆರಳುವುದಕ್ಕೆ ವೈದ್ಯರು ಹಿಂಜರಿಯುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ 871 ಬಿ.ಎ.ಎಂ.ಎಸ್. ವೈದ್ಯರು ಆದಿವಾಸಿಗಳು ಹೆಚ್ಚಿರುವ ಜಿಲ್ಲೆಗಳ 443 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಮ್ಮ ಸೇವೆ ನೀಡುತ್ತಿದ್ದಾರೆ. ಇದರ ಹೊರತಾಗಿ 168 ಆಯುರ್ವೇದಿಕ್ ವೈದ್ಯರು 28 ಸಾವಿರ ರೂ. ಮಾಸಿಕ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಆದಿವಾಸಿ ಕ್ಷೇತ್ರದಲ್ಲಿ ಸೇವೆ ಗೈಯುತ್ತಿದ್ದರೂ ಖಾಯಂ ಇನ್ನೂ ಆಗಿಲ್ಲ.

ಹಿಂದಿನ ಸರಕಾರ ಕೂಡಾ ಇವರನ್ನೆಲ್ಲ ಸೇವೆಯಲ್ಲಿ ಖಾಯಂ ಗೊಳಿಸುವ ಆಶ್ವಾಸನೆ ನೀಡಿತ್ತು ಆದರೆ ಆಶ್ವಾಸನೆ ಮಾತ್ರ ಈಡೇರಿರಲಿಲ್ಲ. ನಾಗ್ಪುರ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಮಂತ್ರಿ ದೀಪಕ್ ಸಾವಂತರು ಮೂರು ತಿಂಗಳಲ್ಲಿ ಆಯುರ್ವೇದಿಕ್ ವೈದ್ಯರನ್ನು ಸರಕಾರಿ ಸೇವೆಯಲ್ಲಿ ಖಾಯಂಗೊಳಿಸುವ ಆಶ್ವಾಸನೆ ನೀಡಿದ್ದರು. ಆದರೆ ಇನ್ನೂ ಅದು ಆಶ್ವಾಸನೆಯಾಗಿಯೇ ಉಳಿದಿದೆ. ಕಳೆದ ಕೆಲವು ದಿನಗಳಿಂದ ಆಝಾದ್ ಮೈದಾನದಲ್ಲಿ ಪ್ರತೀದಿನ ನೂರಾರು ವೈದ್ಯರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆಯುರ್ವೇದ ಸಂಘಟನೆಯ ಅಧ್ಯಕ್ಷ ಡಾ. ವಿಜಯ್ ಜಾಧವ್ ಅವರು ಕೂಡಲೇ 850 ಡಾಕ್ಟರ್‌ಗಳನ್ನು ಸೇವೆಗೆ ಪಡೆಯದಿದ್ದರೆ ಅನಿಶ್ಚಿತ ಕಾಲದ ತನಕ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದ್ದಾರೆ.

ಪ್ಲ್ಯಾಸ್ಟಿಕ್ ಚೀಲ ಹಾವಳಿ

ಐವತ್ತು ಮೈಕ್ರೋನ್‌ಗಿಂತ ಕಡಿಮೆ ಇರುವ ಪ್ಲ್ಯಾಸ್ಟಿಕ್ ಚೀಲಗಳ ಮಾರಾಟದ ಮೇಲೆ ನಿಷೇಧ ಇರುವ ಕಾಯ್ದೆಗೆ ಎಷ್ಟೋ ವರ್ಷಗಳು ಕಳೆಯಿತಾದರೂ ಮುಂಬೈ ಮಹಾನಗರ ಪಾಲಿಕೆ ಆಡಳಿತಕ್ಕೆ ಇದರ ಬಳಕೆಯನ್ನು ತಡೆಯಲು ಈಗಲೂ ಸಾಧ್ಯವಾಗಿಲ್ಲ. ಇದೀಗ ಪರಿಸರ ಸಂರಕ್ಷಣೆಯ ಸ್ಲೋಗನ್ ಮೂಲಕ ನಾಗರಿಕರ ಸಹಾಯವನ್ನು ಪಡೆಯಲು ಮನಪಾ ಮುಂದಾಗಿದೆ. ಪರಿಸರ ಮಾಲಿನ್ಯವನ್ನು ತಡೆಯಲು ಬಟ್ಟೆಯ ಮತ್ತು ಕಾಗದದ ಚೀಲಗಳನ್ನು ಬಳಸುವಂತೆ ಅಭಿಯಾನ ಹಮ್ಮಿಕೊಂಡಿದೆ. ಹಾಗೂ ನಿಷೇಧ ಇರುವ ಪ್ಲ್ಯಾಸ್ಟಿಕ್ ಚೀಲಗಳ ಬಳಕೆ ಮಾಡದಿರಿ ಎಂದು ವಿನಂತಿಸುತ್ತಿದೆ. 50 ಮೈಕ್ರೋನ್‌ಗಿಂತ ಕಡಿಮೆ ದಪ್ಪಇರುವ ಪ್ಲ್ಯಾಸ್ಟಿಕ್ ಚೀಲಗಳನ್ನು ನಿಷೇಧಿಸಿ 11 ವರ್ಷಗಳು ಕಳೆದಿವೆ. ಮಹಾರಾಷ್ಟ್ರದಲ್ಲಿ 2006 ರಲ್ಲಿ ಈ ಕಾಯ್ದೆ ಜಾರಿಗೆ ಬಂದಿತ್ತು. ಆದರೂ ಇಂದು ಅಂತಹ ಪ್ಲ್ಯಾಸ್ಟಿಕ್ ಚೀಲಗಳು ಎಲ್ಲೆಡೆಯೂ ಮಾರಾಟವಾಗುತ್ತಿವೆ. ಮುಂಬೈಯ ಮಾರುಕಟ್ಟೆಯಲ್ಲಿ ಹೆಚ್ಚಿನ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ 50 ಮೈಕ್ರೋನ್‌ಗಿಂತ ಕಡಿಮೆ ದಪ್ಪದ ಪ್ಲ್ಯಾಸ್ಟಿಕ್ ಚೀಲಗಳು ಈಗಲೂ ಧಾರಾಳ ಕಾಣಸಿಗುತ್ತವೆ. ಇದರಿಂದ ಪರಿಸರಕ್ಕೆ ಭಾರೀ ಹಾನಿ ಸಂಭವಿಸುತ್ತಿದೆ. ಇದನ್ನು ತಡೆಯಲು ರಾಜ್ಯ ಸರಕಾರ ಮತ್ತು ಮನಪಾ ಇಬ್ಬರ ಪ್ರಯತ್ನವೂ ಯಶಸ್ವಿಯಾಗುತ್ತಿಲ್ಲ.

ಫ್ಲೈಓವರ್‌ನ ಕೆಳಗಡೆ ಪೊಲೀಸ್ ಚೌಕಿ!

ಮುಂಬೈಯ ಸಯನ್ - ಪನ್ವೇಲ್ ಮಹಾಮಾರ್ಗದಲ್ಲಿ ಬರುವ ವಾಶಿ, ಸಾನ್‌ಪಾಡ, ತುರ್ಭೆ, ನೆರುಳ್ ಮತ್ತು ಬೇಲಾಪುರ್‌ನಲ್ಲಿ ಸುಲಲಿತ ವಾಹನ ಚಾಲನೆಗೆಂದು ಫ್ಲೈಓವರ್‌ನಿರ್ಮಿಸಲಾಗಿದೆ. ಆದರೆ ಇಂದು ಫ್ಲೈಓವರ್‌ನ ಕೆಳಗಡೆ ಪೊಲೀಸ್ ಚೌಕಿಗಳನ್ನು ಅನಧಿಕೃತವಾಗಿ ಕಟ್ಟಲಾಗಿದ್ದು ಇದರಿಂದಲೇ ವಾಹನ ಚಾಲಕರು ಕಿರಿಕಿರಿ ಅನುಭವಿಸುವಂತಾಗಿದೆ. ಹೀಗಾಗಿ ಪೊಲೀಸ್ ಚೌಕಿಗಳನ್ನು ಅಲ್ಲಿಂದ ತೆಗೆದು ಹಾಕಲು ಆದೇಶ ಬಂದಿದೆ. ಅಕ್ಟೋಬರ್‌ನಲ್ಲಿ ನವಿ ಮುಂಬೈಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಫುಟ್‌ಬಾಲ್ ಸ್ಪರ್ಧೆಯೂ ಈ ಆದೇಶಕ್ಕೆ ಇನ್ನೊಂದು ಕಾರಣವಾಗಿದೆ. ಈ ಬಗ್ಗೆ ನವಿ ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಚವ್ಹಾಣ್ ಅವರು ತಿಳಿಸಿದಂತೆ ಮುಂಬೈ ಉಚ್ಚ ನ್ಯಾಯಾಲಯವು ಮೊದಲೇ ತನ್ನ ಆದೇಶದಲ್ಲಿ ಫ್ಲೈಓವರ್‌ನ ಕೆಳಗಡೆ ಯಾವುದೇ ಪ್ರಕಾರದ ಅನಧಿಕೃತ ನಿರ್ಮಾಣ ಮಾಡಬಾರದು ಎಂದು ತಿಳಿಸಿದೆ. ಇದರ ಹೊರತಾಗಿಯೂ ನವಿ ಮುಂಬೈಯಲ್ಲಿ ಫ್ಲೈಓವರ್‌ಗಳ ಕೆಳಗಡೆಯೇ ಹೆಚ್ಚಿನ ಟ್ರಾಫಿಕ್ ಪೊಲೀಸ್ ಚೌಕಿಗಳನ್ನು ನಿರ್ಮಿಸಲಾಗಿದೆ. ಇದನ್ನೀಗ ತೆಗೆದು ಹಾಕಲು ನೋಟಿಸ್ ನೀಡಲಾಗಿದೆ. ’’

ರೈಲು ಭಜನೆಯ ವಿರುದ್ಧ ಕಾರ್ಯಾಚರಣೆ

ಭಾರೀ ಸಮಯದ ನಂತರ ಮುಂಬೈ ಲೋಕಲ್ ರೈಲುಗಳಲ್ಲಿನ ಭಜನಾ ಮಂಡಳಿಗಳ ವಿರುದ್ಧ ರೈಲ್ವೆ ಪೊಲೀಸರು ಮತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಜುಲೈ ತಿಂಗಳಲ್ಲಿ ಆರ್‌ಪಿಎಫ್ ಜವಾನರು 10 ರಿಂದ 12 ಭಜನಾ ಮಂಡಳಿಗಳ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಆರ್‌ಪಿಎಫ್, ಬೊರಿವಲಿಯ ಜೈ ಮಹಾರಾಷ್ಟ್ರ ಭಜನ್ ಮಂಡಳಿಯ ಸದಸ್ಯರನ್ನು ಬಂಧಿಸಿದ್ದು ಪೊಲೀಸರು ಈ ಭಜನಾ ಮಂಡಳಿಯ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಭಜನಾ ಪರಂಪರೆಯನ್ನು ರೈಲ್ವೆ ಪೊಲೀಸರು ನಿಲ್ಲಿಸಿದರೆ ರಸ್ತೆಗಿಳಿದು ಆಂದೋಲನ ಮಾಡುವುದಾಗಿ ಸಂತ ಜ್ಞಾನೇಶ್ವರ್ ಮಾವುಲೀ ಭಜನ್ ಸಾಮಾಜಿಕ್ ಸಂಸ್ಥೆ ಎಚ್ಚರಿಕೆ ನೀಡಿದೆ.

ಕುಸಿಯುವ ಕಟ್ಟಡಗಳು: ಕೋರ್ಟ್‌ನಿಂದ ಸರಕಾರಕ್ಕೆ ತರಾಟೆ

ಮುಂಬೈ ಮತ್ತು ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಆಗಾಗ ಕಟ್ಟಡಗಳು ಕುಸಿದು ಬೀಳುತ್ತಿದ್ದು, ಮುಂಬೈ ಹೈಕೋರ್ಟ್ ರಾಜ್ಯ ಸರಕಾರದ ಬಳಿ ಇದಕ್ಕೆ ಕಾರಣ ಕೇಳಿದೆ. ಎಪ್ರಿಲ್ 4, 2013ರಂದು ಮುಂಬ್ರಾದಲ್ಲಿನ ಶಿಲಫಾಟಾ ಕ್ಷೇತ್ರದಲ್ಲಿ ಲಕಿ ಕಾಂಪೌಂಡ್‌ನ ಕಟ್ಟಡ ನೆಲಸಮ ಆಗಿತ್ತು. ಈ ಘಟನೆಯಲ್ಲಿ 74 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮುಂದಿನ ತನಿಖೆ ಆಗದಿರುವುದನ್ನು ಗಮನಿಸಿ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೆಲವು ದಿನಗಳ ಮೊದಲು ಈ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಸಾಕ್ಷಗಳ ಅಭಾವದಲ್ಲಿ ಸತ್ರ ನ್ಯಾಯಾಲಯವು ಜಾಮೀನಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ರಯೀಸ್ ಶೇಖ್ ಎಂಬವರು ಜನಹಿತ ಅರ್ಜಿ ಸಲ್ಲಿಸಿ ಹೈಕೋರ್ಟ್‌ನ ಬಾಗಿಲು ಬಡಿದಿದ್ದರು. ಆನಂತರ ಹೈಕೋರ್ಟ್ ಸರಕಾರವನ್ನು ತರಾಟೆಗೆ ಎಳೆಯುತ್ತಾ ನಾಲ್ಕು ವಾರಗಳ ಒಳಗೆ ಈ ಪ್ರಕರಣದಲ್ಲಿ ಯಾವ ಕಾರ್ಯಾಚರಣೆ ನಡೆದಿದೆ ಎಂದು ರಿಪೋರ್ಟ್ ನೀಡುವಂತೆ ಸರಕಾರಕ್ಕೆ ಆದೇಶ ನೀಡಿದೆ.

ಶಿವಾಜಿ ಪಾರ್ಕ್ ಈಗ ಪೋಕೆಮಾನ್ ಪಾರ್ಕ್!

ಮಧ್ಯ ಮುಂಬೈಯ ದಾದರ್ ಪಶ್ಚಿಮದಲ್ಲಿರುವ ಶಿವಾಜಿ ಪಾರ್ಕ್ ನಾನಾ ಕಾರಣಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರ ಸಮಾಧಿ ಸ್ಥಳ ‘ಚೈತ್ಯ ಭೂಮಿ’ ಇಲ್ಲಿದೆ. ಶಿವಸೇನೆಯ ದಸರಾ ಮೇಳ ಇಲ್ಲೇ ನಡೆಯುತ್ತದೆ. ಅಲ್ಲದೆ ಸಾರ್ವಜನಿಕ ಗಣೇಶೋತ್ಸವದ ಗಣೇಶ ವಿಗ್ರಹ ವಿಸರ್ಜನಾ ದಿನಗಳಲ್ಲೂ ಇದು ಸುದ್ದಿ ಮಾಡುತ್ತದೆ. ಈ ರೀತಿ ಸ್ವಾತಂತ್ರ್ಯದ ಮೊದಲೂ, ಸ್ವಾತಂತ್ರ್ಯದ ನಂತರವೂ ಶಿವಾಜಿ ಪಾರ್ಕ್ ಗೆ ಪ್ರತ್ಯೇಕವಾದ ಸಾಮಾಜಿಕ-ರಾಜಕೀಯ ಮಹತ್ವ ದೊರೆತಿದೆ. ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಕೂಡಾ ಬಾಲ್ಯದ ದಿನಗಳಲ್ಲಿ ಇಲ್ಲೇ ಕ್ರಿಕೆಟ್ ಆಡಲು ಮೈದಾನಕ್ಕೆ ಬರುತ್ತಿದ್ದರು. ಆದರೆ ಈ ದಿನಗಳಲ್ಲಿ ಶಿವಾಜಿ ಪಾರ್ಕ್ ಪೋಕೆಮಾನ್ ಪಾರ್ಕ್ ಎನ್ನಿಸಿಕೊಳ್ಳುವತ್ತ ದಾಪುಗಾಲು ಹಾಕಿದೆ. ಶಿವಾಜಿ ಪಾರ್ಕ್ ಸುಮಾರು 28 ಎಕರೆ ಜಮೀನಿನಲ್ಲಿ ವ್ಯಾಪಿಸಿದೆ. ಬೆಳಗ್ಗೆ-ಸಂಜೆ ಇಲ್ಲಿಗೆ ಜಾಗಿಂಗ್ ಮಾಡಲೂ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ.....ಹೀಗೆ ದಿನದ ಯಾವ ಸಮಯದಲ್ಲೂ ಪೋಕೆಮಾನ್ ಆಡಲು ಬರುವವರು ಸುತ್ತಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಪಾಯಕಾರಿ ಮೊಬೈಲ್ ಗೇಮ್ ಇದಾಗಿದ್ದು ವಿದ್ಯಾರ್ಥಿಗಳು ಈ ಆಟದಲ್ಲಿ ಸಮಯ ಕಳೆಯುತ್ತಿದ್ದಾರೆ.

ಈ ಆಟದ ಅಪಾಯದ ಕುರಿತು ಕೆಲವು ಶಾಲಾ ಮಕ್ಕಳು ಮೆರವಣಿಗೆ ಮೂಲಕ ಜನಜಾಗೃತಿಯನ್ನೂ ಮಾಡಿದರು. ಆದರೆ ಇದು ಪ್ರಯೋಜನ ವಾದಂತಿಲ್ಲ. ಈ ಆಟದ ಹುಚ್ಚು ಹಿಡಿಸಿಕೊಂಡ ಮಕ್ಕಳು ಹತ್ತಾರು ಗುಂಪು ಮಾಡಿಕೊಂಡು ಪೋಕೆಮಾನ್‌ನನ್ನು ಹಿಡಿಯಲು ಈಗ ಶಿವಾಜಿ ಪಾರ್ಕ್‌ನತ್ತ ಬರುತ್ತಿದ್ದಾರೆ. ಒಂದೊಂದು ಕಾಲೇಜ್‌ನಲ್ಲಿ 12-15 ಗುಂಪುಗಳನ್ನು ಮಾಡಿಕೊಂಡಿರುವುದೂ ಬೆಳಕಿಗೆ ಬರುತ್ತಿದೆ. ಇತ್ತೀಚೆಗಷ್ಟೇ ಬ್ಲೂವೇಲ್ ಹೆಸರಿನ ಆನ್‌ಲೈನ್ ಕಿಲ್ಲರ್ ಗೇಮ್‌ಗೆ ಹಲವರು ಬಲಿಯಾಗಿದ್ದಾರೆ. ಇದೀಗ ಪೋಕೆಮಾನ್‌ನ ಅಪಾಯ ಕಂಡು ಬರುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)